ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 23:30 IST
Last Updated 5 ಜೂನ್ 2025, 23:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಕೆರೆಯಲ್ಲಿ ತೇಲುವ ಸೌರ ಘಟಕ: ಮಾದರಿ ಯೋಜನೆ

ಕೋಲಾರ ತಾಲ್ಲೂಕಿನ ಸುಗಟೂರು ಹೋಬಳಿಯ ಸೋಮಾಂಬುಧಿ ಅಗ್ರಹಾರ ಕೆರೆ ನೀರಿನ ಮೇಲೆ ಸೌರಫಲಕ ಅಳವಡಿಸಿ ವಿದ್ಯುತ್‌ ಉತ್ಪಾದಿಸುವ ಪ್ರಾಯೋಗಿಕ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ (ಪ್ರ.ವಾ., ಜೂನ್‌ 5). ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ. ಜೊತೆಗೆ, ಇಂತಹ ಯೋಜನೆಗಳು ಕೆರೆಗಳ ಸಮಗ್ರ ಅಭಿವೃದ್ಧಿಗೂ ಸಹಕಾರಿ.

ADVERTISEMENT

ಗ್ರಾಮೀಣರ ಬದುಕನ್ನು ಹಸನುಗೊಳಿಸುವ ಈ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸುವುದು ಉತ್ತಮ. ಇದರಿಂದ ಹಲವು ಪ್ರಯೋಜನಗಳಿವೆ. ಮೊದಲಿಗೆ ಸೌರ ವಿದ್ಯುತ್ ಉತ್ಪಾದನೆಗೆ ಫಲವತ್ತಾದ ಕೃಷಿ ಭೂಮಿಯ ಬಳಕೆ ತಪ್ಪಲಿದೆ. 

ಕೆರೆಗಳಲ್ಲಿ ಸಂಗ್ರಹಗೊಂಡ ನೀರು ಸೌರಫಲಕ ಅಳವಡಿಕೆಯಿಂದ ಆವಿಯಾಗುವುದು ಕಡಿಮೆಯಾಗಲಿದೆ. ಒಂದು ಹೆಕ್ಟೇರ್‌ನಲ್ಲಿ ವಾರ್ಷಿಕ ಎರಡು ಕೋಟಿ ಲೀಟರ್ ನೀರು ಸಂಗ್ರಹವಾಗಲಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲ ಆಗಲಿದೆ. ಇದರಿಂದ ಅಂತರ್ಜಲ ಮಟ್ಟವೂ ಹೆಚ್ಚಲಿದೆ. ಸೌರ ವಿದ್ಯುತ್ ಉತ್ಪಾದನೆಯಿಂದ ಪರಿಸರ ಮಾಲಿನ್ಯ ಕಡಿಮೆಯಾಗಲಿದೆ. ಜೊತೆಗೆ, ಹಳ್ಳಿಗಳಲ್ಲಿ ದಿನದ 24 ತಾಸೂ ವಿದ್ಯುತ್ ದೊರೆಯಲಿದೆ. ಕೆರೆಯಲ್ಲಿ ದೀರ್ಘಕಾಲ ನೀರು ನಿಲ್ಲುವುದರಿಂದ ಒಳನಾಡು ಮೀನುಗಾರಿಕೆಯೂ ಬಲವರ್ಧನೆಯಾಗಲಿದೆ. 

-ಎಚ್.ಆರ್‌. ಪ್ರಕಾಶ್‌, ಕೆ.ಬಿ. ದೊಡ್ಡಿ, ಮಂಡ್ಯ

**

ಹೆಚ್ಚುವರಿ ಶಿಕ್ಷಕರು: ಮಾನದಂಡ ಬದಲಾಗಲಿ 

ಪ್ರಸ್ತುತ ರಾಜ್ಯ ಸರ್ಕಾರವು ಸರ್ಕಾರಿ ಶಾಲೆಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಆರಂಭಿಸಿದೆ. ಶಿಕ್ಷಕರ ವರ್ಗಾವಣೆಗೂ ಮೊದಲು ಆಯಾ ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ, ಅಗತ್ಯ ಇರುವ ಶಾಲೆಗಳಿಗೆ ಅಂತಹ ಶಿಕ್ಷಕರನ್ನು ಮರು ಹೊಂದಾಣಿಕೆ ಮಾಡುವ ಪ್ರಕ್ರಿಯೆಯನ್ನು, ವರ್ಗಾವಣೆಗೂ ಮೊದಲು ಪ್ರತಿವರ್ಷ ಸರ್ಕಾರ ಮಾಡುತ್ತಾ ಬಂದಿದೆ.

ಶಾಲೆಯಲ್ಲಿರುವ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವಾಗ ಆಯಾ ಶಾಲೆಯಲ್ಲಿ ಕಳೆದ ವರ್ಷದ ಡಿಸೆಂಬರ್ ಅಂತ್ಯಕ್ಕೆ ಇದ್ದ ಮಕ್ಕಳ ದಾಖಲಾತಿಯನ್ನು ಮಾನದಂಡವನ್ನಾಗಿ ಇಟ್ಟುಕೊಂಡಿದೆ. ಅದರಂತೆ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ (1ರಿಂದ 5ನೇ ತರಗತಿ) 11ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಇಬ್ಬರು ಶಿಕ್ಷಕರು, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ (6ರಿಂದ 7ನೇ ತರಗತಿ) 11ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಇಬ್ಬರು ಶಿಕ್ಷಕರು, ಒಂದು ವೇಳೆ ಮಕ್ಕಳ ಸಂಖ್ಯೆ 11ಕ್ಕಿಂತ ಕಡಿಮೆ ಇದ್ದರೆ ಒಬ್ಬರೇ ಶಿಕ್ಷಕರು ಎಂಬ ನಿಯಮ ರೂಪಿಸಲಾಗಿದೆ.

ಆದರೆ, ಈ ತಿಂಗಳಲ್ಲಿ ನಡೆಯುವ ದಾಖಲಾತಿ ಸಮಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ. ಹಾಗಾಗಿ, ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆಗೆ ಕಳೆದ ವರ್ಷದ ಮಕ್ಕಳ ದಾಖಲಾತಿಯನ್ನು ಕೈಬಿಟ್ಟು ಜೂನ್ ತಿಂಗಳ ಮಕ್ಕಳ ದಾಖಲಾತಿಯನ್ನು ಮಾನದಂಡವಾಗಿ ಪರಿಗಣಿಸಬೇಕಿದೆ. ಅದರಂತೆ ಸರ್ಕಾರವು ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿದರೆ ರಾಜ್ಯದ ವಿವಿಧೆಡೆ ಸರ್ಕಾರಿ ಶಾಲೆಗಳಲ್ಲಿರುವ ಸಾವಿರಾರು ಶಿಕ್ಷಕರು ಹೆಚ್ಚುವರಿ ಪ್ರಕ್ರಿಯೆಯಿಂದ ದೂರ ಉಳಿದು ಆಯಾ ಶಾಲೆಯಲ್ಲಿಯೇ ಕರ್ತವ್ಯ ನಿರ್ವಹಿಸಲು ಸಹಕಾರಿಯಾಗಲಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವ ಮಾನದಂಡದಲ್ಲಿ ಬದಲಾವಣೆ ಮಾಡಬೇಕಿದೆ.  

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

**

ಸರ್ಕಾರದ ಹೊಣೆಯೂ ಹೌದು, ಜನರ ಹೊಣೆಯೂ ಹೌದು

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಸಂಪೂರ್ಣ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂಬ ಆಗ್ರಹವು ನೈತಿಕವಾಗಿ ಸರಿ; ವ್ಯಾವಹಾರಿಕವಾಗಿ ಅಲ್ಲ! ಇಂತಹ ಅವಘಡಗಳು ಬೆಂಗಳೂರಿನಂತಹ ನಾಗರಿಕ ಪರಿಸರಕ್ಕೆ ಹೊಸತೇನೂ ಅಲ್ಲ. ಆದರೆ, ದೇಶದ ಅನೇಕ ಪರ್ಯಟನಾ ಸ್ಥಳಗಳಲ್ಲಿ ಇಂತಹ ಬರ್ಬರ ಘಟನೆಗಳು ಸರ್ವೇಸಾಮಾನ್ಯ ಎಂಬಂತೆ ನಡೆಯುತ್ತಿವೆ. ಜನರು ನಶೆಯೇರಿದ ಕಾಡುಪ್ರಾಣಿಗಳಂತೆ ವರ್ತಿಸಿದರೆ, ಅಂತಹ ಸಮೂಹವನ್ನು ಯಾವುದೇ ಸರ್ಕಾರ ಪಾರು ಮಾಡಲು ಸಾಧ್ಯವಿಲ್ಲ.

ಧರ್ಮ, ದೈವಭಕ್ತಿ, ಕ್ರಿಕೆಟ್‌, ಪರ್ಯಟನಾದಿ ಹವ್ಯಾಸ, ಜೀವಭಯ, ತಕ್ಷಣದ ತರ್ಕಕ್ಕೆ ಸಿಗದ ನಂಬಿಕೆ- ಆಚರಣೆಗಳಂತಹವು ಅವರವರ ಸ್ವಂತದ ಚಿಂತನಾ ಮಿತಿಯಲ್ಲಿ ಇರುವವರೆಗೆ ಯಾವುದೂ ನಶೆಯಲ್ಲ. ಆದರೆ, ನಮ್ಮಲ್ಲಿ ಸಹಜ ಹಸಿವೆ, ದಾಹ, ಮೈಥುನವನ್ನೂ ನಶೆಯಾಗಿಸುವ ಪ್ರತ್ಯೇಕವಾದದೊಂದು ಉದ್ಯಮ ಸಮೂಹವೇ ಗುಪ್ತವಾದ ಹೆಮ್ಮರವಾಗಿ ಹರಡಿ ನಿಂತಿರುವುದು ನಮಗೆ ಮನದಟ್ಟಾಗುತ್ತಿಲ್ಲ.

ಆದರೆ, ಈ ಹೆಮ್ಮರದ ಒಳಭೂತ ಜನರನ್ನು ಅಜ್ಞಾನದಲ್ಲೇ ಇಟ್ಟಿರುತ್ತದೆ. ಸರ್ಕಾರ ಎನ್ನುವುದು ನಾಗರಿಕವಾದಾಗ ಮಾತ್ರ ಪರಿಹಾರ ಸಾಧ್ಯವಾಗಬಹುದು.  

-ಆರ್.ಕೆ. ದಿವಾಕರ, ಬೆಂಗಳೂರು

**

ಮೊಟ್ಟೆ ನೀಡುವುದು ಒಳ್ಳೆಯ ನಿರ್ಧಾರ

ಇಂದಿರಾ ಕ್ಯಾಂಟೀನ್‌ಗಳಲ್ಲಿ ಸದ್ಯ ಮೊಟ್ಟೆ ಪೂರೈಸುವ ಪ್ರಸ್ತಾವ ಸರ್ಕಾರದ ಮುಂದಿದೆ (ಪ್ರ.ವಾ., ಜೂನ್ 5) ಎಂದು ಪೌರಾಡಳಿತ ಸಚಿವರು ಹೇಳಿರುವುದು ವರದಿಯಾಗಿದೆ. ಸರ್ಕಾರದ ಈ ನಿರ್ಧಾರ ಉತ್ತಮವಾದುದು. ಆದರೆ, ಬೆಂಗಳೂರಿನ ತೀರಾ ಹಿಂದುಳಿದ ಪ್ರದೇಶಗಳಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಸಚಿವರು ಮತ್ತು ಅಧಿಕಾರಿಗಳು ಗೋಪ್ಯವಾಗಿ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಮತ್ತು ಆಹಾರದ ಗುಣಮಟ್ಟವನ್ನು ಪರಿಶೀಲಿಸಬೇಕಿದೆ. 

ಈ ಕ್ಯಾಂಟೀನ್‌ಗಳಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಇವುಗಳನ್ನೇ ನಂಬಿರುವ ಶ್ರಮಿಕ ವರ್ಗ ತೊಂದರೆಗೆ ಸಿಲುಕಿದೆ. ಗುಣಮಟ್ಟದ ಆಹಾರ ಪೂರೈಕೆ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ. 

-ಸಂಜೀವ ಆಲದಿ, ಬೆಂಗಳೂರು

**

ಕ(ತ)ಪ್ಪೂ... ನಮ್ದೆ!

ನನಸಾಯಿತು

ಈ ಸಲ ಕಪ್ ನಮ್ದೆ!

ಎಂಬ ಆರ್‌ಸಿಬಿ

ಅಭಿಮಾನಿಗಳ ಕನಸು,

ಅತಿಯಾದರೆ,

ಅಮೃತವೂ ವಿಷವಾದೀತು

ಎಂಬುದನ್ನು ಅರಿಯಬೇಕಿದೆ

ಹುಚ್ಚು ಮನಸು! 

-ಮ.ಗು. ಬಸವಣ್ಣ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.