ವಾಚಕರ ವಾಣಿ
ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗಿರುವುದು ನೆಪಮಾತ್ರಕ್ಕೆ ಎಂಬಂತಾಗಿದೆ. ಕಲಾಪಗಳು ನಡೆಯದೇ ನಾಲ್ಕು ದಿವಸಗಳು ವ್ಯರ್ಥವಾಗಿವೆ. ಸದನದಲ್ಲಿ ಗದ್ದಲ ಎಬ್ಬಿಸುವ ಜನಪ್ರತಿನಿಧಿಗಳು ಹತ್ತಾರು ಕೋಟಿ ರೂಪಾಯಿ ನಷ್ಟ ಉಂಟು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ! ಇದಕ್ಕೆಂದೇ ಜನ ಇವರನ್ನು ಆಯ್ಕೆ ಮಾಡಿ ಕಳಿಸಿದ್ದೇ? ಸರ್ಕಾರ ಯಾವುದೇ ವಿಷಯದ ಚರ್ಚೆಗೆ ಸಿದ್ಧವೆಂದು ಆಶ್ವಾಸನೆ ಕೊಟ್ಟ ಮೇಲೂ ವಿರೋಧ ಪಕ್ಷಗಳು ತಮ್ಮ ಮೂಗಿನ ನೇರಕ್ಕೆ ಮಾತ್ರ ಸದನದಲ್ಲಿ ಕಲಾಪಗಳು ನಡೆಯಬೇಕು ಎಂದು ಪಟ್ಟು ಹಿಡಿದಂತೆ ಕಾಣುತ್ತದೆ. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವುದು, ಘೋಷಣೆ ಕೂಗುವುದು ಸಾಮಾನ್ಯ ನಡವಳಿಕೆಯಾಗಿದೆ. ಸದನವು ಸಾರ್ವಜನಿಕ ರಸ್ತೆಯೇ? ತಾವು ಪ್ರಸ್ತಾಪಿಸಿದ ವಿಷಯಗಳಿಗೇ ಆದ್ಯತೆ ಕೊಡಬೇಕು, ಅವನ್ನೇ ಮೊದಲು ಚರ್ಚೆಗೆ ಎತ್ತಿಕೊಳ್ಳಬೇಕು ಎಂದು ಪಟ್ಟು ಹಿಡಿದು, ಪೂರ್ವನಿಶ್ಚಿತ ಪ್ರಶ್ನೋತ್ತರ ಕಾಲದಂತಹ ನಿಗದಿತ ಕಲಾಪಗಳು ನಡೆಯದಂತೆ ನೋಡಿಕೊಳ್ಳುವಲ್ಲಿ ವಿರೋಧ ಪಕ್ಷಗಳು ಯಶಸ್ವಿಯಾಗಿರುವುದು ಪ್ರಜಾಪ್ರಭುತ್ವಕ್ಕೆ ಆಗುತ್ತಿರುವ ಅಪಮಾನ.
ಅಷ್ಟಕ್ಕೂ ಅವು ಚರ್ಚೆಯಾಗಬೇಕೆಂದು ಒತ್ತಾಯಿಸುತ್ತಿರುವ ವಿಷಯಗಳು ಅವರು ಭಾವಿಸುವಂತೆ ಬೇರೆ ಎಲ್ಲವನ್ನೂ ಬದಿಗಿರಿಸಿ ಅತ್ಯಂತ ಜರೂರಾಗಿ ಕೈಗೆತ್ತಿಕೊಳ್ಳುವ ವಿಷಯಗಳೇ? ಗದ್ದಲದ ಕಾರಣದಿಂದಾಗಿ, ಚರ್ಚೆಗಳಲ್ಲಿ ಭಾಗವಹಿಸಬಯಸುವ ಇತರ ಸಂಸದರ ಹಕ್ಕಿಗೆ ಸಂಚಕಾರವೊದಗಿದೆ ಎನ್ನುವುದನ್ನು ಲೋಕಸಭೆ ಸ್ಪೀಕರ್ ಆಗಲಿ, ರಾಜ್ಯಸಭೆಯ ಸಭಾಪತಿಯಾಗಲಿ ಯಾಕೆ ಪರಿಗಣಿಸುತ್ತಿಲ್ಲ ಎನ್ನುವುದು ಅರ್ಥವಾಗದು. ನಿರಂತರವಾಗಿ ಗದ್ದಲ, ಘೋಷಣೆಗಳಲ್ಲಿ ತೊಡಗಿರುವವರಿಗೆ ಎಚ್ಚರಿಕೆ ನೀಡಿ, ಆಗಲೂ ಪರಿಸ್ಥಿತಿ ಸುಧಾರಿಸದಿದ್ದಲ್ಲಿ ಅಂಥವರನ್ನು ಸದನದಿಂದ ಹೊರಗೆ ಹೋಗುವಂತೆ ಆದೇಶಿಸಲು ಯಾಕೆ ಹಿಂಜರಿಕೆ? ಎರಡು ಸದನಗಳಲ್ಲೂ ಕಲಾಪಗಳು ಸುಸೂತ್ರವಾಗಿ ನಡೆಯದಂತೆ ಮಾಡುವವರದೇ ಕೈ ಮೇಲಾಗುವುದಾದರೆ, ಅಂತಹ ಸನ್ನಿವೇಶವು ಪ್ರಜಾಪ್ರಭುತ್ವದ ಅಣಕ.
– ಸಾಮಗ ದತ್ತಾತ್ರಿ, ಬೆಂಗಳೂರು
ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಸಮಾಜಕ್ಕಾಗಿ ದುಡಿದ ವಿವಿಧ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿರುವುದು ಸರಿಯಷ್ಟೆ. ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಸರ್ಕಾರದ ವತಿಯಿಂದ ಕೊಡಮಾಡಲಾಗುತ್ತದೆ. ಇದಕ್ಕಾಗಿ ಒಂದು ಸಮಿತಿಯನ್ನು ರಚಿಸಿ ಅರ್ಹರನ್ನು ಗುರುತಿಸಲಾಗುತ್ತದೆ. ಇತ್ತೀಚೆಗೆ ಕೆಲವು ಸಂಘ-ಸಂಸ್ಥೆಗಳೂ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲು ಪ್ರಾರಂಭಿಸಿವೆ. ಇದು ಒಂದು ರೀತಿಯಲ್ಲಿ ಗೊಂದಲವನ್ನು ಉಂಟು ಮಾಡುತ್ತಿದೆ. ಆದ್ದರಿಂದ ಸರ್ಕಾರ ಒಂದು ಆದೇಶ ಹೊರಡಿಸಿ, ರಾಜ್ಯ ಸರ್ಕಾರ ನೀಡುವ ಪ್ರಶಸ್ತಿಗಳ ಹೆಸರಿನಲ್ಲಿ ಖಾಸಗಿ ಸಂಘ-ಸಂಸ್ಥೆಗಳು ಪ್ರಶಸ್ತಿಯನ್ನು ನೀಡದಂತೆ ಸೂಚನೆ ನೀಡುವ ಅಗತ್ಯವಿದೆ.
– ಈ.ಬಸವರಾಜು, ಬೆಂಗಳೂರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಆಸ್ತಿ ತೆರಿಗೆ ಸುಸ್ತಿದಾರರಿಗಾಗಿ ಜಾರಿಗೆ ತಂದಿರುವ, ಎರಡು ಬಾರಿ ವಿಸ್ತರಣೆಗೊಂಡಿರುವ ‘ಒಂದು ಬಾರಿ ಪರಿಹಾರ ಯೋಜನೆ’ಯ (ಒಟಿಎಸ್) ಕಾಲಾವಧಿಗೆ ಈ ತಿಂಗಳ ಕೊನೆವರೆಗೆ ಗಡುವು ನೀಡಲಾಗಿದೆ. ಡಿಸೆಂಬರ್ 1ರಿಂದ ದುಪ್ಪಟ್ಟು ತೆರಿಗೆ ವಿಧಿಸಲಾಗುವುದು ಎಂದು ಸರ್ಕಾರ ಭಯ ಹುಟ್ಟಿಸಿದೆ. ಪತ್ರಿಕೆಗಳಲ್ಲಿ ಬಂದಿರುವ ವರದಿಗಳ ಪ್ರಕಾರ, ವಾಣಿಜ್ಯ ಕಟ್ಟಡದ ಆಸ್ತಿಗಳಿಗಿಂತಲೂ ಮನೆಗಳ ಆಸ್ತಿ ತೆರಿಗೆ ಬಾಕಿಯೇ ಹೆಚ್ಚು ಇದೆ. ಗಡುವಿನ ಅವಧಿ ಹತ್ತಿರ ಬರುತ್ತಿದ್ದಂತೆಯೇ ಬಿಬಿಎಂಪಿ ಕಚೇರಿಗಳ ಮುಂದೆ ನೂಕುನುಗ್ಗಲು ಏರ್ಪಟ್ಟಿತ್ತು. ಕೆಲವರು ತಮ್ಮ ಹೆಸರುಗಳಿಗೆ ರಸೀದಿ ಬದಲಾವಣೆ ಮಾಡಿಕೊಳ್ಳಲು ಕಾಯುವಂತಹ ಪರಿಸ್ಥಿತಿ ಇತ್ತು. ತಾಂತ್ರಿಕ ಸಮಸ್ಯೆಯಾದ ಸರ್ವರ್ ಸಿಗುತ್ತಿಲ್ಲ, ಸರ್ವರ್ ಡೌನ್ ಎಂಬ ಮಾತುಗಳು ಅಲ್ಲಿಗೆ ಹೋದಾಗ ಕೇಳಿಬಂದವು.
ಇಷ್ಟೇ ಅಲ್ಲದೆ ಹೆಸರು ಬದಲಾವಣೆಗೆ ಕಂದಾಯ ಅಧಿಕಾರಿಗಳ ಬೆರಳಚ್ಚು (ಥಂಬ್) ಅವಶ್ಯವಾಗಿರುತ್ತದೆ. ಅಲ್ಲಿ ಅಧಿಕಾರಿಗಳೇ ಇರುವುದಿಲ್ಲ. ಅಧಿಕಾರಿಗಳ ಫೋನ್‌ಗಳು ಸಂಪರ್ಕಕ್ಕೆ ಸಿಗುವುದಿಲ್ಲ. ಸಿಕ್ಕರೂ ಕೇಂದ್ರ ಕಚೇರಿಯಲ್ಲಿ ಸಭೆ, ಸರ್ವೆ ಎಂಬ ಸಬೂಬುಗಳು ಸಿಗುತ್ತವೆ. ನಾನು ಈ ಸಂಬಂಧ ನಾಲ್ಕೈದು ದಿನಗಳಿಂದ ಕೆಂಗೇರಿಯ ಬಿಬಿಎಂಪಿ ಕಚೇರಿಗೆ ಅಲೆದು ಬೇಸರಗೊಂಡಿದ್ದೇನೆ. ಸರ್ಕಾರವು ಒಟಿಎಸ್ ವ್ಯವಸ್ಥೆಯನ್ನು ಈ ವರ್ಷದ ಡಿಸೆಂಬರ್ ಅಂತ್ಯದವರೆಗೆ ವಿಸ್ತರಿಸಬೇಕೆಂದು ಮನವಿ.
– ಮಲ್ಲತ್ತಹಳ್ಳಿ ಎಚ್. ತುಕಾರಾಂ, ಬೆಂಗಳೂರು
ರಾಜಸ್ಥಾನದ ಅಜ್ಮೇರ್‌ನಲ್ಲಿರುವ ಮೊಯಿನುದ್ದೀನ್ ಚಿಶ್ತಿ ದರ್ಗಾ ಒಳಗೆ ಶಿವನ ದೇವಸ್ಥಾನವಿದೆ ಎಂಬುದಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ ಈಗ ವಿವಾದ ಸೃಷ್ಟಿಯಾಗಿರುವುದನ್ನು ತಿಳಿದು ನೋವಾಯಿತು. ಇದು ಆಗಬಾರದು. ಹಿಂದೂಗಳಿಗೆ ದೇಶದಲ್ಲಿ ಅಸಂಖ್ಯಾತ ಮಂದಿರಗಳಿವೆ. ಅವುಗಳೇ ಸಾಕಾಗಿವೆ. ಮುಸಲ್ಮಾನರು ಹೋಗುವ ಕೆಲವೇ ಪವಿತ್ರ ಕ್ಷೇತ್ರಗಳಲ್ಲಿ ಅಜ್ಮೇರ್ ಸಹ ಒಂದು.
ನಮ್ಮ ಊರಿನಲ್ಲಿ ಓಬಜ್ಜ ಎನ್ನುವವರಿದ್ದರು. ಅವರು ಅಯ್ಯಪ್ಪ ಸ್ವಾಮಿ ಯಾತ್ರಾರ್ಥಿಗಳಿಗೆ ‘ಮೊದಲು ನಮ್ಮ ಊರಲ್ಲಿರುವ ಆಂಜನೇಯ ದೇವಸ್ಥಾನದ ದೀಪ ಹಚ್ಚರಪ್ಪ’ ಎಂದು ಹೇಳುತ್ತಿದ್ದರು. ಕೆಲವು ಕಡೆಗಳ ದೇವಸ್ಥಾನಗಳಲ್ಲಿ ಪೂಜೆ ಮಾಡಲು ಪೂಜಾರಿಗಳೇ ಇಲ್ಲ. ಈ ಎಲ್ಲದರ ಕಾರಣದಿಂದ, ಪ್ರಧಾನಿ ಮಧ್ಯಪ್ರವೇಶಿಸಿ ವಿವಾದವನ್ನು ಸಮಾಪ್ತಿಗೊಳಿಸುವಂತೆ ತಿಳಿಹೇಳಬೇಕಾಗಿದೆ.
– ಗುರು ಜಗಳೂರು, ಹರಿಹರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.