ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 3 ಅಕ್ಟೋಬರ್ 2025, 23:30 IST
Last Updated 3 ಅಕ್ಟೋಬರ್ 2025, 23:30 IST
   

ಕಾಗದದಲ್ಲೇ ಉಳಿದಿರುವ ಘೋಷಣೆ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸು
ವವರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಬಗ್ಗೆ ಎಚ್ಚರಿಕೆ ಫಲಕಗಳನ್ನೂ ಅಳವಡಿಸ
ಲಾಗಿದೆ. ಶಿಕ್ಷಣ ಸಂಸ್ಥೆಗಳ 100 ಮೀ. ವ್ಯಾಪ್ತಿಯೊಳಗೆ ಬೀಡಿ, ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ನಿಷಿದ್ಧ. ಆದರೆ, ಫಲಶ್ರುತಿ ಶೂನ್ಯ. ದೇವಸ್ಥಾನ, ಆಸ್ಪತ್ರೆ ಆವರಣ, ಬಸ್‌ನಿಲ್ದಾಣ, ರೈಲು ನಿಲ್ದಾಣದ ಪಕ್ಕದಲ್ಲಿಯೇ ಬೀಡಿ, ಸಿಗರೇಟ್‌ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ.

-ಷಣ್ಮುಖ ಎಸ್.ಎಚ್., ಹಳೇ ಬಾತಿ 

ADVERTISEMENT

ಅರ್ಥಪೂರ್ಣವಾಗದ ‘ಗಾಂಧಿ ಜಯಂತಿ’ 

ಅಕ್ಟೋಬರ್ ಅಂದರೆ ‘ಗಾಂಧಿ ತಿಂಗಳು’ ಎಂದು ಈ ಮೊದಲು ಭಾವಿಸುತ್ತಿದ್ದೆವು. ಈ ಭಾವನೆ ಪ್ರಸ್ತುತ ಕ್ಷೀಣಿಸುತ್ತಿರುವಂತೆ ಕಾಣಿಸುತ್ತಿದೆ. ಪ್ರತಿವರ್ಷ ಗಾಂಧಿ ಜಯಂತಿ ಅಂಗವಾಗಿ ಇಡೀ ತಿಂಗಳು ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿತ್ತು. ಶಾಲಾ–ಕಾಲೇಜುಗಳಲ್ಲಿ ಬಾಪುವಿನ ಆದರ್ಶಗಳ ಬಗ್ಗೆ ಕಾರ್ಯಕ್ರಮ, ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಲಾಗುತ್ತಿತ್ತು. ಈ ವರ್ಷ ಇಂತಹ ಕಾರ್ಯಕ್ರಮಗಳು ವಿರಳವಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ, ಗಾಂಧೀಜಿಯನ್ನು ಮರೆತಿವೆ. 

-ಹರೀಶ್ ಅಮಲಗೊಂದಿ, ಶಿರಾ

ಜಾತಿ ನಮೂದು ಗೊಂದಲ ಬಗೆಹರಿಸಿ

ನಮ್ಮ ಹತ್ತಿರದ ಸಂಬಂಧಿಕರು, ಸ್ನೇಹಿತರು, ಅವರ ಮಕ್ಕಳು ಬೇರೆ ಬೇರೆ ಜಾತಿ, ಉಪಜಾತಿಯವರನ್ನು ಮದುವೆಯಾಗಿದ್ದಾರೆ. ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನರನ್ನು ಮದುವೆಯಾದವರೂ ಇದ್ದಾರೆ. ಅಲ್ಲದೆ, ವಿದೇಶಿಗರನ್ನೂ ಮದುವೆ ಯಾಗಿದ್ದಾರೆ. ಪ್ರಸ್ತುತ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಇವರೆಲ್ಲರ ಮಕ್ಕಳು, ಮೊಮ್ಮಕ್ಕಳು ಯಾವ ಜಾತಿಯಲ್ಲಿ ಗುರುತಿಸಿಕೊಳ್ಳಬೇಕು?
ಮದುವೆ ಆಗದ, ಗಂಡನ ಹೆಸರನ್ನೂ ಗುರುತಿಸಿಕೊಳ್ಳದ ತಾಯಂದಿರು, ಐವಿಎಫ್‌ನಿಂದ ಜನಿಸಿದ ಮಕ್ಕಳ ಸಮಸ್ಯೆಯೂ ಇದೇ ಆಗಿದೆ. ಸರ್ಕಾರವು ಈ ಗೊಂದಲವನ್ನು ಬಗೆಹರಿಸಬೇಕಿದೆ.

-ಅತ್ತಿಹಳ್ಳಿ ದೇವರಾಜ್, ಬೆಂಗಳೂರು

ಭವ್ಯ ವಿಧಾನಸೌಧ ಮತ್ತು ಕಳಂಕಿತರು 

ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರ ಸಚಿವ ಸಂಪುಟದಲ್ಲಿ ಟಿ. ಸಿದ್ದಲಿಂಗಯ್ಯ ಅವರು, ಮರಾಮತ್ ಇಲಾಖೆಯ (ಈಗಿನ ಲೋಕೋಪಯೋಗಿ ಇಲಾಖೆ) ಸಚಿವರಾಗಿದ್ದರು. ಅಧಿವೇಶನದ ಚರ್ಚೆಯೊಂದರಲ್ಲಿ ಮರಾಮತ್ ಇಲಾಖೆಯಲ್ಲಿ ವಿದ್ಯುತ್ ತಂತಿ ಖರೀದಿಗೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬರ ಮೇಲೆ ಅವ್ಯವಹಾರದ ಆರೋಪ ಕೇಳಿಬರುತ್ತದೆ. ಸುದ್ದಿ ಕೇಳಿದ ತಕ್ಷಣವೇ ನೈತಿಕ ಹೊಣೆ ಹೊತ್ತು ಸಿದ್ದಲಿಂಗಯ್ಯ ರಾಜೀನಾಮೆ ಸಲ್ಲಿಸುತ್ತಾರೆ. ಎಸ್. ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮಂತ್ರಿಮಂಡಲದಲ್ಲಿ ಯಶೋಧರಮ್ಮ ದಾಸಪ್ಪ ಸಮಾಜ ಕಲ್ಯಾಣ ಸಚಿವೆಯಾಗಿದ್ದರು. ಆಗಿನ ಮೈಸೂರು ರಾಜ್ಯದಲ್ಲಿ ಪಾನ ನಿರೋಧ ಜಾರಿಗೆ ತರಬೇಕೆಂಬ ಉತ್ಕಟ ಆಕಾಂಕ್ಷೆ ಹೊಂದಿದ್ದ ಅವರು, ಜಾರಿಗೆ ಬರದಿದ್ದರೆ ‘ರಾಜೀನಾಮೆ ಕೊಡಲು ಸಿದ್ಧ’ ಎಂದಿದ್ದರು. ಕಾರಣಾಂತರಗಳಿಂದ ಅದು ಕೈಗೂಡದೆ ಹೋದಾಗ ಮಾತಿಗೆ ಕಟ್ಟುಬಿದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇಂತಹ ಭವ್ಯ ಪರಂಪರೆ ಹೊಂದಿರುವ ವಿಧಾನಸಭೆಗೆ ಪ್ರಸ್ತುತ ಆಯ್ಕೆಯಾಗಿ ಬರುತ್ತಿರುವ ಜನಪ್ರತಿನಿಧಿಗಳ ಮೇಲೆ ಒಂದಲ್ಲಾ ಒಂದು ಆರೋಪ ಕೇಳಿಬರುತ್ತಿದೆ. ಮುಂದೊಂದು ದಿನ ವಿಧಾನಸೌಧವು, ಕಾರಾಗೃಹ ಸೌಧವಾಗಿ ಪರಿವರ್ತನೆಯಾದರೂ ಅಚ್ಚರಿಪಡಬೇಕಿಲ್ಲ.

-ಡಿ. ಪ್ರಸನ್ನಕುಮಾರ್, ಬೆಂಗಳೂರು

ಅವರು ಇರೋದೇ ಹಾಗೆ ಸ್ವಾಮಿ...

‘ಸಮೀಕ್ಷೆ: ಹಳ್ಳಿ, ಸ್ಲಂ ಜನರೇ ಮೇಲು’ ಸುದ್ದಿ (ಪ್ರ.ವಾ., ಅ. 3) ಓದಿದಾಗ ಇದು ಸಾಮಾಜಿಕ ವ್ಯವಸ್ಥೆಯಲ್ಲಿರುವ ದೋಷವೇ ವಿನಾ, ವ್ಯಕ್ತಿಗತ ದೋಷವಲ್ಲ ಎನ್ನುವುದು ಮನದಟ್ಟಾಯಿತು. ಸಾಮಾನ್ಯವಾಗಿ ನಗರದವರು, ಪಟ್ಟಣಿಗರು ಹೊಸಬರನ್ನು ಅನುಮಾನದಿಂದಲೇ ನೊಡುತ್ತಾರೆ. ಇದು ಸರಿ ಕೂಡ. ಏಕೆಂದರೆ ಮೋಸ ಮಾಡುವ ಜನ ಯಾವ ವೇಷಧರಿಸಿ ಮನೆ ಬಾಗಿಲಿಗೆ ಬರುತ್ತಾರೋ ಗೊತ್ತಾಗುವುದಿಲ್ಲ. ಹಾಗಾಗಿ, ಸಮೀಕ್ಷಕರು ನಗರ, ಪಟ್ಟಣದ ಜನರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಂಡರೆ, ಅವರ ಮನಸ್ಸಿಗೆ ಕಿರಿಕಿರಿಯಾಗುವುದಿಲ್ಲ.

-ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಆನ್‌ಲೈನ್ ಸ್ನೇಹದಿಂದ ದೂರವಿರಿ

ಆನ್‌ಲೈನ್ ಸ್ನೇಹದಲ್ಲಿ ಸುರಕ್ಷತೆಯ ಕೊರತೆ ಎದ್ದು ಕಾಣುತ್ತದೆ. ಇಲ್ಲಿ ನೀವು ಯಾರೊಡನೆ ಸ್ನೇಹ ಮಾಡಿದ್ದೀರಿ ಎಂಬುದು ಸ್ಪಷ್ಟವಾಗಿಲ್ಲದ ಕಾರಣ, ಕೆಲವರು
ನಿಮ್ಮ ವೈಯಕ್ತಿಕ ಮಾಹಿತಿಯ ಕಳವಿಗೆ ಪ್ರಯತ್ನಿಸಬಹುದು. ಕೆಲವೊಮ್ಮೆ ಆನ್‌ಲೈನ್‌ನಲ್ಲಿ ಮಾಡಿದ ಸ್ನೇಹಗಳು ಜಾಲತಂತ್ರದಿಂದ ಸೈಬರ್ ಅಪರಾಧಗಳಿಗೆ ಕಾರಣವಾಗಬಹುದು. ಯುವಜನತೆ ಆನ್‌ಲೈನ್ ಸ್ನೇಹದಿಂದ ದೂರವಿರಿ.

-ಲಿಖಿತ ಬಸವರಾಜ್, ತುಮಕೂರು 

‘ದೀಪಿಕಾ’: ಹೆಣ್ಣುಮಕ್ಕಳಿಗೆ ದೀವಟಿಗೆ

ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದು ಕೇವಲ ಕುಟುಂಬದ ಏಳಿಗೆಯಲ್ಲ, ಸಮಾಜದ ಪ್ರಗತಿಗೂ ಮೆಟ್ಟಿಲಾಗಲಿದೆ. ಅನೇಕ ಹೆಣ್ಣುಮಕ್ಕಳು ಆರ್ಥಿಕ ತೊಂದರೆಯಿಂದ ವಿದ್ಯಾಭ್ಯಾಸ ಮುಂದುವರಿಸಲು ಕಷ್ಟಪಡುತ್ತಾರೆ.
ಕಾಲೇಜು ಶುಲ್ಕ ಕಟ್ಟಲಾಗದೆ ಮಧ್ಯದಲ್ಲೇ ಓದು ನಿಲ್ಲಿಸುತ್ತಾರೆ. ಪದವಿ ಅಥವಾ ಸ್ನಾತಕೋತ್ತರ ಶಿಕ್ಷಣವು ಕೆಲವರಿಗೆ ದುರ್ಲಭವಾಗಿದೆ. ಇಂತಹವರಿಗೆ ನೆರವಾಗಲು ರಾಜ್ಯ ಸರ್ಕಾರ ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಷನ್ ಸಹಯೋಗದಡಿ ‘ದೀಪಿಕಾ ವಿದ್ಯಾರ್ಥಿ ವೇತನ’ ಯೋಜನೆ ಜಾರಿಯಾಗಿದ್ದು, ಬಡ ಹೆಣ್ಣುಮಕ್ಕಳ ಪಾಲಿಗೆ ದಾರಿದೀಪವಾಗಿದೆ. 

 -ಮಂಜುನಾಥ ಜಿ. ಪಾಲವ್ವನಹಳ್ಳಿ, ಚಿತ್ರದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.