ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 12 ಆಗಸ್ಟ್ 2025, 23:30 IST
Last Updated 12 ಆಗಸ್ಟ್ 2025, 23:30 IST
   

ಶಾಸಕ ಯತ್ನಾಳ ಸತ್ಯವಂತರಲ್ಲವೇ?

‘ಇದ್ದದ್ದು ಇದ್ದಂಗೆ ಹೇಳಿದ್ದಕ್ಕೆ ಸಚಿವ ಕೆ.ಎನ್‌. ರಾಜಣ್ಣ ಅವರ ತಲೆದಂಡವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಹಾಗಾದರೆ, ಬಿಜೆಪಿ ನಾಯಕರಾಗಿದ್ದ ಬಸನಗೌಡ ಪಾಟೀಲ ಯತ್ನಾಳ ಅವರ ತಲೆದಂಡ ಆಗಿದ್ದು ಏತಕ್ಕೆ? ಇದ್ದದ್ದನ್ನು ಇದ್ದಂಗೆ ಹೇಳಿದ್ದಕ್ಕೆ ಅಲ್ಲವೇ? ರಾಜಣ್ಣ ಸತ್ಯವಂತರಾದರೆ ಯತ್ನಾಳ ಅವರು ಸತ್ಯವಂತರಲ್ಲವೇ?

ಸತ್ಯವಂತರಿಗಿದು ಕಾಲವಲ್ಲ ಎಂಬ ಮಾತು ರಾಜಣ್ಣರಂತೆ ಯತ್ನಾಳರಿಗೂ ಅನ್ವಯ ಆಗಬೇಕಲ್ಲವೇ?

⇒ಪಿ.ಜೆ. ರಾಘವೇಂದ್ರ, ಮೈಸೂರು

ADVERTISEMENT

ಅತಾರ್ಕಿಕ ವಾದ ಬೆಂಬಲಿಸಬೇಡಿ

‘ಭೈರವಿ ರಾಗಕ್ಕೆ ಎದ್ದು ನಿಂತಿದ್ದ ಹುಲ್ಲು’ (ಪ್ರ.ವಾ., ಆಗಸ್ಟ್‌ 10) ಸುದ್ದಿ ಓದಿ ಅಚ್ಚರಿಯಾಯಿತು. ಈ ಪವಿತ್ರ ನೆಲದಲ್ಲಿ ಎಲ್ಲವೂ ಇತ್ತು. ವಿಮಾನ, ಪ್ಲಾಸ್ಟಿಕ್‌ ಸರ್ಜರಿ ಹೀಗೆ ಎಲ್ಲಾ ವೈಜ್ಞಾನಿಕ ಸಂಶೋಧನೆಗಳೂ ಮೊದಲು ಭಾರತದಲ್ಲೇ ಆಗಿದ್ದು, ಈ ರೀತಿಯ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಪುಲವಾಗಿ ಹರಿದಾಡುತ್ತಿವೆ. ‌ರಾಜಕಾರಣಿಗಳು ಮಾತ್ರವಲ್ಲದೆ ವಿಜ್ಞಾನಿಗಳೂ ಇಂತಹ ಅತಾರ್ಕಿಕ ವಾದವನ್ನು ಬೆಂಬಲಿಸಿರುವುದು ಇದೆ.

ಇದು ಸತ್ಯೋತ್ತರ ಕಾಲ. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಪ್ರತಿ ಪ್ರಜೆಯ ಕರ್ತವ್ಯವೆಂದು ಸಂವಿಧಾನವೇ ಹೇಳುತ್ತದೆ. ಇಂತಿರುವಾಗ ಯಾವುದೇ ರಾಗಕ್ಕೆ ಸ್ಪಂದಿಸಲು ಶ್ರವಣ ವ್ಯವಸ್ಥೆ ಇರಬೇಕು ಎನ್ನುವುದನ್ನು ಮರೆತು ಅವೈಜ್ಞಾನಿಕ ಹೇಳಿಕೆ ನೀಡುವುದು ಸರಿಯಲ್ಲ.

⇒ಚಂದ್ರಪ್ರಭ ಕಠಾರಿ, ಬೆಂಗಳೂರು

ಅಲೆಮಾರಿಗಳ ಬಗ್ಗೆ ಅನಾದರ ಏಕೆ?

‘ಒಳಮೀಸಲು ವರದಿಯ ಒಳನೋಟ’ ಲೇಖನದಲ್ಲಿ (ಲೇ: ಸಿ.ಎಸ್‌. ದ್ವಾರಕಾನಾಥ್‌, ಪ್ರ.ವಾ., ಆಗಸ್ಟ್‌ 11) ಈವರೆಗೂ ಪ್ರಾತಿನಿಧ್ಯವನ್ನೇ ಪಡೆಯದ ಅಲೆಮಾರಿ ಜಾತಿಗಳಿಗೆ ಶೇ 1ರಷ್ಟು ಮೀಸಲಾತಿ ಹೆಚ್ಚಿಸಬಹುದಿತ್ತು ಎಂಬ ಬಗ್ಗೆ ಪ್ರಸ್ತಾಪಿಸಲಾಗಿದೆ.

ಪರಿಶಿಷ್ಟ ಜಾತಿಗಳಲ್ಲಿನ ಒಳಮೀಸಲಾತಿ ಸಂಬಂಧಿಸಿದ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್ ವರದಿಯು ರಾಜ್ಯ ಸರ್ಕಾರದ ಕೈ ಸೇರಿದೆ. ಆದರೆ, ಸಾಮಾಜಿಕ ನ್ಯಾಯದ ಮೆರುಗಿನ ಗರಿ ಮತ್ತು ಗುರಿ ಏನು ಎಂಬುದರ ಒಳಮರ್ಮ ಗೊತ್ತಾಗುತ್ತಿಲ್ಲ. ಕೇವಲ ಎಡ, ಬಲ ಮತ್ತು ಸ್ಪೃಶ್ಯ ಜಾತಿಗಳಿಗೆ ನ್ಯಾಯ
ಕೊಡಿಸಲು ಸಿದ್ಧವಾದ ಈ ವರದಿಯಲ್ಲಿ ಭಿಕ್ಷೆ ಬೇಡುವ ಅಲೆಮಾರಿಗಳಿಗೆ ನ್ಯಾಯ ಸಿಕ್ಕಿಲ್ಲ.    

⇒ಸಣ್ಣವೀರಣ್ಣ ದೊಡ್ಡಮನಿ, ಗುಳೇದಗುಡ್ಡ 

ಸಂಶೋಧನೆಗೆ ಮಾರ್ಗದರ್ಶಕರೇ ಇಲ್ಲ!

ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾಯಂ ಪ್ರಾಧ್ಯಾಪಕರ ನೇಮಕಾತಿ ವಿಳಂಬದಿಂದ ವಿದ್ಯಾರ್ಥಿ ಸಮುದಾಯ ತೊಂದರೆಗೆ ಸಿಲುಕಿದೆ. ಸಂಶೋಧನೆಗೆ ಅರ್ಹತೆ ಪಡೆದಿರುವ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಶೋಧನೆ ನಡೆಸಲು ಅವಕಾಶ ಮಾಡಿಕೊಡಿ ಎಂದು ಆರು ತಿಂಗಳುಗಳಿಂದ ಕುಲಪತಿ ಅವರಿಗೆ ಮನವಿ ಮಾಡಿದರೂ ಉಪಯೋಗವಾಗಿಲ್ಲ.

ಯುಜಿಸಿ ನಿಯಮಾನುಸಾರ ಒಬ್ಬ ಪ್ರಾಧ್ಯಾಪಕರಿಗೆ 8 ವಿದ್ಯಾರ್ಥಿಗಳನ್ನಷ್ಟೇ ಸಂಶೋಧನೆಗೆ ನಿಯೋಜಿಸಲು ಅವಕಾಶವಿದೆ. ಹೆಚ್ಚುವರಿಯಾಗಿ ವಿದ್ಯಾರ್ಥಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಸಂಶೋಧನೆಗೆ ಯುಜಿಸಿ ಮತ್ತು ರಾಜ್ಯ ಸರ್ಕಾರ ಶಿಷ್ಯವೇತನ ನೀಡುತ್ತಿದೆ. ಹೀಗಿದ್ದರೂ ಹೆಚ್ಚುವರಿ ಮಾರ್ಗದರ್ಶಕರನ್ನು ನೀಡಲು ಸಮಸ್ಯೆ ಏನು? ಸಂಶೋಧನಾ ವಿದ್ಯಾರ್ಥಿಗಳ ಸಂಕಟವನ್ನು ಉನ್ನತ ಶಿಕ್ಷಣ ಸಚಿವರು ಬಗೆಹರಿಸಲು ಮುಂದಾಗಬೇಕಿದೆ. 

⇒ವರಹಳ್ಳಿ ಆನಂದ, ಮೈಸೂರು

ಆಧಾರ್ ಸೇರ್ಪಡೆ ಕಡ್ಡಾಯವಾಗಲಿ

ಮತ ಕಳವು ಬಗ್ಗೆ ದೇಶದಾದ್ಯಂತ ಸುದ್ದಿಯಾಗುತ್ತಿದೆ. ಮತದಾರರ ಅಂತಿಮ ಪಟ್ಟಿ ಪರಿಷ್ಕರಣೆ ವೇಳೆ ಎಲ್ಲಾ ಪಕ್ಷಗಳಿಗೂ ಮಾಹಿತಿ ನೀಡಲಾಗುತ್ತಿದೆ. ಮತದಾರರ ಹೆಸರು ಬಿಟ್ಟು ಹೋಗಿದ್ದರೆ ಅಂಥವರ ಹೆಸರನ್ನು ಮರು ಸೇರ್ಪಡೆ ಮಾಡಲು ರಾಜಕೀಯ ಮುಖಂಡರು, ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಹೀಗಿದ್ದರೂ, ಕೆಲವರ ಹೆಸರು ಎರಡು ಕಡೆ ಅಥವಾ ಅದಕ್ಕಿಂತ ಹೆಚ್ಚು ಇರುತ್ತದೆ. ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿದರೆ ಇಂತಹ ದ್ವಂದ್ವಗಳಿಗೆ ಕಡಿವಾಣ ಬೀಳಲಿದೆ.

⇒ಎಚ್.ಕೆ. ಕೊಟ್ರಪ್ಪ, ಹರಿಹರ

ಯುದ್ಧದಾಹಿ ಮನೋಭಾವ ಬದಲಾಗಲಿ

ಪ್ರಥಮ ತೀರ್ಥಂಕರ ಆದಿನಾಥರ ಪುತ್ರರಾಗಿದ್ದ ಭರತ ಮತ್ತು ಬಾಹುಬಲಿ ನಡುವೆ ಯುದ್ಧ ಪ್ರಸಂಗ ತಲೆದೋರಿದಾಗ ಇಬ್ಬರಲ್ಲೂ ಚಿಂತನೆಯೊಂದು ಮೂಡಿತು. ತಮ್ಮ ಚಕ್ರವರ್ತಿತ್ವ ಸ್ಥಾಪನೆಗಾಗಿ ಸಾವಿರಾರು ಅಮಾಯಕ ಸೈನಿಕರು ಬಲಿ ಆಗಬೇಕೆ? ಅವರ ಕುಟುಂಬಗಳು ಅನಾಥವಾಗಬೇಕೆ? ಅನಗತ್ಯ ಹಿಂಸೆ ಏಕೆ? ಎಂದು ಯೋಚಿಸಿದರು. ಸಂಪೂರ್ಣ ಸೈನ್ಯವನ್ನು ಬದಿಗಿರಿಸಿ, ಶಸ್ತ್ರಾಸ್ತ್ರಗಳಿಗೆ ವಿರಾಮ ನೀಡಿ ಯುದ್ಧಕ್ಕೆ ತಡೆ ನೀಡಿ ತಾವಿಬ್ಬರೇ ಪರಸ್ಪರ ಕಾದಾಡಿ (ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧ) ಸೋಲು, ಗೆಲುವು ಕಂಡರು. ಈ ಹಿಂಸಾರಹಿತ ಯುದ್ಧವು ನಂತರ ಅವರ ಪಶ್ಚಾತ್ತಾಪಕ್ಕೂ ಕಾರಣವಾಯಿತು. ಇಬ್ಬರೂ ಆ ಕಾಲದಲ್ಲಿಯೇ ಯುದ್ಧ ತಡೆದ ಕೀರ್ತಿಗೆ ಪಾತ್ರರಾದರು. ಯುದ್ಧದಾಹಿ ಆಗಿರುವ ಇಂದಿನ ಜಗತ್ತನ್ನು ಕಂಡಾಗ ಭರತ ಮತ್ತು ಬಾಹುಬಲಿಯ ಯುದ್ಧದ ಸಂಕಥನ ಈ ಹೊತ್ತಿಗೆ ಹೆಚ್ಚು ಪ್ರಸ್ತುತ ಅನ್ನಿಸುತ್ತದೆ. 

 ಶಾಂತಿನಾಥ ಕೆ. ಹೋತಪೇಟಿ, ಹುಬ್ಬಳ್ಳಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.