ವಾಚಕರ ವಾಣಿ
ರಾಯಬಾಗ ತಾಲ್ಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತರಗತಿ ಕೊಠಡಿಗಳ ಮಂಜೂರಾತಿಗಾಗಿ ಆಗ್ರಹಿಸಿ ಉಪವಾಸ ಹಾಗೂ ಮೌನ ಕಾಲ್ನಡಿಗೆ ನಡೆಸಿದ್ದ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಸೇವೆಯಿಂದ ಅಮಾನತು ಮಾಡಿರುವುದಾಗಿ ವರದಿಯಾಗಿದೆ (ಪ್ರ.ವಾ., ಮೇ 30). ಸರ್ಕಾರಿ ನೌಕರ ಪ್ರತಿಭಟನೆ ಮಾಡುವುದು ‘ನಿಯಮದ ಉಲ್ಲಂಘನೆ’ ಎಂದು ಹೀಗೆ ಅಮಾನತು ಮಾಡಿರುವುದು ‘ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು’ ಎಂಬಂತಾಯಿತು. ಏಕೆಂದರೆ ಪ್ರತಿಭಟನೆಯ ಹಿಂದೆ ಶಿಕ್ಷಕನಿಗೆ ಇದ್ದ ಕಾಳಜಿಯನ್ನು ಸರ್ಕಾರ ಅರ್ಥ ಮಾಡಿಕೊಳ್ಳದೆ ಕುರುಡಾಗಿ ವರ್ತಿಸಿದೆ.
ಹೋದ ಪುಟ್ಟ ಬಂದ ಪುಟ್ಟ ಎಂದು ಶಾಲೆಗೆ ಹೋಗಿ ಬಂದು ಮಾಡಿ, ತಿಂಗಳು ತಿಂಗಳು ಸಂಬಳ ಎಣಿಸಿಕೊಂಡು ಎಲ್ಲರಂತೆ ಈ ಶಿಕ್ಷಕನೂ ಇರಬಹುದಾಗಿತ್ತು. ಶಾಲೆಗೆ ಬಂದ ಮಕ್ಕಳನ್ನು ಇರುವ ಜಾಗದಲ್ಲಿ ಕುಳ್ಳಿರಿಸಿ ಪಾಠ ಮಾಡಿಕೊಂಡೋ ಚೀಟಿ ವ್ಯವಹಾರ ಮಾಡಿಕೊಂಡೋ ರಾಜಕೀಯ ಮಾಡಿಕೊಂಡೋ ಇರಬಹುದಾಗಿತ್ತು. ಆದರೆ ಈ ಶಿಕ್ಷಕನಿಗೆ ಶಾಲೆಯ ಬಗ್ಗೆ, ಮಕ್ಕಳ ಬಗ್ಗೆ ಕಾಳಜಿ ಇರುವುದೇ ತಪ್ಪಾಗಿಹೋಯಿತು. ಇವರು ತಮ್ಮ ಸಂಬಳ ಹೆಚ್ಚಿಸಿರಿ ಎಂದೋ ತಾನು ಕೇಳಿದ ಊರಿಗೆ ವರ್ಗಾವಣೆ ಮಾಡಿರಿ ಎಂದೋ ಮುಂಬಡ್ತಿಗಾಗಿಯೋ ಪ್ರತಿಭಟಿಸಿಲ್ಲ ಎಂಬುದನ್ನು ಸರ್ಕಾರ ಗಣನೆಗೆ ತೆಗೆದುಕೊಂಡು, ಅವರಿಗೆ ಎಚ್ಚರಿಕೆ ನೀಡಬಹುದಿತ್ತೇ ವಿನಾ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ
ಪ್ರಯೋಗಿಸಬಾರದಿತ್ತು.
⇒ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು
51 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿರುವುದರ ಕುರಿತು ಸಂಪಾದಕೀಯವು
(ಪ್ರ.ವಾ., ಮೇ 30) ಸಮಯೋಚಿತ ಹಾಗೂ ಸಕಾಲಿಕವಾದ ಸಲಹೆ ನೀಡಿದೆ. ಅನೇಕ ವರ್ಷಗಳಿಂದಲೂ ಶಿಕ್ಷಕರನ್ನು ನೇಮಿಸಿಯೇ ಇಲ್ಲ. ಶಿಕ್ಷಣ ಸಚಿವರಾಗಿದ್ದ ಗೋವಿಂದೇಗೌಡರು ಇದ್ದಾಗ ನಡೆದ ರೀತಿಯಲ್ಲಿ ಆದಂತಹ ನೇಮಕಾತಿ ಮತ್ತೆ ಆಗಿಯೇ ಇಲ್ಲ. ಕಾಲಕಾಲಕ್ಕೆ ನೇಮಿಸುತ್ತಾ ಬಂದಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಶಿಕ್ಷಕರ ತರಬೇತಿ ನೀಡುವ ಶಿಕ್ಷಣ ಸಂಸ್ಥೆಗಳು ಮಾತ್ರ ಅಧಿಕಗೊಂಡಿವೆ.
ಪ್ರಶಿಕ್ಷಣದಲ್ಲಿ ಪ್ರಾವೀಣ್ಯ ಪಡೆದವರು ನೇಮಕಾತಿಗಾಗಿ ಬಕಪಕ್ಷಿಗಳಂತೆ ಕಾಯುವಂತೆ ಆಗಿದೆ. ರಾಜ್ಯದ ಅದೆಷ್ಟೋ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಎರಡೆರಡು ತರಗತಿಗಳನ್ನು ಒಟ್ಟಿಗೆ ಸೇರಿಸಿ ಪಾಠ ಮಾಡುವ ಪರಿಸ್ಥಿತಿ ಇದೆ. ವಿಷಯವಾರು ಶಿಕ್ಷಕರ ಕೊರತೆಗೇನೂ ಕಮ್ಮಿ ಇಲ್ಲ. ಸರ್ಕಾರಿ ಶಾಲೆಗಳ ಸ್ಥಿತಿ ಹೀಗೇ ಇದ್ದರೆ ಅಭಿವೃದ್ಧಿ ಆಗಲು ಹೇಗೆ ಸಾಧ್ಯ? ಬಡಮಕ್ಕಳ ಬಗ್ಗೆ ಕಾಳಜಿ ಇಲ್ಲದಿರುವುದೇ ಇಂತಹ ಸಮಸ್ಯೆಯ ಮೂಲ.
ಕಾಯಂ ಶಿಕ್ಷಕರಿಗೆ ಅಧಿಕ ಸಂಬಳ ಇರುವಾಗ, ಅತಿಥಿ ಶಿಕ್ಷಕರು ಅಲ್ಪ ಸಂಬಳಕ್ಕೆ ಕೆಲಸ
ಮಾಡಬೇಕಾಗುತ್ತದೆ. ಹೀಗೆ ಶಿಕ್ಷಕರ ನಡುವೆಯೇ ತಾರತಮ್ಯ ನಿಲುವು ಹೊಂದುವುದು ಎಷ್ಟು ಸರಿ? ಸರ್ಕಾರ ಇಂತಹ ನಿರ್ಧಾರದಿಂದ ಹಿಂದೆ ಸರಿದು, ಕಾಯಂ ಶಿಕ್ಷಕರನ್ನು ತೆಗೆದುಕೊಂಡರೆ ಮಾತ್ರ ಸರ್ಕಾರಿ ಶಾಲೆಗಳ ಸಮಸ್ಯೆಗೆ ಕಾಯಂ ಪರಿಹಾರ ಸಿಗುತ್ತದೆ. ಇಲ್ಲದಿದ್ದರೆ ಸರ್ಕಾರಿ ಶಾಲೆಗಳು ಇನ್ನಷ್ಟು ದುಃಸ್ಥಿತಿ ತಲುಪುತ್ತವೆ.
⇒ಬಿ.ಮೊಹಿದ್ದೀನ್ ಖಾನ್, ಚಿತ್ರದುರ್ಗ
ಕೋಮುದ್ವೇಷ ಪ್ರಚೋದನೆಯನ್ನು ನಿಗ್ರಹಿಸಲು ರಾಜ್ಯ ಸರ್ಕಾರ ‘ವಿಶೇಷ ಕಾರ್ಯಪಡೆ’ ರಚಿಸಿರುವುದು ಸ್ವಾಗತಾರ್ಹ (ಪ್ರ.ವಾ., ಮೇ 30). ಆದರೆ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಮಾತ್ರ ಈ ಯೋಜನೆಯನ್ನು ಸೀಮಿತಗೊಳಿಸಿರುವುದು ಸರಿಯಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಇದನ್ನು ವಿಸ್ತರಿಸಬೇಕಾಗಿದೆ.
ಯಾವಾಗ ಎಲ್ಲಿ ರಾಜಕೀಯಪ್ರೇರಿತ ಕೋಮುಗಲಭೆಗಳು ಭುಗಿಲೇಳುತ್ತವೆ ಎಂದು ಹೇಳಲು ಬರುವುದಿಲ್ಲ. ಈ ವಿಶೇಷ ಕಾರ್ಯಪಡೆ ನಾಮಕಾವಸ್ಥೆಯ ಸ್ಥಿತಿಯಲ್ಲಿರದೆ ಸದಾ ಕ್ರಿಯಾಶೀಲವಾಗಿ ಇರಬೇಕಾಗುತ್ತದೆ. ಯಾವ ಕೋಮಿನವರು ಶಾಂತಿಯನ್ನು ಕದಡಲು ಪ್ರಯತ್ನಿಸಿದರೂ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಸರ್ಕಾರ ನಿಗಾ ವಹಿಸಬೇಕಾಗಿದೆ. ರಾಜಕಾರಣಿಗಳ ಅನಗತ್ಯ ಹಸ್ತಕ್ಷೇಪ ಇಲ್ಲದಂತೆ ಆ ಕಾರ್ಯಪಡೆಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಟ್ಟಾಗ ಮಾತ್ರ ಕೋಮುಗಲಭೆಗಳನ್ನು ಸ್ವಲ್ಪಮಟ್ಟಿಗಾದರೂ ನಿಯಂತ್ರಿಸಬಹುದೇನೊ.
⇒ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರು, ಕೊಪ್ಪ
ಗ್ರಾಮೀಣ ಪ್ರದೇಶಗಳಲ್ಲಿನ ಅನಧಿಕೃತ ಬಡಾವಣೆಗಳ ನಿಯಂತ್ರಣಕ್ಕೆ ಕಾಯ್ದೆ ರೂಪಿಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿರುವುದು ಶೀಘ್ರವಾಗಿ ಕಾರ್ಯರೂಪಕ್ಕೆ ಬರಲಿ. ಫಲವತ್ತಾದ ಭೂಮಿಗಳನ್ನು ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ ನಿವೇಶನಗಳಾಗಿ ಮಾರ್ಪಡಿಸುತ್ತಿರುವುದು ಶೋಚನೀಯ. ಇರುವ ಅರ್ಧ, ಒಂದು, ಎರಡು ಎಕರೆ ಜಮೀನನ್ನು ಮಾರಿ ರೈತ ಬೀದಿ ಪಾಲಾಗುತ್ತಿದ್ದಾನೆ. ಬಂದ ದುಡ್ಡಿನಲ್ಲಿ ಮೋಜು, ಮಸ್ತಿ ಮಾಡಿ, ಜನ್ಮ ಕೊಟ್ಟ ಊರನ್ನು ತೊರೆದು ಪಟ್ಟಣಗಳಲ್ಲಿ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳಿವೆ.
ಈಗಾಗಲೇ ನಿರ್ಮಾಣಗೊಂಡಿರುವ ಬಡಾವಣೆಗಳಿಗೆ ಮೂಲ ಸೌಕರ್ಯ ಕೊಡಿ. ಮಳೆಗಾಲದಲ್ಲಿ ಕೆರೆಯಂತಾಗುವ ಬಡಾವಣೆಗಳನ್ನು ಸರಿಪಡಿಸಿ ನೆಮ್ಮದಿಯ ಜೀವನಕ್ಕೆ ಅವಕಾಶ ಮಾಡಿ. ಕೊಡುಕೊಳ್ಳುವಿಕೆಯ ತಂತ್ರ ಸರ್ಕಾರದ್ದಾಗಲಿ. ರಿಯಲ್ ಎಸ್ಟೇಟ್ ದಂಧೆಗೆ ರೈತರು ಹಾಳಾಗುವುದು ಬೇಡ. ಆಹಾರಧಾನ್ಯಗಳ ಬೆಲೆ ಈಗಾಗಲೇ ಗಗನಕ್ಕೆ ಏರಿರುವ ಬಗ್ಗೆ ಸರ್ಕಾರ ಚಿಂತಿಸಲಿ.
⇒ಮಲ್ಲತಹಳ್ಳಿ ಎಚ್. ತುಕಾರಾಂ, ಬೆಂಗಳೂರು
ಇದೊಳ್ಳೆ ‘ರಾಮಾಯಣ’!
ರಾವಣ ದೇಶವನ್ನಾಳಿದ ದ್ವೀಪ ರಾಷ್ಟ್ರ
ಲಂಕಾದಲ್ಲಿ ಲವಣಕ್ಕೆ (ಉಪ್ಪಿಗೆ) ಬರವಂತೆ!
ಕೆ.ಜಿ.ಗೆ ₹145 ಅಂತೆ! ಉತ್ಪಾದನೆಗೆ
ಅಕಾಲಿಕ ಮಳೆ ಸಮಸ್ಯೆಯಂತೆ. ಊಟಕ್ಕೆ
ಉಪ್ಪಿನಕಾಯಿ ಇದ್ದರೂ ಉಪ್ಪಿಲ್ಲ! ಸದ್ಯ
ಭಾರತದಿಂದ 3,050 ಟನ್ ರಫ್ತಾಗಿದೆ
ಎಂದು ಮಾಹಿತಿ ಇದೆ. ಇಂತಹ ಕೊರತೆ ಇದೆ
ಉಪ್ಪಿಗೂ ಎಂದು ಕೇಳಿದವರು ಆಗಿದ್ದಾರೆ ಬೆಪ್ಪು!
ಅಲ್ಲಿನ ನಾಗರಿಕರಿಗಂತೂ ಇದೊಳ್ಳೆ ‘ರಾಮಾಯಣ’!
ನಗರ ಗುರುದೇವ್ ಭಂಡಾರ್ಕರ್, ಹೊಸನಗರ, ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.