ADVERTISEMENT

ಕನ್ನಡ ನಾಡಲ್ಲೇಕೆ ಉಪ್ಪಿನಕಾಯಿಯೇ ಊಟವಾಗಿದೆ?

​ಪ್ರಜಾವಾಣಿ ವಾರ್ತೆ
Published 9 ಮೇ 2019, 19:02 IST
Last Updated 9 ಮೇ 2019, 19:02 IST

ತಮ್ಮ ಸರ್ಕಾರಿ ಶಾಲೆಗಳಲ್ಲಿ ಪ್ರಸಕ್ತ ಸಾಲಿನಿಂದ ಇಂಗ್ಲಿಷ್‌ ಮಾಧ್ಯಮ ಪ್ರಾರಂಭವಾಗಿರುವುದನ್ನು ರಾಮನಗರದ ಶಿಕ್ಷಕರು ಧ್ವನಿವರ್ಧಕ ಹಿಡಿದು ಪ್ರಚಾರ ಮಾಡಿದ್ದಾರೆ (ಪ್ರ.ವಾ., ಮೇ 3). ರಾಜ್ಯದ ಹಲವಾರು ಮಂದಿ ಕನ್ನಡ ಮಾಧ್ಯಮದಲ್ಲೇ ಕಲಿತು ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ, ನಿರ್ವಹಿಸುತ್ತಿದ್ದಾರೆ. ಸರ್ಕಾರದ ಇತ್ತೀಚಿನ ಆದೇಶದಿಂದ ಬಂದೊದಗಿರುವ, ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧಿಸುವ ಸಂಕಟ ಹಾಗೂ ಕಲಿಕಾ ಮಾಧ್ಯಮದ ಮಹತ್ವ ತಿಳಿಯದ ಮುಗ್ಧ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ನೆನೆದು ಬೇಸರವಾಗುತ್ತಿದೆ.

ನಾನು ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ, ಪಿಯುಸಿಯಿಂದ ಸ್ನಾತಕೋತ್ತರ ಪದವಿಯವರೆಗೆ ಅಲ್ಲದೆ ಪ್ರಸ್ತುತ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್.ಡಿ.ಯನ್ನು ಇಂಗ್ಲಿಷ್‌ ಮಾಧ್ಯಮದಲ್ಲಿ ಮುಂದುವರಿಸಿದ್ದೇನೆ. ಈ ಸಂದರ್ಭದಲ್ಲೂ, ನನ್ನ ಮಾತೃಭಾಷೆ ಹಾಗೂ ಕಲಿಕಾ ಭಾಷೆ ಕನ್ನಡದ ಬಗೆಗೆ ಬಹಳ ಹೆಮ್ಮೆ ಇದೆ.

ನಾಡ ಭಾಷೆಯಲ್ಲೇ ಈ ಮಣ್ಣಿನ ಮಕ್ಕಳಿಗೆ ಬೋಧಿಸಿದರೆ ಭಾಷೆಯ ಮೇಲಿನ ಪ್ರೀತಿ, ಗೌರವ ಮತ್ತು ಜವಾಬ್ದಾರಿಯ ಅರಿವಾಗುತ್ತದೆ. ಜೊತೆಗೆ ಇದನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯುವ ರಾಯಭಾರಿಗಳಾಗುತ್ತಾರೆ. ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತ ನಮ್ಮ ಕನ್ನಡದ ಮಕ್ಕಳು ಕನ್ನಡ ಭಾಷೆಗೆ ಮಾರಕರಾಗದಿದ್ದರೂ ಕನ್ನಡ ಲಿಪಿಗೆ ಖಂಡಿತ ಮಾರಕರಾಗುತ್ತಾರೆ. ಈ ಆಪತ್ತಿನ ಬಗೆಗೆ ನಾಡಿನ ಹಿರಿಯರು ಹಾಗೂ ಅಧಿಕಾರಸ್ಥರು ನಮ್ಮ ನಾಡು–ನುಡಿಗಾಗಿ ಸೂಕ್ತವಾದ ಕ್ರಮಗಳನ್ನು ಜಾರಿಗೆ ತಂದು, ನಮ್ಮ ಭಾಷೆ ಹಾಗೂ ಲಿಪಿಗೆ ಬಂದೊದಗಲಿರುವ ಕಂಟಕವನ್ನು ನಿವಾರಿಸಬೇಕು. ಅದರ ಉಳಿವಿಗಾಗಿ ಒಂದರಿಂದ ಹತ್ತನೇ ತರಗತಿಯವರೆಗೆ ಎಲ್ಲಾ ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಪ್ರಾಶಸ್ತ್ಯ ಕೊಡಬೇಕು.

ADVERTISEMENT

ಜಪಾನ್, ಚೀನಾದಂತಹ ರಾಷ್ಟ್ರಗಳು ಇಂಗ್ಲಿಷ್‌ ಭಾಷೆಯನ್ನು ಊಟಕ್ಕೆ ಉಪ್ಪಿನಕಾಯಿಯ ರೀತಿ ಬಳಸುತ್ತಿರುವ ಈ ಕಾಲಘಟ್ಟದಲ್ಲಿ, ನಮ್ಮ ಕನ್ನಡ ನಾಡೇಕೆ ಉಪ್ಪಿನ ಕಾಯಿಯನ್ನು ಊಟದ ರೀತಿ ತಿನ್ನುವುದು? ಅಬ್ದುಲ್ ಕಲಾಂ ಮತ್ತು ಸಿ.ಎನ್.ಆರ್. ರಾವ್‌ ಅವರಂತಹ ಭಾರತ ರತ್ನಗಳ ಮಾತೃ ಭಾಷೆಯಲ್ಲಿನ ಕಲಿಕಾ ನಿಲುವು ನಮಗೆ ಸ್ಫೂರ್ತಿದಾಯಕ ಆಗಬೇಕಿದೆ.
-ರಾಜೇಶ್‌ ಸಿದ್ಧಪ್ಪ, ಕನಕಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.