ADVERTISEMENT

ನೆಲೆ ಕಳೆದುಕೊಂಡಿದೆ ಜೇನ್ನೊಣ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 9 ಡಿಸೆಂಬರ್ 2020, 19:31 IST
Last Updated 9 ಡಿಸೆಂಬರ್ 2020, 19:31 IST

ಜೇನುತುಪ್ಪವನ್ನು ಕಲಬೆರಕೆ ಮಾಡಲಾಗುತ್ತಿದೆ ಮತ್ತು ಇದನ್ನು ಪರೀಕ್ಷೆ ಮಾಡಲು ನಮ್ಮಲ್ಲಿ ಸರಿಯಾದ ಪ್ರಾಯೋಗಿಕ ವ್ಯವಸ್ಥೆ ಇಲ್ಲ ಎಂದು ‌ ವರದಿಯಾಗಿದೆ. ಇಲ್ಲಿ ಅರಿಯಬೇಕಾದ ಸರಳ ಸತ್ಯವೊಂದಿದೆ. ಭಾರತದಲ್ಲಿ ಕಾಡುಗಳ ಪ್ರಮಾಣ‌ ಅಪಾಯದ ಮಟ್ಟವನ್ನು ಮೀರಿ‌ ಕ್ಷೀಣಿಸಿದೆ.‌ ಇಲ್ಲಿ ವಾಸಿಸುತ್ತಿದ್ದ ಕೋಟ್ಯಂತರ ಜೇನುಕುಟುಂಬಗಳು ಇದರಿಂದ ನೆಲೆ‌ ಕಳೆದುಕೊಂಡಿವೆ. ಇನ್ನು ನಮ್ಮ ಕೃಷಿ ವಿಧಾನಗಳು ಜೇನ್ನೊಣಗಳ ಕುಟುಂಬಗಳಮೇಲೆ ಮಾರಣಾಂತಿಕ ದಾಳಿ ನಡೆಸಿವೆ. ನಮ್ಮಲ್ಲಿ ಬೆಳೆಗಳ ಪ್ರತೀ ಭಾಗವೂ ಕ್ರಿಮಿನಾಶಕದಿಂದ ಮಜ್ಜನಗೊಳ್ಳುತ್ತದೆ.

ಪ್ರತಿನಿತ್ಯ ತಂಡೋಪತಂಡವಾಗಿ ಜೇನು ಸಂಗ್ರಹಣೆಗೆ ಹೊರಡುವ ಜೇನ್ನೊಣಗಳು ಮಕರಂದದೊಂದಿಗೆ ಹಿಂದಿರುಗುವ ಬದಲು, ಅದರಲ್ಲಿರುವ ವಿಷಕಾರಿ ಕ್ರಿಮಿನಾಶಕ ಸೇವಿಸಿ ಸಾವನ್ನುಪ್ಪುತ್ತಿವೆ. ವಾಣಿಜ್ಯ ಬೆಳೆಗಳು, ಸಾಮಾನ್ಯ ಬೆಳೆಗಳೆನ್ನದೆ ಎಲ್ಲಾ ಬೆಳೆಗಳನ್ನು ಇಂದು ಕ್ರಿಮಿನಾಶಕದಿಂದಲೇ ಬೆಳೆಯಲಾಗುತ್ತಿದೆ. ಹೀಗಾಗಿ ಜೇನುಕುಟುಂಬಗಳು ನಶಿಸುತ್ತಿವೆ.‌

ಇನ್ನು ವಾಣಿಜ್ಯ ಉದ್ದೇಶದ ಜೇನು ಕೃಷಿಯಲ್ಲೂ ಇದೇ‌ ರೀತಿಯ ಸಮಸ್ಯೆಗಳಿರುವುದರಿಂದ ಜೇನಿನ ಉತ್ಪಾದನೆ ಕುಂಠಿತವಾಗುತ್ತದೆ. ಆಗ ವ್ಯಾಪಾರಿ ಮನಸ್ಸುಗಳು ಕಲಬೆರಕೆ ಮಾಡಿ ತಮ್ಮ ಜೇಬು ತುಂಬಿಸಿಕೊಳ್ಳುತ್ತವೆ. ನಾವುಗಳೇ ಜೇನುಕುಟುಂಬಗಳಿಗೆ ವಿಷವುಣಿಸಿ, ನಮಗೆ ಸಿಹಿಯಾದ ಶುದ್ಧ ಜೇನುತುಪ್ಪ ಕೊಡಿ ಎಂದು ಕೇಳುತ್ತಿರುವುದು ದುರಂತವೇ ಸರಿ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಜೇನಿನ ಇಳುವರಿ ಗಂಭೀರವಾಗಿಕುಂಠಿತವಾಗುತ್ತದೆ.

ADVERTISEMENT

- ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.