ವಾಚಕರ ವಾಣಿ
‘ಕೃತಕ ಬುದ್ಧಿಮತ್ತೆ: ಪ್ರಭಾವಿಗಳ ಪಟ್ಟಿಯಲ್ಲಿ ಸಚಿವ ಪ್ರಿಯಾಂಕ್’ (ಪ್ರ.ವಾ., ಆಗಸ್ಟ್ 13) ಸುದ್ದಿ ಓದಿ ಸಂತೋಷವಾಯಿತು. ಅವರವರ ರಾಜಕೀಯ ಏನೇ ಇರಲಿ, ನಮ್ಮ ವಿದ್ಯಾರ್ಥಿಗಳು ಮತ್ತು ಯುವಜನ ಇಂಥ ವಿಷಯಗಳಿಂದ ಸ್ಫೂರ್ತಿ ಪಡೆಯಬೇಕು. ಪ್ರಿಯಾಂಕ್ ಖರ್ಗೆ ಒಂದು ವರ್ಷ ಎಂಬಿಬಿಎಸ್ ಪದವಿ ವ್ಯಾಸಂಗ ಮಾಡಿ, ಅದನ್ನು ಅರ್ಧಕ್ಕೆ ನಿಲ್ಲಿಸಿದರು. ಈಗ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಪರಿಣತಿ ಸಾಧಿಸಿದ್ದಾರೆ. ಇದು ಪ್ರಶಂಸನೀಯ ಮತ್ತು ಅನುಕರಣೀಯ. ನಮ್ಮ ಮಕ್ಕಳು, ಸಿನಿ ತಾರೆಯರ ಹಿಂದೆ ಬಿದ್ದು ಜೀವನ ಹಾಳು ಮಾಡಿಕೊಳ್ಳುವುದಕ್ಕಿಂತ ಇದು ಎಷ್ಟೋ ಒಳ್ಳೆಯದು, ಅಲ್ಲವೇ?
⇒ಡಾ. ಎಸ್.ಕೆ. ಕುಮಾರ್, ಬೇಲೂರು
‘ವಿದ್ಯೆ’ ವ್ಯಂಗ್ಯವಾದ ವರ್ತಮಾನ ಲೇಖನ (ಲೇ: ಸಬಿತಾ ಬನ್ನಾಡಿ, ಪ್ರ.ವಾ., ಆಗಸ್ಟ್ 13) ಓದಿ ನಾಲ್ಕು ದಶಕಗಳ ಕಾಲ ಶಿಕ್ಷಕನಾಗಿ ಕೆಲಸ ಮಾಡಿದ ನನ್ನ ಅಂತರಾಳದಲ್ಲಿ ಅಪರಾಧಿ ಭಾವದ ತಾಕಲಾಟ ಶುರುವಾಯಿತು. ದುರ್ಯೋಧನನ ಸಿಡುಕು ಅಪ್ಪನಾದ ಧೃತರಾಷ್ಟ್ರನ ಬಳುವಳಿಯೇ? ಗುರುವಾದ ದ್ರೋಣರು ತನ್ನನ್ನು ಅವಮಾನಿಸಿದ ಗೆಳೆಯ ದ್ರುಪದನ ಮೇಲೆ ಸೇಡು ತೀರಿಸಿಕೊಳ್ಳಲು ಶಿಷ್ಯರನ್ನು ಅಣಿಗೊಳಿಸಿದರೇ?
ಶಿಕ್ಷಣ, ಪದವಿ, ಅಧಿಕಾರ, ಸಿದ್ಧಿ–ಪ್ರಸಿದ್ಧಿ ಎಲ್ಲವೂ ವಿವೇಕವಿಲ್ಲದ ಮೇಲೆ ಪ್ರಯೋಜನವಿಲ್ಲ. ನಮಗೆ ಶಾಲೆಯಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಿ ಎಂದು ಯಾರು ಕೇಳಿಕೊಳ್ಳುತ್ತಾರೆ. ಒಳ್ಳೆಯ ‘ಅಂಕಗಳು’ ಸಿಗಬೇಕು ಅಷ್ಟೇ. ಎಲ್ಲೇ ಹೋಗಿ, ರ‍್ಯಾಂಕ್ ಬೇಕು; ಅಗ್ರಾಂಕಕ್ಕಾಗಿ ಉಗ್ರ ಪ್ರಯತ್ನ. ಮಕ್ಕಳಿಗೆ ನೈತಿಕ ಶಿಕ್ಷಣವನ್ನು ಅವಶ್ಯವಾಗಿ ಕೊಡಿ ಎಂದು ಸರ್ಕಾರಗಳು ಶಾಲೆಗಳಿಗೆ ಒಂದಾದರೂ ಆದೇಶ ಕೊಟ್ಟಿದ್ದರೆ ತಿಳಿಸಿ. ಇಲ್ಲ! ‘ವಿದ್ಯಾದದಾತಿ ವಿನಯಂ’; ಈಗದು ವಿದ್ಯಾದದಾತಿ ಅಂಕಂ! ಲೇಖನದ ಕಳಕಳಿ ಸರ್ಕಾರದ ಹೃದಯ ತಟ್ಟಿ, ಮಕ್ಕಳ ಮನ ಮುಟ್ಟಬೇಕಿದೆ.
⇒ತಿರುಪತಿ ನಾಯಕ್, ಕಲಬುರಗಿ
ಖಾದಿ ಉತ್ಪನ್ನಗಳು ನಿಜವಾದ ಆತ್ಮನಿರ್ಭರದ ಆಶಯಕ್ಕೆ ನಿದರ್ಶನವಾಗಿವೆ. ಇವು ಪರಿಸರ ಸ್ನೇಹಿಯಾಗಿದ್ದು, ಸ್ಥಳೀಯ ಆರ್ಥಿಕತೆಯನ್ನು ಪ್ರೋತ್ಸಾಹಿಸುತ್ತವೆ. 75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ‘ಧ್ವಜ ನೀತಿ ಸಂಹಿತೆ’ಗೆ ತಿದ್ದುಪಡಿ ತರುವ ಮೂಲಕ ಯಂತ್ರದಿಂದ ನಿರ್ಮಿತ ಪಾಲಿಸ್ಟರ್ ಬಟ್ಟೆಯ ರಾಷ್ಟ್ರೀಯ ಧ್ವಜಗಳ ತಯಾರಿಕೆಗೆ ಅನುಮತಿ ನೀಡಿತ್ತು. ಪರಿಣಾಮವಾಗಿ ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಿದ, ಕಡಿಮೆ ದರದಲ್ಲಿ ದೊರೆಯುವ ತ್ರಿವರ್ಣ ಧ್ವಜಗಳ ಮಾರಾಟ ಹೆಚ್ಚಾಗಿ, ಖಾದಿ ಬಟ್ಟೆಗಳಿಂದ ತಯಾರಿಸಿದ ರಾಷ್ಟ್ರಧ್ವಜ ಮಾರಾಟ ಕಡಿಮೆಯಾಗಿದೆ. ಇದನ್ನೇ ನಂಬಿದ ಖಾದಿ ಗ್ರಾಮೋದ್ಯೋಗದ ಕೆಲಸಗಾರರಿಗೆ ಸಂಕಷ್ಟ ಎದುರಾಗಿದೆ. ಖಾದಿಯಿಂದ ತಯಾರಿಸಿದ ರಾಷ್ಟ್ರಧ್ವಜವನ್ನು ಖರೀದಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ.
⇒ಉದಯ ಮ. ಯಂಡಿಗೇರಿ, ಧಾರವಾಡ
ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಆಡಳಿತರೂಢ ಹಾಗೂ ವಿರೋಧ ಪಕ್ಷದ ಸದಸ್ಯರು, ಆರ್‌ಟಿಐ ಕಾರ್ಯಕರ್ತರ ಮೇಲೆ ಮುಗಿಬಿದ್ದಿದ್ದು ನಿರೀಕ್ಷಿತವೇ ಆಗಿದೆ. ಆರ್‌ಟಿಐ ಕಾರ್ಯಕರ್ತರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂಬುದು ಕೆಲವು ಶಾಸಕರ ವಾದ. ಆ ರೀತಿಯಲ್ಲಿ ಕೆಲವರು ಇರಬಹುದು. ಆದರೆ, ಈ ಐಷಾರಾಮಿ ಜೀವನಕ್ಕೆ ಎಡೆಮಾಡಿಕೊಟ್ಟಿದ್ದು ಯಾರು? ಈ ಮೂಲ ಪ್ರಶ್ನೆಯೂ ಸದನದಲ್ಲಿ ಚರ್ಚೆ ಆಗಬೇಕಲ್ಲವೇ?
ಮಾಹಿತಿ ಹಕ್ಕು ಅಧಿನಿಯಮ ಅರ್ಜಿದಾರರಿಗೆ ಮೂವತ್ತು ದಿನಗಳಲ್ಲಿ ಮಾಹಿತಿ ಒದಗಿಸಲು ಸಮಯಾವಕಾಶ ನೀಡುತ್ತದೆ. ಆ ಸಮಯದಲ್ಲಿ ಸಂಬಂಧಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ಒದಗಿಸಿದರೆ ಸಮಸ್ಯೆ ಇರುವುದಿಲ್ಲ. ಆದರೆ, ನಿಗದಿತ ಅವಧಿಯಲ್ಲಿ ಮಾಹಿತಿ ಏಕೆ ಒದಗಿಸುವುದಿಲ್ಲ. ಈ ವಿಷಯವೂ ಚರ್ಚಾರ್ಹವಲ್ಲವೇ? ಮಾಹಿತಿ ಹಕ್ಕು ಅಧಿನಿಯಮ ಜಾರಿಯಾಗಿ ಇಪ್ಪತ್ತು ವರ್ಷಗಳಾಗಿವೆ. ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಶಾಸಕರ ಹೊಣೆಗಾರಿಕೆಯಲ್ಲವೇ?
⇒ಅಬ್ದುಲ ರಝಾಕ ಡಿ. ಟಪಾಲ, ಕೆರೂರ
ಕಳೆದ ವಿಧಾನಸಭಾ ಚುನಾವಣೆ ವೇಳೆ ನನ್ನ ಬಳ್ಳಾರಿಯ ಮಾವ ಮನೆಗೆ ಒಯ್ಯುತ್ತಿದ್ದ ವಿಸ್ಕಿ ಬಾಟಲಿಯೊಂದನ್ನು ಚುನಾವಣಾ ಸಿಬ್ಬಂದಿ ಹಿಡಿದುಬಿಟ್ಟಿದ್ದರು. ಸ್ವಂತ ಉಪಯೋಗಕ್ಕೆ ತರುತ್ತಿದ್ದ ಅವರ ಮೇಲೆ ಮೊಕದ್ದಮೆ ಹೂಡಿ, ಸ್ಕೂಟರ್ ಜಪ್ತಿ ಮಾಡಿದರು. ಐದು ವರ್ಷ ಕೋರ್ಟ್‌ಗೆ ಅಲೆದು, ಖುಲಾಸೆಗೊಂಡು, ಕೊನೆಗೆ ಸಿಕ್ಕಿದ ಸ್ಕೂಟರ್ ಗುಜರಿ ಸೇರಿತು. ಇದೇ ನಮೂನೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಚುನಾವಣಾ ಅಕ್ರಮ ನಿಜವಾದರೆ ತಪ್ಪಿತಸ್ಥರಿಗೆ ಎಂಥ ಕಠಿಣ ಶಿಕ್ಷೆಯಾಗಬೇಕು? ಅಕ್ರಮ ಎಸಗಿದವರು, ಲಾಭ ಪಡೆದುಕೊಂಡವರೆಲ್ಲರೂ ಜೈಲು ಸೇರಬೇಕಲ್ಲವೇ?
ಚುನಾವಣಾ ಆಯೋಗ ಸಿದ್ಧಪಡಿಸಿದ ದಾಖಲೆಗಳೇ ಅದರ ತಪ್ಪನ್ನು ಜಗತ್ತಿಗೆ ಸಾರುತ್ತಿದ್ದರೂ, ಆಯೋಗ ಇದುವರೆಗೂ ಓರ್ವ ಸಿಬ್ಬಂದಿಯನ್ನೂ ಅಮಾನತು ಮಾಡಿಲ್ಲ. ಕನಿಷ್ಠ ಶಿಷ್ಟಾಚಾರಕ್ಕಾದರೂ ತನಿಖೆ ಮಾಡುತ್ತೇವೆ ಎಂದಿಲ್ಲ. ಹೀಗಿದ್ದಾಗ ಶತಮಾನಗಳ ಹೋರಾಟದ ಫಲದಿಂದ
ಪಡೆದಿರುವ ಮತದಾನದ ಹಕ್ಕಿನ ಮಹತ್ವ ಉಳಿಯುವ ಬಗೆಯಾದರೂ ಯಾವುದು?
ಸಿದ್ದೇಗೌಡ ಶಾಂತರಾಜು, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.