ವಾಚಕರ ವಾಣಿ
ಇತಿಹಾಸ ತಿರುಚಿದರೂ ಸತ್ಯಕ್ಕೆ ಸಾವಿಲ್ಲ
ನಮಗೆ ಬೇಡವಾದ ಅಥವಾ ಇಷ್ಟ ಇಲ್ಲದವರ ಸಮಾಧಿ ಸ್ಥಳಾಂತರಿಸುವುದರಿಂದ ಹಾಗೂ ರಸ್ತೆ ಮತ್ತು ಊರಿನ ಹೆಸರನ್ನು ಬದಲಾಯಿಸುವುದರಿಂದ ನಮ್ಮ ಇತಿಹಾಸ ಬದಲಾಗುವುದಿಲ್ಲ. ಇತಿಹಾಸವನ್ನು ತಿರುಚಿದರೂ ಸತ್ಯ ಸಾಯುವುದಿಲ್ಲ. ಇದನ್ನು ಅರಿತು ನಡೆದರೆ, ಸಾಮರಸ್ಯದ ಬದುಕಿಗೆ ನೀರು–ಗೊಬ್ಬರ ಎರೆದರೆ ಎಲ್ಲರಿಗೂ ಕ್ಷೇಮ, ನೆಮ್ಮದಿ; ಶಾಂತಿ ಮತ್ತು ದೇಶದ ಅಭಿವೃದ್ಧಿಗೂ ಪೂರಕ.
–ಎಚ್.ಎಸ್. ಚಂದ್ರಶೇಖರ, ಬೆಂಗಳೂರು
ಅಪ್ಪ ಹಾಕಿದ ಆಲ ಆಗದಿರಲಿ
ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತದ ಅಮರ ಸಂಸ್ಕೃತಿಯ ‘ಆಲದ ಮರ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿರುವುದು ವರದಿಯಾಗಿದೆ (ಪ್ರ.ವಾ., ಏ.1). ಹಳೆಯ, ಶ್ರೇಷ್ಠ, ಪುರಾತನ ಎನ್ನುವ ಅರ್ಥದಲ್ಲಿ ಆಲದ ಮರಕ್ಕೆ ಹೋಲಿಕೆ ಇದೆಯಾದರೂ ಮುಂದುವರಿದು ‘ಅಪ್ಪ ಹಾಕಿದ ಆಲ ಅಂತ ಅದಕ್ಕೇ ನೇಣು ಹಾಕಿಕೊಳ್ಳಬಾರದು’ ಎಂಬ ನೀತಿಯನ್ನೂ ಮಕ್ಕಳಿಗೆ ಹೇಳುವುದಿದೆ. ಅಂದರೆ, ಆಲ ಅಪ್ಪನ ಸಂಕೇತವಾಗಿ ಎಷ್ಟೇ ಶ್ರೇಷ್ಠವಾದರೂ ಬದುಕು ನವನವೀನ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎನ್ನುವ ಸಲಹೆಯನ್ನೂ ಎಚ್ಚರಿಕೆಯನ್ನೂ ನೀಡುವ ಪರಿ ಅದು.
ನೂರು ವರ್ಷಗಳ ಇತಿಹಾಸ ಹೊಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು ಅಷ್ಟೇನೂ ಪುರಾತನವಲ್ಲ. ಆದರೆ, ಅದು ನಂಬಿರುವ ಚಾತುರ್ವರ್ಣ ಕಲ್ಪನೆ ಮಾತ್ರ ಬಹಳ ಪುರಾತನ. ಅದನ್ನೇ ಅವರು ಸನಾತನ ಅಂತಲೂ ಕರೆಯುತ್ತಾರೆ. ಇವತ್ತಿನ ಪ್ರಜಾಪ್ರಭುತ್ವಕ್ಕೆ ಚಾತುರ್ವರ್ಣ ತತ್ವ ಹೊಂದಿಕೆ ಆಗುವುದಿಲ್ಲ. ಧರ್ಮ ಅನ್ನುವುದು ನಿಂತ ನೀರಾಗದೆ, ಕಾಲಕಾಲಕ್ಕಾಗುವ ಬದುಕಿನ ಬದಲಾವಣೆಗಳನ್ನು ಸೇರಿಸಿಕೊಂಡು ಹೊಸದಾಗಬೇಕು. ಆದ್ದರಿಂದ ಈ ಸಂಘವು ಅಪ್ಪ ಹಾಕಿದ ಆಲವಾಗದೆ, ಹಳತನ್ನೆಲ್ಲಾ ಕೊಚ್ಚಿ ಹರಿಯುವ ‘ಜೀವನದಿ’ ಆಗಲೆಂದು ಬಯಸಬಹುದೇ?
–ತಾ.ಸಿ.ತಿಮ್ಮಯ್ಯ, ಬೆಂಗಳೂರು
ವಿಸ್ತೃತ ಚರ್ಚೆ ಅಗತ್ಯ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸ್ಥಾಪನೆಯ ಸಾಧಕ–ಬಾಧಕ ಕುರಿತು ಕಾತ್ಯಾಯಿನಿ ಚಾಮರಾಜ್ (ಚರ್ಚೆ,ಪ್ರ.ವಾ., ಮಾರ್ಚ್ 29) ಅವರ ಅಭಿಪ್ರಾಯವು ಮನನೀಯವಾಗಿದೆ. ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಕುರಿತು ಸಮರ್ಪಕ ಚರ್ಚೆಯೇ ನಡೆಯದಿರುವಾಗ, ಇದರ ಹಿಂದಿನ ಉದ್ದೇಶಗಳೇ ಸಾರ್ವಜನಿಕರಿಗೆ ಸ್ಪಷ್ಟವಾಗಿಲ್ಲದಿರುವಾಗ, ಇದನ್ನು ತರಾತುರಿಯಲ್ಲಿ ಜಾರಿ ಮಾಡಲು ಹುನ್ನಾರ ನಡೆಯುತ್ತಿದೆ ಎಂಬ ಸಂಶಯ ಉಂಟಾಗಿದೆ. ಹಾಗಾಗಿ, ಈ ಕುರಿತು ವಿಸ್ತೃತ ಚರ್ಚೆಯ ಅಗತ್ಯ ಇದೆ. ಆ ಬಳಿಕ ಜಾರಿಗೆ ಸೂಕ್ತ ಪ್ರಕ್ರಿಯೆಯನ್ನು ಆರಂಭಿಸುವುದು ಒಳ್ಳೆಯದು ಎಂದು ಅನ್ನಿಸುತ್ತದೆ.
–ಪ್ರೊ.ಎಂ.ಎಸ್.ರಘುನಾಥ್, ಬೆಂಗಳೂರು
ಮತ್ತಷ್ಟು ವಸತಿ ಬಡಾವಣೆಗಳ ಅಗತ್ಯವಿದೆಯೇ?
ಕರ್ನಾಟಕದಲ್ಲಿ ವಸತಿ ಸಮಸ್ಯೆ ಪರಿಹರಿಸಲು ಕರ್ನಾಟಕ ಗೃಹ ಮಂಡಳಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಹಲವಾರು ವಸತಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿವೆ. ಬೆಂಗಳೂರು ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ಸಾವಿರಾರು ಅರ್ಜಿದಾರರಿಗೆ ನಿವೇಶನಗಳನ್ನೂ ಹಸ್ತಾಂತರಿಸಿವೆ. ಅದೇ ರೀತಿ, ನೂರಾರು ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಗಳೂ ಬೆಂಗಳೂರಿನ ಸುತ್ತಮುತ್ತ ಸಾವಿರಾರು ಎಕರೆ ಪ್ರದೇಶದಲ್ಲಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ನಿವೇಶನಗಳನ್ನು ಮಾರಾಟ ಮಾಡಿವೆ. ಆದರೆ, ಈ ನಿವೇಶನಗಳನ್ನು ಮಾರಾಟ ಮಾಡಿ ದಶಕಗಳಾದರೂ ಹಲವಾರು ಬಡಾವಣೆಗಳಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಬಲು ಕಡಿಮೆ ಸಂಖ್ಯೆಯಲ್ಲಿ ಮಾತ್ರ ಮನೆಗಳ ನಿರ್ಮಾಣವಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಈ ಎರಡು– ಮೂರು ದಶಕಗಳಲ್ಲಿ ಬೆಂಗಳೂರಿನಲ್ಲಿ ನಿವೇಶನಗಳ ಬೆಲೆ ತೀವ್ರವಾಗಿ ಏರಿಕೆಯಾಗಿ, ಬಹುತೇಕ ಖರೀದಿದಾರರು ಹೂಡಿಕೆ ದೃಷ್ಟಿಯಿಂದ ಮಾತ್ರ ನಿವೇಶನಗಳನ್ನು ಖರೀದಿಸುತ್ತಿರುವುದು.
ಇದೀಗ ಬಿಡದಿ ಬಳಿ ಸ್ಮಾರ್ಟ್ ಸಿಟಿ ನಿರ್ಮಿಸಲು ಬಿಡಿಎ ಯೋಜನೆ ಹಮ್ಮಿಕೊಂಡಿದ್ದು, ಇದಕ್ಕಾಗಿ ಸುಮಾರು 9,000 ಎಕರೆ ಜಮೀನಿನ ಅಗತ್ಯವಿದೆ. ಆದರೆ, ಅಗತ್ಯಕ್ಕಿಂತ ಹೆಚ್ಚು ಬಡಾವಣೆಗಳ ಅಭಿವೃದ್ಧಿಯಿಂದ ಸಾವಿರಾರು ಎಕರೆ ಕೃಷಿ ಭೂಮಿ ಕಡಿಮೆಯಾಗುವುದರ ಜೊತೆಗೆ ಮೂಲಸೌಕರ್ಯ ಒದಗಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳು ತೊಂದರೆಗೆ ಒಳಗಾಗುತ್ತವೆ. ಆದಕಾರಣ, ಈಗಾಗಲೇ ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ ಕನಿಷ್ಠ ಶೇ 90ರಷ್ಟು ಮನೆಗಳ ನಿರ್ಮಾಣವಾಗುವವರೆಗೆ ಹೊಸ ಬಡಾವಣೆ ರೂಪಿಸುವುದನ್ನು ನಿಯಂತ್ರಿಸಿ, ಕೃಷಿ ಭೂಮಿಯನ್ನು ಸಂರಕ್ಷಿಸುವತ್ತ ಸರ್ಕಾರ ಗಮನಹರಿಸುವ ಅಗತ್ಯವಿದೆ.
–ಜಿ.ನಾಗೇಂದ್ರ ಕಾವೂರು, ಸಂಡೂರು
ದುಂದುವೆಚ್ಚಕ್ಕೆ ಬೀಳಲಿ ಕಡಿವಾಣ
ಈ ತಿಂಗಳ ಒಂದರಿಂದ ಅನ್ವಯ ಆಗುವಂತೆ ಸರ್ಕಾರವು ಎಲ್ಲ ವರ್ಗದವರು ನಿತ್ಯಜೀವನದಲ್ಲಿ ಬಳಸುವ ಹಾಲು, ಮೊಸರು, ತುಪ್ಪ ಮತ್ತು ವಿದ್ಯುತ್ ದರವನ್ನು ಹೆಚ್ಚಿಸಿ ರಾಜ್ಯದ ಜನರ ಬದುಕಿನ ಮೇಲೆ ಒಂದು ರೀತಿಯಲ್ಲಿ ಬರೆ ಎಳೆದಿದೆ. ಹಾಲು–ಮೊಸರಿನ ದರ ಪ್ರತಿ ಲೀಟರ್‌ಗೆ ₹ 4ರಷ್ಟು ಹೆಚ್ಚಳ ಆಗಿದೆ. ವಿದ್ಯುತ್ ದರ ಹೆಚ್ಚಿಸಿ ಗ್ರಾಹಕರಿಗೆ ಆಘಾತ ನೀಡಲಾಗಿದೆ.
ಬೆಲೆ ಏರಿಕೆಯ ಈ ದಿನಗಳಲ್ಲಿ ಬಡವರು ಬದುಕು ನಡೆಸುವುದೇ ದುಸ್ತರವಾಗಿದೆ. ಅದರೊಂದಿಗೆ ಈ ಬೆಲೆ ಏರಿಕೆಯ ಹೊರೆ ಬೇರೆ. ಸರ್ಕಾರ ಮತ್ತು ಅದರ ಅಧೀನ ಸಂಸ್ಥೆಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕಿದರೆ, ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡರೆ ಎಷ್ಟೋ ಸಂದರ್ಭಗಳಲ್ಲಿ ಬೆಲೆ ಏರಿಕೆ ಅನಿವಾರ್ಯ ಆಗುವುದಿಲ್ಲ. ಈ ದಿಸೆಯಲ್ಲಿ ಸರ್ಕಾರ ಈಗಲಾದರೂ ಗಂಭೀರವಾಗಿ ಯೋಚಿಸಲಿ.
–ಬೂಕನಕೆರೆ ವಿಜೇಂದ್ರ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.