ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 23:30 IST
Last Updated 6 ಜೂನ್ 2025, 23:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಕೆಎಟಿ ತೀರ್ಪು: ಉದ್ಯೋಗಾಕಾಂಕ್ಷಿಗಳಿಗೆ ಸಂಕಷ್ಟ

ಸರ್ಕಾರಿ ನೇಮಕಾತಿಗಳಲ್ಲಿ ಮೀಸಲು ಪ್ರಮಾಣವನ್ನು ಶೇ 50ರಿಂದ ಶೇ 56ಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶದ ಆಧಾರದ ಮೇಲೆ ಕರ್ನಾಟಕ ಲೋಕಸೇವಾ ಆಯೋಗವು 2024ರ ಫೆಬ್ರುವರಿ 26ರಂದು ಹೊರಡಿಸಿದ್ದ 384 ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳ ನೇಮಕ ಅಧಿಸೂಚನೆಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ರದ್ದುಪಡಿಸಿದೆ.

ADVERTISEMENT

2022ರ ಡಿಸೆಂಬರ್ 12ರಂದು ಸರ್ಕಾರ ಮೀಸಲು ಹೆಚ್ಚಳಕ್ಕೆ ಹೊರಡಿಸಿದ್ದ ಆದೇಶವನ್ನೂ ರದ್ದುಪಡಿಸಿದೆ. ಈ ತೀರ್ಪು ಅಭ್ಯರ್ಥಿಗಳ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿದೆ. 2022ರಿಂದ ಪರೀಕ್ಷೆ ಬರೆದು ನೇಮಕಗೊಂಡಿರುವ ಹಾಗೂ ಕೆಎಎಸ್ ಹಾಗೂ ಇತರೆ ಹಲವು ನೇಮಕಾತಿಗಳ ಅಂತಿಮ ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿ ಇರುವ ಪದವೀಧರರು ಅಡಕತ್ತರಿಗೆ ಸಿಲುಕುವಂತಾಗಿದೆ. ಕೂಡಲೇ, ಸರ್ಕಾರವು ಮಧ್ಯಪ್ರವೇಶಿಸಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಉದ್ಯೋಗ ಆಕಾಂಕ್ಷಿಗಳ ಹಿತ ಕಾಪಾಡಬೇಕಿದೆ. 

–ಎಸ್.ಎನ್. ರಮೇಶ್, ಸಾತನೂರು, ಮಂಡ್ಯ

**

ತಾಂತ್ರಿಕ ಸಮಸ್ಯೆ ಪರಿಹರಿಸಬೇಕಿದೆ

ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಚಿಲ್ಲರೆ ಸಮಸ್ಯೆ ಪರಿಹರಿಸಲು ಯುಪಿಐ ಆಧಾರಿತ ಹಣ ಪಾವತಿಗೆ ಅವಕಾಶ ಕಲ್ಪಿಸಿರುವುದು ಒಳ್ಳೆಯ ನಿರ್ಧಾರ. ಆದರೆ, ಕೆಲವೊಮ್ಮೆ ಫೋನ್ ಪೇ ಮೂಲಕ ಹಣ ಪಾವತಿಸಿದಾಗ ನಮ್ಮ ಮೊಬೈಲ್‌ ಫೋನ್‌ನಲ್ಲಿ ಕ್ರೆಡಿಟ್ ಆಗಿರುವುದಾಗಿ ತೋರಿಸುತ್ತದೆ. ಆದರೆ, ನಿರ್ವಾಹಕರ ಟಿಕೆಟ್ ಮಷಿನ್‌ನಲ್ಲಿ‌ ಟಿಕೆಟ್ ಜನರೇಟ್ ಆಗದೆ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಟಿಕೆಟ್ ಜನರೇಟ್ ಆಗದಿದ್ದರೆ ನಿರ್ವಾಹಕರಿಗೂ ತೊಂದರೆಯಾಗಲಿದೆ. ಹಣ ಕಡಿತವಾಗಿರುವುದರಿಂದ ಮತ್ತೆ ಹಣ ಪಾವತಿಗೆ ಪ‍್ರಯಾಣಿಕರಿಗೂ ತೊಂದರೆಯಾಗಲಿದೆ. ಆಗ ಪ್ರಯಾಣಿಕರು ನಿರ್ವಾಹಕರೊಟ್ಟಿಗೆ ಜಗಳಕ್ಕಿಳಿಯುವುದು ಸಾಮಾನ್ಯವಾಗಿದೆ.

ಇಂಟರ್‌ನೆಟ್‌ ಸಮಸ್ಯೆಯಿಂದ ಕೆಲವೊಮ್ಮೆ ಇಂತಹ ಸಮಸ್ಯೆಯಾಗುತ್ತದೆ. ಮತ್ತೊಂದೆಡೆ ಕಡಿತವಾದ ಹಣವು ಪ್ರಯಾಣಿಕರ ಬ್ಯಾಂಕ್‌ ಖಾತೆಗೆ ಮರಳುವುದು ವಿಳಂಬವಾಗುತ್ತಿದೆ. ಈ ತಾಂತ್ರಿಕ ಸಮಸ್ಯೆ ಬಗೆಹರಿಸಲು ಸರ್ಕಾರ ಗಮನಹರಿಸಬೇಕಿದೆ.

–ಮಂಜುನಾಥ್‌ ಬಿ., ಹೊಳೆಹೊನ್ನೂರು

**

ರೈತರ ಜೀವ ಉಳಿಸಿ 

ಕರ್ನಾಟಕದಲ್ಲಿ 2023ರ ಏಪ್ರಿಲ್‌ನಿಂದ 2024ರ ಮಾರ್ಚ್‌ವರೆಗೆ ಒಟ್ಟು 983 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಈ ಪೈಕಿ 828 ರೈತರು ಆರ್ಥಿಕ ಸಂಕಷ್ಟ ಮತ್ತು ಕೃಷಿ ವೈಫಲ್ಯಕ್ಕೆ ಜೀವ ಕಳೆದುಕೊಂಡಿದ್ದಾರೆ. ಬೆಳಗಾವಿ, ಹಾವೇರಿ, ವಿಜಯಪುರ ಮತ್ತು ಮಂಡ್ಯ ಜಿಲ್ಲೆಯಲ್ಲಿ ಅತಿಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.

ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಕೃಷಿ ಕ್ಷೇತ್ರದ ಸುಧಾರಣೆಯತ್ತ ಸರ್ಕಾರಗಳು ಗಮನಹರಿಸಬೇಕು ಎಂಬುದರತ್ತ ಬೊಟ್ಟು ಮಾಡುತ್ತದೆ. 

ರಾಜ್ಯದಲ್ಲಿ ರೈತರು ಕೂಡ ಒಂದೇ ರೀತಿಯ ಬೆಳೆ ಪದ್ಧತಿಗೆ ಮಾರುಹೋಗಿದ್ದಾರೆ. ಹವಾಮಾನ ವೈಪರೀತ್ಯವು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಬ್ಯಾಂಕ್‌ಗಳಿಂದ ರೈತರಿಗೆ ಸಕಾಲದಲ್ಲಿ ಕಡಿಮೆ ಬಡ್ಡಿದರಕ್ಕೆ ಕೃಷಿ ಸಾಲ ದೊರೆಯುತ್ತಿಲ್ಲ. ಹಾಗಾಗಿ, ಅವರು ಖಾಸಗಿ ಲೇವಾದೇವಿದಾರರ ಸಾಲದ ಶೂಲಕ್ಕೆ ಸಿಲುಕುವಂತಾಗಿದೆ. ಮತ್ತೊಂದೆಡೆ ಕೃಷಿ ಇಲಾಖೆಯು ಅನ್ನದಾತರಿಗೆ ಕೃಷಿ ಪೂರಕ ಸೇವೆ ಒದಗಿಸುವಲ್ಲಿ ವಿಫಲವಾಗಿದೆ.

ಸರ್ಕಾರವೂ ರೈತರ ಆತ್ಮಹತ್ಯೆ ತಗ್ಗಿಸುವ ದಿಸೆಯಲ್ಲಿ ಪ್ರತಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ಮತ್ತು ಆಪ್ತ ಸಮಾಲೋಚನಾ ಕೇಂದ್ರ ಸ್ಥಾಪಿಸಬೇಕು. ರೈತರು ಮತ್ತು ಅವರ ಕುಟುಂಬಗಳಿಗೆ ನೆರವಾಗಲು ಸಹಾಯವಾಣಿ ವ್ಯವಸ್ಥೆ ಕಲ್ಪಿಸಬೇಕು. ಕಡಿಮೆ ಬಡ್ಡಿದರದಲ್ಲಿ ಅಲ್ಪಾವಧಿ ಕೃಷಿ ಸಾಲ ಸೌಲಭ್ಯ ಕಲ್ಪಿಸಲು ಮುಂದಾಗಬೇಕು. ಖಾಸಗಿ ಲೇವಾದೇವಿದಾರರು ವಿಧಿಸುವ ಅಧಿಕ ಬಡ್ಡಿದರಕ್ಕೆ ಅಂಕುಶ ಹಾಕಬೇಕು. ಬೆಳೆ ವಿಮಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಆಗಷ್ಟೇ ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಗ್ಗಿಸಲು ಸಾಧ್ಯ.

–ವಿಜಯಕುಮಾರ್ ಎಚ್.ಕೆ., ರಾಯಚೂರು

**

ವೈಫಲ್ಯ ಮುಚ್ಚಿಕೊಳ್ಳಲು ಅಮಾನತು ಕ್ರಮ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಬೆಂಗಳೂರು ಪೊಲೀಸ್‌ ಕಮಿಷನರ್‌ ಬಿ. ದಯಾನಂದ ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ. ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕೈಗೊಂಡಿರುವ ಕ್ರಮ ಇದಾಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಸಂಭ್ರಮಾಚರಣೆಗೆ ಒಲವು ತೋರಿದ್ದು ಯಾರು ಎಂಬ ಸಂಗತಿ ಇನ್ನೂ ಬಯಲಾಗಿಲ್ಲ. ಘಟನೆ ನಡೆದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಇಲಾಖೆಯ ವೈಫಲ್ಯವನ್ನು ನಿರಾಕರಿಸಿದ್ದರು. ಈಗ ಹಿರಿಯ ಪೊಲೀಸ್‌ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿರುವುದು ಅಚ್ಚರಿ ತಂದಿದೆ. ಘಟನೆಯ ಹಿಂದೆ ಗೃಹ ಇಲಾಖೆಯ ವೈಫಲ್ಯವೂ ಇದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಖುದ್ದಾಗಿ ನಿಂತು ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಕಮಿಷನರ್‌ ಅವರೊಬ್ಬರನ್ನೇ ಹೊಣೆ ಮಾಡುವುದು ಎಷ್ಟು ಸರಿ?

–ಪ್ರಕಾಶ್ ಮಲ್ಕಿ ಒಡೆಯರ್, ಹೂವಿನಹಡಗಲಿ 

**

ಪರಮಾಧಿಕಾರ!

ತಾವು ಎಸಗಿದ ತಪ್ಪಿಗೆ

ಪರರನ್ನು ಶಿಕ್ಷಿಸುವ

ಪರಮಾಧಿಕಾರ ಇರುತ್ತದೆ

ಪ್ರಜಾಪ್ರಭುತ್ವದಲ್ಲಿ

ಆಳುವವರಿಗೆ!

–ಎಚ್. ಆನಂದರಾಮಶಾಸ್ತ್ರೀ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.