ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 10 ಆಗಸ್ಟ್ 2025, 23:30 IST
Last Updated 10 ಆಗಸ್ಟ್ 2025, 23:30 IST
   

‘ಸುಶ್ರೀ’ ಎಂದರೆ ಏನರ್ಥ?

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮದ ಜಾಹೀರಾತಿನಲ್ಲಿ ಘನ ಉಪಸ್ಥಿತರ ಪೈಕಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರಿನ ಮುಂದೆ ಹೊಸದಾಗಿ ‘ಸುಶ್ರೀ’ ಎನ್ನುವ ಉಪಾಧಿ ಇತ್ತು. ಈ ತನಕ ಮಹಿಳೆಯರ ಹೆಸರಿನ ಮುಂದೆ ಕುಮಾರಿ/ ಶ್ರೀಮತಿ ಎಂದು ಬಳಸುವುದು ವಾಡಿಕೆಯಾಗಿತ್ತು. ‘ಸುಶ್ರೀ’ ಎಂಬುದು ‘ಸುಮಂಗಲಿಶ್ರೀ’ ಪದದ ಸಂಕ್ಷಿಪ್ತ ರೂಪ ಆಗಿರಬಹುದೇ ಎಂಬ ಸಂದೇಹ– ಗೊಂದಲ ಕಾಡುತ್ತಿದೆ. ಬಲ್ಲವರು ಈ ಬಗ್ಗೆ ಬೆಳಕು ಚೆಲ್ಲುವರೆ?

⇒ಈರಪ್ಪ ಎಂ. ಕಂಬಳಿ, ಬೆಂಗಳೂರು 

ಸ್ತ್ರೀರೋಗ ತಜ್ಞರ ವರ್ಗಾವಣೆ ಬೇಡ

ಮಕ್ಕಳ ಜನನ ಪ್ರಮಾಣ ಕಡಿಮೆಯಾಗುತ್ತಿರುವ ಆಧಾರದ ಮೇಲೆ ಗ್ರಾಮೀಣ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿರುವ ಸ್ತ್ರೀರೋಗ ತಜ್ಞರನ್ನು ತಾಲ್ಲೂಕು ಆಸ್ಪತ್ರೆಗಳಿಗೆ ವರ್ಗಾಯಿಸಲು ಸರ್ಕಾರ ಮುಂದಾಗಿದೆ. ಯಾವುದೇ ಯೋಜನೆ ಅಥವಾ ಸೇವೆಯ ವೆಚ್ಚ ಕಡಿತಗೊಳಿಸುವ ಆಲೋಚನೆ ಸ್ವಾಗತಾರ್ಹ. ಆದರೆ, ಕೆಲವು ವಿಷಯಗಳಲ್ಲಿ ವೆಚ್ಚಕ್ಕಿಂತ ಯೋಜನೆ ಅಥವಾ ಸೇವೆಯ ಕೊರತೆಯಿಂದ ಆಗುವ ದುಷ್ಪರಿಣಾಮವನ್ನು ಊಹಿಸಿ ಲೆಕ್ಕ ಹಾಕದೆ ವೆಚ್ಚ ಮಾಡಬೇಕಾಗುತ್ತದೆ.

ADVERTISEMENT

ದುಬಾರಿ ಜೀವನ‌ಮಟ್ಟ ಇತ್ಯಾದಿ ಕಾರಣಗಳಿಂದ ಒಂದೇ ಮಗು ಸಾಕು ಎನ್ನುವ ಮನಃಸ್ಥಿತಿ; ಹೆಚ್ಚಿನ ವೈದ್ಯಕೀಯ ಸೌಲಭ್ಯ ಬಯಸಿ ಹೆರಿಗೆಗಾಗಿ ನಗರ ಪ್ರದೇಶದ ಆಸ್ಪತ್ರೆಗಳನ್ನು ಗರ್ಭಿಣಿಯ ಕುಟುಂಬದವರು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಮಕ್ಕಳ ಜನನ ಪ್ರಮಾಣ ಸಹಜವಾಗಿ ಕಡಿಮೆಯಾಗುತ್ತದೆ. ಆದರೆ, ಸ್ತ್ರೀ ರೋಗಗಳಿಗೆ ಗ್ರಾಮೀಣ ಆಸ್ಪತ್ರೆಗಳಲ್ಲಿನ ಸ್ತ್ರೀರೋಗ ತಜ್ಞರನ್ನೇ ಮಹಿಳೆಯರು ಅವಲಂಬಿಸಿರುವುದು ಹೆಚ್ಚು. ಹಾಗಾಗಿ, ಸ್ತ್ರೀರೋಗ ತಜ್ಞರ ವರ್ಗಾವಣೆ ಆಲೋಚನೆಯನ್ನು ಸರ್ಕಾರ ಪುನರ್‌ ಪರಿಶೀಲಿಸಬೇಕಿದೆ.

⇒‌ತೇಜಸ್ವಿ ವಿ. ಪಟೇಲ್, ಕಾರಿಗನೂರು

ಕನ್ನಡ ಶಿಕ್ಷಕರ ಭವಿಷ್ಯ ಅಯೋಮಯ

ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿಗೆ ತಯಾರಿ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ, ನನಗೆ ಕೆಲವು ಪ್ರಶ್ನೆಗಳು ಕಾಡುತ್ತಿವೆ. ಕನ್ನಡ ಮಾಧ್ಯಮದ ಮಕ್ಕಳು ಪ್ರಥಮ ಭಾಷೆಯಾಗಿ ಕನ್ನಡ ಮತ್ತು ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಓದುತ್ತಾರೆ. ಹಾಗೆಯೇ ಇಂಗ್ಲಿಷ್ ಮಾಧ್ಯಮದ ಮಕ್ಕಳು ಮೊದಲ ಭಾಷೆಯಾಗಿ ಇಂಗ್ಲಿಷ್ ಅಥವಾ ಕನ್ನಡ ಭಾಷೆ ಓದುತ್ತಾರೆ. ದ್ವಿತೀಯ ಭಾಷೆಯಾಗಿ ಕನ್ನಡ ಅಥವಾ ಇಂಗ್ಲಿಷ್ ಓದುತ್ತಾರೆ.

ಆದರೆ, ಕನ್ನಡೇತರ ವಿದ್ಯಾರ್ಥಿಗಳಾದ ಗಡಿಭಾಗದ ಮರಾಠಿ, ತಮಿಳು, ತೆಲುಗು, ಮಲಯಾಳ ಮತ್ತು ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಪ್ರಥಮ ಭಾಷೆಯಾಗಿ ತಮ್ಮ ಮಾತೃಭಾಷೆಯಾದ ಮರಾಠಿ, ತಮಿಳು, ತೆಲುಗು, ಮಲಯಾಳ, ಉರ್ದು ಓದಿದರೆ; ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಓದುತ್ತಾರಲ್ಲವೇ? ರಾಜ್ಯದಲ್ಲಿ 1986ರಿಂದ ಕನ್ನಡ ಶಕ್ತಿ ಜಾರಿಗೆ ಬಂದಾಗಿನಿಂದ ಕನ್ನಡವನ್ನು
ಅವರು ಕಡ್ಡಾಯವಾಗಿ ಓದುತ್ತಿದ್ದಾರೆ. ಈಗ ದ್ವಿಭಾಷಾ ನೀತಿ ಜಾರಿಯಾದರೆ ಅವರು ಕನ್ನಡ ಓದುವುದು ಹೇಗೆ? ಅಥವಾ ಅವರಿಗೆ ಕನ್ನಡ ಕಲಿಸುವುದರ ಅವಶ್ಯಕತೆ ಇಲ್ಲವೇ? ಕನ್ನಡೇತರರಿಗೆ ಕನ್ನಡ ಕಡ್ಡಾಯವಾಗದಿದ್ದರೆ ರಾಜ್ಯದಲ್ಲಿ ದ್ವಿತೀಯ ಭಾಷೆಯಾಗಿ ಕನ್ನಡ ಬೋಧಿಸುವ ಶಿಕ್ಷಕರ ಮುಂದಿನ ಭವಿಷ್ಯವೇನು?

⇒ಜೆ.ಪಿ. ಅಗಸಿಮನಿ, ಬೆಳಗಾವಿ

ಆಯೋಗದ ಆತುರ: ಜನರಿಗೆ ಸೋಜಿಗ

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದ ಮಹದೇವಪುರದಲ್ಲಿ ಮತ ಕಳ್ಳತನ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಧಿಕಾರಿಗಳು ತೋರುತ್ತಿರುವ ಆತುರ, ಮತದಾರರಲ್ಲಿ ಆಯೋಗದ ಕುರಿತು ಸಂಶಯ ಮೂಡುವಂತೆ ಮಾಡಿದೆ. ಸಾಂವಿಧಾನಿಕ ಸಂಸ್ಥೆಯಾದ ಆಯೋಗವು ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಸಂವಿಧಾನದ ನಿಬಂಧನೆಗಳ ಅನುಸಾರ ನಡೆದುಕೊಳ್ಳಬೇಕು. ವಿರೋಧ ಪಕ್ಷಗಳು ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ಸೂಕ್ತ ದಾಖಲೆ ಸಮೇತ ಪ್ರತಿಕ್ರಿಯಿಸುವುದು ಆಯೋಗದ ಕರ್ತವ್ಯ. ಅದರ ಬದಲು ರಾಜಕೀಯ ಪಕ್ಷಗಳ ರೀತಿ ಪ್ರತಿ ಆರೋಪಕ್ಕೂ ಸಾಮಾಜಿಕ ಮಾಧ್ಯಮಗಳ ಮೂಲಕ ಉತ್ತರಿಸುವ ಅನಿವಾರ್ಯಕ್ಕೆ ಒಳಗಾಗುವುದರ ಔಚಿತ್ಯವಾದರೂ ಏನಿದೆ?

⇒ರಾಜು ಬಜಂತ್ರಿ, ಅಥಣಿ 

‘ಗ್ಯಾರಂಟಿ’ ಗುಟ್ಟು ಟ್ರಂಪ್‌ಗೆ ತಿಳಿಯಿತೇ?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ, ಭಾರತದ ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ಉಚಿತ ಸಾರಿಗೆ ಯೋಜನೆ ಬಗ್ಗೆ ಗೊತ್ತಾಗಿರಬಹುದು.
ಸರ್ಕಾರವೇ ಪ್ರಜೆಗಳ ಖಾತೆಗೆ ಹಣ ಹಾಕುತ್ತಿರುವುದನ್ನು ಟ್ರಂಪ್‌ ಪತ್ತೆ ಹಚ್ಚಿರಬಹುದು. ಮನೆಗಳಿಗೆಲ್ಲಾ ಪುಕ್ಕಟೆ ವಿದ್ಯುತ್ ನೀಡುತ್ತಿರುವ ಮಾಹಿತಿಯನ್ನು ತರಿಸಿಕೊಂಡಿರಬಹುದು.  

ಐ.ಟಿ, ಇ.ಡಿ, ಲೋಕಾಯುಕ್ತ ದಾಳಿ ವೇಳೆ ಅಟೆಂಡರ್‌ನಿಂದ ಹಿಡಿದು ಕಮಿಷನರ್ ಹಂತದ ಅಧಿಕಾರಿಗಳ ಮನೆಗಳಲ್ಲಿ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆಯಾಗುತ್ತಿರುವ ಸಂಗತಿಯನ್ನೂ ಟ್ರಂಪ್‌ ಸಂಗ್ರಹಿಸಿರಬಹುದು. ಅಗತ್ಯ ವಸ್ತುಗಳ ಬೆಲೆ ವಿಪರೀತ ಹೆಚ್ಚಿಸುತ್ತಿದ್ದರೂ ನಾಗರಿಕರು ಪ್ರತಿರೋಧ ವ್ಯಕ್ತಪಡಿಸದೆ ಆರಾಮವಾಗಿರುವುದನ್ನೂ ಶ್ವೇತಭವನ ಗಮನಿಸಿರಬಹುದು. ಹಾಗಾಗಿ, ಭಾರತ ಶ್ರೀಮಂತ ರಾಷ್ಟ್ರವೆಂದು ಹೊಟ್ಟೆಕಿಚ್ಚು ಪಟ್ಟು ನಮ್ಮ ಸರಕುಗಳ ಮೇಲೆ ಸುಂಕ ಹೆಚ್ಚಿಸಿರಬಹುದೇನೋ!

 ಜೆ.ಬಿ. ಮಂಜುನಾಥ, ಪಾಂಡವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.