ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 2 ಡಿಸೆಂಬರ್ 2025, 23:30 IST
Last Updated 2 ಡಿಸೆಂಬರ್ 2025, 23:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಸಂಚಾರ ದಟ್ಟಣೆ: ಪರ್ಯಾಯ ಹುಡುಕಿ

ಬೆಂಗಳೂರಿನಲ್ಲಿ ದಿನೇ ದಿನೇ ವಾಹನಗಳ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪರ್ಯಾಯ ವ್ಯವಸ್ಥೆ ರೂಪಿಸುವುದು ಅನಿವಾರ್ಯವಾಗಿದೆ. ದೆಹಲಿಯಲ್ಲಿ ವಾಯುಮಾಲಿನ್ಯ ಏರುಗತಿ ಕಂಡಿದ್ದರಿಂದ ಸಮ–ಬೆಸ ಸಂಖ್ಯೆ ಆಧಾರದಲ್ಲಿ ವಾಹನಗಳ ಬಳಕೆಗೆ ಅವಕಾಶ ಕಲ್ಪಿಸಲಾಗಿತ್ತು. ಅದೇ ಮಾದರಿಯನ್ನು ಉದ್ಯಾನನಗರಿಗೂ ಪರಿಚಯಿಸುವುದು ಉತ್ತಮ. ಬೆಂಗಳೂರಿನ ಹಲವೆಡೆ ಮೆಟ್ರೊ ರೈಲು ಸಂಚಾರ ಇದೆ. ಆ ಭಾಗಗಳಲ್ಲಿ ಮೆಟ್ರೊ ಬಳಸುವಂತೆ ಜನರಿಗೆ ಅರಿವು ಮೂಡಿಸಬೇಕಿದೆ. ಇಲ್ಲವಾದಲ್ಲಿ ಸಂಚಾರ ದಟ್ಟಣೆಯ ನಿಯಂತ್ರಣ ಕಷ್ಟಕರವಾಗಲಿದೆ.

⇒ಹೊನ್ನೇಶ ಯಲಿಗಾರ, ಹಾವೇರಿ 

ADVERTISEMENT

ಯುವಜನರ ಬಗ್ಗೆ ಮಲತಾಯಿ ಧೋರಣೆ

ಕಳೆದ ಐದು ವರ್ಷಗಳಿಂದ ಸರ್ಕಾರದ ಉದ್ಯೋಗ ನೇಮಕಾತಿ ಪ್ರಕ್ರಿಯೆ ಕುಂಟುತ್ತಾ ಸಾಗಿದೆ. ಕೆಲವು ನೇಮಕಾತಿಗಳಿಗೆ ನ್ಯಾಯಾಲಯದ ತಡೆಯಾಜ್ಞೆ ಇದೆ. ಇದರಿಂದ ಯುವ ಸಮುದಾಯದ ಅಮೂಲ್ಯ ಸಮಯ ನಷ್ಟವಾಗುತ್ತಿದೆ. ವ್ಯವಸ್ಥೆಯ ಬಗ್ಗೆ ಋಣಾತ್ಮಕ ಭಾವನೆ ಮೂಡುತ್ತಿದೆ. ಎಲ್ಲದಕ್ಕೂ ಸರ್ಕಾರಿ ಕೆಲಸವೇ ಪರಿಹಾರ ಅಲ್ಲ, ನಿಜ. ಆದರೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡು
ವುದರಿಂದ ಆಡಳಿತ ಯಂತ್ರಕ್ಕೆ ಬಲ ಬರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳಿಗೆ ತಾಯಿಯ ಗುಣವಿರಬೇಕು. ಆದರೆ, ಯುವಜನರ ಬಗ್ಗೆ ಮಲತಾಯಿ ಧೋರಣೆ ತಳೆಯುವುದು ಸರಿಯಲ್ಲ. 

⇒ಅಶೋಕ ಗೌಡ, ಶಿರಸಿ

ಒಗ್ಗಟ್ಟು ಅರಿಯದಿದ್ದರೆ ಗೆಲುವು ಅಸಾಧ್ಯ

ವೀರಶೈವ ಆತ್ಮ, ಲಿಂಗಾಯತವೇ ದೇಹವಯ್ಯ. ಅನ್ನದಿಂದಾದ ದೇಹ ಬಿಟ್ಟರೆ ವೀರಶೈವಕ್ಕೆ ನೆಲೆ ಇಲ್ಲವಯ್ಯ. ಜೀವಾತ್ಮನು ಇಲ್ಲದಿರೆ ಲಿಂಗಾಯತಕೆ ಬೆಲೆ ಇಲ್ಲವಯ್ಯ. ದೇಹ–ಆತ್ಮಗಳೆರಡು ಕೂಡಿಕೊಂಡರೆ ಜಗವನ್ನೇ ಜಯಸಬಹುದಯ್ಯ. ಪರಸ್ಪರ ಇಬ್ಬರು ಸೇರದಿರೆ ಅವನತಿ ಖಚಿತವಯ್ಯ ಶರಣಬಸವ.

⇒ಹನುಮಂತ ಬಿ. ದಾಸರ, ತರಲಕಟ್ಟಿ 

ಸಂವಿಧಾನ ಜನರ ಬದುಕಿಗೆ ದಾರಿದೀಪ

‘ಭಗವದ್ಗೀತೆ ಮನೆಯಲ್ಲಿದ್ದರೆ ಸಮಾಲೋಚಕರೇ ಬೇಕಾಗಿಲ್ಲ. ಪ್ರತಿಯೊಬ್ಬರ ದ್ವಂದ್ವಗಳಿಗೆ ಪರಿಹಾರ ಇದರಲ್ಲಿದೆ. ಇಂದಿಗೂ ಶ್ರೀಕೃಷ್ಣ ಅತ್ಯುತ್ತಮ ಆಪ್ತ ಸಲಹೆಗಾರ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅವರು ಹೇಳಿರುವುದು (ಪ್ರ.ವಾ., ಡಿ. 2) ಉತ್ಪ್ರೇಕ್ಷೆ ಅನ್ನಿಸುತ್ತಿದೆ. ಸಮಾಜದ ಅಸಮಾನತೆಗೆ, ಬಡವರ ಸಂಕಷ್ಟಗಳಿಗೆ, ಹಣ, ಅಧಿಕಾರದ ದೌರ್ಜನ್ಯಗಳಿಗೆ ಭಗವದ್ಗೀತೆಯಲ್ಲೇ ಪರಿಹಾರ ಸಿಗುವುದಾದರೆ ಸಂವಿಧಾನ ಏಕೆ ಬೇಕಿತ್ತು? ಕೋರ್ಟು, ಕಚೇರಿಗಳು ಏಕಿರಬೇಕು? ಭಗವದ್ಗೀತೆ ವಿದ್ವಾಂಸರ ಅಧ್ಯಯನಕ್ಕಾಗಿ ಇರಲಿ. ಜನಸಾಮಾನ್ಯರಿಗೆ ಬೇಕಾದ ಹೆಚ್ಚಿನ ತಿಳಿವಳಿಕೆಗಾಗಿ ಸಂವಿಧಾನವನ್ನು ಸಂಕ್ಷಿಪ್ತಗೊಳಿಸಿ ಕಿರುಪುಸ್ತಕಗಳನ್ನು ರಚಿಸಿ ವಿತರಿಸುವ ಮೂಲಕ, ಸರ್ಕಾರ ಮತ್ತು ಸಂಘ–ಸಂಸ್ಥೆಗಳು ನೊಂದವರ ನೆರವಿಗೆ ಧಾವಿಸುವಂತಾಗಲಿ.

⇒ತಾ.ಸಿ. ತಿಮ್ಮಯ್ಯ, ಬೆಂಗಳೂರು

ಜನಪ್ರತಿನಿಧಿಗಳು ‘ವಚನ’ ತಪ್ಪಬಾರದು

ನಾವಾಡುವ ಮಾತು ಮನಸ್ಸನ್ನು ಅರಳಿಸಬೇಕು. ಜೊತೆಗೆ, ಆತ್ಮೋನ್ನತಿಗೆ ಕಾರಣವಾಗಬೇಕು. ವಂಚನೆ ತುಂಬಿದ ಮಾತು ಜೀವನವನ್ನು ನರಕವಾಗಿಸುತ್ತದೆ. ಹಾಗಾಗಿಯೇ, ಅಲ್ಲಮಪ್ರಭು ‘ಮಾತೆಂಬುದು ಜ್ಯೋತಿರ್ಲಿಂಗ’ ಎಂದಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರ ನಡುವೆ ಮುಖ್ಯಮಂತ್ರಿ ಗದ್ದುಗೆಗೆ ಸಂಬಂಧಿಸಿದಂತೆ ಏನು ಮಾತುಕತೆ ನಡೆದಿದೆಯೋ ಯಾರಿಗೆ ಗೊತ್ತು? ಆದರೆ, ಅಧಿಕಾರದ ಗದ್ದುಗೆ ಏರುವ ಮುನ್ನ ಈ ನಾಡಿನ ರೈತರಿಗೆ, ಮಹಿಳೆಯರಿಗೆ, ಯುವಕರಿಗೆ ಕೊಟ್ಟ ಭರವಸೆಯ ಮಾತುಗಳನ್ನು ಮರೆಯಬಾರದು.

⇒ಸಿದ್ದು ಪೂಜಾರಿ, ಬೆಂಗಳೂರು

ಕಾರ್ಖಾನೆಗಳ ದೂಳು, ಜನರಿಗೆ ಗೋಳು

ಕೊಪ್ಪಳ ಸಮೀಪದ ಗಿಣಿಗೇರಿ, ಕನಕಾಪುರ, ಬಸಾಪುರ, ಅಲ್ಲಾನಗರ, ಬೇವಿನಹಳ್ಳಿ, ಹಿರೇಬಗನಾಳ, ಕಾಸನಕಂಡಿ, ಚಿಕ್ಕಬಗನಾಳ, ಲಾಚನಕೇರಿ, ಮುಂತಾದ ಗ್ರಾಮಗಳ ಪರಿಸರವು ಕಾರ್ಖಾನೆಗಳ ಹೊಗೆ, ದೂಳು, ಹಾರುಬೂದಿಯಿಂದ ಹದಗೆಟ್ಟಿದೆ. ಜನರು ಅಸ್ತಮಾ, ಕ್ಷಯ, ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. 20ಕ್ಕೂ ಹೆಚ್ಚು ಹಳ್ಳಿಗಳ ಎರಡು ಲಕ್ಷಕ್ಕೂ ಹೆಚ್ಚು ಜನರ ಆರೋಗ್ಯ ಹದಗೆಡುತ್ತಿದೆ. ಇಡೀ ಪರಿಸರ ನಾಶದತ್ತ ಹೆಜ್ಜೆ ಹಾಕುತ್ತಿದೆ. ಈಗಲಾದರೂ ಸರ್ಕಾರ ಕಣ್ಣು ತೆರೆದು ಇಲ್ಲಿನ ಅವ್ಯವಸ್ಥೆಗೆ ಅವರು ಪರಿಹಾರ ಹುಡುಕುವುದೆ?

⇒ಅಲ್ಲಮಪ್ರಭು ಬೆಟ್ಟದೂರು, ಕೊಪ್ಪಳ 

ಸಂಸತ್ ಸದಸ್ಯರು ಹೊಣೆ ಮರೆಯದಿರಲಿ

ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಜೊತೆಗೆ, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ಜವಾಬ್ದಾರಿಯೂ ಹೆಚ್ಚಾಗಿದೆ. ಜನರ ತೆರಿಗೆ ಹಣವನ್ನು ವ್ಯರ್ಥ ಮಾಡದೆ ಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂಬುದು ಮತದಾರರ ನಿರೀಕ್ಷೆ. ಪ್ರತಿ ನಿಮಿಷದ ಸಂಸದೀಯ ಸಮಯವನ್ನು ರಾಷ್ಟ್ರೀಯ ಸಂಪತ್ತು ಎಂದು ಪರಿಗಣಿಸಬೇಕಿದೆ. ಪ್ರತಿ ಮಸೂದೆ ಬಗ್ಗೆ ಆಳವಾದ ಅಧ್ಯಯನ ನಡೆಸಿ, ರಚನಾತ್ಮಕ ಟೀಕೆ–ಟಿಪ್ಪಣಿಗಳೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿದೆ.

⇒ಎಸ್.ಎನ್. ಭಟ್ ಸೈಪಂಗಲ್ಲು, ಕಾಸರಗೋಡು

ಮಂತ್ರ–ತಂತ್ರ

ಕುರ್ಚಿ ಗದ್ದಲದ ಮಧ್ಯೆ

ಬ್ರೇಕ್‌ಫಾಸ್ಟ್ ನೆಪದಲ್ಲಿ

ಒಗ್ಗಟ್ಟಿನ ಮಂತ್ರ:

ಸದನ ಮುಗಿದ ಬಳಿಕ

ಮತ್ತೆ ಗರಿಗೆದರಲಿದೆ

ರಾಜಕೀಯದ ತಂತ್ರ!

 ಆರ್. ನಾಗರಾಜ್, ಗೊರೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.