ADVERTISEMENT

ವಾಚಕರ ವಾಣಿ | ಸಹ್ಯಾದ್ರಿ ರಕ್ಷಣೆ: ಬೇಕು ಪಕ್ಷರಾಜಕೀಯ ಮೀರಿದ ಆಸ್ಥೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಜೂನ್ 2022, 20:00 IST
Last Updated 16 ಜೂನ್ 2022, 20:00 IST

ದಕ್ಷಿಣ ಭಾರತದ ನೀರು, ಆಹಾರ ಹಾಗೂ ಜೀವನಭದ್ರತೆಯ ದೃಷ್ಟಿಯಿಂದ ಅಮೂಲ್ಯವಾಗಿರುವ ಪಶ್ಚಿಮಘಟ್ಟದ ಸೂಕ್ಷ್ಮಪ್ರದೇಶಗಳ ಸಂರಕ್ಷಣೆಗೆ ಸೂತ್ರಗಳನ್ನು ರೂಪಿಸಲು, ಕೇಂದ್ರ ಸರ್ಕಾರವು ಉನ್ನತ ಮಟ್ಟದ ಮೂರನೇ ಸಮಿತಿಯ ಮೊರೆ ಹೋಗಿರುವುದರ ಕುರಿತ ಸಂಪಾದಕೀಯ (ಪ್ರ.ವಾ., ಜೂನ್‌ 15) ಸಕಾಲಿಕ ಹಾಗೂ ಮೌಲಿಕವಾದದ್ದು. ಪರಿಸರ ಸಂರಕ್ಷಣೆಯು ಸಕಲರ ನೆಲ, ಜಲ, ಆಹಾರ, ಜೀವನಭದ್ರತೆಗಾಗಿ ಎಂಬ ಸಂಗತಿಯನ್ನೇ ನಮ್ಮ ಪ್ರಭುತ್ವ ಮರೆಯುತ್ತಿರುವುದು ವಿಷಾದಕರ. ಮಾಧವ ಗಾಡ್ಗೀಳ್‌ ಹಾಗೂ ಕಸ್ತೂರಿರಂಗನ್ ಸಮಿತಿಗಳ ಶಿಫಾರಸುಗಳ ಕುರಿತು ಜನರಲ್ಲಿ ಅನವಶ್ಯಕ ಭೀತಿ, ಸಂಶಯ ಮೂಡಿಸಿ ಅವು ಜಾರಿಯಾಗದಂತೆ ಮಾಡಿದ್ದು, ಆಡಳಿತದ ಸಮಗ್ರ ಕಲ್ಪನೆ ಹಾಗೂ ದೂರದರ್ಶಿತ್ವ ಇಲ್ಲದ ಅಧಿಕಾರ ರಾಜಕಾರಣ. ಸೂಕ್ಷ್ಮವಾದ ಸಹ್ಯಾದ್ರಿಯ ರಕ್ಷಣೆಗೆ ಈ ಸಮಿತಿಯು ಸೂಚಿಸುವ ಕ್ರಮಗಳನ್ನು ಜಾರಿಗೆ ತರಲು, ಈಗಲಾದರೂ ಪಕ್ಷರಾಜಕೀಯ ಮೀರಿ ಶಾಸಕಾಂಗವು ಆಸ್ಥೆ ವಹಿಸಬೇಕಾಗಿದೆ.

ಮಲೆನಾಡಿನ ರಕ್ಷಣೆಯೆಂಬುದು ಇಲ್ಲಿನ ಜನರನ್ನೂ ಒಳಗೊಂಡು ನಾಡಿನ ಹಿತ ಕಾಯುವಂಥದ್ದು. ಇಲ್ಲಿ ಹುಟ್ಟಿ ಇಕ್ಕೆಲಗಳಲ್ಲಿ ಹರಿಯುವ ನದಿಗಳೇ ಒಳನಾಡು ಹಾಗೂ ಕರಾವಳಿಯ ಕೃಷಿ ಮತ್ತು ಕುಡಿಯುವ ನೀರಿಗೆ ಆಧಾರ ಒದಗಿಸುವುದು. ಹವಾಮಾನ ಹದದಲ್ಲಿದ್ದು, ಜೀವವೈವಿಧ್ಯ ಸಂರಕ್ಷಣೆಯಾಗಿ, ಕೃಷಿ- ಮೀನುಗಾರಿಕೆ ಸುಸ್ಥಿರ ನೆಲೆಗಟ್ಟಿನಲ್ಲಿದ್ದರೆ ಮಾತ್ರ, ನಾವಿಂದು ಏರಿರುವ ‘ಅಭಿವೃದ್ಧಿ ಬಂಡಿ’ ಸುರಕ್ಷಿತವಾಗಿ ಸಾಗೀತು. ಈಗಲೂ ಸರ್ಕಾರ ಇದಕ್ಕೆ ಕಿವಿಗೊಡದಿದ್ದರೆ, ಭೂಕುಸಿತ, ನೆರೆ-ಬರ, ಬಿಸಿಗಾಳಿ, ನೀರಿನ ಕೊರತೆ, ಕೃಷಿ ಇಳುವರಿ ಕುಸಿತ- ಇವೆಲ್ಲ ಇನ್ನಷ್ಟು ಹೆಚ್ಚಿ, ಸಾಮೂಹಿಕ ಭವಿಷ್ಯವೇ ಅಂಧಕಾರಕ್ಕೆ ತಿರುಗೀತು. ಅಂದರೆ, ನಾವೀಗ ಸಂಭ್ರಮಿಸುತ್ತಿರುವ ಕೊಳ್ಳುಬಾಕ ಸಂಸ್ಕೃತಿಯ ‘ಮಿತಿಯಿರದ ಸುಖ’ದ ಕನಸು ಮುರಿಯುವ ವೇಳೆ ಬರುತ್ತಿದೆ ಎಂದೇ ಅರ್ಥ!

-ಡಾ. ಕೇಶವ ಎಚ್. ಕೊರ್ಸೆ, ಶಿರಸಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.