ವಾಚಕರ ವಾಣಿ
‘ಪ್ರಾದೇಶಿಕ ಸಾರಿಗೆ ಕಚೇರಿಗಳು ಭ್ರಷ್ಟಾಚಾರದ ಕೂಪಗಳಾಗಿವೆ’ ಎಂದು ಸುಮಿತ್ ಪಂತ್ (ಕಿಡಿನುಡಿ,ಫೆ. 17) ಆರೋಪಿಸಿದ್ದಾರೆ. ನಾನು, ಕಳೆದ ವರ್ಷ ವಾಹನ ಚಾಲನಾ ಪರವಾನಗಿಯನ್ನು ನವೀಕರಿಸಬೇಕಾಗಿತ್ತು. ಸಾರಿಗೆ ಕಚೇರಿಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಕೇಳಿ ತಿಳಿದಿದ್ದ ನಾನು, ಮಧ್ಯವರ್ತಿಗಳ ಬಳಿ ಮಾಡಿಸಿಕೊಡುವಂತೆ ಕೇಳಿದೆ. ಆಗ ಅವರು ಕೇಳಿದ ಹಣ ಭಾರಿ ಅನಿಸಿತು. ಅಷ್ಟು ಕೊಡಕ್ಕೆ ಆಗುವುದಿಲ್ಲ ಎಂದಾಗ ‘ಲಂಚ ಕೊಡದೆ ಏನೂ ನಡೆಯುವುದಿಲ್ಲ. ಅಲೆದಾಡಬೇಕಾಗುತ್ತೆ...’ ಅಂತೆಲ್ಲಾ ಹೆದರಿಸಿದರು.
ನಾನು, ನೋಡೋಣ ಅಂದುಕೊಂಡು ನೇರವಾಗಿ ಆ ಕಚೇರಿಗೆ (ಮೈಸೂರು) ವಿಚಾರಿಸಲು ಹೋದೆ. ‘ವಿಚಾರಣೆ’ ವಿಭಾಗದಲ್ಲಿದ್ದ ಸಿಬ್ಬಂದಿಯ ಬಳಿ ನನ್ನ ಅಗತ್ಯದ ಕುರಿತು ಹೇಳಿದೆ. ತಕ್ಷಣ ಅವರು ಸಂಬಂಧಪಟ್ಟ ದಾಖಲೆಗಳ ಒಂದು ಪಟ್ಟಿ ಕೊಟ್ಟು, ಅವುಗಳೊಂದಿಗೆ ವಾಹನಸಮೇತ ಒಂದು ದಿನ ಬರಲು ತಿಳಿಸಿದರು. ಅದರಂತೆ ನಾನು ದಾಖಲೆ ಮತ್ತು ವಾಹನದೊಂದಿಗೆ ಹೋದೆ. ದಾಖಲೆಗಳನ್ನು ಪರಿಶೀಲಿಸಿದ ಅವರು, ನಿಗದಿತ ಶುಲ್ಕ ಪಾವತಿಸುವಂತೆ ತಿಳಿಸಿದರು. ಈ ಮೊತ್ತವು ಮಧ್ಯವರ್ತಿ ಕೇಳಿದ ಹಣದ ಮೂರನೇ ಒಂದು ಭಾಗವಾಗಿತ್ತು.
ಶುಲ್ಕ ಪಾವತಿಸಿದ ನಂತರ, ಸಾರಿಗೆ ಅಧಿಕಾರಿ ಪರಿಶೀಲಿಸಿದರು. ಅದಕ್ಕೆ ಸ್ವಲ್ಪ ಸಮಯ ಕಾಯಬೇಕಾಯಿತು. ಅದು ತೊಡಕಿಲ್ಲದೆ ಮುಗಿಯಿತು. ನಂತರ, ನವೀಕರಿಸಿದ ಪರವಾನಗಿಯನ್ನು ಅಂಚೆ ಮೂಲಕ ಮನೆಗೆ ತಲುಪಿಸಲಾಗುವುದು ಎಂದು ಹೇಳಿದರು. ಹಾಗೆಯೇ ಆಯಿತು. ಇಲ್ಲಿ ಭ್ರಷ್ಟರು ಯಾರು? ಏಕೆ? ಎರಡು ಕೈ ಸೇರಿದರೆ ತಾನೆ ಚಪ್ಪಾಳೆ! ಭ್ರಷ್ಟಾಚಾರವನ್ನು ಪೋಷಿಸುತ್ತಿರುವವರು ಯಾರು?
-ಶಿವರಾಮ್ ಎಚ್.ಎಸ್., ಮೈಸೂರು
ಅಮೆರಿಕದಿಂದ ಗಡೀಪಾರು ಮಾಡಲಾದ ಅಕ್ರಮ ವಲಸಿಗರ ಮತ್ತೊಂದು ತಂಡ ಭಾರತಕ್ಕೆ ಮರಳಿದೆ. ಈ ಬಾರಿಯೂ ಭಾರತೀಯ ವಲಸಿಗರ ಕೈಗಳು ಮತ್ತು ಕಾಲುಗಳಿಗೆ ಬೇಡಿ ಹಾಕಿ ಅಮಾನವೀಯ ಮತ್ತು ಅವಮಾನಕರ ವರ್ತನೆ ತೋರಿಸಿದ್ದು ಖಂಡನೀಯ. ಅವರ ದೇಶದ ಕಾನೂನು ಏನೇ ಇರಲಿ, ಈ ವಲಸಿಗರನ್ನು ಭಯೋತ್ಪಾದಕರಂತೆ ನಡೆಸಿಕೊಂಡಿರುವುದನ್ನು ಪ್ರಜ್ಞಾವಂತರೇಕೆ, ಜನಸಾಮಾನ್ಯರೂ ಸಹಿಸಿಕೊಳ್ಳುತ್ತಿಲ್ಲ.
ನಮ್ಮ ಪ್ರಧಾನಿಯವರು, ಆ ದೇಶದ ಪ್ರವಾಸದಲ್ಲಿ ಇದ್ದಾಗಲೇ ವಲಸಿಗರನ್ನು ಈ ರೀತಿ ಗಡೀಪಾರು ಮಾಡಿದ್ದು ಅಕ್ಷಮ್ಯ. ಮೋದಿಯವರ ಆಪ್ತಮಿತ್ರ ಎಂದು ಕರೆಯಲ್ಪಡುವ ಟ್ರಂಪ್ ಈ ವಿಷಯವನ್ನು ಸೂಕ್ಷ್ಮವಾಗಿ ನಿಭಾಯಿಸಬೇಕಿತ್ತು. ಒಂದು ವೇಳೆ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಇಂಥ ಘಟನೆ ನಡೆದಿದ್ದರೆ, ದೇಶದಾದ್ಯಂತ ಬಿಜೆಪಿ ಬೀದಿಗಿಳಿದು ಪ್ರತಿಭಟಿಸುತ್ತಿತ್ತು. ಇದೀಗ ಅಧಿಕಾರದಲ್ಲಿ ಇರುವುದರಿಂದ ಜಾಣ ಮೌನ ವಹಿಸಿದೆ.
-ರಮಾನಂದ ಎಸ್., ಬೆಂಗಳೂರು
ನಮ್ಮಲ್ಲಿ ಕಾಲ್ತುಳಿತದಿಂದ, ನೂಕುನುಗ್ಗಲಿನಿಂದ ಸಾವು– ನೋವು ಸಂಭವಿಸುವಂತಹ ದುರಂತಗಳು ಆಗಿಂದಾಗ್ಗೆ ವರದಿಯಾಗುತ್ತಲೇ ಇರುತ್ತವೆ. ತಿರುಪತಿ, ಪ್ರಯಾಗ್‌ರಾಜ್, ದೆಹಲಿ ರೈಲು ನಿಲ್ದಾಣ ಇವೆಲ್ಲ ಇತ್ತೀಚಿನ ಉದಾಹರಣೆಗಳು. ಈ ದುರ್ಘಟನೆಗಳಿಗೆ ಮುಖ್ಯ ಕಾರಣವೆಂದರೆ ನಮ್ಮಲ್ಲಿ ಸರದಿ ಪದ್ಧತಿಯನ್ನು ಪಾಲಿಸದೆ,ತಾ ಮುಂದು, ನಾ ಮುಂದು ಎಂದು ಒಮ್ಮೆಲೇ ನುಗ್ಗುವ ದುರಭ್ಯಾಸ.
ವಾಹನ ಚಲಾಯಿಸುವವರಿಗೂ ಇದೇ ಬಗೆಯ ಅವಸರ, ಇನ್ನೊಂದು ವಾಹನವನ್ನು ಹಿಂದಿಕ್ಕುವ ಧಾವಂತ. ತಾಳ್ಮೆ ಎನ್ನುವುದು ಎಲ್ಲಿಯವರೆಗೆ ನಮಗೆ ಮುಖ್ಯವೆಂದು ಕಾಣಿಸುವುದಿಲ್ಲವೋ ಅಲ್ಲಿಯವರೆಗೆ ತಪ್ಪಿಸಬಹುದಾದ ಇಂತಹ ದುರ್ಘಟನೆಗಳನ್ನು ತಪ್ಪಿಸಲಾಗದು.
- ಬಿ.ಎನ್. ಭರತ್, ಬೆಂಗಳೂರು
ಇನ್ನೂ ಮಾರ್ಚ್ ಆರಂಭವಾಗಿಲ್ಲ. ಆದರೆ, ಈಗಲೇ ನೆತ್ತಿ ಸುಡುವಷ್ಟು ಬಿಸಿಲಿನ ಅನುಭವ. ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಸಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಬಿಸಿಲಿನ ಪ್ರತಾಪ ವಿಪರೀತಕ್ಕೆ ಹೋಗುವ ಸಾಧ್ಯತೆ ಇದೆ. ಬಿಸಿಲಿನ ಝಳ ಬಾಧಿಸದಂತೆ ಜನಸಾಮಾನ್ಯರು ಎಚ್ಚರ ವಹಿಸಬೇಕು. ಬೇಸಿಗೆಯಲ್ಲಿ ನಿಂಬೆಹಣ್ಣಿನ ಪಾನೀಯ, ಮಜ್ಜಿಗೆ, ಎಳನೀರು ಸೇವಿಸುವುದು ಉತ್ತಮ. ರಸ್ತೆ ಬದಿಯ ಆಹಾರ ಸೂಕ್ತವಲ್ಲ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ಕೆಲವು ಸೋಂಕುಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು. ಎಸ್‌ಎಸ್‌ಎಲ್‌ಸಿ, ಪಿಯುಸಿ ವಾರ್ಷಿಕ ಪರೀಕ್ಷೆಗಳು ಈ ಅವಧಿಯಲ್ಲೇ ನಡೆಯುವುದರಿಂದ ಮಕ್ಕಳ ಆರೋಗ್ಯದ ಕಡೆ ಪೋಷಕರು ನಿಗಾ ವಹಿಸಬೇಕು.
- ಬಸವರಾಜ ಡಿಗ್ಗಿ, ಆಳಂದ
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಮಾರ್ಚ್ 1ರಿಂದ ಆರಂಭಗೊಳ್ಳಲಿದ್ದು, ಗುಣಾತ್ಮಕ ಸಿನಿಮಾಗಳನ್ನು ನೋಡಲು ನಾವು ಕಾತರರಾಗಿದ್ದೇವೆ. ಆದರೆ, ಏಷ್ಯನ್ ಸಿನಿಮಾ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾದ ಚಲನಚಿತ್ರಗಳ ಪಟ್ಟಿಯಲ್ಲಿ ‘Reading Lolita in Tehran’ ಎಂಬ ಸಿನಿಮಾ ಆಯ್ಕೆಯಾಗಿರುವುದು ನಮ್ಮನ್ನುಆತಂಕಿತರನ್ನಾಗಿಸಿದೆ.
ಪ್ರಸ್ತುತ ಚಿತ್ರೋತ್ಸವಕ್ಕೆ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಶೀರ್ಷಿಕೆಯನ್ನು ಇಟ್ಟುಕೊಂಡಿರುವಾಗ ಇಂಥ ಪ್ರಮಾದ ಏಕಾಗಿದೆ? ಇಸ್ರೇಲ್ ಪ್ರಭುತ್ವವು ಪ್ಯಾಲೆಸ್ಟೀನ್‌ನ ಗಾಜಾಪಟ್ಟಿಯಲ್ಲಿ ನರಮೇಧ ನಡೆಸಿದೆ. ಅದರ ಘಾತುಕ ಯೋಜನೆಗಳ ಭಾಗವಾಗಿ ಕಟ್ಟಲಾಗಿರುವ, ಇಸ್ಲಾಮೋಫೋಬಿಯ ಬಿತ್ತುವ ಇರಾದೆಯ ಸಿನಿಮಾ ಇದಾಗಿದೆ! ಇಂಥ ಸಿನಿಮಾವನ್ನು ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಆಯ್ಕೆ ಮಾಡುವ ಮೂಲಕ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವವು ಈ ಅಕೃತ್ಯವನ್ನು ಬೆಂಬಲಿಸುವುದನ್ನು ನಾವು ಖಂಡಿಸುತ್ತೇವೆ. ಪಟ್ಟಿಯಿಂದ ಈ ಸಿನಿಮಾವನ್ನು ಕೂಡಲೇ ತೆಗೆದುಹಾಕಬೇಕು.
- ಕೆ.ಫಣಿರಾಜ್, ಚಂದ್ರಪ್ರಭ ಕಠಾರಿ, ಎಂ.ನಾಗರಾಜ ಶೆಟ್ಟಿ, ಮುರಳಿಕೃಷ್ಣ ರಮೇಶ್ ಶಿವಮೊಗ್ಗ, ಕೃಷ್ಣಪ್ರಸಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.