ADVERTISEMENT

ಬ್ಯಾಂಕುಗಳ ಲಾಭ- ಠೇವಣಿದಾರರಿಗೆ ನಷ್ಟ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 19:45 IST
Last Updated 6 ಜನವರಿ 2023, 19:45 IST

ಬ್ಯಾಂಕುಗಳ ಲಾಭ- ಠೇವಣಿದಾರರಿಗೆ ನಷ್ಟ

ಕೇಂದ್ರ ಸರ್ಕಾರ ಕೈಗೊಂಡ ಕಠಿಣ ಕ್ರಮಗಳಿಂದ ರಾಷ್ಟ್ರೀಕೃತ ಬ್ಯಾಂಕುಗಳು ಈಗ ₹ 1 ಲಕ್ಷ ಕೋಟಿ ಲಾಭ ಮಾಡುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ (ಪ್ರ.ವಾ., ಜ. 5). 2015- 16ರಿಂದ 2019- 20ರವರೆಗಿನ ಅವಧಿ ಯಲ್ಲಿ ಈ ಬ್ಯಾಂಕುಗಳು ₹ 2.07 ಲಕ್ಷ ಕೋಟಿ ನಷ್ಟ ಅನುಭವಿಸಿದವು, ಹಿಂದಿನ ಐದು ಹಣಕಾಸು ವರ್ಷಗಳಲ್ಲಿ ಕೇಂದ್ರವು ರಾಷ್ಟ್ರೀಕೃತ ಬ್ಯಾಂಕುಗಳಿಗೆ ₹ 3.10 ಲಕ್ಷ ಕೋಟಿ ಬಂಡವಾಳ ನೆರವು ನೀಡಿದೆ ಎಂದೂ ವರದಿಯಲ್ಲಿದೆ. ಸರ್ಕಾರ ನೀಡಿದ ಬಂಡವಾಳದ ನೆರವಿನಲ್ಲಿ ಬ್ಯಾಂಕುಗಳ ಒಟ್ಟಾರೆ ನಷ್ಟವಾದ ₹ 2.07 ಲಕ್ಷ ಕೋಟಿಯನ್ನು ಕಳೆದರೆ ಉಳಿಯುವುದು ₹ 1.03 ಲಕ್ಷ ಕೋಟಿ.

ಈಗ ಬ್ಯಾಂಕುಗಳು ಗಳಿಸಲಿರುವ ₹ 1 ಲಕ್ಷ ಕೋಟಿ ಲಾಭವು ಸರ್ಕಾರದ ನೆರವಿನಲ್ಲಿ ನಷ್ಟ ಕಳೆದು ಉಳಿದ ಮೊತ್ತವೇ ಅಲ್ಲವೆ? ಇದರಲ್ಲಿ ಬ್ಯಾಂಕುಗಳ ಹೆಗ್ಗಳಿಕೆ ಏನು ಎನ್ನುವುದು ಅರ್ಥವಾಗದ ಸಂಗತಿ. ಮತ್ತೊಂದು ವಿಚಾರ ವನ್ನು ಈ ವರದಿ ಮರೆಮಾಚುತ್ತಿದೆ. ಆರ್‌ಬಿಐ ಇತ್ತೀಚೆಗೆ ರೆಪೊ ದರಗಳನ್ನು ಹೆಚ್ಚಿಸಿದ ಕಾರಣ ಬ್ಯಾಂಕುಗಳು ತಾವು ನೀಡುವ ಸಾಲದ ಬಡ್ಡಿ ದರಗಳನ್ನು ಹೆಚ್ಚಿಸಿವೆ. ಆದರೆ ಅವು ತಾವು ಹೊಂದಿರುವ ನಿಶ್ಚಿತ ಠೇವಣಿಯ ಮೇಲಿನ ಬಡ್ಡಿ ದರವನ್ನು ಸಾಲದ ಬಡ್ಡಿ ದರಕ್ಕೆ ಅನುಗುಣವಾಗಿ ಅನುಪಾತೀಯವಾಗಿ ಹೆಚ್ಚಿಸಿಲ್ಲ ಎನ್ನುವುದನ್ನು ಗಮನಿಸಬೇಕು. ಸಾಮಾನ್ಯವಾಗಿ ಸಾಲದ ಬಡ್ಡಿ ದರ ಮತ್ತು ಠೇವಣಿಯ ಬಡ್ಡಿ ದರದ ನಡುವೆ ಶೇ 1– 2ರಷ್ಟು ವ್ಯತ್ಯಾಸವಿರಬೇಕು. ಠೇವಣಿದಾರರಿಗೆ ನ್ಯಾಯಯುತವಾಗಿ ನೀಡಬೇಕಾದ ಬಡ್ಡಿ ದರ ಹೆಚ್ಚಳದ ಪ್ರಯೋಜನವನ್ನು ಬ್ಯಾಂಕುಗಳು ನೀಡದೆ, ಲಾಭ ಗಳಿಸುತ್ತಿವೆ ಎಂದು ಹೇಳುವುದು ಠೇವಣಿದಾರರಿಗೆ ಮಾಡುವ ವಂಚನೆಯಲ್ಲವೇ?

ADVERTISEMENT

- ಟಿ.ಸುರೇಂದ್ರ ರಾವ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.