ADVERTISEMENT

ವಾಚಕರ ವಾಣಿ: 19 ಫೆಬ್ರುವರಿ 2025

ವಾಚಕರ ವಾಣಿ
Published 19 ಫೆಬ್ರುವರಿ 2025, 0:07 IST
Last Updated 19 ಫೆಬ್ರುವರಿ 2025, 0:07 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಮೆಟ್ರೊ ಪ್ರಯಾಣ ದರ: ಗೊಂದಲ ಬಗೆಹರಿಯಲಿ

ಬೆಂಗಳೂರು ಮೆಟ್ರೊ ಪ್ರಯಾಣ ದರ ಏರಿಕೆ ಕುರಿತಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಮಾತಿನ ಚಕಮಕಿ ನಾನಾ ಬಗೆಯ ಸಂಚಲನಗಳನ್ನು ಮೂಡಿಸಿದೆ. ರಾಜ್ಯ ಕಾಂಗ್ರೆಸ್ ನಾಯಕರು ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ದೂರುತ್ತಿದ್ದರೆ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಇತ್ತೀಚಿನ ಸ್ಪಷ್ಟನೆ ಈ ವಾದಕ್ಕೆ ಹೊಸ ಆಯಾಮವನ್ನು ತಂದಿದೆ. ಕೇಂದ್ರ ಸಚಿವರ ಪ್ರಕಾರ, ಮೆಟ್ರೊ ಪ್ರಯಾಣ ದರ ಏರಿಕೆ ಪ್ರಸ್ತಾವ

ವನ್ನು ಮೊದಲು ರಾಜ್ಯ ಸರ್ಕಾರವೇ ಸಲ್ಲಿಸಿತ್ತು. ಆದರೆ, ಇದಕ್ಕೆ ಪ್ರತಿಯಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ನಾವು ಬರೀ ಪ್ರಸ್ತಾವ ಸಲ್ಲಿಸಿದ್ದೇವೆ. ದರ ಹೆಚ್ಚಳದ ಅಂತಿಮ ನಿರ್ಧಾರ ತೆಗೆದುಕೊಂಡಿದ್ದು ಕೇಂದ್ರ ಸರ್ಕಾರ’ ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಕೆಲವು ರಾಜ್ಯಗಳ ಮೆಟ್ರೊ ಪ್ರಯಾಣ ದರಕ್ಕೆ ಹೋಲಿಸಿದರೆ, ಬೆಂಗಳೂರಿನ ಮೆಟ್ರೊ ದರ ಹೆಚ್ಚು ಎಂಬ ಆರೋಪವಿದೆ. ಜನ ಮೆಟ್ರೊ ಪ್ರಯಾಣ ದರ ಏರಿಕೆಯನ್ನು ವಿರೋಧಿಸುತ್ತಿರುವ ಈ ಸಂದರ್ಭದಲ್ಲಿ ದರ ಏರಿಕೆ ಬೇಡವೆಂದು ರಾಜ್ಯ ಸರ್ಕಾರ ತೀರ್ಮಾನಿಸಿದ್ದಾದರೆ, ಅದು ಪ್ರಸ್ತಾವ ಸಲ್ಲಿಸಿದ್ದೇಕೆ ಎಂಬ ಪ್ರಶ್ನೆ ಸಹ ತಲೆದೋರುತ್ತದೆ.

ADVERTISEMENT

ದರ ಏರಿಕೆ ನಿರ್ವಹಣೆ ಹೊಣೆಯ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡದೆ, ಕೇಂದ್ರದ ಮೇಲೆ ಆರೋಪ ಮಾಡುವುದು ಜನರಲ್ಲಿ ಗೊಂದಲ ಮೂಡಿಸುತ್ತಿದೆ. ದೋಷಾರೋಪ ಮಾಡುವುದರ ಬದಲು, ಸರ್ಕಾರ ಜನಪರ ನೀತಿಯೊಂದಿಗೆ ಸ್ಪಷ್ಟನೆ ನೀಡಲಿ.

–ಜಿ.ನಾಗೇಂದ್ರ ಕಾವೂರು, ಸಂಡೂರು

ನಿಷ್ಕ್ರಿಯ ಕಂಪನಿ: ಪರ್ಯಾಯ ಮಾರ್ಗ ಯೋಚಿಸಿ

ನಿಷ್ಕ್ರಿಯ ಹಾಗೂ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ 49 ಕಂಪನಿಗಳನ್ನು ಮುಚ್ಚಲು ಅಥವಾ ಮತ್ತೊಂದು ಕಂಪನಿಯ ಜೊತೆ ವಿಲೀನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ (ಪ್ರ.ವಾ., ಫೆ. 18). ಈ ಆಲೋಚನೆಯನ್ನು ಸರ್ಕಾರವು ಪುನರ್‌ಪರಿಶೀಲನೆಗೆ ಒಳಪಡಿಸಬೇಕು. ಜನಸಾಮಾನ್ಯರ ತೆರಿಗೆ ಹಣದಲ್ಲಿ ಹೂಡಿಕೆ ಮಾಡಿ ಪ್ರಾರಂಭಿಸಿದ ಕಂಪನಿಗಳನ್ನು ಈಗ ನಷ್ಟದ ನೆಪದಲ್ಲಿ ಮುಚ್ಚಲು ಹೊರಟರೆ ಜನರಿಗೆ ಅನ್ಯಾಯ ಎಸಗಿದಂತೆ ಆಗುತ್ತದೆ. ಖಾಸಗಿ ಉದ್ಯಮಗಳು ಲಾಭದಲ್ಲಿ ಮುನ್ನಡೆಯಬೇಕಾದರೆ ಸರ್ಕಾರಿ ಉದ್ಯಮಗಳು ಮಾತ್ರ ಯಾಕೆ ನಷ್ಟದಲ್ಲಿರುತ್ತವೆ ಎಂಬುದು ಜನಸಾಮಾನ್ಯರನ್ನು ಕಾಡುವ ಪ್ರಶ್ನೆ. ಸರ್ಕಾರವು ಕಂಪನಿಗಳಿಗೆ ಅಗತ್ಯವಾದ ಮೂಲ ಸೌಕರ್ಯವನ್ನು ಸಕಾಲಕ್ಕೆ ದೊರಕಿಸಿಕೊಟ್ಟರೆ ನಷ್ಟದ ಮಾತು ಯಾಕೆ ಬರುತ್ತದೆ? ಕಂಪನಿಗಳ ನಷ್ಟದ

ಹಿಂದೆ ಅಧಿಕಾರಿಗಳ ಭ್ರಷ್ಟಾಚಾರ, ನಿರ್ಲಕ್ಷ್ಯ ಮತ್ತು ಸರ್ಕಾರದ ಸಹಕಾರದ ಕೊರತೆ ಇದ್ದಿರಬಹುದು. ಸರ್ಕಾರ ತನ್ನ ಲೋಪದೋಷಗಳನ್ನು ಮುಚ್ಚಿಕೊಳ್ಳಲು ಕಂಪನಿಗಳನ್ನೇ ಮುಚ್ಚಲು ಅಥವಾ ವಿಲೀನಗೊಳಿಸಲು ಮುಂದಾಗುವುದು ಎಷ್ಟು ಸರಿ?

ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆಯಿಂದ ಬಹಳಷ್ಟು ಜನ ಬಳಲುತ್ತಿದ್ದಾರೆ. ಈ ಕಂಪನಿಗಳನ್ನು ಮುಚ್ಚುವುದರಿಂದ ಅಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಸಾವಿರಾರು ಜನ ಕೆಲಸ ಕಳೆದುಕೊಳ್ಳಬಹುದು. ಇದರಿಂದಾಗಿ, ನಿರುದ್ಯೋಗದ ಪ್ರಮಾಣವನ್ನು ಸರ್ಕಾರವೇ ಇನ್ನೂ ಹೆಚ್ಚಿಗೆ ಮಾಡಿದಂತೆ ಆಗುತ್ತದೆ. ಹಾಗಾಗಿ, ಸರ್ಕಾರ ಈ ಕಂಪನಿಗಳನ್ನುಅಭಿವೃದ್ಧಿಪಡಿಸಬಹುದಾದ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸಬೇಕು.

– ನಾಗೇಶ್ ಹರಳಯ್ಯ, ಕಲಬುರಗಿ

ದುರಾಸೆಯೇ ದುಃಖಕ್ಕೆ ಕಾರಣ

‘ಆಸೆಯೇ ದುಃಖಕ್ಕೆ ಮೂಲ’ ಎಂಬ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ಅಂಕಣ ಬರಹ (ನುಡಿ ಬೆಳಗು,ಫೆ. 17) ಬಹಳ ಅರ್ಥಪೂರ್ಣ, ಚಿಂತನಾರ್ಹ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದಂತಹದ್ದಾಗಿದೆ. ಆದರೆ ಆಸೆ ದುಃಖಕ್ಕೆ ಕಾರಣವಲ್ಲ, ದುರಾಸೆ ದುಃಖಕ್ಕೆ ಕಾರಣ. ಆಸೆಯಿಲ್ಲದೆ ಬದುಕುವುದು ಸಾಧ್ಯವೇ ಇಲ್ಲ. ನಾವು ನಮ್ಮ ಜೀವನದ ಅವಶ್ಯಕತೆಗಳಿಗಾಗಿ ಆಸೆ ಪಡಲೇಬೇಕು. ಬುದ್ಧ ಸಹ ಆಸೆ ದುಃಖಕ್ಕೆ ಕಾರಣ ಎಂದಿಲ್ಲ, ದುರಾಸೆ ದುಃಖಕ್ಕೆ ಕಾರಣ ಎಂದಿದ್ದಾನೆ. ಪಾಳಿ ಭಾಷೆಯಿಂದ ಸಂಸ್ಕೃತ, ಸಂಸ್ಕೃತದಿಂದ ಇಂಗ್ಲಿಷ್, ಇಂಗ್ಲಿಷ್‌ನಿಂದ ಕನ್ನಡಕ್ಕೆ ಹೀಗೆಅನುವಾದವಾಗುವಾಗ ಪಾಳಿ ಭಾಷೆಯ ತನ್ಹಾ ಎನ್ನುವ ಪದಕ್ಕೆ ಹಪಹಪಿ, ದುರಾಸೆ, ಅಭೀಪ್ಸೆ, ದಾಹ, ಮತ್ತಷ್ಟು ಮಗದಷ್ಟು ಎನ್ನುವ ಅರ್ಥಗಳನ್ನು ಬಳಸಲಾಗುತ್ತದೆ.

ನಾವು ಅನಗತ್ಯಗಳಿಗೆ ದುರಾಸೆ ಪಡಬಾರದು. ಪ್ರತಿಷ್ಠೆ ಪ್ರದರ್ಶನದ ದುಬಾರಿ ಭವ್ಯ ಬಂಗಲೆ, ಐಷಾರಾಮಿ ಕಾರು, ಐಷಾರಾಮಿ ಜೀವನಶೈಲಿಯಂತಹ ದುರಾಸೆಗಳಿಂದ ದೂರವಿದ್ದು, ನಮ್ಮ ಆರೋಗ್ಯ, ಶಾಂತಿ, ನೆಮ್ಮದಿಯನ್ನು ಕಾಪಾಡಿಕೊಂಡರೆ ಖಂಡಿತ ಸುಖವಾಗಿ ಬಾಳಬಹುದು. ಚಿಕ್ಕವರಿದ್ದಾಗ ಚಿಕ್ಕ ಚಿಕ್ಕ ಆಸೆಗಳು ಇದ್ದಿದ್ದರಿಂದ ಅವನ್ನು ನಮ್ಮ ತಂದೆ-ತಾಯಿ ಸುಲಭವಾಗಿ ತೀರಿಸುತ್ತಿದ್ದರು ಅಥವಾ ನಾವೇ ತೀರಿಸಿಕೊಳ್ಳುತ್ತಿದ್ದೆವು. ಈಗ ಯಾರಿಂದಲೂಬಗೆಹರಿಸಲಾಗದಂಥ ದುರಾಸೆಗಳನ್ನು ಇಟ್ಟುಕೊಂಡು ದುಃಖದಿಂದ ತೊಳಲಾಡುತ್ತಿರುತ್ತೇವೆ. ಇದಕ್ಕೆ ನಾವೇ ಕಾರಣ ವಿನಾ ದೇವರಾಗಲಿ, ಬಂಧುಗಳಾಗಲಿ, ದೋಷಗಳಾಗಲಿ, ಗ್ರಹಗತಿಗಳಾಗಲಿ ಅಲ್ಲ.

–ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ

ಅವೈಜ್ಞಾನಿಕ ಪದ್ಧತಿ ನಿವಾರಣೆಗೆ ಬೇಕು ಮಾರ್ಗಸೂಚಿ

ರಾಜ್ಯದ ಮಠವೊಂದರಲ್ಲಿ ನಮ್ಮ ಅಣ್ಣನಿಗೆ ದಾಸಪ್ಪ ಬಿಡಿಸುವ ಶಾಸ್ತ್ರ ನಡೆಯಿತು. ಅದರಲ್ಲಿ ಐದು ಜನರಿಗೆ ಒಂದೇ ದಬ್ಬಳವನ್ನು ಬಳಸಿ ಕಿವಿ ಚುಚ್ಚಿದ್ದನ್ನು ಗಮನಿಸಿದೆ. ಇದರಿಂದ ಒಬ್ಬರಿಂದ ಇನ್ನೊಬ್ಬರಿಗೆ ರೋಗ ಸುಲಭವಾಗಿ ಹರಡಬಹುದಾದ ಸಾಧ್ಯತೆ ಇರುತ್ತದೆ. ದೊಡ್ಡ ಸಂಸ್ಥಾನದಲ್ಲಿ ಈ ತರಹದ ಅವೈಜ್ಞಾನಿಕ ಪದ್ಧತಿ ಅನುಸರಿಸುತ್ತಿರುವುದನ್ನು ನಿವಾರಿಸುವ ಬಗ್ಗೆ ಸಂಬಂಧಿಸಿದವರು ಗಮನಹರಿಸಬೇಕಾಗಿದೆ.

ಕೆಲವು ಧಾರ್ಮಿಕ ಸಂಸ್ಥಾನಗಳಲ್ಲಿ ಮುಡಿ ಕೊಡುವ ಸಂದರ್ಭದಲ್ಲಿ ಹಲವರಿಗೆ ರಕ್ತ ಬರುತ್ತದೆ. ಕೂದಲು ತೆಗೆಯುವುದಕ್ಕೆ ಬಳಸುವ ಪರಿಕರವನ್ನು ಸರಿಯಾಗಿ ಸ್ಟೆರಲೈಸ್ ಮಾಡದೆ ಅದರಲ್ಲೇ ಇನ್ನೊಬ್ಬರಿಗೂ ಮುಡಿ ತೆಗೆಯ ಲಾಗುತ್ತದೆ. ಇದರಿಂದ ಕೂಡ ಆರೋಗ್ಯದ ಸಮಸ್ಯೆ ಕಂಡುಬರುವ ಸಂಭವ ಇರು‌ತ್ತದೆ. ಆರೋಗ್ಯ ಇಲಾಖೆ ಈ ದಿಸೆಯಲ್ಲಿ ಒಂದು ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕಾದ ಅಗತ್ಯವಿದೆ.

–ಪೂರ್ಣಚಂದ್ರ, ಮಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.