ವಾಚಕರ ವಾಣಿ
ಹಳೇ ಮೈಸೂರು ಭಾಗದಲ್ಲಿ ಕಾನೂನು ಧಿಕ್ಕರಿಸಿ ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಈ ಅನಿಷ್ಟ ಪಿಡುಗಿನ ವಿರುದ್ಧ ಗಟ್ಟಿಧ್ವನಿಗಳು ಕೇಳಿಸುತ್ತಿಲ್ಲ. ಮತ್ತೊಂದೆಡೆ ಯುವಕರು ತಮಗೆ ಹೆಣ್ಣು ಸಿಗುತ್ತಿಲ್ಲವೆಂದು ದೇವರು, ಸರ್ಕಾರದ ಮೊರೆ ಹೋಗುವುದು ನಡೆದಿದೆ. ತಮ್ಮ ಮನೆಗಳಲ್ಲಿ ಹೆಣ್ಣುಮಕ್ಕಳು ಹುಟ್ಟಬಾರದು; ಯಾರಾದರೂ ಸಾಕಿ ಬೆಳೆಸಿದ ಹೆಣ್ಣನ್ನು ಇವರಿಗೆ ಧಾರೆ ಎರೆಯಬೇಕು ಎಂದರೆ ಹೇಗೆ? ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಹೆಣ್ಣುಕುಲಕ್ಕೆ ಮಾತ್ರವಲ್ಲ, ಮನುಕುಲಕ್ಕೂ ಅಪಾಯ ತಪ್ಪಿದ್ದಲ್ಲ.
⇒ಮಧುಸೂದನ್ ಬಿ.ಎಸ್., ಬೆಂಗಳೂರು
ಕಲಬುರಗಿ ಮತ್ತು ಬೆಂಗಳೂರು ನಡುವಿನ ರೈಲು ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವುದನ್ನು ಅಂಕಿಅಂಶಗಳೇ ಸಾಕ್ಷೀಕರಿಸುತ್ತವೆ. ಕಲಬುರಗಿಯಿಂದ 20 ಬೋಗಿಗಳ ಎರಡು ರೈಲು ಓಡಿಸಿದರೂ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿಲ್ಲ. ಆದರೆ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಇನ್ನೂ ಈ ಭಾಗದ ಪ್ರಯಾಣಿಕರ ಮೇಲೆ ಕರುಣೆ ಬಂದಂತಿಲ್ಲ. ಕೊನೆಯ ಪಕ್ಷ ದುಬಾರಿ ದರದ ಬೇಡಿಕೆಯ ರೈಲನ್ನಾದರೂ ಓಡಿಸಿ ಪ್ರಯಾಣಿಕರ ಬವಣೆ ನೀಗಿಸಲು ರೈಲ್ವೆ ಇಲಾಖೆ ಮುಂದಾಗಲಿ.
⇒ವೆಂಕಟೇಶ್ ಮುದಗಲ್, ಕಲಬುರಗಿ
ಆರೋಗ್ಯ ವಿಮೆ ಸೇರಿ ವಿವಿಧ ವೈದ್ಯಕೀಯ ವೆಚ್ಚದ ಮೇಲೆ ಶೇ 18ರವರೆಗೂ ಜಿಎಸ್‌ಟಿ ಹೇರಿದ್ದ ಕೇಂದ್ರ ಸರ್ಕಾರವು, ಎಂಟು ವರ್ಷಗಳ ಕಾಲ ವೃದ್ಧರು, ಪಿಂಚಣಿದಾರರು ಒಳಗೊಂಡಂತೆ ಎಲ್ಲರನ್ನೂ ಸುಲಿಗೆ ಮಾಡಿತ್ತು. ಇದೀಗ ಜಿಎಸ್‌ಟಿ ಇಳಿಕೆಯ ತನ್ನ ನಿರ್ಧಾರವನ್ನು ದೇಶಕ್ಕೆ ತಾನು ನೀಡಿರುವ ಉಡುಗೊರೆ ಎಂದು ಬಿಂಬಿಸಿಕೊಳ್ಳುತ್ತಿದೆ. ಈಗ ನನ್ನ ವಿಮಾ ಕಂಪನಿಯು ಆರೋಗ್ಯ ವಿಮೆಯ ಕನಿಷ್ಠ ಮಿತಿಯನ್ನು ಏರಿಸಿ, ಪ್ರೀಮಿಯಂ ಮೊತ್ತವನ್ನೇ ಹೆಚ್ಚಿಸಿದೆ. ಆ ಮೂಲಕ ಜಿಎಸ್‌ಟಿ ಉಳಿಕೆಯಿಂದ ಆಗುವ ಲಾಭವನ್ನು ಸಂಪೂರ್ಣವಾಗಿ ಕಸಿದುಕೊಳ್ಳುತ್ತಿದೆ. ಈ ಪರಿಯ ವೆಚ್ಚ ಭರಿಸಲಾರದೆ ನಾನು ಈ ಬಾರಿ ಆರೋಗ್ಯ ವಿಮೆಯನ್ನೇ ಕೈಬಿಟ್ಟಿದ್ದೇನೆ.
⇒ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
2031ರ ವೇಳೆಗೆ ರಾಜ್ಯದ ನಗರವಾಸಿಗಳ ಜನಸಂಖ್ಯೆ ಶೇ 47.8ರಷ್ಟಕ್ಕೆ ಮುಟ್ಟಲಿದೆಯೆಂದು ಅಂದಾಜಿಸಲಾಗಿದೆ. ಅಂದರೆ ನೂರಕ್ಕಿಂತ ಹೆಚ್ಚು ಶಾಸಕರು ನಗರ ಪ್ರದೇಶವನ್ನು ಪ್ರತಿನಿಧಿಸುತ್ತಾರೆ! ಆದರೆ, ಗ್ರಾಮೀಣ ಹಾಗೂ ನಗರ ಪ್ರದೇಶದ ಸಮಸ್ಯೆ, ಆದ್ಯತೆ ಭಿನ್ನವಾಗಿರುತ್ತವೆ. ಕುಡಿಯುವ ನೀರು, ವಿದ್ಯುತ್, ರಸ್ತೆ ಇತ್ಯಾದಿ ಮೂಲ ಸೌಕರ್ಯ ಒದಗಿಸಿ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ ಆಗಿದ್ದರೆ ನಗರ ಪ್ರದೇಶದವರನ್ನು ತೃಪ್ತಿಪಡಿಸಬಹುದು. ಆದರೆ, ಗ್ರಾಮೀಣ ಸಮಸ್ಯೆಗಳು ಸಂಕೀರ್ಣ. ಮೂಲ ಸೌಕರ್ಯ ಒದಗಿಸುವುದು ಕಷ್ಟದ ಕೆಲಸ. ಹಾಗಾಗಿ, ನಗರ ಪ್ರದೇಶದ ಜನಸಂಖ್ಯೆ ಹೆಚ್ಚಾಗುವುದರಿಂದ ಮುಂದಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳ ಕೆಲಸ ಸುಲಭವಾಗಲಿದೆ.
⇒ಟಿ. ಜಯರಾಂ, ಕೋಲಾರ
ಸುಮಾರು ಮೂವತ್ತು ಮಕ್ಕಳು ಪಟಾಕಿ ಸಿಡಿತದಿಂದಾದ ಕಣ್ಣಿನ ಗಾಯಕ್ಕೆ ಚಿಕಿತ್ಸೆಗೆ ದಾಖಲಾಗಿರುವ ವರದಿಯಾಗಿದೆ. ದೀಪಾವಳಿ ಸಮಯದಲ್ಲಿ ಪ್ರತಿವರ್ಷ ಅವಘಡಗಳು ಸಂಭವಿಸುತ್ತಿದ್ದರೂ ಜನ ಎಚ್ಚೆತ್ತುಕೊಳ್ಳುವ ಬದಲಿಗೆ ಪಟಾಕಿ ಸಿಡಿಸದಿದ್ದರೆ ಹಬ್ಬದ ಆಚರಣೆ ಅರ್ಥಪೂರ್ಣವಾಗುವುದಿಲ್ಲ ಎಂಬ ನಂಬಿಕೆಗೆ ಒಗ್ಗಿಹೋಗಿದ್ದಾರೆ. ಅವಘಡಕ್ಕೆ ತುತ್ತಾದ ಕಂದಮ್ಮಗಳು ಜೀವನಪೂರ್ತಿ ದೃಷ್ಟಿ ದೋಷದಿಂದ ಬಳಲಿ ಪೋಷಕರಿಗೆ ಭಾರವಾಗಿ ಅನುಭವಿಸುವ ವೇದನೆಯನ್ನು ಊಹಿಸಲಾಗದು. ಜನರ ಮನಃಸ್ಥಿತಿ ಇನ್ನಾದರೂ ಬದಲಾಗಬೇಕಿದೆ.
⇒ಶಾಂತಕುಮಾರ್, ಸರ್ಜಾಪುರ
ಪ್ರಸ್ತುತ ದೇಶದ ಇಎಸ್‌ಐಸಿ ವೈದ್ಯಕೀಯ ಕಾಲೇಜುಗಳಲ್ಲಿ ಇನ್ಷೂರ್ಡ್ ಪರ್ಸನ್ (ಐಪಿ) ಕೋಟಾ ಪ್ರಮಾಣ ಶೇ 35ರಷ್ಟಿದೆ. ಇಎಸ್ಐ ಯೋಜನೆಗೆ ದೇಶದಾದ್ಯಂತ ಲಕ್ಷಾಂತರ ಉದ್ಯೋಗಿಗಳು ಮತ್ತು ಅವರ ಕುಟುಂಬದ ಸದಸ್ಯರು ಒಳಗೊಂಡಿದ್ದಾರೆ. ಇಎಸ್ಐ ಯೋಜನೆಗೆ ಕಾರ್ಮಿಕರು ತಮ್ಮ ಮಾಸಿಕ ವೇತನದ ಒಂದು ಭಾಗ ಪಾವತಿಸುವ ಮೂಲಕ ನೇರವಾಗಿ ಕೊಡುಗೆ ನೀಡುತ್ತಾರೆ. ಆದ್ದರಿಂದ, ಅವರ ಮಕ್ಕಳಿಗೆ ವೈದ್ಯಕೀಯ ಶಿಕ್ಷಣದ ಹೆಚ್ಚಿನ ಅವಕಾಶ ಒದಗಿಸುವುದು ನ್ಯಾಯಯುತ ಹಾಗೂ ಸಾಮಾಜಿಕ ಸಮಾನತೆಯ ದೃಷ್ಟಿಯಿಂದ ಅತ್ಯಗತ್ಯ. ಪ್ರಸ್ತುತ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಮಿಕ ವರ್ಗದ ಮಕ್ಕಳ ಪ್ರಾತಿನಿಧಿತ್ವ ಅತ್ಯಲ್ಪ. ಹಾಲಿ ಇರುವ ಐಪಿ ಕೋಟಾವನ್ನು ಕನಿಷ್ಠ ಶೇ 45ಕ್ಕೆ ಹೆಚ್ಚಿಸುವುದು ನ್ಯಾಯಸಮ್ಮತ. ಇದು ಕಾರ್ಮಿಕ ಕುಟುಂಬಗಳ ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ನಾಂದಿಯಾಗಲಿದೆ. ವೈದ್ಯಕೀಯ ಶಿಕ್ಷಣದಲ್ಲಿ ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯದ ಆದರ್ಶವನ್ನೂ ಪಾಲಿಸಿದಂತಾಗುತ್ತದೆ.
⇒ವಿಜಯಕುಮಾರ್ ಎಚ್.ಕೆ., ರಾಯಚೂರು
ರಾಜ್ಯದ ಗೃಹಲಕ್ಷ್ಮಿಯರ
ಸಬಲೀಕರಣಕ್ಕಾಗಿ
ಸಹಕಾರ ಸಂಘ ರಚಿಸಲು
ಸರ್ಕಾರದ ಸಿದ್ಧತೆ:
ಇದು ಬಲಗೈಯಲ್ಲಿ ಕೊಟ್ಟು
ಎಡಗೈಯಲ್ಲಿ ವಾಪಾಸು
ಪಡೆಯೋ ತಂತ್ರವಾ
ಎಂಬುದೇ ‘ಲಕ್ಷ್ಮಿ’ಯರ ಚಿಂತೆ!
ಎಸ್. ಭಗವತಿ, ಗೊರೂರು