ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಪತ್ರಗಳು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 22:21 IST
Last Updated 12 ಅಕ್ಟೋಬರ್ 2025, 22:21 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ವಿ.ವಿ ಅಸಡ್ಡೆ: ವಿದ್ಯಾರ್ಥಿಗಳಿಗೆ ಪೇಚಾಟ

ಕಳೆದ ಕೆಲವು ವರ್ಷಗಳಿಂದ ಎಂಜಿನಿಯರಿಂಗ್‌ನ ವಾಸ್ತುಶಿಲ್ಪಶಾಸ್ತ್ರ ವಿಷಯದ ಪರೀಕ್ಷೆಗಳು ಸರಿಯಾಗಿ ನಡೆಯುತ್ತಿಲ್ಲ ಮತ್ತು ಸಕಾಲದಲ್ಲಿ ಫಲಿತಾಂಶವೂ ಪ್ರಕಟವಾಗುತ್ತಿಲ್ಲ. ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಯುವಿಸಿಇ ಜವಾಬ್ದಾರಿ ಇಲ್ಲದೆ ವರ್ತಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳು ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಕಾಲೇಜಿಗೆ ಅಲೆದಾಡುತ್ತಿದ್ದಾರೆ. ಅವರಿಗೆ ಉದ್ಯೋಗದ ಮತ್ತು ಉನ್ನತ ಶಿಕ್ಷಣದ ಅವಕಾಶಗಳು ಕೈತಪ್ಪುವ ಆತಂಕವಿದೆ. ಜೊತೆಗೆ, ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶವೂ ಇಲ್ಲದಂತಾಗಿದೆ.

ADVERTISEMENT

-ವಿಜಯಲಕ್ಷ್ಮಿ, ಬೆಂಗಳೂರು

ಮಾನವೀಯ ಮೌಲ್ಯಗಳು ಪಠ್ಯವಾಗಲಿ

ಸಾಮಾಜಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ ಉಳ್ಳವರು, ಚಿಂತಕರು ‘ಸಂವಿಧಾನ’ ಎಂಬ ಶಬ್ದವನ್ನು ಬಳಸಿದಷ್ಟು ಬೇರೆ ಯಾವ ಶಬ್ದವನ್ನೂ ಬಹುಶಃ ಬಳಸಿಲ್ಲ. ಸಂವಿಧಾನದ ಪೀಠಿಕೆಯನ್ನು ಎಲ್ಲ ಆಚರಣೆಗಳಲ್ಲಿ, ಶಾಲಾ–ಕಾಲೇಜುಗಳಲ್ಲಿ ಓದಿದ್ದೇ ಓದಿದ್ದು. ಆದರೆ, ನಮ್ಮ ನಡತೆ, ನಿತ್ಯದ ಆಚರಣೆಯಲ್ಲಿ ಮಾತ್ರ ಶೂನ್ಯ.

ಸಂವಿಧಾನ ಮತ್ತು ಪ್ರಜಾಸತ್ತೆ ದೇಶದ ಎರಡು ಕಣ್ಣುಗಳು. ಒಂದಿಲ್ಲದೆ ಇನ್ನೊಂದನ್ನು ಯೋಚಿಸಲು ಸಾಧ್ಯವಿಲ್ಲ. ಶಿಕ್ಷಣ ತಜ್ಞ ನಿರಂಜನಾರಾಧ್ಯ ಅವರು, ‘ಅರಿವೇ ಪ್ರಜಾಸತ್ತೆಯ ಜೀವಜಲ’ (ಪ್ರ.ವಾ., ಅ. 6) ಎಂಬುದನ್ನು ಸಮರ್ಥಿಸುತ್ತಲೇ, ಶಿಕ್ಷಣ ಮತ್ತು ಪ್ರಜಾಪ್ರಭುತ್ವದ ಅವಿನಾಭಾವ ಸಂಬಂಧವನ್ನು ಶಿಕ್ಷಣ ತಜ್ಞರ ಮಾತುಗಳ ಉಲ್ಲೇಖಗಳೊಂದಿಗೆ ತಮ್ಮ ಬರಹದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಈ ‘ಅರಿವು’ ನಾವು ಪ್ರಸ್ತಾಪಿಸುತ್ತಿರುವ ಮಾನವೀಯ ಮೌಲ್ಯಗಳ ಎಲ್ಲಾ ಸಂಬಂಧಗಳ ಕೇಂದ್ರಬಿಂದು. ನಮ್ಮ ಜಡ್ಡುಗಟ್ಟಿದ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳನ್ನು ಕಡ್ಡಾಯವಾಗಿ ಒಂದು ಪ್ರತ್ಯೇಕ ಪಠ್ಯವನ್ನಾಗಿ (ಗಣಿತ, ವಿಜ್ಞಾನದ ಪಠ್ಯ ಇರುವ ಹಾಗೆ) ಮಾಡಿದರೆ ಮಾತ್ರ ಸಮಾಜವನ್ನು ಚಿಂತನೆಗೆ ಹಚ್ಚಲು ಸಾಧ್ಯ. ಈ ಸಂದೇಶವು ಸಮಾಜದ ಎಲ್ಲಾ ವರ್ಗದವರಿಗೆ ಬಿಸಿ ಮುಟ್ಟಿಸುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. ಈ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ನೆನಪಿಸಿಕೊಂಡರೆ ಒಳಿತು.

- ನಾ. ದಿವಾಕರ, ಪು.ಸೂ. ಲಕ್ಷ್ಮೀನಾರಾಯಣ ರಾವ್, ಸಿದ್ರಾಮಪ್ಪ ದಿನ್ನಿ, 
ಸತೀಶ್ ಜಿ.ಕೆ. ತೀರ್ಥಹಳ್ಳಿ, ವಿವೇಕಾನಂದ ಎಚ್.ಕೆ.,
ಟಿ.ಜೆ. ರೇಣುಕಾ ಪ್ರಸಾದ್, ಸಿರಿಮನೆ ನಾಗರಾಜ್
 

ಜಾತಿ ಘಟಸರ್ಪಕ್ಕೆ ಸಂಕೋಲೆ ತೊಡಿಸಿ

ದೇಶದ ನ್ಯಾಯದೇವತೆಯ ಪೀಠಕ್ಕೆ ಜಾತಿ ಎಂಬ ಮನುವಾದದ ಭೂತ ಅಪ್ಪಳಿಸಿದೆ. ಕೆಳವರ್ಗದ ಜನರು ಉನ್ನತ ಶಿಕ್ಷಣ ಪಡೆದು ಆರ್ಥಿಕವಾಗಿ ಸಬಲರಾದರೂ, ಅಧಿಕಾರದ ಚುಕ್ಕಾಣಿ ಹಿಡಿದರೂ ಜಾತಿಯ ಮಾಯೆ ಬಿಡದೆ ಕಾಡುತ್ತಿದೆ.

ಈ ಮಾಯೆಯ ಬಲಿಯಿಂದ ಹೊರಬರಬೇಕಾದರೆ ಬುದ್ಧನ
ಕವಚಧಾರಣೆ ಮಾಡಲೇಬೇಕು. ಆಗಷ್ಟೇ ಜಾತಿಯ ಘಟಸರ್ಪಕ್ಕೆ ಸಂಕೋಲೆ ತೊಡಿಸಲು ಸಾಧ್ಯ.

-ವಿಜಯಲಕ್ಷ್ಮಿ ದೊಡ್ಡಮನಿ, ಕಲಬುರಗಿ 

ಬ್ಯಾಕ್‌ಲಾಗ್‌ ಹುದ್ದೆ ಭರ್ತಿಗೆ ವಿಳಂಬ ಸಲ್ಲ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗುತ್ತಿದೆ. ಆದರೂ, ಖಾಲಿ ಇರುವ ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿಗೆ ಗಮನಹರಿಸಿಲ್ಲ. ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಿ ತಿಂಗಳುಗಳೇ ಕಳೆದಿವೆ. ಸಮಿತಿಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಚುರುಕು ಮುಟ್ಟಿಸುವಲ್ಲಿ ನಿರ್ಲಕ್ಷ್ಯ ತೋರಿದೆ.

ಸದ್ಯ ಪರಿಶಿಷ್ಟ ಜಾತಿಯ ಒಳಮೀಸಲಾತಿ ಗೊಂದಲ ಬಗೆಹರಿದಿದೆ. ಇನ್ನಾದರೂ ಖಾಲಿ ಇರುವ ಬ್ಯಾಕ್‌ಲಾಗ್‌ ಹುದ್ದೆಗಳ ಪ್ರಕಟಣೆಗೆ ಅಧಿಸೂಚನೆ ಪ್ರಕಟಿಸಬೇಕಿದೆ.

-ಪ್ರಶಾಂತ್ ಬುಳ್ಳಣ್ಣವರ, ಉಗರಗೋಳ

ನಿರುದ್ಯೋಗಿ ಯುವಜನರ ಗೋಳು ಆಲಿಸಿ

ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡುತ್ತಿರುವವರ ಪರಿಸ್ಥಿತಿ ಹೇಳತೀರದಾಗಿದೆ. ಲಕ್ಷಾಂತರ ಹುದ್ದೆಗಳು ಖಾಲಿಯಿದ್ದರೂ ಸರ್ಕಾರ ನೇಮಕಾತಿಗೆ ಹಿಂದೇಟು ಹಾಕುತ್ತಿದೆ.

ಇದರಿಂದ ಯುವಜನರ ಬದುಕು ಸಂಕಷ್ಟದ ಕುಲುಮೆಗೆ ಸಿಲುಕಿದೆ. ಧಾರವಾಡದಲ್ಲಿ ಇತ್ತೀಚೆಗೆ ಜರುಗಿದ ಉದ್ಯೋಗಾಕಾಂಕ್ಷಿಗಳ ಹೋರಾಟವು
ಇಡೀ ದೇಶದ ಗಮನ ಸೆಳೆದಿದೆ. ಆದರೂ, ನೇಮಕಾತಿಗೆ ಸರ್ಕಾರ ಆಸಕ್ತಿ ತೋರುತ್ತಿಲ್ಲ.

-ಸೋಮನಾಥ ಎಚ್. ಜಂಪಾ, ಕಕ್ಕೇರಾ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.