ADVERTISEMENT

ವಾಚಕರ ವಾಣಿ: 22 ಫೆಬ್ರುವರಿ 2025

ವಾಚಕರ ವಾಣಿ
Published 21 ಫೆಬ್ರುವರಿ 2025, 23:31 IST
Last Updated 21 ಫೆಬ್ರುವರಿ 2025, 23:31 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಕೃಷಿ ಜಮೀನಿನಲ್ಲಿ ಮನೆ: ಆಗಲಿ ಸಕ್ರಮ

ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ನಿರ್ಮಿಸಿದ ಅನಧಿಕೃತ ಬಡಾವಣೆಗಳಲ್ಲಿ ನಿವೇಶನಗಳನ್ನು ಖರೀದಿಸಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿರುವವರಿಗೆ ‘ಬಿ’ ಖಾತಾ ಮಾಡಿಕೊಟ್ಟು ಸಕ್ರಮಗೊಳಿಸುವ ವಿಶೇಷ ಅಭಿಯಾನಕ್ಕೆ ಸರ್ಕಾರ ಇತ್ತೀಚೆಗೆ ಚಾಲನೆ ನೀಡಿರುವುದು ಸರಿಯಷ್ಟೆ. ಗ್ರಾಮೀಣ ಪ್ರದೇಶಗಳಲ್ಲಿ ಜನ ಗ್ರಾಮಠಾಣಾ ವ್ಯಾಪ್ತಿಯ ಹೊರಗೆ ಗ್ರಾಮಗಳಿಗೆ ಹೊಂದಿಕೊಂಡಂತೆ ಇರುವ ಕೃಷಿ ಜಮೀನುಗಳಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಇಂತಹ ಮನೆಗಳಿಗೆ ಅಧಿಕೃತವಾಗಿ ಖಾತೆ ಆಗಿರುವುದಿಲ್ಲ. ಈಗ ಇವುಗಳಿಗೆ ಅಧಿಕೃತವಾಗಿ ಖಾತೆ ಮಾಡಿಕೊಡುವ ಕೆಲಸ ಅವಶ್ಯವಾಗಿ ಆಗಬೇಕಿದೆ.

- ಸಿ.ಪುಟ್ಟಯ್ಯ ಹಂದನಕೆರೆ, ತುಮಕೂರು

ADVERTISEMENT

ಸಾರ್ವಜನಿಕ ಸಾರಿಗೆ: ಗುಣಮಟ್ಟ ಮುಖ್ಯ

‘ಬೆಂಗಳೂರನ್ನು ಬರೀ ಎರಡು-ಮೂರು ವರ್ಷಗಳಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಭಗವಂತ ಇಳಿದು ಬಂದರೂ ಅದು ಸಾಧ್ಯವಲ್ಲದ ಕೆಲಸ...’ ಎಂಬ ತಮ್ಮ ಹೇಳಿಕೆಯಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ನಗರವನ್ನು ಈಗಿನ ಸರ್ಕಾರದ ಅವಧಿಯಲ್ಲಿ ಉತ್ತಮಪಡಿಸಲು ಸಾಧ್ಯವಾಗದು ಎಂದು ಒಪ್ಪಿಕೊಂಡಂತೆ ಆಗಿದೆ. ಅಲ್ಲದೆ, ಸೆಪ್ಟೆಂಬರ್ 15ರೊಳಗೆ ನಗರದ ಎಲ್ಲ ರಸ್ತೆಗಳ ಗುಂಡಿಗಳನ್ನೂ ಮುಚ್ಚದಿದ್ದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೋದ ವರ್ಷ ತಾವೇ ನೀಡಿದ್ದ ಖಡಕ್ ಎಚ್ಚರಿಕೆಯನ್ನೂ ಅವರು ಮರೆತಂತಿದೆ. ಗಡುವಿನ ತರುವಾಯ, ರಸ್ತೆಗಳು ಗುಂಡಿಮುಕ್ತ ಆಗಲಿಲ್ಲ, ಅಧಿಕಾರಿಗಳ ವಿರುದ್ಧ ಕ್ರಮವೂ ಜರುಗಲಿಲ್ಲ. ಗುಂಡಿ ಮುಚ್ಚಲು ಮಳೆ ಅಡ್ಡಿ ಎಂಬ ಅಧಿಕಾರಿಗಳ ಸಬೂಬನ್ನು ಕೇಳುತ್ತಲೇ ಬಂದಿದ್ದ ಮತ್ತು ಈ ಬೇಸಿಗೆಯಲ್ಲಾದರೂ ರಸ್ತೆಗಳು ಗುಂಡಿಮುಕ್ತ ಆಗಬಹುದೆಂದು ನಿರೀಕ್ಷಿಸಿದ್ದ ಜನರ ಮುಖಕ್ಕೆ ತಣ್ಣೀರೆರಚಿದಂತಾಗಿದೆ. ಉಪಮುಖ್ಯಮಂತ್ರಿಯವರ ಈ ಹೇಳಿಕೆ, ಮೊದಲೇ ನಿಧಾನಗತಿಯ ಬಿಬಿಎಂಪಿ ಅಧಿಕಾರಿಗಳಿಗೆ ತಾನಾಗಿಯೇ ದೊರೆತ ವರದಾನವಾಯಿತು. ಅಲ್ಲದೆ, ಮಳೆಗಾಲಕ್ಕೆ ಮುಂಚೆ ರಸ್ತೆಗಳನ್ನು ಸುಸ್ಥಿತಿಯಲ್ಲಿ ಇಡಬೇಕಾದ ಬದ್ಧತೆಯಿಂದಲೂ ಅವರನ್ನು ಮುಕ್ತರನ್ನಾಗಿಸಿತು!

ಆಡಳಿತ ನಡೆಸುವವರು ತಮ್ಮ ಆದ್ಯತೆಗಳ ಬಗ್ಗೆ ಈಗ ಮರುಚಿಂತಿಸಬೇಕಾದ ಅಗತ್ಯವಿದೆ. ಸುರಂಗ ರಸ್ತೆಗಳ ನಿರ್ಮಾಣಕ್ಕೆ ಮುಂದಾಗುವ ಮೊದಲು ಉತ್ತಮ ರಸ್ತೆಗಳನ್ನು ನಿರ್ಮಿಸಿ, ಸಾರ್ವಜನಿಕ ಸಾರಿಗೆಯ ಗುಣಮಟ್ಟವನ್ನು ಉತ್ತಮಪಡಿಸಬೇಕು. ಪ್ರಯಾಣಿಕರಿಗೆ ಕೈಗೆಟಕುವ ದರವನ್ನು ನಿಗದಿಪಡಿಸಬೇಕು. ಆಗ ಹೆಚ್ಚಿನವರು ಸ್ವಂತ ವಾಹನ ಹೊಂದುವುದು ಕಡಿಮೆಯಾಗಿ, ಅಷ್ಟರಮಟ್ಟಿಗೆ ರಸ್ತೆಗಳ ಮೇಲಿನ ಒತ್ತಡ ಸಹಜವಾಗಿಯೇ ತಗ್ಗುತ್ತದೆ.

- ತಿಪ್ಪೂರು ಪುಟ್ಟೇಗೌಡ, ಬೆಂಗಳೂರು

ಪ್ರಾಮಾಣಿಕತೆಗೆ ಹೆಚ್ಚುವರಿ ಅಂಕ!

ವೆಬ್‌ಕಾಸ್ಟಿಂಗ್ ವ್ಯವಸ್ಥೆಯಡಿ ಮಕ್ಕಳಿಗೆ ಪರೀಕ್ಷೆ ಬರೆಸುವುದು ಪರಸ್ಪರ ಅಪನಂಬಿಕೆಗೆ ಹಿಡಿದ ಕೈಗನ್ನಡಿ ಎಂದು ಅಭಿಪ್ರಾಯಪಟ್ಟಿರುವ ಸದಾಶಿವ್‌ ಸೊರಟೂರು ಅವರ ಲೇಖನ (ಸಂಗತ, ಫೆ. 20) ವಾಸ್ತವ ಪರಿಸ್ಥಿತಿ ಹಾಗೂ ವಿದ್ಯಾರ್ಥಿ ಸಮೂಹದಲ್ಲಿ ಆಗಬೇಕಾಗಿರುವ ಬದಲಾವಣೆಗೆ ಕನ್ನಡಿ ಹಿಡಿದಿದೆ. ಮೂರು ದಶಕಗಳ ಹಿಂದೆ ನಾನು ಬೆಳಗಾವಿಯ ಬಿ.ಕೆ. ಮಾಡೆಲ್ ಶಾಲೆಯಲ್ಲಿ ಹತ್ತನೇ ತರಗತಿ ಕಲಿಯುತ್ತಿದ್ದೆ. ಅರ್ಧವಾರ್ಷಿಕ ಪರೀಕ್ಷೆಯ ಸಂದರ್ಭದಲ್ಲಿ ‘ಬಿಟ್ಟ ಸ್ಥಳ’ವೊಂದು ನನಗೆ ಗೊತ್ತಿರಲಿಲ್ಲ. ಆದರೆ ಮೇಲ್ವಿಚಾರಕರಾಗಿದ್ದ ಶಿಕ್ಷಕಿ ಹೊರಹೋದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಅದರ ಉತ್ತರವನ್ನು ಇಡೀ ತರಗತಿಗೆ ಕೇಳುವಂತೆ ಕೂಗಿ ಹೇಳಿದ್ದ. ಅದು ಶಿಕ್ಷಕಿ ಸುಲಭಾ ಒಡೆಯರ್ ಅವರ ಗಮನಕ್ಕೂ ಬಂದಿತ್ತು. ಆದರೆ ಅವನು ಹೇಳುವುದಕ್ಕೆ ಮುನ್ನ ನನಗೆ ಆ ಉತ್ತರ ಗೊತ್ತಿರದಿದ್ದ ಕಾರಣ, ಬಿಟ್ಟ ಸ್ಥಳವನ್ನು ತುಂಬದೆ ಹಾಗೆಯೇ ಬಿಟ್ಟಿದ್ದೆ. ಉತ್ತರ ಪತ್ರಿಕೆಯ ಮೌಲ್ಯಮಾಪನದ ಸಂದರ್ಭದಲ್ಲಿ ನನ್ನನ್ನು ಕರೆಸಿದ್ದ ಶಿಕ್ಷಕಿ, ಪ್ರಾಮಾಣಿಕತೆಗೆ ಎಂದು ಒಂದು ಹೆಚ್ಚುವರಿ ಅಂಕವನ್ನು ನೀಡಿ, ಪ್ಲಸ್ ಒನ್ ಎಂದು ಬರೆದು ಹುರಿದುಂಬಿಸಿದ್ದರು. ಮೇಲ್ವಿಚಾರಕರಿಲ್ಲದೆ ವಿದ್ಯಾರ್ಥಿಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಪರೀಕ್ಷೆ ಬರೆದರೆ, ವಿದ್ಯಾರ್ಥಿಗಳಿಗೆ ನೀಡಿರುವ ಶಿಕ್ಷಣ-ಸಂಸ್ಕಾರ ಸಾರ್ಥಕವಾದೀತು.

- ಸುಘೋಷ ಸ. ನಿಗಳೆ, ಬೆಂಗಳೂರು

ಪ್ರೀತಿ ಇಲ್ಲದ ಮೇಲೆ...

ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಕೋಣೆಯೊಂದರಲ್ಲಿ ಕೂಡಿಹಾಕಿ, ವ್ಯಕ್ತಿಯೊಬ್ಬ ಕುಟುಂಬಸಹಿತ ಮಹಾ ಕುಂಭಮೇಳಕ್ಕೆ ತೆರಳಿದ್ದು ಜಾರ್ಖಂಡ್‌ ರಾಜ್ಯದಿಂದ ವರದಿಯಾಗಿದೆ (ಪ್ರ.ವಾ., ಫೆ. 21). ತಾಯಿಗೆ ಅಗತ್ಯವಾದ ಆಹಾರ, ನೀರು, ಔಷಧ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಯೇ ತಾನು ತೆರಳಿರುವುದಾಗಿ ಮಗ ಸಮರ್ಥಿಸಿಕೊಂಡಿದ್ದಾನೆ. ತಂದೆ-ತಾಯಿ ಮಕ್ಕಳಿಂದ ನಿರೀಕ್ಷಿಸುವುದು ಬರೀ ಊಟ, ಔಷಧೋಪಚಾರವನ್ನಷ್ಟೇ ಅಲ್ಲ. ಅವರು ಮಕ್ಕಳ ಸಾಮೀಪ್ಯವನ್ನು, ಅವರ ಪ್ರೀತಿಯನ್ನು ಬಯಸುತ್ತಾರೆ ಎಂಬ ಅರಿವು ಇರಬೇಕಾಗುತ್ತದೆ. ತಂದೆ-ತಾಯಿಗಿಂತ ಮಿಗಿಲಾದ ದೇವರು, ಪುಣ್ಯಕ್ಷೇತ್ರ ಎಲ್ಲೂ ಇಲ್ಲ ಎಂಬುದನ್ನು ನಿರೂಪಿಸುವ ಅನೇಕ ಕಥೆಗಳು ನಮ್ಮಲ್ಲಿವೆ. ಅಂಥ ಕಥೆಗಳನ್ನು ಓದಿಯೂ ಜನ ಕಣ್ಣೆದುರಿನ ದೇವರನ್ನು ಕಡೆಗಣಿಸಿ, ಕಾಣದ ದೇವರಿಗೆ ಹಂಬಲಿಸುವುದು ವಿಚಿತ್ರವಾಗಿ ಕಾಣುತ್ತದೆ.

- ಸಿ.ಚಿಕ್ಕತಿಮ್ಮಯ್ಯ, ಬೆಂಗಳೂರು

ತಿದ್ದುಪಡಿಯ ವಿವರ ಪ್ರಕಟವಾಗಲಿ

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ– 2025 ಸಿದ್ಧವಾಗಿದೆ ಎಂದು ವರದಿಯಾಗಿದೆ (ಪ್ರ.ವಾ., ಫೆ. 21). ಈ ಹಿಂದೆ 2000ದಲ್ಲಿ ವಿಶ್ವವಿದ್ಯಾಲಯಗಳ ಕಾಯ್ದೆಗೆ ಸಮಗ್ರ ತಿದ್ದುಪಡಿಯಾಗಿ ಜಾರಿಗೆ ಬಂದಿತ್ತು. ಸಿಂಡಿಕೇಟ್, ಅಕಡೆಮಿಕ್ ಕೌನ್ಸಿಲ್‌ಗಳಿಗೆ ಸದಸ್ಯರನ್ನು ಚುನಾವಣೆ ಮತ್ತು ನಾಮನಿರ್ದೇಶನ ಪದ್ಧತಿಯ ಮೂಲಕ ನೇಮಿಸುವ ಬದಲಿಗೆ ಸದಸ್ಯರನ್ನು ಸರ್ಕಾರ ನಾಮನಿರ್ದೇಶನ ಮಾಡುವ ಪದ್ಧತಿ ಜಾರಿಗೆ ಬಂದಿತು. ಅಂದಿನಿಂದ, ಆಡಳಿತಾರೂಢ ಪಕ್ಷದ ಕಾರ್ಯಕರ್ತರು, ಪಕ್ಷಕ್ಕೆ ನಿಷ್ಠರಾಗಿ ಇರುವವರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುತ್ತಾ ಬರಲಾಗಿದೆ.

ಈಗಿನ ತಿದ್ದುಪಡಿಯಲ್ಲಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ. ಮತ್ತೇನೇನು ಇದೆಯೋ ಗೊತ್ತಿಲ್ಲ. ಸರ್ಕಾರ ತಿದ್ದುಪಡಿಯ ಕರಡನ್ನು ಸಮಸ್ತ ಭಾಗಿದಾರರ ಓದಿಗಾಗಿ, ಸಲಹೆಗಾಗಿ ಜಾಲತಾಣದಲ್ಲಿ ಪ್ರಕಟಿಸಿ, ಬಂದ ಸಲಹೆಗಳನ್ನು ಪರಾಮರ್ಶಿಸಿ ಮುಂದುವರಿಯುವುದು ಜಾಣ್ಮೆಯ ನಡೆ.

- ವೆಂಕಟೇಶ್ ಮುದಗಲ್, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.