ADVERTISEMENT

ಭಾವಾವೇಶ- ಆತ್ಮನಿಗ್ರಹ

ಎಚ್.ಆನಂದರಾಮ ಶಾಸ್ತ್ರೀ
Published 26 ಡಿಸೆಂಬರ್ 2018, 19:59 IST
Last Updated 26 ಡಿಸೆಂಬರ್ 2018, 19:59 IST

ಇತ್ತೀಚೆಗೆ ‘ಶೂಟೌಟ್’ ಮಾತನ್ನಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭಾವಾವೇಶಕ್ಕೊಳಗಾಗಿ ಸಡಿಲ ಮಾತುಗಳನ್ನಾಡಿರುವುದು ಇದೇ ಮೊದಲ ಸಲವೇನಲ್ಲ. ‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು’, ‘ಮಾತಿನಿಂ ನಗೆನುಡಿಯು, ಮಾತಿನಿಂ ಹಗೆಹೊಲೆಯು’. ಆದ್ದರಿಂದ ಮಾತಿನಲ್ಲಿ ಆವೇಶ ನುಸುಳದಂತೆ ಮುಖ್ಯಮಂತ್ರಿ ಆತ್ಮನಿಗ್ರಹ ಸಾಧಿಸುವುದು ಅಗತ್ಯ. ‘ನಾನು ಮುಖ್ಯಮಂತ್ರಿಯಾಗಿ ಮಾತನಾಡಿದ್ದಲ್ಲ’ ಎಂಬ ಸಮಜಾಯಿಷಿ ಸರಿಹೋಗುವುದಿಲ್ಲ. ಕುಮಾರಸ್ವಾಮಿ ಅವರು ದಿನದ 24 ಗಂಟೆಯೂ ರಾಜ್ಯದ ಮುಖ್ಯಮಂತ್ರಿಯೇ. ‘ರಾಜ್ಯಂ ಹಿಸುಮಹತ್ತಂತ್ರಂ ಧಾರ್ಯತೇ ನಾಕೃತಾತ್ಮಭಿಃ’ ಎನ್ನುತ್ತದೆ ಮಹಾಭಾರತ. ‘ರಾಜಕಾರ್ಯವೆಂಬುದು ಮಹತ್ತರವಾದ ಕೌಶಲ. ಜಿತೇಂದ್ರಿಯರಲ್ಲದವರಿಂದ ಅದರ ನಿರ್ವಹಣೆ ಸಾಧ್ಯವಿಲ್ಲ’ ಎಂಬುದು ಇದರ ಅರ್ಥ. ಪಂಚೇಂದ್ರಿಯಗಳಲ್ಲಿ ನಾಲಗೆಯೂ ಒಂದು. ಅದರ ನಿಗ್ರಹವು ಪ್ರತಿಯೊಬ್ಬನಲ್ಲೂ ಇರಲೇಬೇಕಾದ ಗುಣ. ಅತೀವ ಸಹನೆಯಿಂದ ಮಾತ್ರ ಈ ಗುಣವನ್ನು ಗಳಿಸಲು ಸಾಧ್ಯ. ಅವರಿವರಿಂದ ಟೀಕೆಗೊಳಗಾಗಿರುವ ‘ಮನುಸ್ಮೃತಿ’ಯೇ, ‘ಕ್ಷಾಂತ್ಯಾ ಶುದ್ಧ್ಯಂತಿ ವಿದ್ವಾಂಸೋ’ (‘ತಿಳಿವಳಿಕೆಯುಳ್ಳವರು ಸಹನೆಯಿಂದ ಶುದ್ಧರಾಗುತ್ತಾರೆ’) ಎಂದು ಹೇಳಿದೆ.

ಕಾನೂನುಗಳನ್ನು ರಚಿಸುವವರೂ ಜಾರಿಗೊಳಿಸುವವರೂ ಆಗಿರುವ ಮುಖ್ಯಮಂತ್ರಿಯೇ ಮೊದಲಾದ ಜನನಾಯಕರು ಎಂದಿಗೂ ಭಾವಾವೇಶಕ್ಕೆ ಅಡಿಯಾಳಾಗದೆ, ಆತ್ಮಸಂಯಮ ಮತ್ತು ಸಹನೆ ಈ ಎರಡು ಗುಣಗಳನ್ನು ಸದಾ ಕಾಪಾಡಿಕೊಂಡು ಹೋಗಬೇಕಾದ್ದು ಪ್ರಜೆಗಳ ಹಿತದೃಷ್ಟಿಯಿಂದ ಅತ್ಯವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT