ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
‘ಹಿಂದೂ ಆಚರಣೆಗಳಿಗೆ ತಡೆ ಹೇರಬೇಡಿ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಅವರು ಹೇಳಿರುವುದಾಗಿ ವರದಿಯಾಗಿದೆ. ವೀರಶೈವ ವೇದಿಕೆಯಲ್ಲಿ ಅವರು ‘ಆಚರಣೆಗಳು ಜನರ ವೈಯಕ್ತಿಕ ವಿಚಾರ’ ಮತ್ತು ‘ಬಸವತತ್ವ ಪಾಲನೆ ಮಾಡುವುದು ಅಗತ್ಯ’ ಎಂಬಂತಹ ಗೊಂದಲದ ಮಾತನಾಡಿದ್ದಾರೆ. ಇದು ಸಾಧ್ಯವೇ? ಬಸವಣ್ಣನ ತಾತ್ವಿಕತೆಗೂ ಹಿಂದೂ ಆಚರಣೆಗಳಿಗೂ ಎಣ್ಣೆ– ಸೀಗೆ ಸಂಬಂಧ. ಲಿಂಗಾಯತ– ವೀರಶೈವ ತಾತ್ವಿಕತೆಯ ವೈರುಧ್ಯವನ್ನು ಬಿದರಿ ಅವರು ಅರ್ಥ ಮಾಡಿಕೊಳ್ಳುವುದು ಅಗತ್ಯ. ಹಾಗೆಯೇ ಕುಲಾಧಿಕ್ಯವನ್ನು ಧಿಕ್ಕರಿಸಿದ ಬಸವಣ್ಣನು ಮನುಧರ್ಮ ಪ್ರಣೀತ ಹಿಂದೂ ಧರ್ಮದ ಅವೈಜ್ಞಾನಿಕ ಆಚರಣೆಗಳ ವಿರುದ್ಧವೇ ಸಿಡಿದೆದ್ದವನು ಎಂಬ ಸತ್ಯವನ್ನೂ ತಿಳಿಯಬೇಕು. ಪ್ರಸ್ತುತ ಹಿಂದೂ ಆಚರಣೆಗಳನ್ನು ಅನುಸರಿಸುತ್ತಿರುವ ಲಿಂಗಾಯತ ಸ್ತ್ರೀ- ಪುರುಷರು ಶರಣರ ವಚನಗಳನ್ನು ಗಮನವಿಟ್ಟು ಓದಿದರೆ, ಇದನ್ನು ಅರಿಯಬಲ್ಲರು.
⇒ಚಂದ್ರಶೇಖರ ತಾಳ್ಯ, ಹೊಳಲ್ಕೆರೆ
ಬಹಳಷ್ಟು ಜನಪರ ಹೋರಾಟಗಳಲ್ಲಿ ಭಾಗಿಯಾಗಿ ಸ್ತ್ರೀಪರ ಧೋರಣೆಯ ದಿಟ್ಟ ನಿಲುವನ್ನು ಹೊಂದಿರುವ ಬರಹಗಾರ್ತಿ ಮತ್ತು ವಕೀಲೆ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ಯ ಭಾಷಾಂತರ ಕೃತಿ ‘ಹಾರ್ಟ್ ಲ್ಯಾಂಪ್’ಗೆ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ದೊರಕಿರುವುದು, ವಿಶೇಷವಾಗಿ ವಕೀಲ ಸಮುದಾಯದ ಪ್ರತಿಷ್ಠೆಯನ್ನು ಹೆಚ್ಚಿಸಿದೆ.
ನಾನು ಕಂಡಂತೆ 1990ರಲ್ಲಿ ‘ಲಂಕೇಶ್ ಪತ್ರಿಕೆ’ಯ ನಂಟಿನೊಂದಿಗೆ ವಕೀಲಿ ವೃತ್ತಿ ಪ್ರವೇಶಿಸಿದ ಬಾನು ಮುಷ್ತಾಕ್, ತಮ್ಮ 35 ವರ್ಷಗಳ ಸುದೀರ್ಘ ವೃತ್ತಿ ಬದುಕಿನಲ್ಲಿ ಮಹಿಳೆಯರ ಪರವಾಗಿಯೇ ವಕಾಲತ್ತು ವಹಿಸುತ್ತಾ ನ್ಯಾಯಾಲಯಗಳಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇವರ ಕಥೆಗಳಲ್ಲಿ ವ್ಯಕ್ತವಾಗಿರುವ ಸ್ತ್ರೀಪರ ನಿಲುವನ್ನು ಕೂಲಂಕಷವಾಗಿ ಗಮನಿಸಿದಾಗ, ಕೋರ್ಟ್‌ನ ಆವರಣದಲ್ಲಿ ದಕ್ಕಿದ ಮಹಿಳೆಯರ ಬದುಕಿನ ಯಥೇಚ್ಛ ಒಳನೋಟಗಳು ಇವರ ಸಂವೇದನಾಶೀಲ ಬರವಣಿಗೆಯ ತೀವ್ರತೆಗೆ ಕಾರಣವಾಗಿರುವುದು ನಿರ್ವಿವಾದ. ಈಗಾಗಲೇ ಹತ್ತಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಬಾನು ಮುಷ್ತಾಕ್ ಈಗ ನಾಡಿಗಷ್ಟೇ ಅಲ್ಲದೆ ರಾಷ್ಟ್ರಕ್ಕೂ ಹೆಮ್ಮೆಯೆನಿಸಿದ್ದಾರೆ.
⇒ಸಿ.ಎಚ್.ಹನುಮಂತರಾಯ, ಬೆಂಗಳೂರು
ಬೆಳಗಾವಿ ಜಿಲ್ಲೆಯ ನಿಡಗುಂದಿ ಗ್ರಾಮದ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಅಗತ್ಯವಾಗಿ ಬೇಕಾಗಿರುವ ಕೊಠಡಿಗಳ ಮಂಜೂರಾತಿಗೆ ಕೋರಿ ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಉಪವಾಸ ಮತ್ತು ಮೌನ ಕಾಲ್ನಡಿಗೆ ಜಾಥಾ ನಡೆಸಿದ್ದಾಗಿ ವರದಿಯಾಗಿದೆ. ನಮ್ಮ ಸರ್ಕಾರಗಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಬಗ್ಗೆ ತೋರುತ್ತಿರುವ ತೀವ್ರ ನಿರ್ಲಕ್ಷ್ಯ ಒಳ್ಳೆಯದಲ್ಲ. ಸರ್ಕಾರಿ ಶಾಲೆಗಳ ಸಬಲೀಕರಣ ಇಂದಿನ ತುರ್ತು. ಇದು ಕನ್ನಡ ಭಾಷೆಯ ಉಳಿವು ಅಳಿವಿನ ಪ್ರಶ್ನೆ. ನನ್ನ ಒಂದು ವಿನಮ್ರ ಸಲಹೆ, ಸರ್ಕಾರ ಪ್ರತಿ ವರ್ಷವೂ ₹ 30 ಕೋಟಿಯಿಂದ ₹ 40 ಕೋಟಿ ಖರ್ಚು ಮಾಡಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದನ್ನು ಸದ್ಯ ಐದು ವರ್ಷ ತಾತ್ಕಾಲಿಕವಾಗಿ ನಿಲ್ಲಿಸಲಿ. ಅದೇ ಹಣವನ್ನು ಶಾಲಾ ಸಬಲೀಕರಣಕ್ಕೆ ಬಳಸಲಿ. ನಮ್ಮ ಕನ್ನಡದ ಬಡಮಕ್ಕಳ ಅಕ್ಷರಾಭ್ಯಾಸಕ್ಕೆ ಅನುವು ಮಾಡಿಕೊಡಲಿ.
⇒ಎಸ್.ಜಿ.ಸಿದ್ಧರಾಮಯ್ಯ, ಬೆಂಗಳೂರು
ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಮುಖಕ್ಕೆ ಅವರ ಪತ್ನಿ ಬ್ರಿಜೆಟ್ ತಿವಿದರು ಎಂಬ ವರದಿಯನ್ನು
(ಪ್ರ.ವಾ., ಮೇ 27) ಓದಿ ಅಪಾರ ಸಂತೋಷವಾಯಿತು, ನೆಮ್ಮದಿಯಾಯಿತು. ನಾವ್ಯಾರೂ ಇನ್ನು ಮುಂದೆ ಪರಿತಪಿಸಬೇಕಾಗಿಲ್ಲ, ಮನೆ ಬಿಟ್ಟು ಓಡಿಹೋಗಬೇಕಾಗಿಲ್ಲ! ವಿಶ್ವದಾದ್ಯಂತ, ಮೀಸೆ ಹೊತ್ತ ಎಲ್ಲ ಗಂಡಸರ ಕಥೆಯೂ ಇಷ್ಟೇ, ಉಪಕಥೆಯೂ ಇದುವೇ ಎಂದುಕೊಂಡು ನೆಮ್ಮದಿಯಿಂದ, ಆಯಷ್ಯ ಇರುವವರೆಗೂ ಬದುಕಿಕೊಂಡು ಇರೋಣ. ಇದರಿಂದ ಪ್ರೇರಿತನಾಗಿ ನಾನೊಂದು ಹೊಸ ಗಾದೆ ಹೆಣೆದಿದ್ದೇನೆ–
‘ಸಾವಿರ ಕುದುರೆ ಸರದಾರನಾದರೂ ಅಷ್ಟೆ, ರಾಷ್ಟ್ರದ ಅಧ್ಯಕ್ಷನಾದರೂ ಅಷ್ಟೆ, ಹೆಂಡತಿಯಿಂದ ಸ್ವಾಟೆ
ತಿವಿಸಿಕೊಳ್ಳುವುದು ತಪ್ಪುವುದಿಲ್ಲ!’
ಎಸ್.ಕೆ.ಕುಮಾರ್, ಬೇಲೂರು
ಬ್ರಿಗೇಡಿಯರ್ ಎಂ.ಎಲ್.ಖೇತ್ರಪಾಲ್ ತಮ್ಮ ಪುತ್ರ ಅರುಣ್ ಅವರನ್ನು ಗುಂಡಿಕ್ಕಿ ಕೊಂದಿದ್ದ ಪಾಕಿಸ್ತಾನದ ಬ್ರಿಗೇಡಿಯರ್ ಖ್ವಾಜಾ ಮೊಹಮ್ಮದ್ ನಾಸೆರ್ ಅವರ ಮನೆಯಲ್ಲಿ ಅತಿಥಿಯಾಗಿ ತಂಗಿದ್ದ ಪ್ರಸಂಗ ಕುರಿತ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಅವರ ಲೇಖನ (ಪ್ರ.ವಾ., ಮೇ 26) ಓದಿದಾಗ ಮನಸ್ಸು ಮೂಕವಾಯಿತು. ಅನುಕಂಪ, ಮಾನವೀಯತೆಗೆ ಜಾತಿ, ಧರ್ಮ, ಗಡಿಗಳ ಹಂಗಿಲ್ಲ. ಈ ಸಂದರ್ಭದಲ್ಲಿ ಎರಡು ಚಾರಿತ್ರಿಕ ಸಂಗತಿಗಳು ನೆನಪಾಗುತ್ತಿವೆ:
ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ತಮಿಳುನಾಡಿನ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ
ನಳಿನಿಯನ್ನು ರಾಜೀವ್ ಅವರ ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ ಮಾಡಿದ್ದರು. ಆಗ ಪ್ರಿಯಾಂಕಾ ಭಾವುಕರಾಗಿ ನಳಿನಿಯನ್ನು ತಬ್ಬಿ ‘ನಿಮ್ಮ ಬಗ್ಗೆ ಮರುಕವಾಗುತ್ತದೆ’ ಎಂದು ಹೇಳಿದ್ದರು. ಗಾಂಧೀಜಿ ಹತ್ಯೆಯ ಅಪರಾಧಿಗಳಲ್ಲಿ ಒಬ್ಬರಾಗಿದ್ದ ಗೋಪಾಲ್ ಗೋಡ್ಸೆ (ನಾಥೂರಾಮ್ ಗೋಡ್ಸೆ ಸಹೋದರ) ಜೈಲು ಶಿಕ್ಷೆ ಅನುಭವಿಸಿದ ನಂತರ ಪುಣೆಯಲ್ಲಿ ವಾಸವಾಗಿದ್ದರು. ಅವರಿಗೆ ಗಾಂಧೀಜಿ ಪುತ್ರ ರಾಮದಾಸ್ ಕ್ಯಾನ್ಸರ್‌ನಿಂದಾಗಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುದ್ದಿ ಗೊತ್ತಾಯಿತು. ಗಾಂಧೀಜಿ ಹತ್ಯೆಯ ಅಪರಾಧಿಗಳಿಗೆ ಮರಣದಂಡನೆ ವಿಧಿಸಬಾರದು ಎಂದು, ಗೃಹ ಸಚಿವರಾಗಿದ್ದ ವಲ್ಲಭಭಾಯಿ ಪಟೇಲ್ ಅವರಿಗೆ ರಾಮದಾಸ್ ಮನವಿ ಸಲ್ಲಿಸಿದ್ದರು. ಅವರು ತಮ್ಮ ಬಗ್ಗೆ ತೋರಿದ ಅನುಕಂಪ ನೆನಪಾಗಿ, ಗೋಪಾಲ್ ಗೋಡ್ಸೆ ಮುಂಬೈಗೆ ತೆರಳಿ, ಆಸ್ಪತ್ರೆಯಲ್ಲಿ ಮಲಗಿದ್ದ ಅವರ ಚರಣ ಮುಟ್ಟಿ ನಮಸ್ಕರಿಸಿದ್ದರು. ‘ವೈರವನ್ನು ಸಾಧಿಸಿಕೊಂಡು ಹೋಗಲು ಜೀವನ ದೀರ್ಘವಾಗಿಲ್ಲ’ ಎಂಬ ಹಿತನುಡಿಯನ್ನು ನಾವೆಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು.
⇒ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.