ADVERTISEMENT

ವಾಚಕರ ವಾಣಿ: 28 ನವೆಂಬರ್ 2024

ವಾಚಕರ ವಾಣಿ
Published 27 ನವೆಂಬರ್ 2024, 23:36 IST
Last Updated 27 ನವೆಂಬರ್ 2024, 23:36 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಸ್ವಾಮೀಜಿಗಳಿಗೂ ಇರಲಿ ನಿವೃತ್ತಿ

ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡುವ ಕಾನೂನು ಜಾರಿಗೆ ತರಬೇಕೆಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ನ. 27). ಇದು ಯಾರನ್ನು ಓಲೈಸುವ ಮಾತು? ಕಾವಿ ತೊಟ್ಟ ಸ್ವಾಮೀಜಿಗಳಿಗೆ ಏಕಿಂಥ ಸಂಕುಚಿತ ಭಾವನೆ? ಇವರ ಇಂತಹ ಮಾತುಗಳು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ?

ಸರ್ವರಿಗೂ ಶಾಂತಿ, ಸಮಾಧಾನ ಬಯಸಬೇಕಾದ ಸ್ವಾಮೀಜಿಗಳ ಮನಸ್ಸು ಇಂತಹ ವಿಕಾರಕ್ಕೆ ಒಳಗಾಗಿರುವುದರ ಬಗ್ಗೆ ಸ್ವಸ್ಥ ಸಮಾಜ ಚಿಂತಿಸಬೇಕಾಗಿದೆ. ಬಹುಶಃ ವಯಸ್ಸಿನ ಪರಿಣಾಮವೂ ಇರಬಹುದು. ಎಲ್ಲ ಮಠಗಳ ಸ್ವಾಮೀಜಿಗಳಿಗೂ ಒಂದು ಸೂಕ್ತ ವಯೋಮಾನವನ್ನು ನಿಗದಿ ಮಾಡಿ, ಆನಂತರ ಭಕ್ತಾದಿಗಳು ಅವರಿಗೆ ನಿವೃತ್ತಿ ಘೋಷಿಸಿ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಯಬೇಕು.

ADVERTISEMENT

– ತಾ.ಸಿ.ತಿಮ್ಮಯ್ಯ, ಬೆಂಗಳೂರು

ಜನಪ್ರತಿನಿಧಿಗಳು ಜನರಿಗೆ ಮಾದರಿಯಾಗಲಿ

ರಾಜ್ಯದ ಎಲ್ಲ ಸಚಿವರು, ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿಯುವಂತೆ ಆಗಬೇಕು, ಇಲ್ಲದಿದ್ದರೆ ಸರ್ಕಾರಿ ಶಾಲೆಗಳು ಉದ್ಧಾರ ಆಗುವುದಿಲ್ಲ ಎಂದು ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿರುವುದಾಗಿ ವರದಿಯಾಗಿದೆ

(ಪ್ರ.ವಾ., ನ. 19). ಬಹಳ ಕಾಲದಿಂದಲೂ ಇಂತಹ ಒತ್ತಾಯ ಕೇಳಿಬರುತ್ತಲೇ ಇದೆ. ಸರ್ಕಾರಿ ಶಾಲೆಯಲ್ಲಿ ಇವರ ಮಕ್ಕಳು ಓದುವುದಿಲ್ಲ, ಸರ್ಕಾರಿ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆಯುವುದಿಲ್ಲ ಎನ್ನುವುದಾದರೆ ಇವರು ಸರಿಯಾಗಿ ಆಡಳಿತ ನಡೆಸುತ್ತಿಲ್ಲ ಎಂದಾಗುತ್ತದೆ. ಮಾತ್ರವಲ್ಲ, ವ್ಯವಸ್ಥೆ ಕೆಟ್ಟಿದೆ ಎಂಬುದು ಇದರ ಅರ್ಥ. ಹಾಗಾದರೆ ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಸುಧಾರಿಸುವವರು ಯಾರು? ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯಗಳು ಇದ್ದಾಗಲೂ ಇವರು ಖಾಸಗಿ ಆಸ್ಪತ್ರೆಯಲ್ಲಿ ಪಡೆಯುವ ಚಿಕಿತ್ಸೆಗೆ ಜನಸಾಮಾನ್ಯರ ಹಣವನ್ನು ಬಳಸಿಕೊಳ್ಳುವುದು ಎಷ್ಟು ಸರಿ?

ಈಗಲಾದರೂ ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ಓದುವಂತೆ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯುವಂತೆ, ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಭರಿಸದಂತೆ ನಿಯಮ ರೂಪಿಸಲಿ. ಸರ್ಕಾರ ನಡೆಸುವ ಹೊಣೆ ಹೊತ್ತ ಇವರೆಲ್ಲ ಜನರಿಗೆ ಮಾದರಿಯಾಗಲಿ.

– ಅತ್ತಿಹಳ್ಳಿ ದೇವರಾಜ್, ಹಾಸನ

ಭಿನ್ನಮತ ಎಂಬ ಬಿಜೆಪಿಯ ಗಾಜಿನಮನೆ

ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ಜನ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದು, ತಮ್ಮ ತಂಡದವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿರುವ (ಪ್ರ.ವಾ., ನ. 27) ಸುದ್ದಿಯನ್ನು ಓದಿ ಆಶ್ಚರ್ಯವಾಯಿತು. ಬಿಜೆಪಿಯು ಆಂತರಿಕ ಕಲಹ ಹಾಗೂ ಕೆಟ್ಟ ಆಡಳಿತದಿಂದಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎದುರು ದಯನೀಯವಾಗಿ ಸೋತಿತು. ಮತ್ತೆ ಅದೇ ಚಾಳಿಯನ್ನು ಮುಂದುವರಿಸಿ ಉಪಚುನಾವಣೆ ನಡೆದ ಎಲ್ಲ ಮೂರೂ ಕ್ಷೇತ್ರಗಳಲ್ಲಿ ಸೋತಿದೆ.

ಅಷ್ಟಾದರೂ ಈಗಲೂ ಭಿನ್ನಮತ ಎಂಬ ಗಾಜಿನಮನೆಯಲ್ಲಿರುವ ಯತ್ನಾಳ ಅವರು ಇಂತಹ ಹೇಳಿಕೆಯನ್ನು ನೀಡಿರುವುದು ತೀರಾ ಬಾಲಿಶವಾಗಿದೆ. ಇದೀಗ ರಾಜ್ಯದಲ್ಲಿ ಬಿಜೆಪಿಯು ಅಂಬಿಗನಿಲ್ಲದ ದೋಣಿಯಂತಾಗಿದೆ. ಅದರಲ್ಲಿರುವ ಎಲ್ಲರೂ ತಮಗೆ ತೋಚಿದಂತೆ ಅದನ್ನು ನಡೆಸುತ್ತಿರುವಂತೆ ಕಾಣಿಸುತ್ತಿದೆ. ಸೋಲೇ ಗೆಲುವಿನ ಸೋಪಾನ ಎನ್ನುವ ನಾಣ್ಣುಡಿ ಇದೆ. ಆದರೆ ಬಿಜೆಪಿಯು ಸೋಲಿನಿಂದ ಇನ್ನೂ ಪಾಠ ಕಲಿತಿಲ್ಲವೇನೋ ಅನ್ನಿಸುತ್ತಿದೆ.

– ಕಡೂರು ಫಣಿಶಂಕರ್, ಬೆಂಗಳೂರು

ಪ್ರಶ್ನೆಪತ್ರಿಕೆ: ಬೇಕೆ ಈ ತಂತ್ರ?!

ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ–ಸೆಟ್ ಹಾಗೂ ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ಭಾನುವಾರ (ನ. 24) ರಾಜ್ಯದಾದ್ಯಂತ ಪರೀಕ್ಷೆಗಳನ್ನು ನಡೆಸಲಾಯಿತು. ಈ ಎರಡೂ ಪರೀಕ್ಷೆಗಳನ್ನು ಒಂದೇ ದಿನ ನಡೆಸುವ ಮೂಲಕ, ಕೆಲವು ಕೆ–ಸೆಟ್ ಆಕಾಂಕ್ಷಿಗಳಿಗೆ (ಪಿಎಚ್.ಡಿ. ಅಥವಾ ನೆಟ್ ಅರ್ಹತೆ ಹೊಂದಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೂ) ಅವಕಾಶ ಸಿಗದಂತೆ ಮಾಡಿದ್ದು ಒಂದೆಡೆಯಾದರೆ, ಎಲ್ಲಕ್ಕಿಂತ ದೊಡ್ಡ ಮೋಸ ಮಾಡಿದ್ದು ಕೆಇಎ. ಅಂದರೆ, ಕೆ–ಸೆಟ್ ಹಾಗೂ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಗಳಿಗೆ ಒಂದೇ ರೀತಿಯ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿತ್ತು. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಇದ್ದ ಪರೀಕ್ಷೆಗೆ ಋಣಾತ್ಮಕ ಅಂಕಗಳನ್ನು ನಿಗದಿಪಡಿಸಿದ್ದಷ್ಟೇ ಎರಡರ ನಡುವೆ ಇದ್ದ ವ್ಯತ್ಯಾಸ.

ಕೆ–ಸೆಟ್ ಒಂದು ಅರ್ಹತಾ ಪರೀಕ್ಷೆಯಾದರೆ, ಇನ್ನೊಂದು, ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿಗಾಗಿ ಇರುವಂಥದ್ದು. ಆದರೂ ಎರಡಕ್ಕೂ ಒಂದೇ ರೀತಿಯ ಪ್ರಶ್ನೆಪತ್ರಿಕೆಗಳನ್ನು ನೀಡಿ, ಒಂದೇ ದಿನ ಎರಡೂ ಪರೀಕ್ಷೆಗಳನ್ನು ನಡೆಸಿ ಕೆಇಎ ತನ್ನ ಸಮಯ, ಹಣ ಉಳಿಸಿರಬಹುದು. ಆದರೆ ಅದು ಈ ಮೂಲಕ ಸಹಾಯಕ ಪ್ರಾಧ್ಯಾಪಕರ ಹುದ್ದೆ ಪರೀಕ್ಷೆಗೆ ಇರುವ ಮೌಲ್ಯವನ್ನು ಹಾಳುಗೆಡವಿದೆ. ಇಂತಹ ನಿಲುವು ಪರೀಕ್ಷಾರ್ಥಿಗಳಲ್ಲೂ ವಿವಿಧ ಬಗೆಯ ಗೊಂದಲಗಳನ್ನು ಮೂಡಿಸಿತು. ಒಂದೇ ದಿನ ಎರಡೂ ಪರೀಕ್ಷೆಗಳನ್ನು ನಡೆಸಿದ್ದರೂ ಎರಡಕ್ಕೂ ಬೇರೆ ಬೇರೆ ರೀತಿಯ ಪ್ರಶ್ನೆಪತ್ರಿಕೆಗಳನ್ನು ನೀಡಿದ್ದರೆ ಪರೀಕ್ಷಾರ್ಥಿಗಳಿಗೆ ಸ್ವಲ್ಪ ಸಮಾಧಾನವಾದರೂ ಆಗುತ್ತಿತ್ತು. ರಾಜ್ಯ ಮಟ್ಟದ ಪರೀಕ್ಷಾ ಪ್ರಾಧಿಕಾರವಾಗಿ, ಸಮಯ, ಹಣ ಉಳಿಸಲು ಹೀಗೆ ಬೇಜವಾಬ್ದಾರಿತನ ಪ್ರದರ್ಶಿಸುವುದು ಎಷ್ಟು ಸರಿ?

– ಲಕ್ಷ್ಮೀಕಾಂತ ಗೋಡಬೋಲೆ, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.