ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 20 ಅಕ್ಟೋಬರ್ 2025, 23:30 IST
Last Updated 20 ಅಕ್ಟೋಬರ್ 2025, 23:30 IST
   

ಸರ್ಕಾರದ ನಿಲುವಿಗೆ ಉಪೇಕ್ಷೆ ಸರಿಯೆ?

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳದಿರುವ ಇನ್ಫೊಸಿಸ್‌ನ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ದಂಪತಿಯ ನಿರ್ಧಾರ ವೈಯಕ್ತಿಕ ವಾದುದು. ಆದರೆ, ಸಮಾಜದ ಪ್ರತಿಷ್ಠಿತ ಸ್ಥಾನದಲ್ಲಿರುವವರ, ಖ್ಯಾತನಾಮರ ನಡೆ–ನುಡಿ, ನಿಲುವು–ನಿರ್ಧಾರಗಳನ್ನು ಲಕ್ಷಾಂತರ ಜನ ಗಮನಿಸುತ್ತಾ ಅನುಕರಿಸು ತ್ತಾರೆ. ಕಾನೂನಾತ್ಮಕವಾಗಿ ಅವರ ನಿರ್ಧಾರ ಪ್ರಶ್ನಾತೀತ. ಆದರೆ, ಸಮಾಜದ ಹಿತದೃಷ್ಟಿಯಿಂದ ಅವರ ನಡೆ ಇತರರಿಗೆ ಮಾದರಿಯಾಗಬೇಕೆಂದು ನಾಗರಿಕ ಸಮಾಜ ಅಪೇಕ್ಷಿಸುವುದು ಸಹಜ. ಪ್ರಜಾಸತ್ತಾತ್ಮಕವಾಗಿ ರಚಿತವಾದ ಸರ್ಕಾರದ ನಿಲುವನ್ನು ಸಾರ್ವಜನಿಕವಾಗಿ ವಿರೋಧಿಸುವುದು, ಧಿಕ್ಕರಿಸುವುದಕ್ಕಿಂತಲೂ ಜವಾಬ್ದಾರಿಯುತ ನಾಗರಿಕರಾಗಿ ಗೌರವಿಸಿದ್ದರೆ, ಅವರ ಘನತೆ ಮತ್ತಷ್ಟು ಹೆಚ್ಚುತ್ತಿತ್ತು. 

⇒ಟಿ.ವಿ.ಬಿ. ರಾಜನ್, ಬೆಂಗಳೂರು 

ಬೇಲಿಯೇ ಎದ್ದು ಹೊಲ ಮೇಯ್ದರೆ...

ವಿಭಾಗಮಟ್ಟದ ಪಿಯು ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಜಿಲ್ಲಾಧಿಕಾರಿ ಜತೆ ತಂಡವೊಂದರ ಪರವಾಗಿ ಬಾಜಿಕಟ್ಟಿ ₹500 ಕಳೆದುಕೊಂಡಿರುವ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ. ಆಟವನ್ನು ಸವಿಯುವ ಹಾಗೂ ಮಕ್ಕಳಿಗೆ ಪ್ರೋತ್ಸಾಹ ನೀಡುವ ಭರದಲ್ಲಿ ಬಾಜಿಕಟ್ಟಿದ್ದನ್ನು ಗೃಹ ಸಚಿವರಾಗಿ ಬಹಿರಂಗವಾಗಿ ಹೇಳಿದ್ದು ಎಷ್ಟು ಸರಿ? ಜೂಜು ನಿಯಂತ್ರಿಸಬೇಕಾದ ಸಚಿವರೇ ಹೊಣೆಗಾರಿಕೆ ಮರೆತು ಹೀಗೆ ನಡೆದುಕೊಂಡಿರುವುದು ಸರಿಯಲ್ಲ. ಕ್ರಿಕೆಟ್ ಸೇರಿದಂತೆ, ಆನ್‌ಲೈನ್ ಗೇಮ್‌ನ ಬೆಟ್ಟಿಂಗ್ ದಂಧೆ ಬಗ್ಗೆ ಸಚಿವರಿಗೂ ಗೊತ್ತಿದೆ. ಹೀಗಿದ್ದರೂ ಸಾರ್ವಜನಿಕ ಪರಿಣಾಮ ಲೆಕ್ಕಿಸದೆ ಈ ರೀತಿಯ ನಡವಳಿಕೆ ತೋರುವುದು ವಿಷಾದನೀಯ.

ADVERTISEMENT

⇒ದೊಡ್ಡಿಶೇಖರ್, ಆನೇಕಲ್

ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಬೇಕು

ಸರ್ಕಾರವು ಸಂಘಟಿತ ವಲಯದ ಮಹಿಳೆಯರಿಗೆ ಮುಟ್ಟಿನ ರಜೆಯ ಹಕ್ಕು ನೀಡುತ್ತಿರುವುದು ಶ್ಲಾಘನೀಯ. ಮುಟ್ಟಿನ ರಜೆಯನ್ನು ಕಾಲೇಜು ವಿದ್ಯಾರ್ಥಿನಿಯರಿಗೂ ವಿಸ್ತರಿಸಿದರೆ ಅನುಕೂಲ. ವಿದ್ಯಾರ್ಥಿನಿಯರು ಋತುಚಕ್ರದ ದಿನಗಳಲ್ಲಿ ಓದಿನತ್ತ ನಿರಾಸಕ್ತಿ ತಾಳುತ್ತಾರೆ. ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ರಕ್ತಹೀನತೆಯಿಂದ ಬಳಲುತ್ತಿರುವ ವಿದ್ಯಾರ್ಥಿನಿಯರಂತೂ ಸಾಕಷ್ಟು ಯಾತನೆ ಅನುಭವಿಸುತ್ತಾರೆ. ಈಗಾಗಲೇ, ಕೇರಳ ಸರ್ಕಾರ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಘೋಷಿಸಿದೆ. ಕರ್ನಾಟಕ ಸರ್ಕಾರವೂ ಈ ಕುರಿತು ಸಕಾರಾತ್ಮಕ ಕ್ರಮ ಕೈಗೊಳ್ಳಬೇಕಿದೆ.

⇒ಲಿಖಿತ, ಅಜ್ಜಂಪುರ

ಜ್ಞಾನ ಅಂಚೆ: ಜಿಎಸ್‌ಟಿ ಕಡಿತಗೊಳಿಸಿ

ಕೇಂದ್ರ ಸರ್ಕಾರ ಇತ್ತೀಚೆಗೆ ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಪರಿಷ್ಕರಿಸಿದೆ. ಇದರಿಂದ ಜನಸಾಮಾನ್ಯರಿಗೆ ಅನುಕೂಲವೂ ಆಗಿದೆ. ಕಳೆದ ಮೇ ತಿಂಗಳಿನಲ್ಲಿ ‘ಜ್ಞಾನ ಅಂಚೆ’ ಸೇವೆ ಆರಂಭವಾಗಿತ್ತು. ವಿದ್ಯಾರ್ಥಿಗಳು, ಸ್ಪರ್ಧಾರ್ಥಿಗಳು ಹಾಗೂ ಸಾಹಿತ್ಯಾಸಕ್ತ ರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ಯೋಜನೆ ಇದು. ಜ್ಞಾನ ಅಂಚೆಯ ಜಿಎಸ್‌ಟಿ ಪ್ರಮಾಣ ಶೇ 18ರಷ್ಟಿತ್ತು. ಅದನ್ನು ಯಥಾವತ್ತಾಗಿ ಮುಂದುವರಿಸ ಲಾಗಿದೆ. ಇದು ನಿಜಕ್ಕೂ ಬೇಸರದ ಸಂಗತಿ.

ವಾಣಿಜ್ಯ ಉದ್ದೇಶದ ವಸ್ತುಗಳನ್ನು ಕಳುಹಿಸಲು ‘ಇಂಡಿಯಾ ಪೋಸ್ಟ್ ಪಾರ್ಸಲ್ ಸರ್ವೀಸ್’ ಹಾಗೂ ‘ಸ್ಪೀಡ್ ಪೋಸ್ಟ್’ ಸೇವೆಗಳಿವೆ. ಈ ಸೇವೆಗಳಿಗೂ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ವಾಣಿಜ್ಯ ಉದ್ದೇಶದ ವಸ್ತುಗಳು ಹಾಗೂ ಜ್ಞಾನ ಪ್ರಸಾರದ ಪುಸ್ತಕಗಳ ರವಾನೆಗೆ ಒಂದೇ ರೀತಿಯ ತೆರಿಗೆ ವಿಧಿಸುವುದು ಎಷ್ಟರಮಟ್ಟಿಗೆ ಸರಿ?

ಅಶೋಕ ಚಿಕ್ಕಪರಪ್ಪಾ, ಬೆಂಗಳೂರು

ಕಣ್ಮರೆಯಾಗುತ್ತಿವೆ ಸಾಮಾಜಿಕ ಮೌಲ್ಯಗಳು

ಸಾಮಾಜಿಕ ಮಾಧ್ಯಮವು ಸಾಮಾಜಿಕ ವಿಚಾರಗಳನ್ನು ಅರಿತುಕೊಳ್ಳುವು ದರಲ್ಲಿ ಹಿಂದೆ ಬಿದ್ದಿದೆ ಎಂದರೆ ಅತಿಶಯೋಕ್ತಿಯಲ್ಲ. ಸಮಾಜದಲ್ಲಿ ಯಾವುದೇ ಘಟನೆಗಳು ಜರುಗಿದರೂ ಸೂರ್ಯೋದಯಕ್ಕೂ ಮುಂಚೆಯೇ ಅದು ಜನಪ್ರಿಯತೆಯ ಪೋಷಾಕು ತೊಟ್ಟು ರಾರಾಜಿಸುತ್ತದೆ. ಜಾಲತಾಣಗಳ ನಿರ್ವಾಹಕರು, ಫಾಲೋವರ್ಸ್ ಮತ್ತು ನೋಡುಗರ ಎಣಿಕೆಯ ಗುಂಗಿನಲ್ಲಿ ತೇಲುತ್ತಾರೆ. ಆದರೆ, ಸಮಾಜದ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ವಿವೇಕ ಅವರಿಗೆ ಇರುವುದಿಲ್ಲ.

ಚಿಕ್ಕಮಕ್ಕಳಿಂದ ಹಿಡಿದು ಇಳಿ ವಯಸ್ಸಿನವರೂ ಸಾಮಾಜಿಕ ಮಾಧ್ಯಮ ನೋಡುತ್ತಾರೆ. ಹಾಗಾಗಿ, ಬಿತ್ತರಿಸುವ ವಿಷಯವು ಸಾಮಾಜಿಕ ಮೌಲ್ಯಗಳನ್ನುಎತ್ತಿ ಹಿಡಿಯುವಂತಿರಬೇಕು ಎನ್ನುವ ಸಾಮಾನ್ಯ ಪರಿಜ್ಞಾನವನ್ನು ನಿರ್ವಾಹಕರು ಬೆಳೆಸಿಕೊಳ್ಳಬೇಕು.  

 ಮಲ್ಲಿಕಾರ್ಜುನ್ ತೇಲಿ, ಜಮಖಂಡಿ

ರಸ್ತೆಯ ಗಂಡಾಗುಂಡಿ ಒಂದೆರಡಲ್ಲ...

ರಸ್ತೆಯ ಮೂಲ ಉದ್ದೇಶ ಸಂಚಾರ ಸಾರಿಗೆಯೇ ಹೊರತು ಶಕ್ತಿ
ಪ್ರದರ್ಶನವಲ್ಲ ಎಂಬ ಧ್ವನಿ ಬಲಗೊಳ್ಳುತ್ತಿದೆ. ಪ್ರಸ್ತುತ ರಸ್ತೆ ಬರೀ ರಸ್ತೆಯಾಗಿ ಉಳಿದಿಲ್ಲ. ನಾನಾ ಬಗೆಯ ಸಾಮಾಜಿಕ ನೆಮ್ಮದಿ ಕದಡುವ ಅಖಾಡವಾಗಿ, ಕಸ ಎಸೆದು ಪರಿಸರ ಮಾಲಿನ್ಯ ಉಂಟು ಮಾಡುವ ತಿಪ್ಪೆಯಾಗಿ, ಪಟಾಕಿ ಸಿಡಿಸಿ ವಾಯುಮಾಲಿನ್ಯ, ಶಬ್ದಮಾಲಿನ್ಯ ಉಂಟು ಮಾಡುವ ಮಾಲಿನ್ಯಕಾರಕ ತಾಣವಾಗಿ, ಧ್ವನಿವರ್ಧಕ ಹಾಕಿಕೊಂಡು ವ್ಯಾಪಾರಕ್ಕಿಳಿಯುವ ವ್ಯಾಪಾರಿಗಳಿಂದಾಗಿ ವಾಹನಗಳ ಅಪಘಾತಕ್ಕೂ ಕಾರಣವಾಗುವ ಅಪಘಾತ ವಲಯವಾಗಿ ಪರಿವರ್ತನೆ ಹೊಂದಿದೆ. ಆದ್ದರಿಂದ ಸರ್ಕಾರ ರಸ್ತೆ ಸುರಕ್ಷತೆಗೆ ಒತ್ತು ನೀಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು.

 ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.