ADVERTISEMENT

ತಿಂದು ಮರೆಯುವ ಸಂಸ್ಕೃತಿ ನಮ್ಮದಲ್ಲ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 21:07 IST
Last Updated 6 ಏಪ್ರಿಲ್ 2020, 21:07 IST

ಲಾಕ್‌ಡೌನ್‌ನಿಂದಾಗಿ ಹಣ್ಣುಗಳ ಮಾರಾಟಕ್ಕೆ ತೊಂದರೆಯಾಗಿರುವುದರಿಂದ, ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿಯ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಚಿದ್ರಿ ಸತೀಶ್‌ ಅವರು ತಮ್ಮ ಹೊಲದಲ್ಲಿ ಬೆಳೆದ ಕಲ್ಲಂಗಡಿ ಹಣ್ಣುಗಳನ್ನು ಮನೆಗಳಿಗೆ ಉಚಿತವಾಗಿ ಹಂಚಿರುವುದು ಶ್ಲಾಘನೀಯ (ಪ್ರ.ವಾ., ಏ. 3). ಇದು ದೇಶದ ಅನ್ನದಾತರಿಗೆಲ್ಲರಿಗೂ ಮಾದರಿಯಾದ ಕಾರ್ಯ. ತಾವು ಬೆಳೆದ ಹಣ್ಣು, ತರಕಾರಿಯನ್ನು ಮಾರುಕಟ್ಟೆಯಲ್ಲಿ ಕೊಳ್ಳುವವರು ಇಲ್ಲದೆ ರೈತರು ರಸ್ತೆಗೆ, ಚರಂಡಿಗೆ ಎಸೆಯುತ್ತಿರುವ ಸುದ್ದಿಯನ್ನು ಇತ್ತೀಚೆಗೆ ಮಾಧ್ಯಮಗಳಿಂದ ತಿಳಿದು ಮನಸ್ಸು ಮರುಗುತ್ತಿತ್ತು. ಆದರೆ ಸ್ವಲ್ಪ ಸಕಾರಾತ್ಮಕವಾಗಿ ಚಿಂತಿಸಿದರೆ ಇಂತಹ ಸಂಕಷ್ಟದ ಸಂದರ್ಭದಲ್ಲೂ ಸಮಾಜದ ಸ್ವಾಸ್ಥ್ಯಕ್ಕೆ ಒಂದಿಷ್ಟು ಒಳಿತು ಮಾಡಬಹುದು ಎನ್ನಿಸಿತು.

ಈ ನಿಟ್ಟಿನಲ್ಲಿ ಸತೀಶ್ ಅವರಂತೆ ಚಿಂತಿಸಿದಾಗ ದೊರೆಯುವ ಧನ್ಯತಾಭಾವಕ್ಕೆ ಸಾಟಿಯಿಲ್ಲ. ಬೆಳೆಯ ಮೊದಲ ಕಟಾವಿನ ಫಸಲು ಹಾಳಾಯಿತು ಎಂದು ವ್ಯಥೆಪಡದೆ, ಅದನ್ನು ಗ್ರಾಮದ ಜನರಿಗೆ ಹಂಚುವುದರಲ್ಲಿ ಅವರು ಸಂತೋಷ ಕಂಡಿದ್ದಾರೆ. ಕೊಟ್ಟ ಹಣ್ಣನ್ನು ತಿಂದು ಮರೆಯುವಂತಹ ಸಂಸ್ಕೃತಿ ನಮ್ಮವರದಲ್ಲ. ಅವರೆಲ್ಲರ ಪ್ರೀತಿಯ ಹಾರೈಕೆ ನಮ್ಮನ್ನು ಕಾಯುತ್ತದೆ. ಮುಂದಿನ ಕಟಾವಿನಲ್ಲಾದರೂ ಒಳ್ಳೆಯ ಬೆಲೆ ಸಿಗಬಹುದು. ಇಂತಹ ಚಿಂತನೆ ನಮ್ಮೆಲ್ಲ ಅನ್ನದಾತರ ಚಿಂತನೆಯಾಗಲಿ. ದಾಸೋಹಭಾವ ಮೇಲುಗೈ ಪಡೆದು, ಫಸಲು ಮಣ್ಣು ಸೇರುವ ಬದಲು ಜನರ ಬಳಕೆಗೆ ಸಿಗಲಿ.

- ದುಂಡಣ್ಣ ಮುದಡಗಿ, ಎಲೆಕೇರಿ, ಚನ್ನಪಟ್ಟಣ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.