ADVERTISEMENT

ವಿರುದ್ಧ ಧೋರಣೆಯ ಟೀಕೆ ತರವಲ್ಲ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 14:45 IST
Last Updated 6 ಅಕ್ಟೋಬರ್ 2021, 14:45 IST

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರ್‌ಎಸ್‌ಎಸ್ ನಿರ್ದೇಶನದಂತೆ ಕೆಲಸ ಮಾಡುತ್ತಿವೆ ಎಂದು ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಅವರು ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಅ. 6). ‘ಕಳೆದ ಹಲವು ದಿನಗಳಿಂದ ಆರ್‌ಎಸ್ಎಸ್ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ. ಈ ಸಂಘಟನೆ ಹೇಗೆ ಕೆಲಸ ಮಾಡುತ್ತದೆ ಮತ್ತು ಚುನಾಯಿತ ಸರ್ಕಾರಗಳನ್ನು ಹೇಗೆ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುತ್ತದೆ ಎಂಬುದನ್ನು ತಿಳಿದು ಆಘಾತವಾಯಿತು. ದೇಶದ ನಾಗರಿಕ ಸೇವಾ ಅಧಿಕಾರಿಗಳೂ ಸೇರಿದಂತೆ ನಾಲ್ಕು ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಸಂಘದ ತರಬೇತಿ ಪಡೆದು ಕೆಲಸ ಮಾಡುತ್ತಿದ್ದಾರೆ’ ಎನ್ನುವ ಮಾಹಿತಿಯನ್ನೂ ಅವರು ಜನತೆಗೆ ನೀಡಿದ್ದಾರೆ! ಆದರೆ ಟ್ವೀಟ್ ಮೂಲಕ ‘ಯಾವುದೇ ಸಂಘ, ಪಕ್ಷದ ವಿರುದ್ಧ ನಾನು ಟೀಕೆ ಮಾಡಿಲ್ಲ. ಆರ್‌ಎಸ್ಎಸ್ ಕುರಿತು ಕೆಲವು ಲೇಖಕರು ಬರೆದ ಪುಸ್ತಕಗಳನ್ನು ಓದಿದ್ದು, ಆ ಅಂಶಗಳನ್ನಷ್ಟೇ ಹೇಳಿದ್ದೇನೆ’ ಎಂದಿದ್ದಾರೆ. ಕುಮಾರಸ್ವಾಮಿಯವರು ಆಡಿದರೆನ್ನಲಾದ ಮಾತುಗಳಿಗೂ ಅವರ ಟ್ವೀಟಿಗೂ ಇರುವ ವೈರುಧ್ಯ ಗಮನಾರ್ಹ! ಕುಮಾರಸ್ವಾಮಿ ಅವರಿಗೆ ಆರ್‌ಎಸ್ಎಸ್‌ನ ಪ್ರಭಾವದ ಬಗ್ಗೆ ಪರಿಚಯವಾದುದು ತಾವು ‘ಅಧ್ಯಯನ’ ಮಾಡಿದ ಪುಸ್ತಕಗಳ ಮೂಲಕ, ಅಂದರೆ ಸ್ವಾನುಭವದ ಮೂಲಕವಲ್ಲ! ಆ ಪುಸ್ತಕಗಳು ಯಾವುವು ಎಂದು ಅವರು ತಿಳಿಸಿದರೆ ಒಳ್ಳೆಯದು.

ಅವರು ಹೇಳಿರುವಂತೆ, ಸಂಘದ ತರಬೇತಿ ಪಡೆದು ಕೆಲಸ ಮಾಡುತ್ತಿರುವ ಅಧಿಕಾರಿಗಳು ಯಾವ ಪಕ್ಷ ಅಧಿಕಾರದಲ್ಲಿದ್ದಾಗ ನೇಮಕಗೊಂಡರು? 95 ವರ್ಷಗಳ ಹಿಂದೆ ರೂಪುಗೊಂಡ ಸಂಘದ ವರ್ಚಸ್ಸು ಕುಂದಿಲ್ಲ. ಪ್ರಕೃತಿ ವಿಕೋಪದಂತಹ ಸಂಕಷ್ಟದ ಸಮಯದಲ್ಲಿ ಅದು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಜೆಡಿಎಸ್ ಒಳಗೊಂಡು ಯಾವುದೇ ವಿರೋಧ ಪಕ್ಷವಾದರೂ ಇಂಥ ಒಂದು ಶಿಸ್ತಿನ ಸೇವಾ ತಂಡವನ್ನು ಕಟ್ಟಿದೆಯೇ? ಆರ್‌ಎಸ್ಎಸ್‌ನ ಸಿದ್ಧಾಂತ ಮತ್ತು ಧೋರಣೆಗಳು ಕುಮಾರಸ್ವಾಮಿ ಅವರಿಗೆ ಸಮ್ಮತ ಅಲ್ಲ, ಸರಿಯೆ. ಆದರೆ ಅದೊಂದು ವಿನಾಶಕಾರಿ ಸಂಘಟನೆ ಎಂದು ಟೀಕಿಸುವುದು, ನಿರ್ಲಿಪ್ತ ಭಾವದಿಂದ ಇರಬೇಕಾದ ರಾಜಕಾರಣಿಗೆ ಸಲ್ಲದು. ಯಾರೋ ಬರೆದುದು ನಮ್ಮ ತೀರ್ಮಾನಗಳಿಗೆ ಆಧಾರವಾಗಬೇಕೆ? ಸ್ವಂತಿಕೆಗೆ ಆಗ ಏನು ಅರ್ಥ?

-ಸಾಮಗ ದತ್ತಾತ್ರಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.