ADVERTISEMENT

ಬಂಡವಾಳ ಹಿಂತೆಗೆತ: ಆಶಯ ತಪ್ಪಲ್ಲ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 20:15 IST
Last Updated 19 ಏಪ್ರಿಲ್ 2019, 20:15 IST

‘ಚೌಕೀದಾರ್ ಚೋರ್ ಅಲ್ಲದಿರಲೂಬಹುದು’ ಬರಹದಲ್ಲಿ(ಪ್ರ.ವಾ., ಏ. 16) ಲೇಖಕ ದೇವನೂರ ಮಹಾದೇವ ಅವರು ‘ಪೂರ್ವಿಕರು ಕಟ್ಟಿ ಬೆಳೆಸಿದ ದೇಶದ ಸಂಪತ್ತನ್ನು ಮಾರಾಟ ಮಾಡುವವನನ್ನು ಮಹಾನ್ ಮನೆಹಾಳ ಅನ್ನಬೇಕಾಗುತ್ತದೆ’ ಎಂದು ಹೇಳಿದ್ದಾರೆ. ಮಹಾದೇವ ಅವರು ಬಂಡವಾಳ ಹಿಂತೆಗೆತವನ್ನು ವಿರೋಧಿಸುತ್ತಿದ್ದಾರೆ ಎಂಬುದು ಸ್ಪಷ್ಟ.

ಒಂದು ಉದಾಹರಣೆ ಗಮನಿಸೋಣ. ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ಕಂಪನಿ ಸಾವಿರಾರು ಕೋಟಿ ರೂಪಾಯಿಯ ನಷ್ಟ ಅನುಭವಿಸುತ್ತಿದೆ. ಆ ಕಂಪನಿಯನ್ನು ಉಳಿಸಲು ಸರ್ಕಾರ ನಮ್ಮ (ತೆರಿಗೆದಾರರ) ಸಾವಿರ ಕೋಟಿ ರೂಪಾಯಿ ನೀಡುತ್ತಿದೆ. ಅಷ್ಟಾಗಿಯೂ ಈ ಕಂಪನಿಯ ಹಣೆಬರಹ ಏನಾಗುತ್ತದೆ ಎಂಬುದು ಖಚಿತವಾಗಿಲ್ಲ. ಒಂದು ವೇಳೆ, ಸರ್ಕಾರ ಹಿಂದೆಯೇ ಈ ಕಂಪನಿಯನ್ನು ಮಾರಾಟ ಮಾಡಿ (ಅಂದರೆ ಅದರಲ್ಲಿನ ಬಂಡವಾಳ ಹಿಂತೆಗೆದುಕೊಂಡು) ಖಾಸಗಿ ಕಂಪನಿಗಳ ಕೈಗೆ ಒಪ್ಪಿಸಿದ್ದರೆ? ಸಾರ್ವಜನಿಕರ ಹಣ ಉಳಿತಾಯ ಆಗುತ್ತಿತ್ತು.

‘ಮಾರುಕಟ್ಟೆ’ಗೆ ಆ ಕಂಪನಿ ಬೇಕು ಅಂದರೆ ಉಳಿದುಕೊಳ್ಳುತ್ತಿತ್ತು, ಬೇಡವಾದರೆ ಅಳಿಯುತ್ತಿತ್ತು. ಬಂಡವಾಳ ಹಿಂತೆಗೆತ ಶುರುವಾಗಿದ್ದು ನರೇಂದ್ರ ಮೋದಿ ಅವರ ಆಡಳಿತದಲ್ಲಿ ಅಲ್ಲ. ಅದು ಶುರುವಾಗಿದ್ದು ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದಾಗ. ನಂತರ ಬಂದ ಹಲವು ಸರ್ಕಾರಗಳು ಈ ಪ್ರಕ್ರಿಯೆಗೆ ಕೊಡುಗೆ ನೀಡಿವೆ. ಅಷ್ಟೇ ಅಲ್ಲ, ರಾಜೀವ್ ಗಾಂಧಿ ಅವರು ‘ಖಾಸಗಿ ಉದ್ದಿಮೆಗಳ ಪಾತ್ರ ವಿಸ್ತರಿಸಬೇಕು, ಲಾಭದಲ್ಲಿ ಇಲ್ಲದ ಸರ್ಕಾರಿ ಉದ್ದಿಮೆಗಳನ್ನು ಖಾಸಗಿಯವರು ಖರೀದಿಸಬೇಕು ಎನ್ನುವುದನ್ನು ಬಲವಾಗಿ ಸಮರ್ಥಿಸುತ್ತಿದ್ದರು’ ಎಂಬುದನ್ನು ಮರೆಯುವಂತಿಲ್ಲ.

ADVERTISEMENT

ಕಾಲ ಬದಲಾಗಿದೆ. ದೇಶ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ, ಈ ದೇಶದಲ್ಲಿ ಬಂಡವಾಳ ಹೂಡಿ ಕಂಪನಿಗಳನ್ನು ಆರಂಭಿಸುವ ಧೈರ್ಯವನ್ನು ಟಾಟಾ, ಬಿರ್ಲಾರಂತಹ ಕೆಲವರನ್ನು ಹೊರತುಪಡಿಸಿದರೆ ಯಾರೂ ತೋರಿಸಲಿಲ್ಲ. ಹಾಗಾಗಿ, ನೆಹರೂ ಅವರು ಸರ್ಕಾರದ ಮಾಲೀಕತ್ವದಲ್ಲಿ ಹತ್ತು ಹಲವು ಕಂಪನಿಗಳನ್ನು ಆರಂಭಿಸಿದರು. ಆ ಕಾಲಕ್ಕೆ ಆ ಕ್ರಮ ಸರಿಯೇ. ಆದರೆ, ಇಂದು ಸರ್ಕಾರ ಮಾಡಬೇಕಾದ ಕೆಲಸ ಕಂಪನಿಗಳನ್ನು ನಡೆಸುವುದಲ್ಲ. ಏರ್‌ ಇಂಡಿಯಾ ಅಥವಾ ಬಿಎಸ್‌ಎನ್ಎಲ್‌ನಂತಹ ಕಂಪನಿಗಳಲ್ಲಿನ ತನ್ನ ಪಾಲನ್ನು ಮಾರಾಟ ಮಾಡಬೇಕು. ಅದು ಮನೆಹಾಳು ಕೆಲಸ ಖಂಡಿತ ಅಲ್ಲ!

ಸರ್ಕಾರ ಈಗ ಏನು ಮಾಡಬೇಕು? ಆರೋಗ್ಯ, ಶಿಕ್ಷಣ, ಆಹಾರ... ಇಂತಹ ಜನರ ಬದುಕಿನ ಅತಿ ಅಗತ್ಯಗಳನ್ನು ನಾರ್ವೆ, ಸ್ವೀಡನ್‌ನಂತಹ ದೇಶಗಳು ನೀಡುವ ಗುಣಮಟ್ಟದಲ್ಲಿ ಭಾರತೀಯರಿಗೆ ಒದಗಿಸುವುದು. ನಮ್ಮ ದೇಶದಲ್ಲಿನ ತಮಾಷೆ ಎಂದರೆ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಮಾರಾಟ ಮಾಡಬಾರದು ಎಂದು ಹೋರಾಟ ನಡೆಸುವವರು, ಶಿಕ್ಷಣ–ಆರೋಗ್ಯದಂತಹ ಕ್ಷೇತ್ರಗಳಲ್ಲಿ ಖಾಸಗಿಯವರಿಗಿಂತ ಹೆಚ್ಚಿನ ಪ್ರಾಬಲ್ಯ ಸರ್ಕಾ ರಕ್ಕೆ ಇರಬೇಕು, ಇಂತಹ ಸೇವೆಗಳನ್ನು ಸರ್ಕಾರ ಅತ್ಯಂತ ಕಡಿಮೆ ಖರ್ಚಿನಲ್ಲಿ ಒದಗಿಸಬೇಕು ಎಂದು ದಬಾಯಿಸಿ ಹೇಳುತ್ತಿಲ್ಲ. ಸರ್ಕಾರ, ಬಂಡವಾಳ ಹಿಂತೆಗೆದುಕೊಳ್ಳುವುದರ ಹಿಂದಿನ ತಾತ್ವಿಕತೆ ಸರಿಯಾಗಿದೆ. ಅಲ್ಲಿ ಲೋಪಗಳಿ ರಬಹುದು, ಆದರೆ ಆಶಯ ತಪ್ಪಲ್ಲ.
– ವಿಜಯ ರಾಘವ,ಮೂಡುಬಿದಿರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.