ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ಬಾಣಂತಿಯರ ಸಾವು: ತಕ್ಕ ಉತ್ತರವಲ್ಲ
ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ‘ಔಷಧ ಗುಣಮಟ್ಟ: ಸುಧಾರಣೆಗೆ ಸಕಾಲ’ ಎಂಬ ಲೇಖನದ (ಸಂಗತ, ಡಿ. 24) ಮೂಲಕ ಜನರನ್ನು ದಾರಿ ತಪ್ಪಿಸುತ್ತಿರುವುದು ತುಂಬಾ ದುರದೃಷ್ಟಕರ. ಈ ದೇಶದ ಜನರಿಗೆ ಗುಣಮಟ್ಟದ ಔಷಧಗಳು ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರದ ‘ಡ್ರಗ್ಸ್ ಆ್ಯಂಡ್
ಕಾಸ್ಮೆಟಿಕ್ಸ್ ಕಾಯ್ದೆ– 1940’ಕ್ಕೆ ತಿದ್ದುಪಡಿ ತರಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ನಿಜ, ಈ ಕಾಯ್ದೆಗೆ ತಿದ್ದುಪಡಿಗಳ ಅಗತ್ಯವಿದೆ. ಆದರೆ ಇದು ಕರ್ನಾಟಕದಲ್ಲಿ ಆದ ಬಾಣಂತಿಯರ ಸಾವುಗಳಿಗೆ ಯಾವುದೇ ರೀತಿಯಲ್ಲಿ ಉತ್ತರವಲ್ಲ.
ಕೊಲೆಗಾರ ಔಷಧಗಳನ್ನು ಪೂರೈಸಿದ ಪಶ್ಚಿಮ ಬಂಗಾಳ ಮೂಲದ ಔಷಧ ಕಂಪನಿ ಈ ಹಿಂದೆ ಹಲವಾರು
ಸಂದರ್ಭಗಳಲ್ಲಿ ಗುಣಮಟ್ಟವಿಲ್ಲದ ಔಷಧಗಳನ್ನು ಪೂರೈಸಿದ ದಾಖಲೆ ನಮ್ಮ ಸರ್ಕಾರದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ (ಕೆಎಸ್‍ಎಂಎಸ್‍ಸಿಎಲ್) ಬಳಿ ಇತ್ತು. ಹಾಗಿದ್ದೂ ಅದರ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳಲಿಲ್ಲ ಏಕೆ? ಆ ಮಾಹಿತಿ ತನ್ನ ಬಳಿ ಇದ್ದಾಗ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿತ್ತು.
ಇದನ್ನು ಮಾಡುವ ಬದಲಿಗೆ ಆ ಕಂಪನಿಗೆ ನೋಟಿಸ್ ಕೊಡದೆ ನೇರವಾಗಿ ಕಪ್ಪುಪಟ್ಟಿಗೆ ಸೇರಿಸಿ, ಕಂಪನಿ
ತಡೆಯಾಜ್ಞೆಯನ್ನು ಪಡೆಯಲು ಅನುಕೂಲ ಮಾಡಲಾಗಿದೆ ಎಂಬುದು ಬಯಲಾದ ಸತ್ಯ. ತಮ್ಮ ತಪ್ಪುಗಳನ್ನು
ಬಹಿರಂಗಪಡಿಸುವ ಮತ್ತು ಅವುಗಳನ್ನು ಸರಿಪಡಿಸುವ ಬದಲು ಅವರು ಕೇಂದ್ರ ಕಾಯ್ದೆಯನ್ನು ಬದಲಾಯಿಸಲು
ಪ್ರಸ್ತಾಪಿಸುವುದು ಜನರನ್ನು ದಾರಿತಪ್ಪಿಸುವ ಮಾರ್ಗವಲ್ಲದೆ ಇನ್ನೇನು?
⇒ಡಾ. ಗೋಪಾಲ ದಾಬಡೆ, ಧಾರವಾಡ
ವೆಚ್ಚ: ಮರೆಯಬಾರದ ‘ಗಾಂಧಿ ಮಾರ್ಗ’
ಬೆಳಗಾವಿಯಲ್ಲಿ 1924ರ ಡಿಸೆಂಬರ್ 26, 27ರಂದು ಜರುಗಿದ ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧೀಜಿ ಆರು
ದಿನ ಮುಂಚಿತವಾಗಿ ಆಗಮಿಸಿದ್ದರು. ಅವರೇ ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದರು. ಅವರ ವಾಸ್ತವ್ಯಕ್ಕೆ
ಅಧಿವೇಶನ ನಡೆಯುವ ಸ್ಥಳಕ್ಕೆ ಸಮೀಪದಲ್ಲಿ ಭವ್ಯ ಕುಟೀರವೊಂದನ್ನು ನಿರ್ಮಿಸಲಾಗಿತ್ತು. ಅಲ್ಲಿ ಐಷಾರಾಮಿ ವಸ್ತುಗಳನ್ನು ಇಡಲಾಗಿತ್ತು. ಇದನ್ನು ಗಮನಿಸಿದ ಗಾಂಧೀಜಿ ಅಸಮಾಧಾನಗೊಂಡು ‘ನನ್ನ ವಾಸ್ತವ್ಯಕ್ಕೆ ಸಣ್ಣ
ಖಾದಿ ಕುಟೀರವನ್ನು ಬಯಸಿದ್ದೆ, ಆದರೆ ಖಾದಿ ಅರಮನೆ ನಿರ್ಮಿಸುವ ಮೂಲಕ ನನಗೆ ಅವಮಾನ
ಮಾಡಲಾಗಿದೆ. ಬಡ ದುಡಿಮೆಗಾರರನ್ನು ಪ್ರತಿನಿಧಿಸುವ ನಮ್ಮ ಖರ್ಚುವೆಚ್ಚಗಳು ಅವರ ಜೀವನದೊಂದಿಗೆ ಹೊಂದಾಣಿಕೆಯಾಗುವ ರೀತಿಯಲ್ಲಿ ಇರಬೇಕು’ ಎಂದು ನೇರವಾಗಿ ಹೇಳಿದ್ದರು. ಅಧಿವೇಶನದ ನಂತರ
ಸಂಘಟಕರಿಗೆ ಬರೆದ ಪತ್ರದಲ್ಲಿಯೂ ಅವರು ಈ ಎಚ್ಚರಿಕೆಯ ಮಾತನ್ನು ಉಲ್ಲೇಖಿಸಿದ್ದರು.
ಸಾಹಿತ್ಯ ಸಮ್ಮೇಳನ, ಸಮಾವೇಶ, ಸಮಾರಂಭಗಳಲ್ಲಿ ವಿಪರೀತ ದುಂದುವೆಚ್ಚ ನಡೆಯುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಗಾಂಧೀಜಿ ಅವರ ಈ ಎಚ್ಚರಿಕೆಯ ಮಾತು ಸ್ಮರಣಾರ್ಹ.
⇒ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ
ಗಂಭೀರ ಅಪರಾಧಗಳ ಬಗ್ಗೆ ಜಾಣಕುರುಡು?!
ಕನ್ನಡ ವಾಹಿನಿಗಳಲ್ಲಿ ಪ್ರಸಾರವಾಗುವ ಕೆಲವು ಧಾರಾವಾಹಿಗಳಲ್ಲಿ ಪಾತ್ರಧಾರಿಗಳು ಹೆಲ್ಮೆಟ್ ಧರಿಸದೆ
ದ್ವಿಚಕ್ರ ವಾಹನ ಸವಾರಿ ಮಾಡುವ ದೃಶ್ಯ ಅಥವಾ ಸೀಟ್ ಬೆಲ್ಟ್ ಧರಿಸದೆ ಕಾರು ಚಲಾಯಿಸುವ ದೃಶ್ಯಗಳು ಇರುತ್ತವೆ.
ಆದರೆ ಅದರ ನಡುವೆಯೇ ‘ಶಾಸನ ವಿಧಿಸಿದ ಎಚ್ಚರಿಕೆ: ಹೆಲ್ಮೆಟ್ ಧರಿಸದೆ ವಾಹನ ಸವಾರಿ ಮಾಡುವುದು, ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವುದು ಕಾನೂನು ಪ್ರಕಾರ ಅಪರಾಧ’ ಎಂಬ ಬರಹ ತೆರೆಯ ಮೇಲೆ ಮೂಡುತ್ತದೆ. ಮದ್ಯಪಾನ, ಧೂಮಪಾನ ಮಾಡುವ ದೃಶ್ಯ ಪ್ರಸಾರವಾಗುವಾಗ ‘ಮದ್ಯಪಾನ, ಧೂಮಪಾನದಿಂದ ಸಾವು ಸಂಭವಿಸಬಹುದು’ ಎಂಬ ಬರಹವೂ ತೆರೆಯ ಮೇಲೆ ಮೂಡಿ ವೀಕ್ಷಕರನ್ನು ಎಚ್ಚರಿಸುತ್ತದೆ.
ಸಂತೋಷ! ಇಂತಹ ನಿಯಮಗಳನ್ನು ಉಲ್ಲಂಘಿಸುವುದು ಅಪರಾಧ ಎಂಬ ಅರಿವು ಕಿರುತೆರೆಯ
ನಿರ್ದೇಶಕರಿಗೆ ಇದೆ. ವಿಪರ್ಯಾಸವೆಂದರೆ, ಇಂತಹ ಸಾಮಾನ್ಯ ಅಪರಾಧ ಪ್ರಕರಣಗಳ ಬಗ್ಗೆ ಚೆನ್ನಾಗಿ ತಿಳಿದಿರುವ ನಿರ್ದೇಶಕರಿಗೆ ಧಾರಾವಾಹಿಯಲ್ಲಿ ಬರುವ ಕೊಲೆ, ಅಪಹರಣ, ವಂಚನೆಯಂತಹ ಗಂಭೀರ ಅಪರಾಧಗಳ ಬಗ್ಗೆ ಕಾನೂನಿನ ಅರಿವು ಹಾಗೂ ಪ್ರಜ್ಞೆ ಇರುವುದಿಲ್ಲವೇ?
ಇಂತಹ ಧಾರಾವಾಹಿಗಳು ಪ್ರಸಾರವಾಗುವಾಗ ಇನ್ನು ಮುಂದಾದರೂ ‘ಈ ಧಾರಾವಾಹಿಯಲ್ಲಿ
ಪ್ರಸಾರವಾಗುತ್ತಿರುವ ಈ ದೃಶ್ಯದಲ್ಲಿನ ಕೃತ್ಯವು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ’ ಎಂಬ ಬರಹವು ತೆರೆಯ ಮೇಲೆ ಮೂಡಿಬರಲಿ. ಆಗ ವೀಕ್ಷಕರು ಎಚ್ಚೆತ್ತುಕೊಳ್ಳಬಹುದು!
⇒ಪಿ.ಜೆ.ರಾಘವೇಂದ್ರ, ಮೈಸೂರು
ಪಾಸು- ನಪಾಸಿನ ಗೊಂದಲ ನಿವಾರಣೆಯಾಗಲಿ
ಕೇಂದ್ರ ಸರ್ಕಾರವು ತನ್ನ ಅಧೀನದ ಶಾಲೆಗಳಲ್ಲಿ ಓದುತ್ತಿರುವ 5 ಹಾಗೂ 8ನೇ ತರಗತಿ ಮಕ್ಕಳಿಗೆ ಪ್ರಸುತ್ತ
ಇರುವ ‘ಎಲ್ಲರನ್ನೂ ಪಾಸ್ ಮಾಡುವ ನೀತಿ’ಯನ್ನು ಕೈ ಬಿಟ್ಟಿದೆ ಎಂದು ವರದಿಯಾಗಿದೆ. ಇದು ಬರೀ 3,000
ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಹಾಗೂ ಸೈನಿಕ ಶಾಲೆಗಳಿಗೆ ಅನ್ವಯವಾಗುವುದಾಗಿಯೂ ತಿಳಿಸಿದೆ. ಈ ರೀತಿ ಶೈಕ್ಷಣಿಕ ವರ್ಷದ ಕೊನೆಯ ಹಂತದಲ್ಲಿ ಇಂತಹ ನೀತಿಯನ್ನು ಏಕಾಏಕಿಯಾಗಿ ಜಾರಿ ಮಾಡುವುದರಿಂದ ಮಕ್ಕಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರಲ್ಲೂ ಅನೇಕ ಗೊಂದಲಗಳಿಗೆ ಅವಕಾಶ ಮಾಡಿಕೊಡುತ್ತದೆ. ಈ ನೀತಿ ಎಲ್ಲ ರಾಜ್ಯಗಳಿಗೂ ಒಂದೇ ರೀತಿ ಅನ್ವಯವಾಗದ ಕಾರಣ, ಮಕ್ಕಳ ನಡುವೆ ಭೇದಭಾವ ಮೂಡಿಸಿದಂತೆ ಆಗುತ್ತದೆ.
ನಪಾಸು ನೀತಿ ಒಳ್ಳೆಯದೇ ಆದರೂ ಅದನ್ನು ಅನುಷ್ಠಾನ ಮಾಡುತ್ತಿರುವ ವಿಧಾನ ಸರಿಯಿಲ್ಲ. ಶೈಕ್ಷಣಿಕ
ಕ್ಷೇತ್ರದಲ್ಲಿ ದಿಢೀರನೆ ಹೀಗೆ ಪ್ರಯೋಗ ಮಾಡುವುದನ್ನು ನಿಲ್ಲಿಸಬೇಕಿದೆ. ಮಕ್ಕಳೇನೂ ಪ್ರಯೋಗಾಲಯದ
ಇಲಿ ಮರಿಗಳಲ್ಲ. ಶಿಕ್ಷಣ ತಜ್ಞರು, ಅಧಿಕಾರಿಗಳು ಹೊಸ ನೀತಿ ಜಾರಿಗೆ ಮುನ್ನ ಏಕೀಕೃತ ವ್ಯವಸ್ಥೆ ಹಾಗೂ ಪೂರಕ ಮಾಹಿತಿಯನ್ನು ನೀಡಿ, ಎಲ್ಲ ರಾಜ್ಯಗಳೊಂದಿಗೆ ಚರ್ಚಿಸಿ ಜಾರಿಗೊಳಿಸುವುದು ಹೆಚ್ಚು ಸೂಕ್ತ.
⇒ಸುರೇಂದ್ರ ಪೈ, ಭಟ್ಕಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.