ಸಮೀಕ್ಷೆ: ಗೌರವಧನ ಜಮೆ ವಿಳಂಬ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಪೂರ್ಣಗೊಂಡು ಒಂದೂವರೆ ತಿಂಗಳಾಗಿದೆ. ಶಿಕ್ಷಕರು ಸೇರಿದಂತೆ ವಿವಿಧ ಇಲಾಖೆಯ ನೌಕರರು ವ್ಯತಿರಿಕ್ತ ಪರಿಸ್ಥಿತಿಯಲ್ಲೂ ಸಮೀಕ್ಷೆ ನಡೆಸಿದ್ದಾರೆ. ದೂರದ ಸ್ಥಳಗಳಿಗೆ ತೆರಳಲು ಸ್ವಂತವಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಸಮೀಕ್ಷೆ ಪೂರ್ಣಗೊಂಡ ತಕ್ಷಣವೇ ಸಮೀಕ್ಷೆದಾರರ ಬ್ಯಾಂಕ್ ಖಾತೆಗಳಿಗೆ ಗೌರವಧನ ಜಮೆ ಮಾಡುವುದಾಗಿ ಸರ್ಕಾರ ಹೇಳಿತ್ತು. ಇಂದಿಗೂ ಜಮೆ ಮಾಡಿಲ್ಲ. ಇದು ಆಡಳಿತ ಯಂತ್ರ ಜಡಗೊಂಡಿ ರುವುದರ ಸಂಕೇತ. ತ್ವರಿತವಾಗಿ ಗೌರವಧನ ಬಿಡುಗಡೆಗೆ ಕ್ರಮವಹಿಸಬೇಕಿದೆ.
⇒ವಿ.ಎಸ್. ಕುಮಾರ್, ಬೆಂಗಳೂರು
ಸರ್ಕಾರಿ ಶಾಲೆ ಅಭಿವೃದ್ಧಿ: ಮಾದರಿ ನಡೆ
ಹೊಳಲ್ಕೆರೆ ತಾಲ್ಲೂಕಿನ ನಂದನ ಹೊಸೂರು ಗ್ರಾಮದ ಯುವಕರು, ಸ್ವಂತ ಹಣ ದಲ್ಲಿ ಸರ್ಕಾರಿ ಶಾಲೆಗೆ ನೀರಿನ ಪೈಪ್‌ಲೈನ್ ಅಳವಡಿಸಿದ್ದಾರೆ (ಪ್ರ.ವಾ., ಡಿ. 8). ಹೊಸ ದೇಗುಲ ನಿರ್ಮಾಣ, ಅದ್ದೂರಿ ಜಾತ್ರೆ, ರಾಜಕೀಯ ಸಮಾವೇಶಗಳಿಗೆ ದುಂದುವೆಚ್ಚ ಮಾಡಲಾಗುತ್ತದೆ. ಆದರೆ, ಸಮಾಜಮುಖಿ ಕೆಲಸಗಳಿಗೆ ಹಣ ಖರ್ಚು ಮಾಡುವವರು ವಿರಳ. ಗ್ರಾಮೀಣ ಪ್ರದೇಶದಲ್ಲಿ ಹಲವು ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿವೆ. ಶೌಚಾಲಯ ಇಲ್ಲದೆ ಶಿಕ್ಷಕರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅಂತಹ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕಿದೆ.
⇒ಶಾಂತವೀರ ಎಸ್., ಚಿತ್ರದುರ್ಗ
ಧರ್ಮ ಸಹಿಷ್ಣುತೆಯ ಪಠ್ಯಕ್ರಮ ರೂಪಿಸಿ ಯುವಜನರು ಮಾದಕ ವ್ಯಸನಿಗಳಾಗುತ್ತಿದ್ದಾರೆ; ಅವರನ್ನು ಸರಿದಾರಿಗೆ ತರಲು ವಿದ್ಯಾರ್ಥಿ ದಿಸೆಯಲ್ಲಿಯೇ ಭಗವದ್ಗೀತೆ ಬೋಧಿಸಬೇಕೆಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಪಠ್ಯದಲ್ಲಿ ಭಗವದ್ಗೀತೆ ಬೋಧಿಸಿದರಷ್ಟೇ ಸಾಕೆ? ವಚನಗಳ ಸಾರವನ್ನು ಮಕ್ಕಳು ಅರಿಯಬಾರದೆ? ದಾಸ ಸಾಹಿತ್ಯ ಬೇಡವೆ? ಇಸ್ಲಾಂ, ಸಿಖ್, ಜೈನ, ಕ್ರೈಸ್ತ ಧರ್ಮದಲ್ಲಿರುವ ಮಾನವೀಯ ಅಂಶಗಳನ್ನು ಶಾಲಾ–ಕಾಲೇಜಿನ ಪಠ್ಯದಲ್ಲಿ ಅಳವಡಿಸಿದರೆ ಉತ್ತಮ.
⇒ತು.ರು. ಚಂದ್ರಶೇಖರ, ಬೆಂಗಳೂರು
ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಿ
ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನದ ಮುಟ್ಟಿನ ರಜೆ ನೀಡಿರುವುದು ಸರಿಯಷ್ಟೆ. ಮಹಿಳೆಯರ ಆರೋಗ್ಯಕ್ಕೆ ಸರ್ಕಾರ ಕೈಗೊಂಡಿರುವ ಈ ದಿಟ್ಟಹೆಜ್ಜೆ ಶ್ಲಾಘನೀಯ. ಆದರೆ, ಈ ರಜೆ ಕೇವಲ ಉದ್ಯೋಗಸ್ಥೆಯರಿಗೆ ಸೀಮಿತವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೂ ಅನ್ವಯಿಸಿದರೆ ನಿಜವಾದ ಸಮಾನತೆ ದೊರಕಿದಂತಾಗುತ್ತದೆ.
⇒ಎನ್. ಮಹಾರಾಜ, ಹೊಸಪೇಟೆ
ಕೊಳಚೆ ನೀರು ಶುದ್ಧೀಕರಣ ಕಡ್ಡಾಯ
10 ಎಕರೆ ಮೇಲ್ಪಟ್ಟ ಜಮೀನಿನಲ್ಲಿ ನಿರ್ಮಿಸುವ ವಸತಿ ಬಡಾವಣೆಗಳಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಸರ್ಕಾರ ಆದೇಶಿಸಿದೆ. ಭೂಪರಿವರ್ತನೆ ಅಂಗೀಕಾರ ಪತ್ರದಲ್ಲಿಯೇ ಇದನ್ನು ಸ್ಪಷ್ಟವಾಗಿ ನಮೂದಿಸಬೇಕಿದೆ. ಇದನ್ನು ಕಾರ್ಯರೂಪಕ್ಕೆ ತರದ ಲೇಔಟ್ ಮಾಲೀಕರಿಗೆ ದಂಡ ವಿಧಿಸಬೇಕಿದೆ. ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ನಿರ್ಮಾಣ ಆಗುವ ಬಡಾವಣೆಗಳಲ್ಲಿಯೂ ಶುದ್ಧೀಕರಣ ಘಟಕ ಸ್ಥಾಪಿಸಲು ವಿಳಂಬ ಮಾಡುವ ಅಧಿಕಾರಿಗಳ ಮೇಲೂ ಕ್ರಮಕೈಗೊಳ್ಳಬೇಕು. ಆಗಷ್ಟೇ ಜಲಮೂಲಗಳ ಸಂರಕ್ಷಣೆ ಸಾಧ್ಯ.
⇒ಹುಸೇನಬಾಷಾ ತಳೇವಾಡ, ಹುಬ್ಬಳ್ಳಿ
ವಂದೇ ಮಾತರಂ: ಕೆಸರೆರಚಾಟ ಬೇಡ
ಚಿಕ್ಕವಯಸ್ಸಿನಲ್ಲಿ ನಾವು ‘ವಂದೇ ಮಾತರಂ’ ಗೀತೆ ಹೇಳುವಾಗ, ಕೇಳುವಾಗ ದೇಶಾಭಿಮಾನದ ಸ್ಫೂರ್ತಿ ಉಕ್ಕುತ್ತಿತ್ತು. ಜಾತಿ, ಧರ್ಮ ಎಲ್ಲವೂ ಮರೆಯಾಗಿ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡುತ್ತಿತ್ತು. ಆ ಶಕ್ತಿ ‘ವಂದೇ ಮಾತರಂ’ಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅಂದಿನ ಹೋರಾಟಗಾರರಿಗೂ ಈ ಗೀತೆ ದೇಶಾಭಿಮಾನದ ಸ್ಫೂರ್ತಿಯ ಚಿಲುಮೆಯಾಗಿತ್ತು. ‘ವಂದೇ ಮಾತರಂ’ ಪದವೇ ದೇಶದ ಅಸ್ಮಿತೆ ಮತ್ತು ಶಕ್ತಿ. ಇಂತಹ ಮಹತ್ವ ಪಡೆದ ಗೀತೆಯು ಈಗ ರಾಜಕೀಯ ಕೆಸರೆರಚಾಟಕ್ಕೆ ತುತ್ತಾಗಿರುವುದು ವಿಪರ್ಯಾಸ.
⇒ಸಿ. ಸಿದ್ದರಾಜು ಆಲಕೆರೆ, ಮಂಡ್ಯ
ಭ್ರಷ್ಟಾಚಾರ ತಡೆಗೆ ಜನಜಾಗೃತಿ ಅಗತ್ಯ
ಭ್ರಷ್ಟಾಚಾರದ ನಿರ್ಮೂಲನೆ ಅಸಾಧ್ಯವೆಂಬ ಮನೋಭಾವ ಬಹುತೇಕರಲ್ಲಿದೆ. ತಪ್ಪು ಮಾಡಿದವರನ್ನು ಶಿಕ್ಷಿಸುವ ಬದಲಿಗೆ, ತಪ್ಪು ಮಾಡಲು ಅವಕಾಶ ಕೊಡು ವವರೇ ಹೆಚ್ಚಿದ್ದಾರೆ. ಇದು ಬದಲಾಗಲು ಜನಜಾಗೃತಿ ಮೂಡಿಸಬೇಕು. ನಾಗರಿಕ
ರಿಂದ ಪ್ರಾರಂಭಿಸಿ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಜವಾಬ್ದಾರಿ
ಅರಿಯಬೇಕು. ಎಲ್ಲರೂ ಭ್ರಷ್ಟಾಚಾರರಹಿತ ಸಮಾಜ ನಿರ್ಮಾಣಕ್ಕೆ ಪಣತೊಡಲಿ.
⇒ರುಕ್ಮಿಣಿ ನಾಗಣ್ಣವರ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.