ADVERTISEMENT

ಅಘನಾಶಿನಿ ಕಣಿವೆ: ಏಕಪಕ್ಷೀಯ ನಿರ್ಧಾರ 

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 19:30 IST
Last Updated 12 ಜೂನ್ 2019, 19:30 IST

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ಧಾಪುರ, ಕುಮಟಾ ಹಾಗೂ ಹೊನ್ನಾವರ ತಾಲ್ಲೂಕುಗಳ ವ್ಯಾಪ್ತಿಯಲ್ಲಿನ ಶರಾವತಿ ಮತ್ತು ಅಘನಾಶಿನಿ ನದಿಕಣಿವೆಗಳ ವಿಸ್ತಾರವಾದ ಅರಣ್ಯ ಪ್ರದೇಶವನ್ನು ಶಿವಮೊಗ್ಗ ಜಿಲ್ಲೆಯ ಶರಾವತಿ ಅಭಯಾರಣ್ಯಕ್ಕೆ ಸೇರಿಸುವ ನಿರ್ಧಾರವನ್ನು ರಾಜ್ಯ ವನ್ಯಜೀವಿ ಮಂಡಳಿ ಇತ್ತೀಚೆಗೆ ಕೈಗೊಂಡಿದ್ದು, ಈ ಕುರಿತ ಅಧಿಕೃತ ಸರ್ಕಾರಿ ಸುತ್ತೋಲೆಯು ಜೂನ್ 6ರಂದು ಪ್ರಕಟವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಾವುದೇ ಜನಪ್ರತಿನಿಧಿ, ರೈತರು, ವನವಾಸಿಗಳು ಹಾಗೂ ಸ್ಥಳೀಯ ಸಂಘ–ಸಂಸ್ಥೆಗಳ ಗಮನಕ್ಕೆ ತರದೇ ಕೈಗೊಂಡ ಏಕಪಕ್ಷೀಯ ಹಾಗೂ ದಿಢೀರ್ ನಿರ್ಧಾರ ಇದು.

ದೇಶದಲ್ಲಿ ಇನ್ನೂ ಮಲಿನವಾಗದ ಕೆಲವೇ ಜೀವಂತ ನದಿಗಳಲ್ಲಿ ಒಂದಾದ ಅಘನಾಶಿನಿ ನದಿಕಣಿವೆಯು ಅತ್ಯಂತ ಅಪರೂಪದ ಸಸ್ತನಿಯಾದ ಸಿಂಗಳೀಕದ ವಾಸಸ್ಥಾನವೂ ಹೌದು. ಅನಾದಿಯಿಂದ ಈ ಜೀವವೈವಿಧ್ಯ ಪ್ರದೇಶವನ್ನು ಪೋಷಿಸಿಕೊಂಡು ಬಂದ ಸ್ಥಳೀಯರು, ಇದನ್ನು ‘ಸಿಂಗಳೀಕ ಸಂರಕ್ಷಿತ ಪ್ರದೇಶ’ವೆಂದು ಘೋಷಿಸಲು ಸರ್ಕಾರಕ್ಕೆ ನೀಡಿದ ಸಹಕಾರ ಅನುಪಮವಾದದ್ದು. ಪರಿಸರ ಸಂರಕ್ಷಣೆ ಹಾಗೂ ಸ್ಥಳೀಯರ ಶ್ರೇಯೋಭಿವೃದ್ಧಿ- ಇವೆರಡನ್ನೂ ಸಾಧಿಸುವ ಈ ಪ್ರಯತ್ನವು ಈಗ ದೇಶಕ್ಕೆ ಮಾದರಿಯೆಂದು ಗುರುತಿಸಲ್ಪಟ್ಟಿದೆ.ಆದರೆ, ಸರ್ಕಾರವು ಇದೀಗ ಜನಸಹಭಾಗಿತ್ವದ ಈ ಆದರ್ಶದ ಸ್ಥಿತಿಯಿಂದ ಒಮ್ಮೆಲೇ ಹಿಂದಡಿ ಇಟ್ಟಂತಿದೆ. ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ಕಣಿವೆಯ ವಿಸ್ತಾರವಾದ ಅರಣ್ಯ ಪ್ರದೇಶವನ್ನು, ಪಕ್ಕದ ಶಿವಮೊಗ್ಗ ಜಿಲ್ಲೆಯ ಶರಾವತಿ ಅಭಯಾರಣ್ಯಕ್ಕೆ ಏಕಾಏಕಿ ಸೇರ್ಪಡೆ ಮಾಡಿರುವುದು ಅವೈಜ್ಞಾನಿಕವೂ, ಜನವಿರೋಧಿಯೂ ಹಾಗೂ ಸಂರಕ್ಷಣಾ ತತ್ವದ ವಿರೋಧಿ ನಡೆಯೂ ಆಗಿದೆ. ಅಭಯಾರಣ್ಯವೆಂದು ಘೋಷಿಸಿ, ಜನರನ್ನು ಹೊರಗಿಟ್ಟು ವನ್ಯಜೀವಿಗಳನ್ನು ಸಂರಕ್ಷಿಸಲು ದೇಶದ ವಿವಿಧೆಡೆ ಮಾಡಿದ ಪ್ರಯತ್ನಗಳು ವಿಫಲವಾಗಿರುವ ಹಲವು ಉದಾಹರಣೆಗಳು ಕಣ್ಣಮುಂದಿದ್ದರೂ, ಇಂಥದ್ದೊಂದು ಅವಿವೇಕದ ನಿರ್ಧಾರವನ್ನು ಅರಣ್ಯ ಮತ್ತು ಪರಿಸರ ಇಲಾಖೆ ಕೈಗೊಂಡಿದ್ದು ನೋವಿನ ಸಂಗತಿ.

ಆದ್ದರಿಂದ, ಮುಖ್ಯಮಂತ್ರಿಯವರು ಅಧ್ಯಕ್ಷರಾಗಿರುವ ರಾಜ್ಯ ವನ್ಯಜೀವಿ ಮಂಡಳಿಯು ತಕ್ಷಣ ಈ ಆದೇಶವನ್ನು ಹಿಂಪಡೆಯಬೇಕು. ‘ಅಘನಾಶಿನಿ ಸಿಂಗಳೀಕ ಸಂರಕ್ಷಿತ ಪ್ರದೇಶ’ಕ್ಕೆ ನಿರ್ವಹಣಾ ಸಮಿತಿಯನ್ನು ರಚಿಸಿ ಕ್ರಿಯಾಶೀಲಗೊಳಿಸುವ ಮೂಲಕ, ಈ ಪರಿಸರಸೂಕ್ಷ್ಮ ಪ್ರದೇಶವನ್ನು ಜನಸಹಭಾಗಿತ್ವದೊಂದಿಗೆ ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕು.

ADVERTISEMENT

-ಅನಂತ ಹೆಗಡೆ ಅಶೀಸರ,ಎಂ.ಆರ್. ಹೆಗಡೆ ಹೊಲನಗದ್ದೆ,ಶಾಂತಾರಾಮ ಸಿದ್ಧಿ,ಬಾಲಚಂದ್ರ ಸಾಯಿಮನೆ,ನರಸಿಂಹ ಹೆಗಡೆ,ವಿಶ್ವನಾಥ ಬುಗಡಿಮನೆ,ನಾರಾಯಣ ಗಡಿಕೈ,ಕೇಶವ ಎಚ್. ಕೊರ್ಸೆ,ಗಣಪತಿ ಬೆಳ್ಳೇಕೇರಿ,ಈಶಣ್ಣ ನೀರ್ನಳ್ಳಿ,ಗಣಪತಿ ಕೆ. ಬಿಸಲಕೊಪ್ಪ,ಉಮಾಪತಿ ಭಟ್, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.