ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 22:03 IST
Last Updated 2 ಜುಲೈ 2025, 22:03 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಮೊಬೈಲ್‌ ಬಳಕೆಗೆ ಪ್ರಮಾಣದ ಅಂಕುಶ

ಇತ್ತೀಚೆಗೆ ಶಾಲೆ ಮತ್ತು ಮನೆಯಲ್ಲಿ ಮಕ್ಕಳು ಮೊಬೈಲ್ ಬಳಸುವುದು ಜಾಸ್ತಿ ಆಗಿದೆ. ಇದರಿಂದ ಅವರ ಆರೋಗ್ಯ ಹದಗೆಡುತ್ತಿದೆ. ಮಾನಸಿಕ ಹಾಗೂ ದೈಹಿಕವಾಗಿ ಮಕ್ಕಳ ಮನೋವಿಕಾಸಕ್ಕೂ ಧಕ್ಕೆಯಾಗುತ್ತಿದೆ. ಅವರಲ್ಲಿ ಪಾಠ ಕೇಳುವ ಉತ್ಸಾಹವೂ ಕಡಿಮೆಯಾಗುತ್ತಿದೆ. ಶಿಕ್ಷಕರು ಬೆಳಗಿನ ಪ್ರಾರ್ಥನಾ ಸಮಯದಲ್ಲಿ ‘ಇನ್ನು ಮುಂದೆ ಮೊಬೈಲ್ ಬಳಕೆ ಮಾಡುವುದಿಲ್ಲ’ ಎಂದು ಮಕ್ಕಳಿಂದ ಪ್ರಮಾಣ ಮಾಡಿಸಿದರೆ ಮೊಬೈಲ್ ಬಳಕೆ ಸ್ವಲ್ಪಮಟ್ಟಿಗೆ ಕಡಿಮೆ ಆಗಬಹುದೇನೋ?

ADVERTISEMENT

⇒ಎಚ್.ಎಸ್.ಟಿ. ಸ್ವಾಮಿ, ಚಿತ್ರದುರ್ಗ

ಜನರ ಹೊರಗಿಟ್ಟರೆ ಪರಿಸರ ಉಳಿವುದೇ?

‘ಅರಣ್ಯ ಹಕ್ಕು ಕಾಯ್ದೆಯಡಿ ನೀಡಿರುವ ಹಕ್ಕುಪತ್ರಗಳು ಅರಣ್ಯ ಒತ್ತುವರಿಗೆ ಕಾರಣ’ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ. ಇದಕ್ಕೆ ಸ್ಪಷ್ಟನೆ ಕೋರಿ 90ಕ್ಕೂ ಹೆಚ್ಚು ಅರಣ್ಯ ಹಕ್ಕು ಸಂಘಟನೆಗಳು ಪ್ರಧಾನಿಗೆ ಪತ್ರ ಬರೆದಿವೆ(ಪ್ರ.ವಾ., ಜುಲೈ 1). ವಸಾಹತು ಕಾಲದಿಂದಲೂ ಸ್ಥಳೀಯರನ್ನು ಅರಣ್ಯ ನಾಶಕ್ಕೆ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ. ಅವರ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಅರಣ್ಯ ಹಕ್ಕು ಕಾಯ್ದೆಯು ಅರಣ್ಯದ ಮೂಲನಿವಾಸಿಗಳು ಮತ್ತು ಬುಡಕಟ್ಟು ಜನರಿಗೆ ಒಂದಷ್ಟು ನಿರಾಳತೆ ನೀಡುವ ಭರವಸೆ ಹುಟ್ಟಿಸಿತ್ತು. ಆದರೆ, ಅರಣ್ಯ ಇಲಾಖೆಯ ಧೋರಣೆ ಇದನ್ನು ಹುಸಿಗೊಳಿಸಿದೆ.

ಅರಣ್ಯ ನಾಶಕ್ಕೆ ಸರ್ಕಾರದ ಬೃಹತ್ ಯೋಜನೆಗಳೇ ಕಾರಣ. ಆದರೆ, ಬ್ರಿಟಿಷರ ಕಾಲದಿಂದಲೂ ಸ್ಥಳೀಯ ಜನರೇ ಅರಣ್ಯ ನಾಶಕ್ಕೆ ಕಾರಣವೆಂಬ ಸಂಕಥನ ಕಟ್ಟಲಾಗಿದೆ. ಸ್ವಾತಂತ್ರ್ಯಾನಂತರವೂ ಇದೇ ಕಥನ ಮುಂದುವರಿದಿದೆ. ‘ಜನರನ್ನು ಹೊರಗಿಟ್ಟು ಪರಿಸರ ಸಂರಕ್ಷಣೆ ಸಾಧ್ಯವಿಲ್ಲ; ದೇಶಕ್ಕೆ ಬೇಕಿರುವುದು ಜನರನ್ನು ಒಳಗೊಳ್ಳುವ ಸಂರಕ್ಷಣಾ ಮಾದರಿ’ ಎಂದು ಪರಿಸರ ವಿಜ್ಞಾನಿ ಪ್ರೊ. ಮಾಧವ ಗಾಡ್ಗೀಳ್ ಹೇಳಿದ್ದಾರೆ. ಆಳುವ ವರ್ಗಕ್ಕೆ ಈ ಸತ್ಯ ಅರ್ಥವಾಗುವುದು ಯಾವಾಗ?

⇒ಗುರುಮೂರ್ತಿ ಜೋಗಿಬೈಲು, ಶೃಂಗೇರಿ

ಆಟೊ ದರ: ನಿಯಮಾವಳಿ ರೂಪಿಸಿ

ನಗರ ಪ್ರದೇಶಗಳ ಬಹುತೇಕ ಜನರಿಗೆ ದೈನಂದಿನ ಕೆಲಸಗಳು ಸರಾಗವಾಗಿ ನಡೆಯಲು ಆಟೊ ಮೇಲಿನ ಅವಲಂಬನೆ ಸಹಜವಾದುದು. ಶಾಲಾ, ಕಾಲೇಜು, ಕಚೇರಿ, ಮದುವೆ ಸಮಾರಂಭಗಳಿಗೆ ತೆರಳಲು ಆಟೊಗಳ ಸೇವೆ ಅಗತ್ಯವಾಗಿದೆ. ಆದರೆ, ಆಟೊ ಓಡಿಸುವ ಬಹಳಷ್ಟು ಚಾಲಕರಲ್ಲಿ ನಿಷ್ಠೆ, ಪ್ರಾಮಾಣಿಕತೆ, ಸೇವಾ ಮನೋಭಾವ ಕಣ್ಮರೆಯಾಗಿದೆ. ಹೆಚ್ಚು ದರ ಪಡೆಯುವುದು ಹಾಗೂ ಪ್ರಯಾಣಿಕರ ಜತೆ ಒರಟಾಗಿ ವರ್ತಿಸುವುದು ವರದಿಯಾಗುತ್ತಲೇ ಇದೆ. ಮೀಟರ್ ಹಾಕದೆ ತಮಗೆ ಇಷ್ಟ ಬಂ‌ದಷ್ಟು ದರ ಕೇಳುತ್ತಾರೆ. 2 ಕಿ.ಮೀ. ದೂರಕ್ಕೆ ₹30 ಪಡೆಯದೆ, ₹60ರಿಂದ ₹90 ದರ ನೀಡುವಂತೆ ಕೇಳುತ್ತಾರೆ. ಸರ್ಕಾರದ ನಿಯಮಾವಳಿ ಪಾಲಿಸುವ ಚಾಲಕರೂ ಇದ್ದಾರೆ. ಕಾನೂನು ಉಲ್ಲಂಘಿಸುವ ಚಾಲಕರಿಗೆ ಕಡಿವಾಣ ಹಾಕಬೇಕಿದೆ.

⇒ಡಿ. ಭರತ್, ಬೆಂಗಳೂರು 

ಹೃದಯಾಘಾತ: ಸತ್ಯ ಹೊರಬರಲಿ

ರಾಜ್ಯದಲ್ಲಿ ಹೃದಯಾಘಾತಗಳು ಹೆಚ್ಚುತ್ತಿರುವುದು ಆಘಾತಕಾರಿ. ಈ ಸಾವುಗಳು ಜನರಲ್ಲಿ ಆತಂಕ ಮೂಡಿಸಿರುವುದು ಸಹಜ. ಹೆಚ್ಚುತ್ತಿರುವ ಹೃದಯಾಘಾತ
ಗಳನ್ನು ನಿಭಾಯಿಸುವ ಮಟ್ಟಿಗೆ ನಮ್ಮ ವೈದ್ಯಕೀಯ ವ್ಯವಸ್ಥೆ ಸದೃಢವಾಗಿಲ್ಲ ಎಂಬುದರ ಬಗ್ಗೆ ಸಂಪಾದಕೀಯ (ಪ್ರ.ವಾ., ಜುಲೈ 2) ಬೆಳಕು ಚೆಲ್ಲಿದೆ. ಹಾಸನ ಜಿಲ್ಲೆಯಲ್ಲಿ ವರದಿಯಾಗಿರುವ ಹೃದಯಾಘಾತಗಳ ಬಗ್ಗೆ ಅಧ್ಯಯನ ನಡೆಸಲು ಸರ್ಕಾರವು ಸಮಿತಿ ರಚಿಸಿರುವುದು ಒಳ್ಳೆಯ ನಿರ್ಧಾರ. ವಸ್ತುನಿಷ್ಠ ಅಧ್ಯಯನ ನಡೆಸುವುದು ಸಮಿತಿಯ ಹೊಣೆಯಾಗಿದೆ.  

⇒ಸುಮಾ ವೀಣಾ, ಹಾಸನ

ಅನ್ನದಾತರ ಅಸ್ಮಿತೆ ಉಳಿಸಬೇಕು

‘ಹೊಲದ ಒಡೆಯರನ್ನು ಕೂಲಿಯಾಗಿಸಬೇಡಿ’ ಸುದ್ದಿ ಓದಿ ವಿಷಾದವಾಯಿತು (ಪ್ರ.ವಾ., ಜುಲೈ 2). ದೇವನಹಳ್ಳಿ ತಾಲ್ಲೂಕಿನ ರೈತರ ಹೃದಯದಂತಿರುವ 1,777 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾಪ್ರದೇಶಾಭಿವೃದ್ಧಿ ಮಂಡಳಿಯು ಮುಂದಾಗಿರುವುದು ದುರದೃಷ್ಟಕರ. ರೈತರ ಬದುಕಿಗೆ ಆಸರೆಯಾಗಿರುವ ಜಮೀನನ್ನು ವಶಪಡಿಸಿಕೊಂಡರೆ ಅಲ್ಲಿನವರ ಬದುಕು ಚಿಂತಾಜನಕವಾಗಲಿದೆ. ಉಳುಮೆಗೆ ಯೋಗ್ಯವಾದ ಜಮೀನನ್ನು ಕಸಿದುಕೊಂಡು ‘ಏರೊಸ್ಪೇಸ್ ಪಾರ್ಕ್’ ಸ್ಥಾಪಿಸಿ, ಯಾವ ಸಾಧನೆ ಮಾಡಲು ಸರ್ಕಾರ ಹೊರಟಿದೆಯೋ ತಿಳಿಯದಾಗಿದೆ. ಭೂಮಿ ಕಳೆದುಕೊಂಡರೆ ರೈತರ ಬದುಕು ಬೀದಿಗೆ ಬೀಳಲಿದೆ. ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಅಲ್ಲಿನ ಜನರ ಅಸ್ಮಿತೆಯನ್ನು ಉಳಿಸಬೇಕಿದೆ.

⇒ಯಶ್ವಂತ್ ಸಿ., ಶಿರಾ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.