ADVERTISEMENT

ರಾಮಾ ಜೋಯಿಸ್‌: ಶಿಕ್ಷಕರ ಕಣ್ಮಣಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 22:20 IST
Last Updated 18 ಫೆಬ್ರುವರಿ 2021, 22:20 IST

ಮಂಗಳವಾರ ನಿಧನರಾದ ನ್ಯಾಯಮೂರ್ತಿ ಎಂ.ರಾಮಾ ಜೋಯಿಸ್‌ ಅವರು ಶಿಕ್ಷಕ ವಲಯದಲ್ಲಿ ಸ್ಮರಣೀಯರು. ಅವರು ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ರಾಜ್ಯದ ಸಾವಿರಾರು ಶಿಕ್ಷಕರಿಗೆ ನೆರವಾಗಿದ್ದರು. ಅಂದಿನ ಸರ್ಕಾರವು ಶಿಕ್ಷಕರ ನಿವೃತ್ತಿ ವಯಸ್ಸನ್ನು 58ರಿಂದ 55ಕ್ಕೆ ಇಳಿಸಿತ್ತು. ಕೆಲವು ಶಿಕ್ಷಕರು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದರು. ಯಾರೆಲ್ಲ ತಡೆಯಾಜ್ಞೆ ತಂದರೋ ಅವರನ್ನು ಮಾತ್ರ ಸರ್ಕಾರ 58ರವರೆಗೆ ಸೇವೆಯಲ್ಲಿ ಮುಂದುವರಿಸಿತು. ಇದರಿಂದಾಗಿ 55 ವರ್ಷದ ಅಂಚಿಗೆ ಬಂದ ಶಿಕ್ಷಕರೆಲ್ಲರೂ ಕೋರ್ಟ್‌ ಮೆಟ್ಟಿಲೇರುತ್ತಿದ್ದರು. ದೂರದ ಊರಿನ ಶಿಕ್ಷಕರು ರಾಮಾ ಜೋಯಿಸ್‌ ಅವರಿಗೆ ₹ 120 ಮನಿಯಾರ್ಡರ್‌ ಮಾಡಿದರೆ ಸಾಕು, ಕೋರ್ಟಿನ ತಡೆಯಾಜ್ಞೆ ಅವರ ಕೈ ಸೇರುತ್ತಿತ್ತು. ಮೂರು ವರ್ಷಗಳ ಸೇವಾ ಅವಧಿ ದೊರೆಯುತ್ತಿತ್ತು.

ರಾಮಾ ಜೋಯಿಸರು 1977ರಲ್ಲಿ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಕಗೊಂಡ ಸುದ್ದಿತಿಳಿದು ಶಿಕ್ಷಕರೆಲ್ಲರೂ ಒಟ್ಟಾಗಿ ಸೇರಿ ಬೆಂಗಳೂರಿನ ರಾಷ್ಟ್ರೀಯ ವಿದ್ಯಾಲಯದಲ್ಲಿ ಅವರನ್ನು ಸನ್ಮಾನಿಸಿದರು. ಅವರ ರಾಜಾಜಿನಗರದ ನಿವಾಸದಿಂದ ಸನ್ಮಾನ ಸ್ಥಳಕ್ಕೆ ಕರೆದುಕೊಂಡು ಹೋಗುವ ಭಾಗ್ಯ, ಸಹಾಯಕ ಶಿಕ್ಷಣಾಧಿಕಾರಿಯಾಗಿದ್ದ ನನಗೆ ದೊರೆತಿತ್ತು. ನ್ಯಾಯಮೂರ್ತಿಯಾಗಿ ನೇಮಕಗೊಂಡಾಗ ಅವರಿಗೆ ಕೊಟ್ಟ ಪ್ರಥಮ ಸನ್ಮಾನ ಸಮಾರಂಭ ತಮ್ಮದೆಂದು ಶಿಕ್ಷಕರು ಸಂತಸಪಟ್ಟರು.

-ಎಸ್‌.ವಿಶ್ವನಾಥ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.