ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 29 ಸೆಪ್ಟೆಂಬರ್ 2025, 23:30 IST
Last Updated 29 ಸೆಪ್ಟೆಂಬರ್ 2025, 23:30 IST
   

ಎಲ್ಲೆಲ್ಲೂ ಜನ! ಪುಸ್ತಕಮೇಳ ಭಣಭಣ!

ದಸರಾ ಸಂದರ್ಭದಲ್ಲಿ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಲಲಿತಕಲೆಗಳ ಪ್ರದರ್ಶನ, ವಸ್ತು ಪ್ರದರ್ಶನ ಹಾಗೂ ಇನ್ನಿತರ ಕಣ್ಮನ ಸೆಳೆಯುವ ಮತ್ತು ಮನರಂಜನೆಯ ಕಾರ್ಯಕ್ರಮಗಳು ಪ್ರಸ್ತುತ ದಸರೆಯಲ್ಲಿ ಜರುಗುತ್ತಿವೆ. ಎಲ್ಲೆಲ್ಲೂ ಜನಜಂಗುಳಿ. ಆದರೆ, ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪುಸ್ತಕ ಮೇಳದಲ್ಲಿ ನಿರೀಕ್ಷೆಯ ಮಟ್ಟದಲ್ಲಿ ಜನರೇ ಇಲ್ಲ.

ಯುವಸಮೂಹ ಸಾಮಾಜಿಕ ಮಾಧ್ಯಮಗಳಿಂದ ಪ್ರಭಾವಿತಗೊಂಡಿದೆ. ಯುವಜನರು ಕನ್ನಡ ಪುಸ್ತಕ ಓದುವ ಹವ್ಯಾಸ ಮತ್ತು ಸಾಹಿತ್ಯಾಸಕ್ತಿಯನ್ನೂ ಬೆಳೆಸಿಕೊಂಡರೆ ಕನ್ನಡ ಭಾಷೆಯ ಉಳಿವು, ಬೆಳವಣಿಗೆಗೆ ಪುಷ್ಟಿ ದೊರೆತಂತಾಗುತ್ತದೆ.

ADVERTISEMENT

-ದರ್ಶನ್ ಚಂದ್ರ ಎಂ.ಪಿ., ಮೈಸೂರು

ಕಸಾಪ ಮತ್ತು ಸರ್ವಾಧಿಕಾರಿ ಧೋರಣೆ

ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಭೆಯಲ್ಲಿ, ಸದಸ್ಯರು ಪಾಲಿಸಬೇಕಾದ ನಿಯಮಗಳು/ ಷರತ್ತುಗಳನ್ನು, ಕಸಾಪ ಅಧ್ಯಕ್ಷರು ಗೊತ್ತುಪಡಿಸಿರುವುದು ವರದಿಯಾಗಿದೆ (ಪ್ರ.ವಾ., ಸೆ. 29). ಈ ಷರತ್ತುಗಳು, ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವುದರ ಬಗ್ಗೆ ಸಂದೇಹ ಉಂಟುಮಾಡುವಂತಿವೆ. ಜನರಿಂದ ಆಯ್ಕೆಯಾದ ಅಧ್ಯಕ್ಷರು, ಸಭೆಯಲ್ಲಿ ಭಾಗವಹಿಸುವ ಸದಸ್ಯರಿಗೆ ಷರತ್ತುಗಳನ್ನು ವಿಧಿಸಿರುವುದು, ಅದರಲ್ಲೂ ಸದಸ್ಯರು ‘ಏರುದನಿಯಲ್ಲಿ ಮಾತನಾಡಬಾರದು’ ಎನ್ನುವ ಷರತ್ತು ಸರ್ವಾಧಿಕಾರಿ ಧೋರಣೆಯ ಪ್ರತೀಕ.

-ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಉದ್ಧಟ ವರ್ತನೆ; ದುಶ್ಶಾಸನನ ನೆನಪು

ಜಾಣಗೆರೆ ವೆಂಕಟರಾಮಯ್ಯ ಹಾಗೂ ಡಾ. ವಸುಂಧರಾ ಭೂಪತಿ ಅವರು ಸಭೆಗೆ ಬಂದರೆ ಕುತ್ತಿಗೆ ಹಿಡಿದು ಹೊರದಬ್ಬುತ್ತೇವೆ ಎನ್ನುವ ಬಾಗಲಕೋಟೆ ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅವರ ಹೇಳಿಕೆ ಅಹಂಕಾರದ್ದು ಮಾತ್ರವಲ್ಲ, ಉದ್ಧಟತನದ ಪರಮಾವಧಿಯೂ ಹೌದು. ಕಸಾಪ ಅಧ್ಯಕ್ಷರ ಕುಮ್ಮಕ್ಕಿನಿಂದಲೇ ಇಂತಹ ಹೇಳಿಕೆಗಳು ಬರಲು ಸಾಧ್ಯ! ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಈ ರೀತಿಯ ಹೇಳಿಕೆಯನ್ನು ಯಾರೂ ನೀಡಿರಲಿಕ್ಕಿಲ್ಲ.

ಜಾಣಗೆರೆ ವೆಂಕಟರಾಮಯ್ಯನವರು ಹಿರಿಯ ಚಿಂತಕರು ಹಾಗೂ ಕನ್ನಡಪರ ಹೋರಾಟಗಾರರು, ವಸುಂಧರಾ ಭೂಪತಿಯವರು ವೈದ್ಯೆ, ಸಾಹಿತಿ, ಚಿಂತಕಿ. ಒಬ್ಬ ಮಹಿಳೆಯನ್ನು ಕುತ್ತಿಗೆ ಹಿಡಿದು ದಬ್ಬುತ್ತೇನೆ ಎಂಬ ಹೇಳಿಕೆ ಕುರುಕ್ಷೇತ್ರದ ದುಶ್ಶಾಸನನನ್ನು ನೆನಪಿಸುತ್ತಿದೆ. ಇಂಥವರೆಲ್ಲ ಸಾಹಿತ್ಯ ಪರಿಷತ್ತಿನಲ್ಲಿರುವುದು ಪರಿಷತ್ತಿಗಷ್ಟೇ ಅಲ್ಲ, ಬಾಗಲಕೋಟೆ ಸಾಹಿತ್ಯಾಭಿಮಾನಿಗಳಿಗೂ ಅಗೌರವ.
ಸಾಹಿತ್ಯ ಪರಿಷತ್ತು ಸರ್ಕಾರದ ಅನುದಾನದಿಂದ ನಡೆಯುತ್ತಿರುವ ಸಂಸ್ಥೆಯಾಗಿದ್ದು, ಈ ರೀತಿಯ ಕೆಟ್ಟ ಬೆಳವಣಿಗೆಯ ಬಗ್ಗೆ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು.

-ಅಲ್ಲಮಪ್ರಭು ಬೆಟ್ಟದೂರು, ಕೊಪ್ಪಳ; ಈ. ಬಸವರಾಜು, ಬೆಂಗಳೂರು

ಮದ್ಯ ಮಾರಾಟ ಹೆಚ್ಚಳವೂ ದಾಖಲೆಯೆ?

ಮದ್ಯ ಮಾರಾಟದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನದ ವರದಿ (ಪ್ರ.ವಾ., ಸೆ. 29) ಓದಿ ಆಶ್ಚರ್ಯವಾಯಿತು. ರಾಜ್ಯ ಸರ್ಕಾರದ ಬೊಕ್ಕಸ ತುಂಬಿಸಲು ಅಬಕಾರಿ ಇಲಾಖೆಯ ಕೊಡುಗೆ ಅಪಾರವಾಗಿರಬಹುದು. ಆದರೆ, ಮದ್ಯ ಮಾರಾಟದ ದಾಖಲೆಯ ಹಿನ್ನೆಲೆಯಲ್ಲಿ ಸಾಮಾಜಿಕ ಸ್ವಾಸ್ಥ್ಯದ ಕುರಿತು ಯೋಚಿಸಿದರೆ ಆತಂಕ ಉಂಟಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ನೈತಿಕ ಶಿಕ್ಷಣದ ಕೊರತೆ ಇರುವುದು ಇದಕ್ಕೊಂದು ಕಾರಣ ಇರಬಹುದೆ?

-ಪರಮೇಶ್ವರ ಜೆ.ಎಂ., ಸಂಡೂರು

ಸಮೀಕ್ಷೆ – ಜಾತಿ: ಮಾರ್ಮಿಕ ವಿಶ್ಲೇಷಣೆ

‘ಜಾತಿ ಎಂಬುದೇ ಜ್ಯೋತಿರ್ಲಿಂಗ’ (ಪ್ರ.ವಾ., ಸೆ. 29) ಬರಹದಲ್ಲಿ ರವೀಂದ್ರ ಭಟ್ಟ ಅವರು, ಈಗ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ಯಾರಿಗೆಲ್ಲ ಅನುಕೂಲ ಹಾಗೂ ಯಾರಿಗೆಲ್ಲ ಜಾತಿಯೇ ಜ್ಯೋತಿರ್ಲಿಂಗವಾಗಿದೆ ಎನ್ನುವ ವಿಶ್ಲೇಷಣೆಯನ್ನು ಮನಮುಟ್ಟುವಂತೆ ಮಾಡಿದ್ದಾರೆ. ಒಟ್ಟಾರೆ ಜನಸಂಖ್ಯೆಯಲ್ಲಿ ಕಡಿಮೆ ಇರುವ ವರ್ಗಗಳು ಬಹುಪಾಲು ಅಧಿಕಾರ ಮತ್ತು ಸಂಪನ್ಮೂಲವನ್ನು ಅನುಭವಿಸುವ ಸ್ಥಿತಿ ಬದಲಾಗಬೇಕು ಎಂಬ ಆಶಯವನ್ನು ಬರಹ ಬಹಳ ಮಾರ್ಮಿಕವಾಗಿ ಧ್ವನಿಸಿದೆ.

⇒ಯಲ್ಲಪ್ಪ ಟಿ. ಗಲಗ್ಕರ್, ದೇವದುರ್ಗ


ಸಾವಿನ ಮನೆಯಲ್ಲಿ ಸತ್ತವರೇ ಕೆಟ್ಟರು

ತಮಿಳುನಾಡಿನಲ್ಲಿ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್‌ ಅವರ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಿಂದ 41 ಜನರ ಸಾವು ಸಂಭವಿಸಿದೆ. ಇತ್ತೀಚಿನ ದಿನಗಳಲ್ಲಿ ಇಂಥ ಸಾವಿನ ಸುದ್ದಿಗಳು ಸಾಮಾನ್ಯ. ನದೀ ಸ್ನಾನ ಘಟ್ಟಗಳಲ್ಲಿ, ಆಟದ ಮೈದಾನಗಳಲ್ಲಿ, ರಾಜಕಾರಣಿಗಳ ಸಭೆ ಸಮಾರಂಭ ಗಳಲ್ಲಿ, ದೇವರ ರಥ, ಮೆರವಣಿಗೆ ಸಂದರ್ಭದಲ್ಲಿ, ಕಡೆಗೆ ಸತ್ತವರ ಸಂಸ್ಕಾರಗಳಿಗೂ
ಭಾವಪರವಶರಾಗಿ ಹೋಗುವ ಜನರು ನೂಕುನುಗ್ಗಲಿಗೆ ಸಿಕ್ಕಿ ಕಾಲ್ತುಳಿತದಿಂದ ಸಾವಿಗೀಡಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ.

ನೂಕುನುಗ್ಗಲಿನ ಸಭೆ ಸಮಾರಂಭಗಳಿಗೆ ಹೋಗುವ ಮೊದಲು ಒಂದು ಕ್ಷಣ ನಾವಲ್ಲಿಗೆ ಹೋಗಬಹುದೇ ಎಂದು ಯೋಚಿಸುವುದು ಅಗತ್ಯ. ನಮ್ಮ ಜೀವಕ್ಕೆ ನಾವೇ ಜವಾಬ್ದಾರರು; ಯಾವ ದೈವ, ಯಾವ ರಾಜಕಾರಣಿ, ಯಾವ ಕ್ರೀಡಾಳು, ಯಾರೂ ಜವಾಬ್ದಾರರಲ್ಲ ಎಂಬುದನ್ನು ಮರೆಯಬಾರದು! ಹೋದ ಜೀವ ವಾಪಾಸು ಬರುವುದಿಲ್ಲ. ಎಷ್ಟೇ ಪರಿಹಾರ ಕೊಟ್ಟರೂ ಪ್ರಯೋಜನವಿಲ್ಲ. ‘ಸಾವಿನ ಮನೆಯಲ್ಲಿ ಯಾರು ಕೆಟ್ಟರು ಎಂದರೆ ಸತ್ತವರೇ ಕೆಟ್ಟರು’ ಎಂಬುದು ಗಾದೆ!

- ಪ್ರೊ. ಶಿವರಾಮಯ್ಯ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.