ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 29 ಸೆಪ್ಟೆಂಬರ್ 2024, 23:30 IST
Last Updated 29 ಸೆಪ್ಟೆಂಬರ್ 2024, 23:30 IST
   

ಅಂಕಿ: ಕನ್ನಡದಲ್ಲಿ ಹೇಳುವುದನ್ನು ಕಲಿಸಿ

ನನ್ನೂರಾದ ಕಲ್ಲುಗುಂಡಿಯಲ್ಲಿ ಮಡಿಕೇರಿಗೆ ಹೋಗುವ ಬಸ್ಸಿಗಾಗಿ ಇತ್ತೀಚೆಗೆ ಕಾಯುತ್ತಾ ನಿಂತಿದ್ದೆ. ನನ್ನ ಪಕ್ಕ ತಾಯಿಯ ಜೊತೆ ನಿಂತಿದ್ದ ಪುಟ್ಟ ಬಾಲಕನಿಗೆ ‘ಎಷ್ಟನೇ ಕ್ಲಾಸ್?’ ಎಂದು ಕೇಳಿದೆ. ಅವನು ಉತ್ತರಿಸದೆ, ಕೈಎತ್ತಿ ಐದು ಬೆರಳುಗಳನ್ನು ಬಿಡಿಸಿ ತೋರಿಸಿದ. ಅವನ ಕೈಯಲ್ಲಿದ್ದ ಸ್ಮಾರ್ಟ್ ವಾಚ್ ನೋಡಿದ ನಾನು, ‘ಇದರಲ್ಲಿ ಗಂಟೆ ಕಾಣುವುದೇ ಇಲ್ಲವಲ್ಲ. ಈಗ ಗಂಟೆ ಎಷ್ಟಾಯಿತು?’ ಎಂದೆ. ಅವನು ವಾಚನ್ನು ಒತ್ತಿ ಹಿಡಿದು ಗಂಟೆಯನ್ನು ನನಗೆ ತೋರಿಸಿದ. ಆಗ ಅವನ ತಾಯಿ ಹೇಳಿದಳು, ‘ಅವನು ಐದನೇ ಕ್ಲಾಸ್. ಇಂಗ್ಲಿಷ್ ಮೀಡಿಯಂ. ಅವನಿಗೆ ಕನ್ನಡದಲ್ಲಿ ಅಂಕಿ ಹೇಳಲು ಬರುವುದಿಲ್ಲ. ಇಂಗ್ಲಿಷಿನಲ್ಲಾದರೆ ಹೇಳುತ್ತಾನೆ’.

ಇಂದು ಹಳ್ಳಿಯ ಮಕ್ಕಳಿಗೂ ಕನ್ನಡದಲ್ಲಿ ಅಂಕಿ ಹೇಳಲು ಬರುವುದಿಲ್ಲ ಎಂದು ತಿಳಿದು ನನಗೆ ಆಶ್ಚರ್ಯವಾಯಿತು,ಬೇಸರವೂ ಆಯಿತು. ಇನ್ನೇನು ಒಂದು ತಿಂಗಳಿನಲ್ಲಿ ಕನ್ನಡ ರಾಜ್ಯೋತ್ಸವ ಬರುತ್ತದೆ. ಆಗ ನಾವೆಲ್ಲರೂ ಕನ್ನಡ, ಕನ್ನಡ... ಹಾ...ಸವಿಗನ್ನಡ..’ ಎಂದು ಬೊಬ್ಬಿರಿಯುತ್ತೇವೆ. ಆದರೆ ಕನ್ನಡ ಉಳಿಸಲು ಮುಂದಿನ ಪೀಳಿಗೆಗೆ ನಾವೇನು ಕೊಡುಗೆ ಕೊಡುತ್ತಿದ್ದೇವೆ? ಕನ್ನಡದಲ್ಲಿ ಅಂಕಿ ಹೇಳುವ ಮಕ್ಕಳಿಗೆ ರಾಜ್ಯೋತ್ಸವದ ದಿನ ಬಹುಮಾನ ಇಟ್ಟು ಪ್ರೋತ್ಸಾಹಿಸುವಂತೆ ಆಗಬೇಕು.

ADVERTISEMENT

 ⇒ಸಹನಾ ಕಾಂತಬೈಲು, ಬಾಲಂಬಿ, ಮಡಿಕೇರಿ

ಮಾನವೀಯತೆ ಮಾನದಂಡವಾಗಲಿ

ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 15-20 ವರ್ಷಗಳಿಂದ ಕಡಿಮೆ ವೇತನಕ್ಕೆ ಸೇವೆ ಸಲ್ಲಿಸುತ್ತಾ ನಿವೃತ್ತಿಯ ಅಂಚಿಗೆ ಬಂದಿರುವ ಅತಿಥಿ ಉಪನ್ಯಾಸಕರಿಗೆ ಯುಜಿಸಿ ಅರ್ಹತೆ ಕಡ್ಡಾಯ ಎಂದು ಹೈಕೋರ್ಟ್ ಹೇಳಿರುವುದು ಆತಂಕಕ್ಕೆ ದೂಡಿದೆ. ಇದೇ ವೃತ್ತಿಯನ್ನು ನಂಬಿ ಸುದೀರ್ಘಕಾಲ ಸೇವೆ ಸಲ್ಲಿಸಿದವರಿಗೆ ಮಾನವೀಯತೆ ಮಾನದಂಡವಾಗಬೇಕೇ ವಿನಾ ನಿಯಮಗಳ ಕಠಿಣ ಪಾಲನೆಯಲ್ಲ. ಇದರಿಂದಾಗಿ ಗೊಂದಲ ಉಂಟಾಗಿದೆ. ಈ ಕಾರಣವನ್ನೇ ಮುಂದಿಟ್ಟುಕೊಂಡು ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನು ಇಲಾಖೆ ಮುಂದೂಡುತ್ತಿದೆ.

ಈಗಾಗಲೇ ಕಾಲೇಜುಗಳು ಆರಂಭವಾಗಿ ಒಂದೆರಡು ತಿಂಗಳು ಕಳೆಯುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ಸರಿಯಾದ ಪಾಠ ಪ್ರವಚನಗಳು ನಡೆಯುತ್ತಿಲ್ಲ. ಈ ವಿಚಾರದಲ್ಲಿ ಸರ್ಕಾರ ತ್ವರಿತ ನಿರ್ಧಾರ ಕೈಗೊಳ್ಳಬೇಕು.

⇒ಶಿವಕುಮಾರ್ ಯರಗಟ್ಟಿಹಳ್ಳಿ, ಚನ್ನಗಿರಿ

ಬಂಪರ್‌ ಬೆಳೆ: ಇಡಬೇಕಿದೆ ಎಚ್ಚರಿಕೆಯ ಹೆಜ್ಜೆ

ಆಹಾರಧಾನ್ಯ ಉತ್ಪಾದನೆಯ ಅಂತಿಮ ಅಂದಾಜು ಇತ್ತೀಚೆಗೆ ಪ್ರಕಟವಾಗಿದೆ. ಅದರ ಅನುಸಾರ 2023-24ರಲ್ಲಿ ಭಾರತದ ಒಟ್ಟಾರೆ ಉತ್ಪಾದನೆ 332.22 ದಶಲಕ್ಷ ಟನ್ ತಲುಪಿದೆ. ಇದಕ್ಕೆ ಭತ್ತ ಹಾಗೂ ಗೋಧಿಯ ಬಂಪರ್ ಬೆಳೆ ಕಾರಣ. ಬೇಳೆಕಾಳು ಹಾಗೂ ಎಣ್ಣೆಬೀಜದ ಬೆಳೆಗಳಲ್ಲಿ ಉತ್ಪಾದನೆ ಹಿಂದಿನ ವರ್ಷಕ್ಕಿಂತ ಕಡಿಮೆ ಆಗಿರುವುದು ಕಳವಳಕಾರಿ. ಇದಕ್ಕೆ ದಕ್ಷಿಣ ಭಾರತದ ರಾಜ್ಯಗಳು, ಮಹಾರಾಷ್ಟ್ರ ಹಾಗೂ ರಾಜಸ್ಥಾನದ ಹವಾಮಾನ ಕಾರಣ ಎನ್ನಲಾಗಿದೆ. ಕರ್ನಾಟಕ ಈ ವಿಷಯದಲ್ಲಿ ಏನು ಮಾಡಬೇಕು? ಭತ್ತದ ಬಗೆಗಿನ ಗಮನ ಮುಂದುವರಿಸುವುದರ ಜತೆಗೆ ಬೇಳೆಕಾಳು, ಎಣ್ಣೆಕಾಳು ಬೆಳೆಗಳ ಉತ್ಪಾದನೆ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹತ್ತಿ, ಕಬ್ಬಿನಂಥ ವಾಣಿಜ್ಯ ಬೆಳೆಗಳ ಉತ್ಪಾದನೆಯಲ್ಲಿ ಇಳಿಕೆ ಆಗದಂತೆ ಎಚ್ಚರ ವಹಿಸಬೇಕು.

⇒ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಮುಖ್ಯಮಂತ್ರಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಸಲ್ಲ

‘ಮುಡಾ ಹಗರಣದಲ್ಲಿ ತನಿಖೆಗೆ ಅನುಮತಿ ನೀಡಿದಾಗ ಕಾಂಗ್ರೆಸ್‌ನವರು ರಾಜ್ಯಪಾಲರ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿದರು. ಈಗ ಕಾಂಗ್ರೆಸ್‌ನವರು ಸಿದ್ದರಾಮಯ್ಯ ಅವರಿಗೆ ಚಪ್ಪಲಿ ಹಾರ ಹಾಕುತ್ತಾರಾ?’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನಿಸಿರುವುದನ್ನು (ಪ್ರ.ವಾ., ಸೆ. 25) ಓದಿ ನನಗೆ ತುಂಬಾ ಕೋಪ ಬಂತು. ಇದೊಂದು ಆಕ್ಷೇಪಾರ್ಹ ಹೇಳಿಕೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದಾರೆ ಎನ್ನುವ ಅರಿವು ಕುಮಾರಸ್ವಾಮಿ ಅವರಿಗೆ ಇದ್ದಂತಿಲ್ಲ. ವಾಕ್ ಸ್ವಾತಂತ್ರ್ಯ ಇದೆ ಎಂದು ಇಂತಹ ಪ್ರಶ್ನೆಗಳನ್ನು ಕೇಳಿದರೆ, ಅದು ಕೇಳುವವರ ಸಣ್ಣತನವನ್ನು ಎತ್ತಿ ತೋರಿಸುತ್ತದೆ.

⇒ಮಲ್ಲನಗೌಡ ಪಾಟೀಲ, ರಾಮದುರ್ಗ 

ಚಿಕ್ಕಿಯ ಗುಣಮಟ್ಟ ಪರಿಶೀಲನೆಗೆ ಒಳಪಡಲಿ

ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನಗಳೂ ಮೊಟ್ಟೆಯನ್ನು ಕೊಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಉದ್ಯಮಿ ಅಜೀಮ್ ಪ್ರೇಮ್‌ಜಿ ಅವರು ಕೈಜೋಡಿಸಿರುವುದು ಖುಷಿಯ ವಿಷಯ. ಈಗಾಗಲೇ ಮೂರು ದಿನ ಮೊಟ್ಟೆ ಕೊಡುತ್ತಿದ್ದಾಗ, ಶೇ 50– 55ರಷ್ಟು ಮಕ್ಕಳು ಮಾತ್ರ ಮೊಟ್ಟೆಯನ್ನು ಶಾಲೆಯಲ್ಲಿ ತಿನ್ನುತ್ತಿದ್ದು, ಮೊಟ್ಟೆ ತಿನ್ನದವರಿಗೆ ಕಡ್ಲೆಚಿಕ್ಕಿ ಕೊಡುವ ವ್ಯವಸ್ಥೆ ಮಾಡಲಾಗಿದೆ. ಈ ದಿಸೆಯಲ್ಲಿ ಕೆಳಗಿನ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ:

ಚಿಕ್ಕಿಯ ಗುಣಮಟ್ಟ ಖಾತರಿಪಡಿಸಲಾಗಿದೆಯೇ? ಈ ಚಿಕ್ಕಿ ತಯಾರಕರು ಎಫ್‌ಎಸ್ಎಸ್‌ಎಐನಿಂದ ಪ್ರಮಾಣೀಕರಿಸಿ ಕೊಂಡಿದ್ದಾರೆಯೇ?  ಮನೆಯಲ್ಲಿ ತಯಾರಿಸಿದ ಚಿಕ್ಕಿ ಆಕರ್ಷಕವಾದ ಹೊಳೆಯುವ ಬಣ್ಣವನ್ನು ಹೊಂದಿರುವುದಿಲ್ಲ. ಇಂತಹ ಬಣ್ಣ ಪಡೆಯಲು ಮತ್ತು ಗರಿಗರಿಯಾಗಿರಲು ಗ್ಲುಕೋಸ್ ಸಿರಪ್ ಬಳಸುತ್ತಾರೆ. ಇದರ ಅಡ್ಡಪರಿಣಾಮದ ಬಗ್ಗೆ ಅಧ್ಯಯನ ನಡೆದಿದೆಯೇ? ಅಷ್ಟೊಂದು ಪ್ರಮಾಣದ ಚಿಕ್ಕಿಯ ಉಪಯೋಗದಿಂದ ಶಾಲೆಯ ಕಸದ ತೊಟ್ಟಿಯು ಪ್ಲಾಸ್ಟಿಕ್‌ನಿಂದ (ಚಿಕ್ಕಿ ರ್‍ಯಾಪರ್‌) ತುಂಬಿ ಹೋಗುತ್ತಿದೆ. ಇದರಿಂದ ಪ್ಲಾಸ್ಟಿಕ್‌ಮುಕ್ತ ಶಾಲಾ ಪರಿಸರದ ಕಲ್ಪನೆ ಸಾಧ್ಯವೇ? ಚಿಕ್ಕಿ ತಯಾರಕರು ನಮೂದಿಸಿರುವ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು ನೈಜವೇ? 

ರಾಜ್ಯದಲ್ಲಿ ಬಿಸಿಯೂಟ ಯೋಜನೆ ಜಾರಿಗೊಳಿಸಿದ ನಂತರ ಮಕ್ಕಳಲ್ಲಿನ ಕುಪೋಷಣೆ ಕಡಿಮೆ ಆಗಿರುವುದು ನಿಜವಾದರೂ ಅಭಿವೃದ್ಧಿಶೀಲ ದೇಶಗಳಿಗೆ ಹೋಲಿಸಿದರೆ ನಾವಿನ್ನೂ ತುಂಬಾ ದೂರದ ಹಾದಿ ಪಯಣಿಸಬೇಕಾಗಿದೆ. ಮೊಟ್ಟೆ ಬೇಡ ಎನ್ನುವ ಮಕ್ಕಳಿಗೆ ಅದರ ಪ್ರಯೋಜನ ಹಾಗೂ ಪೋಷಕಾಂಶಗಳ ಬಗ್ಗೆ ತಿಳಿಹೇಳಬೇಕಾಗಿದೆ. ಇತರ ಕಾರಣಗಳಿಗಾಗಿ ಮೊಟ್ಟೆ ಸ್ವೀಕರಿಸದವರಿಗೆ ಗುಣಮಟ್ಟದ ಚಿಕ್ಕಿಯನ್ನು, ಸಿಎಫ್‌ಟಿಆರ್‌ಐ ಅಥವಾ ಡಿಆರ್‌ಡಿಒದಿಂದ ಅಭಿವೃದ್ಧಿಪಡಿಸಿದ ಪೌಷ್ಟಿಕಭರಿತ ಸಿರಿಧಾನ್ಯದ ಬಿಸ್ಕತ್ತು ಅಥವಾ ಯಾವುದೇ ಸಂರಕ್ಷಕಗಳನ್ನು (ಪ್ರಿಸರ್ವೇಟಿವ್‌) ಬಳಸದ, ಪೋಷಕಾಂಶ ಇರುವ ಆಹಾರವನ್ನು ಕೊಡಬೇಕಾಗಿದೆ. ಪ್ಲಾಸ್ಟಿಕ್ ರ್‍ಯಾಪರ್‌ ಬದಲು ಬಟರ್‌ ಪೇಪರ್‌ ರ್‍ಯಾಪರ್‌ ಬಳಸಬೇಕಾಗಿದೆ.

⇒ಹರಿಪ್ರಸಾದ, ಸುಳ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.