ADVERTISEMENT

ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ ಬೇಸಿಗೆ!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 19:30 IST
Last Updated 18 ಏಪ್ರಿಲ್ 2021, 19:30 IST

ಕಲಬುರ್ಗಿ ಮತ್ತು ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಏಪ್ರಿಲ್‌ ಮತ್ತು ಮೇ ತಿಂಗಳುಗಳ ಅವಧಿಯಲ್ಲಿ ರಾಜ್ಯ ಸರ್ಕಾರದ ಕಚೇರಿ ಕೆಲಸದ ವೇಳೆಯನ್ನು ಬದಲಾಯಿಸಿ, ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ನಿಗದಿಪಡಿಸಲಾಗಿದೆ. ಆದರೆ ಈ ಅವಧಿಯಲ್ಲಿ ‘ಬರುವುದು ತಡವಾಗಿ, ಹೋಗುವುದು ಮಾತ್ರ ಮುಂಚಿತ’ ಎಂಬ ಸಾರ್ವಜನಿಕರ ಆರೋಪದಿಂದ ಬಹಳಷ್ಟು ನೌಕರರು ಮುಕ್ತರಾಗಿಲ್ಲ. ಕೋವಿಡ್‌ ಕಾರಣಕ್ಕೆ ಈ ಪದ್ಧತಿಯನ್ನು ಪ್ರಾರಂಭದಲ್ಲಿ ರಾಜ್ಯ ಸರ್ಕಾರ ಕೈಬಿಟ್ಟಿತ್ತು. ಆದರೆ ರಾಜ್ಯ ಸರ್ಕಾರಿ ನೌಕರರ ಸಂಘದ ಒತ್ತಡಕ್ಕೆ ಮಣಿದು, ಕಚೇರಿ ವೇಳೆಯನ್ನು ಮಧ್ಯಾಹ್ನದವರೆಗೆ ಮಾತ್ರ ನಿಗದಿಪಡಿಸಿ ಹೊಸ ಆದೇಶ ಹೊರಡಿಸಿದೆ.

ಫ್ಯಾನ್‌, ಏರ್‌ಕಂಡೀಷನ್‌ರಗಳು ಇಲ್ಲದ ಕಚೇರಿಗಳು ಈಗಿನ ದಿನಗಳಲ್ಲಿ ಕಡಿಮೆ. ಇಲ್ಲಿ ಸಾರ್ವಜನಿಕ ವಾಗಿ ವ್ಯಕ್ತವಾಗುವ ಪ್ರಶ್ನೆ ಎಂದರೆ, ಈ ಬೇಸಿಗೆ ಕೇವಲ ರಾಜ್ಯ ಸರ್ಕಾರದ ನೌಕರರಿಗಷ್ಟೇ ಇದೆಯೇ ಎಂಬುದು. ಈ ಜಿಲ್ಲೆಗಳಲ್ಲಿ ಕೆಲಸ ಮಾಡುವ ಕೇಂದ್ರ ಸರ್ಕಾರಿ, ರಾಜ್ಯ ಪೊಲೀಸ್‌ ಇಲಾಖೆ, ರಾಷ್ಟ್ರೀಕೃತ, ಗ್ರಾಮೀಣ ಬ್ಯಾಂಕ್‌, ಖಾಸಗಿ ಸಂಸ್ಥೆಗಳಿಗೆ ಸೇರಿದ ನೌಕರರಿಗೆ ಮಾತ್ರ ಇಂಥ ‘ಭಾಗ್ಯ’ ಇಲ್ಲ. ಅಷ್ಟೇ ಅಲ್ಲದೆ ದುಡಿದು ಬೆವರಿಳಿಸಿಕೊಳ್ಳುತ್ತಿರುವ ರೈತರು, ಕಾರ್ಮಿಕರು, ವಾಹನ ಚಾಲಕರನ್ನು ಬಿಟ್ಟು, ಕೇವಲ ರಾಜ್ಯ ಸರ್ಕಾರದ ನೌಕರರನ್ನಷ್ಟೇ ಬೇಸಿಗೆ ಬಾಧಿಸುತ್ತಿದೆಯೇ? ಅರ್ಧ ದಿನದ ಕೆಲಸಕ್ಕೆ ಅರ್ಧ ವೇತನ ನೀಡಲಾಗುತ್ತಿದೆಯೇ? ಹೋಗಲಿ ಬದಲಾದ ಅವಧಿಯಲ್ಲಾದರೂ ನೌಕರರು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ ಎಂಬುದಕ್ಕೆ ಸರ್ಕಾರದ ಸ್ಪಷ್ಟನೆ ಏನು?

-ನಾರಾಯಣರಾವ ಕುಲಕರ್ಣಿ,ಹಿರೇಅರಳಿಹಳ್ಳಿ, ಯಲಬುರ್ಗಾ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.