ADVERTISEMENT

ವಾಚಕರ ವಾಣಿ: ಮರ್ಯಾದೆ ಹತ್ಯೆ ಮತ್ತು ಜಾತಿಗ್ರಸ್ತ ಮನಸ್ಸು

ಪ್ರಜಾವಾಣಿ ವಿಶೇಷ
Published 30 ಡಿಸೆಂಬರ್ 2025, 21:59 IST
Last Updated 30 ಡಿಸೆಂಬರ್ 2025, 21:59 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಮರ್ಯಾದೆ ಹತ್ಯೆ ಮತ್ತು ಜಾತಿಗ್ರಸ್ತ ಮನಸ್ಸು

ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದಲ್ಲಿ ನಡೆದಿರುವ ಮರ್ಯಾದೆಗೇಡು ಹತ್ಯೆ ದಿಗಿಲು ಹುಟ್ಟಿಸುವಂಥದ್ದು. ಆ ಸಮಯದಲ್ಲಿ ಇದಕ್ಕೆ ಕಾರಣರಾದ ಆ ಒಟ್ಟು ಕುಟುಂಬವು ಎಂಥ ಒದ್ದಾಟಕ್ಕೆ ಸಿಕ್ಕಿಕೊಂಡಿರಬಹುದು? ಆದರೆ, ಇಂಥ ಘಟನೆ ಹೆಚ್ಚು ನಡೆಯುತ್ತಿರುವುದು ಮೇಲ್ವರ್ಗದ ಹುಡುಗಿಯು ದಲಿತ ಜಾತಿಗೆ ಸೇರಿದ ಹುಡುಗನನ್ನು ಮದುವೆಯಾದಾಗ. ಇಂಥದ್ದನ್ನು ತಡೆಯಲು ಕಾನೂನಿನ ಮೂಲಕ ಆಗುವುದಿಲ್ಲ. ಸಾಮಾಜಿಕ ಕಾರ್ಯಕರ್ತರು ಹಾಗೂ ಮಠಾಧೀಶರು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಬೇಕು.

ADVERTISEMENT

ಮಠಾಧೀಶರ ಮಾತು ಕೆಳವರ್ಗದವರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದು ಒಂದು ದಿವಸ ನಡೆಯುವಂಥದ್ದಲ್ಲ. ನಿರಂತರವಾಗಿ ನಡೆಯ ಬೇಕಾದದ್ದು. ಜಾತಿ ವ್ಯವಸ್ಥೆ ಚೌಕಟ್ಟಿನಲ್ಲಿ ಮೇಲು–ಕೀಳು ಗಾಢವಾಗಿ ಬೇರೂರಿದೆ. ಮೇಲಿನಿಂದ ಸುಧಾರಣೆ ನಿಜವಾಗಿಯೂ ಆಗುವುದಿಲ್ಲ. ಮಠಾಧೀಶರು ಇದನ್ನು ತಮ್ಮ ಪ್ರಾಥಮಿಕ ಕರ್ತವ್ಯವೆಂದು ತಿಳಿದು ಮಾಡಬೇಕಾಗಿದೆ.  

ಶೂದ್ರ ಶ್ರೀನಿವಾಸ್, ಬೆಂಗಳೂರು

ಬದುಕಿಗೆ ಬೊಗಸೆಯಷ್ಟು ಪ್ರೀತಿ ಸಾಕಲ್ಲವೆ?

ಇಂದಿನ ತಂತ್ರಜ್ಞಾನಯುಗದ ಕಾಲಘಟ್ಟದಲ್ಲಿ ಪ್ರೀತಿ ಮತ್ತು ಮಾನವೀಯ ಮೌಲ್ಯ ಕುಸಿಯುತ್ತಿವೆ. ಒಂದೇ ಮನೆಯಲ್ಲಿದ್ದರೂ ಮನುಷ್ಯನನ್ನು ಒಂಟಿತನ ಕಾಡುತ್ತಿದೆ. ಪರಸ್ಪರ ಮಾತನಾಡಲು ಆಗುತ್ತಿಲ್ಲ. ದುಬಾರಿ ವಸ್ತುಗಳು ಮಾನವನ ಜೀವನವನ್ನು ಸರಳಗೊಳಿಸುವ ಸಾಧನಗಳಷ್ಟೆ. ಅವುಗಳನ್ನು ಪಡೆಯಲು ಹಗಲುರಾತ್ರಿ ಎನ್ನದೆ ಕುಟುಂಬವನ್ನು ನಿರ್ಲಕ್ಷಿಸಿ ದುಡಿಯುವುದು ಎಷ್ಟು ಸರಿ? ಮನುಷ್ಯನಿಗೆ ಅಂತಿಮ ವಾಗಿ ಬೇಕಾಗಿರುವುದು ಬೊಗಸೆಯಷ್ಟು ಪ್ರೀತಿ; ಜನರ ಮನ್ನಣೆ, ಮತ್ತು ಗೌರವ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಹೊಸ ವರ್ಷವನ್ನು ಸ್ವಾಗತಿಸೋಣ.

ಶಿವಪ್ರಸಾದ, ಬೆಂಗಳೂರು 

ವಸತಿ ಯೋಜನೆಗಳ ಪರಾಮರ್ಶೆ ಅಗತ್ಯ

ಪುಟ್ಟ ಮನೆ ಎನ್ನುವುದು ಕೇವಲ ಇಟ್ಟಿಗೆ–ಸಿಮೆಂಟ್‌ನ ಕಟ್ಟಡವಲ್ಲ; ಅದು ಪ್ರತಿಯೊಬ್ಬರ ಅತಿದೊಡ್ಡ ಕನಸು ಮತ್ತು ಭದ್ರತೆಯ ಸಂಕೇತ. ಆದರೆ, ಇಂದು ಸ್ವಂತ ಸೂರಿಲ್ಲದವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದು ಮನಸ್ಸಿಗೆ ತೀವ್ರ ನೋವುಂಟು ಮಾಡುತ್ತದೆ. ಮಳೆ, ಗಾಳಿ, ಬಿಸಿಲಿನ ನಡುವೆ ರಸ್ತೆಬದಿಯಲ್ಲೇ ಜೀವನ ಕಳೆಯುವ ಅದೆಷ್ಟೋ ಕುಟುಂಬಗಳ ಕಣ್ಣೀರಿಗೆ ಕೊನೆಯಿಲ್ಲದಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ವಸತಿ ಯೋಜನೆಗಳನ್ನು ಜಾರಿಗೆ ತಂದಿವೆಯಾದರೂ, ಅವು ನಿಜವಾದ ಫಲಾನುಭವಿಗಳನ್ನು ತಲಪುತ್ತಿವೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಅರ್ಹರಿಗೆ ತ್ವರಿತವಾಗಿ ಸೂರು ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ.

ಬಸವಚೇತನ ಎಂ. ಹೂಗಾರ್, ಬೀದರ್

ದಿನಪತ್ರಿಕೆ ಓದಲು ಮಕ್ಕಳನ್ನು ಪ್ರೇರೇಪಿಸಿ

ಶಾಲೆಗಳಲ್ಲಿ ದಿನಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿರುವ ಉತ್ತರ ಪ್ರದೇಶ ಸರ್ಕಾರದ ಆದೇಶ ಸ್ವಾಗತಾರ್ಹ. ಈ ಬಗ್ಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರ ಒತ್ತಾಯವೂ ಸಮಯೋಚಿತವಾಗಿದೆ. ನಾನು ಶಾಲಾ, ಕಾಲೇಜು, ಹಾಸ್ಟೆಲ್‌ನಲ್ಲಿ ಇದ್ದಾಗ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಹಾಗೂ ಇತರ ದಿನಪತ್ರಿಕೆಗಳನ್ನು ಆಸಕ್ತಿಯಿಂದ ಓದುತ್ತಿದ್ದೆ. ಇದರಿಂದ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಂಡಿದ್ದರಿಂದ 1983ರಲ್ಲಿ ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಕಂದಾಯ ಇಲಾಖೆಯಲ್ಲಿ ಕ್ಲರ್ಕ್ ಆಗಿ ನೇಮಕಗೊಂಡು, 2016ರಲ್ಲಿ ತಹಶೀಲ್ದಾರ್ ಆಗಿ ನಿವೃತ್ತಿ ಹೊಂದಿದೆ. ಪೋಷಕರು ಪ್ರತಿದಿನ ದಿನಪತ್ರಿಕೆ ಓದುವಂತೆ ಮಕ್ಕಳನ್ನು ಪ್ರೇರೇಪಿಸುವುದು ಒಳಿತು. 

ಎಚ್. ದೊಡ್ಡಮಾರಯ್ಯ, ಬೆಂಗಳೂರು ‌

ಉನ್ನಾವೊ: ಸಮಾಧಾನ ತಂದ ತಡೆ

ಉನ್ನಾವೊ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಅಪರಾಧಿಗೆ ವಿಧಿಸಿದ್ದ ಶಿಕ್ಷೆಗೆ ದೆಹಲಿ ಹೈಕೋರ್ಟ್‌ ನೀಡಿದ್ದ ಅಮಾನತು ಆದೇಶವು ಸಂತ್ರಸ್ತೆ ಮತ್ತು ಜನತೆಯ ವಿಶ್ವಾಸಕ್ಕೆ ಗಾಸಿ ಉಂಟು ಮಾಡಿತ್ತು. ಇಂತಹ
ಸೂಕ್ಷ್ಮ ಪ್ರಕರಣಗಳಲ್ಲೂ ಕಾನೂನು ಪ್ರಕ್ರಿಯೆ ಹಿಮ್ಮುಖ ಚಲನೆ ಕಾಣುವು ದಾದರೆ ಉಳಿದ ಪ್ರಕರಣಗಳ ಗತಿ ಏನು ಎಂಬ ಪ್ರಶ್ನೆ ಕಾಡಿದ್ದು ಸಹಜ. ಬೆದರಿಕೆಗೂ ಜಗ್ಗದಿರುವ ಸಂತ್ರಸ್ತೆಯ ಹೋರಾಟ ಮೆಚ್ಚುವಂತಹದ್ದು. ಹೆಣ್ಣುಮಕ್ಕಳ ರಕ್ಷಣೆ, ದೇಶದ ಸಂಸ್ಕೃತಿ ಬಗ್ಗೆ ಮಾತನಾಡುವ ರಾಜಕೀಯ ಪಕ್ಷಗಳೇ ರಾಜಕೀಯ ಅಪರಾಧಿಗಳಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುವುದು ಅಕ್ಷಮ್ಯ. ಇದೀಗ, ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್‌ತಡೆಯಾಜ್ಞೆ ನೀಡಿರುವುದು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. 

ಕೆ.ಎಂ. ನಾಗರಾಜು, ಮೈಸೂರು

ಪುತ್ರನಿಗೆ ಅನಾರೋಗ್ಯ: ನೆರವಿಗೆ ಮನವಿ

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸಾ. ಬಾಚನಾಳ ಗ್ರಾಮದ ನಾನು ಅಂಗವಿಕಲ. ಐದು ವರ್ಷದ ನನ್ನ ಪುತ್ರ ಮಂಜುನಾಥ ವಿಜಯಕುಮಾರ್‌ ಥಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದಾನೆ. ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ವೈದ್ಯರು ಮಗನಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ₹30 ಲಕ್ಷ ವೆಚ್ಚವಾಗಲಿದೆ ಎಂದು ಹೇಳಿದ್ದಾರೆ. ಕುಟುಂಬದ ಜೀವನ ನಿರ್ವಹಣೆಯೇ ಕಷ್ಟಕರವಾಗಿದೆ. ದಾನಿಗಳು ಆರ್ಥಿಕ ನೆರವು ನೀಡಬೇಕೆಂದು ಕೋರುವೆ. ಬ್ಯಾಂಕ್ ಖಾತೆ ವಿವರ: ವಿಜಯ ಕುಮಾರ ಪರಮೇಶ್ವರ, ಎಸ್‌ಬಿಐ, ಖಾತೆ ಸಂಖ್ಯೆ: 641985 55507, ಐಎಫ್‌ಎಸ್‌ಸಿ ಕೋಡ್: SBIN0041110, ಕಮಲಾಪುರ ಶಾಖೆ ಅಥವಾ ಫೋನ್‌ಪೇ ನಂಬರ್‌: 81970 21784.

ವಿಜಯಕುಮಾರ ಪರಮೇಶ್ವರ, ಕಲಬುರಗಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.