ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 26 ಡಿಸೆಂಬರ್ 2025, 22:30 IST
Last Updated 26 ಡಿಸೆಂಬರ್ 2025, 22:30 IST
   

ಅರಣ್ಯ ಇಲಾಖೆಯ ಹಗಲು ಕುರುಡುತನ 

ಇತ್ತೀಚೆಗೆ ಬಾಬಾಬುಡನ್ ಗಿರಿ, ಮುಳ್ಳಯ್ಯನಗಿರಿಗೆ ಪ್ರವಾಸ ಹೋಗಿದ್ದೆ. ಇಪ್ಪತ್ತು
ವರ್ಷಗಳ ಹಿಂದೆ ಹೋಗಿದ್ದಾಗ ಎಲ್ಲೆಲ್ಲೂ ಇದ್ದ ದಟ್ಟ ಶೋಲಾ ಅರಣ್ಯ ಪ್ರದೇಶವು ಎಸ್ಟೇಟುಗಳಿಂದ ಆವೃತವಾಗಿದೆ. ಇದೇ ಪರಿಸ್ಥಿತಿ ದೇವರಮನೆ, ಬಲ್ಲಾಳರಾಯನ ದುರ್ಗದ್ದೂ ಆಗಿದೆ. ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡುವ ಅರಣ್ಯ ಇಲಾಖೆ ಪ್ರಬಲ ಖಾಸಗಿ ಎಸ್ಟೇಟ್‌ನವರು ಇಷ್ಟ ಬಂದಂತೆ ಒತ್ತುವರಿ ಮಾಡಲು ಬಿಟ್ಟಿದೆ. ನಂತರ ಇವರೇ ಆನೆ ಬಂತು, ಕಾಟಿ ಬಂತೆಂದು ಹುಯಿಲೆಬ್ಬಿಸುತ್ತಾರೆ. ಈ ಪ್ರಾಣಿಗಳು ಎಲ್ಲಿಗೆ ಹೋಗಬೇಕು? ನಿಜಕ್ಕೂ ರಾಜ್ಯದಲ್ಲಿ ಅರಣ್ಯ ಇಲಾಖೆ ಅಸ್ತಿತ್ವದಲ್ಲಿ ಇದೆಯೇ?

⇒ಮಧುಸೂದನ್ ಬಿ.ಎಸ್., ಬೆಂಗಳೂರು

ADVERTISEMENT

ನಂಬಿದನು ಪ್ರಹ್ಲಾದ, ನಂಬದಿರ್ದನು ತಂದೆ

‘ವೈಜ್ಞಾನಿಕ ಮನೋಭಾವ: ಹಿಮ್ಮುಖ ಚಲನೆ’ ಲೇಖನದ (ಲೇ: ಈ. ಬಸವರಾಜು, ಪ್ರ.ವಾ., ಡಿ. 25) ಆಶಯ ಚೆನ್ನಾಗಿದೆ. ಆದರೆ, ವೈಚಾರಿಕತೆಯ ಅತಿರೇಕದಲ್ಲಿ ನಂಬಿಕೆಗಳ ಮೇಲೆ ದಾಳಿ ನಡೆಸುವುದು ಎಷ್ಟು ಸರಿ? ಇಸ್ರೊ ಅಧ್ಯಕ್ಷರಾಗಿದ್ದ ಎ.ಎಸ್. ಕಿರಣ್ ಕುಮಾರ್ ಒಂದು ಸಲ, ‘ವಿಜ್ಞಾನಿಗಳಿಗೂ ಈ ಜಗತ್ತು ಈಗಲೂ ತುಂಬಾ ನಿಗೂಢವಾಗಿದೆ. ಗೊತ್ತಿರುವುದು ಶೇಕಡ ಒಂದೋ ಎರಡೋ ಇರಬಹುದಷ್ಟೆ’ ಎಂದಿದ್ದರು. ಡಿವಿಜಿ ಅವರು ಬದುಕಿನ ಈ ಸ್ವರೂಪವನ್ನೇ ‘ನಂಬಿದನು ಪ್ರಹ್ಲಾದ, ನಂಬದಿರ್ದನು ತಂದೆ... ಕಂಬವೋ ಬಿಂಬವೋ ನಂಬಿಕೆಯು ಒಂದಿರಲಿ...’ ಎಂದಿದ್ದಾರೆ. ಗಾಂಧೀಜಿ, ರಮಣ, ರಾಮಾನುಜ, ಪರಮಹಂಸ, ವಿವೇಕಾನಂದ, ಟ್ಯಾಗೋರ್, ಪುತಿನ, ಎಕ್ಕುಂಡಿ ಇಂತಹ ಮಹಿಮರೆಲ್ಲ ದೇವರನ್ನು ನಂಬುತ್ತಿದ್ದವರೇ. ಆದರೆ, ಇವರ ಕಲ್ಪನೆಯ ದೇವರು ಬೇರೆ ಬೇರೆ. ಹಾಗೆಂದರೆ, ಇವರದೆಲ್ಲ ಮೌಢ್ಯವೇ? 

⇒ಬಿ.ಎಸ್. ಜಯಪ್ರಕಾಶ ನಾರಾಯಣ, ಅಗ್ರಹಾರ ಬೆಳಗುಲಿ 


ಸ್ವಾರ್ಥ ತ್ಯಜಿಸಿದರಷ್ಟೆ ಪರಿಸರಕ್ಕೆ ಉಳಿಗಾಲ

‘ಪರಿಸರ: ಸರ್ಕಾರಕ್ಕೆ ಸದರ!’ ಲೇಖನ (ಲೇ: ಜ್ಯೋತಿ, ಪ್ರ.ವಾ., ಡಿ. 24) ಓದಿ
ನೋವಾಯಿತು. ಪರಿಸರದ ಮೇಲೆ ನಿತ್ಯವೂ ದೌರ್ಜನ್ಯ ನಡೆಯುತ್ತಿದೆ. ಅಕ್ರಮ
ಗಣಿಗಾರಿಕೆ, ಅರಣ್ಯನಾಶ, ಲೆಕ್ಕವಿಲ್ಲದಷ್ಟು ರಾಸಾಯನಿಕ– ಪ್ಲಾಸ್ಟಿಕ್ ಬಳಕೆ
ಆಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಮನುಷ್ಯ ಸ್ವಾರ್ಥ, ದುರಾಸೆ ಬಿಟ್ಟಾಗಲಷ್ಟೆ ಪರಿಸರವು ಸ್ವಲ್ಪಮಟ್ಟಿಗೆ ಸುಧಾರಿಸಬಹುದು. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವ್ಯಕ್ತಿಯಿಂದ ವ್ಯಕ್ತಿಗೆ, ಮನೆಯಿಂದ ಮನೆಗೆ, ಹೃದಯದಿಂದ ಹೃದಯಕ್ಕೆ ಮುಟ್ಟಿಸುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ.

⇒ಕುಂದೂರು ಮಂಜಪ್ಪ, ಹೊಳೆಸಿರಿಗೆರೆ

ಸ್ವತಂತ್ರ ತುರ್ತು ನಿರ್ಗಮನ ವ್ಯವಸ್ಥೆ ರೂಪಿಸಿ

ಹಿರಿಯೂರು ಬಳಿ ನಡೆದ ಸೀಬರ್ಡ್‌ ಸ್ಲೀಪರ್‌ ಬಸ್ ದುರಂತ ಪ್ರಕರಣವು ಆಘಾತ
ತಂದಿದೆ. ಅಪಘಾತದ ನಂತರ ಬಸ್‌ನ ಮುಖ್ಯ ಮತ್ತು ತುರ್ತು ನಿರ್ಗಮನದ ಬಾಗಿಲುಗಳು ತಕ್ಷಣಕ್ಕೆ ತೆರೆದು
ಕೊಂಡಿಲ್ಲ. ಇದರಿಂದ ಪ್ರಯಾಣಿಕರು ಹೊರಬರಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ.‌ ಬಸ್‌ನಲ್ಲಿದ್ದ ವಿದ್ಯುತ್ ಮತ್ತು ವಾಯು ಒತ್ತಡ ಆಧಾರಿತ ಬಾಗಿಲುಗಳು ಅಪಘಾತದಿಂದ ಸ್ಥಗಿತಗೊಂಡಿದ್ದೇ ಈ ಸಾವಿಗೆ  ಕಾರಣವಾಗಿರಬಹುದು. ಪ್ರಯಾಣಿಕರ ಜೀವದ ಮೌಲ್ಯವನ್ನು ಮನಗಂಡು ಸಾರಿಗೆ ಇಲಾಖೆ ಹಾಗೂ ಸರ್ಕಾರ ತಕ್ಷಣವೇ ಇಂತಹ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಪೂರ್ಣವಾಗಿ ಕಾರ್ಯ ನಿರ್ವಹಿಸುವ ಸ್ವತಂತ್ರ ತುರ್ತು ನಿರ್ಗಮನ ವ್ಯವಸ್ಥೆಯನ್ನು ಸ್ಲೀಪರ್‌ ಬಸ್‌ಗಳಲ್ಲಿ ಕಡ್ಡಾಯಗೊಳಿಸಬೇಕಿದೆ.  

⇒ನಾಗರಾಜ್ ಕೆ. ಕಲ್ಲಹಳ್ಳಿ, ತುಮಕೂರು

ಸಿನಿಮಾ ಟಿಕೆಟ್: ಏಕರೂಪ ದರ ಏಕಿಲ್ಲ?

ಸ್ಟಾರ್ ನಟರು ತಮ್ಮ ಸಿನಿಮಾ ಬಿಡುಗಡೆಯಾದಾಗ ಪೈರಸಿ ಬಗ್ಗೆ ಸಿನಿಮಾ ಶೈಲಿಯಲ್ಲಿಯೇ ಮಾತನಾಡುತ್ತಾರೆ. ಇದು ಪ್ರಚಾರ ಪಡೆಯುವ ತಂತ್ರಗಾರಿಕೆಯೂ ಹೌದು. ಆದರೆ, ಥಿಯೇಟರ್‌ಗಳಲ್ಲಿ ಮೊದಲ ವಾರ ಟಿಕೆಟ್ ದರ ಮಾಮೂಲಿಗಿಂತ ನೂರು ರೂಪಾಯಿ ಏರಿಕೆಯಾಗುತ್ತದೆ. ಕಡಿಮೆ ದರವಿದ್ದರೆ ಸಿನಿಮಾ ಹೆಚ್ಚು ಪ್ರೇಕ್ಷಕರನ್ನು ತಲಪುತ್ತದೆ. ಹಣ ಸಂಗ್ರಹವೂ ಆಗುತ್ತದೆ. ನಿಜವಾದ ಸಿನಿಮಾ ಉದ್ದೇಶವೇ ಇದು. ಟಿಕೆಟ್ ದರ ದುಬಾರಿಯಾದರೆ ಪ್ರೇಕ್ಷಕರು ಪೈರಸಿಯ ಮೊರೆ ಹೋಗುತ್ತಾರೆ; ಇಲ್ಲವೆ ಟಿ.ವಿ.ಗಳಲ್ಲಿ ಪ್ರಸಾರ ಆಗುವ ತನಕ ಕಾಯುತ್ತಾರೆ. ಟಿಕೆಟ್ ದರ ಸದಾಕಾಲವೂ ಒಂದೇ ತೆರನಾಗಿ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದೋ ಅಥವಾ ನಟರದ್ದೋ?

⇒ಮಲ್ಲಿಕಾರ್ಜುನ, ಸುರಧೇನುಪುರ 

ಹತ್ಯೆ ಸಮರ್ಥನೆ: ಪ್ರಚೋದನೆಗೆ ಪ್ರೇರಣೆ

ದಲಿತ ಸಮುದಾಯದ ವ್ಯಕ್ತಿಯನ್ನು ಮದುವೆಯಾದಳೆಂದು ತಂದೆಯೇ
ಗರ್ಭಿಣಿ ಪುತ್ರಿಯನ್ನು ಕೊಂದ ಕೃತ್ಯ ಹೇಯವಾದುದು‌. ಈ ಮರ್ಯಾದೆ
ಗೇಡು ಹತ್ಯೆಯನ್ನು ಜಾತಿಗ್ರಸ್ತ ಮನಸ್ಸುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಮರ್ಥಿಸಿಕೊಳ್ಳುತ್ತಿರುವುದು ಕಳವಳಕಾರಿ. ಮರ್ಯಾದೆಗೇಡು ಹತ್ಯೆ ಅಥವಾ ಇನ್ನಾವುದೇ ಬಗೆಯ ಹತ್ಯೆಯನ್ನು ಸಮರ್ಥಿಸುವುದು ಕೊಲ್ಲುವ ಮನಃಸ್ಥಿತಿಯುಳ್ಳವರನ್ನು ಪ್ರಚೋದಿಸುತ್ತದೆ. ಸಾಮಾಜಿಕ ಸ್ವಾಸ್ಥ್ಯ ಹಾಳು
ಮಾಡುವ ಇಂಥವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮವನ್ನು ಜರುಗಿಸಬೇಕಿದೆ.

 –ಸಿ.ಎಚ್. ಮಧುಕುಮಾರ, ಮದ್ದೂರು‌

ಸಮಾಧಾನ

ಐಸ್ಲೆಂಡಿನಲ್ಲೂ

ಸೊಳ್ಳೆ:

ಇದೊಳ್ಳೆ ವಿದ್ಯಮಾನ;

ಭಾರತೀಯರಿಗೆ

ಎಲ್ಲಿಲ್ಲದ ಸಮಾಧಾನ!

 ಸಿಪಿಕೆ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.