ADVERTISEMENT

ವಾಚಕರ ವಾಣಿ: ಮಂಗಳವಾರ, 27 ಜನವರಿ 2026

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 0:30 IST
Last Updated 27 ಜನವರಿ 2026, 0:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಪಶ್ಚಿಮಘಟ್ಟಕ್ಕೆ ಉಸಿರುಗಟ್ಟಿಸಿದ ಪ್ಲಾಸ್ಟಿಕ್

ಕಾರ್ಯಾಗಾರವೊಂದರ ನಿಮಿತ್ತ ಇತ್ತೀಚೆಗೆ ಕುಪ್ಪಳಿಗೆ ಭೇಟಿ ನೀಡುವ ಸಂದರ್ಭ ಒದಗಿಬಂದಿತ್ತು. ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೊರಟಾಗ ಕಾಡಿನ ಸೌಂದರ್ಯ ನೋಡುತ್ತಾ ಕುಳಿತವಳಿಗೆ ಕಂಡದ್ದು ರಸ್ತೆಯ ಅಂಚಿನ ಮರಗಳ ಕೆಳಗೆ ಬಿದ್ದಿರುವ ಪ್ಲಾಸ್ಟಿಕ್‌ ತ್ಯಾಜ್ಯ. ಕೆಲವೆಡೆ ಕಾಡಿನೊಳಗೆ ರಾಶಿ ಹಾಕಲಾಗಿದೆ. ಪಶ್ಚಿಮಘಟ್ಟಗಳ ಬಗ್ಗೆ ನಾವು ಸಾಕಷ್ಟು ಓದುತ್ತೇವೆ, ತಿಳಿಯುತ್ತೇವೆ. ಆದರೆ, ಅವುಗಳನ್ನು ಸಂರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದೇವೆ. ಇದರಿಂದ ಕಾಡು ಮತ್ತು ವನ್ಯಜೀವಿಗಳಿಗೆ ಆಪತ್ತು ತಪ್ಪಿದ್ದಲ್ಲ. ಈ ಕುರಿತು ಸರ್ಕಾರ ಗಮನಹರಿಸಬೇಕಿದೆ. ಸಾಧ್ಯವಾದರೆ ಸ್ವಯಂಸೇವಕರನ್ನು ಆಹ್ವಾನಿಸಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಪರಿಸರ ದಿನಾಚರಣೆಯು ಒಂದು ದಿನಕ್ಕೆ ಸೀಮಿತವಾಗಬಾರದು. ಅದು ನಿರಂತರವಾಗಿರಬೇಕು ಎನ್ನುವುದು ಆಳುವ ವರ್ಗಕ್ಕೆ ಅರ್ಥವಾಗಬೇಕಿದೆ. 

- ರೇಷ್ಮಾ ಗುಳೇದಗುಡ್ಡಾಕರ್, ಕೊಟ್ಟೂರು

ADVERTISEMENT

ಸರ್ಕಾರಕ್ಕೆ ಚೆಲ್ಲಾಟ: ಯುವಜನಕ್ಕೆ ಸಂಕಟ

ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದೆ. ಆಳುವ ವರ್ಗವು ಲಕ್ಷಾಂತರ ಅಭ್ಯರ್ಥಿಗಳ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಪರೀಕ್ಷೆಗಳ ಘೋಷಣೆ, ಫಲಿತಾಂಶ ಮತ್ತು ನೇಮಕಾತಿ ಆದೇಶ ವಿತರಣೆ ನಡುವಿನ ಸುದೀರ್ಘ ಸಮಯದಿಂದಾಗಿ ಅಭ್ಯರ್ಥಿಗಳ ವಯೋಮಿತಿ ಮೀರುತ್ತಿದೆ. ಸರ್ಕಾರವು ನೇಮಕಾತಿ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಮತ್ತು ವಿಳಂಬವಾಗಿರುವ ಪರೀಕ್ಷೆಗಳಿಗೆ ವಿಶೇಷವಾಗಿ ‘ವಯೋಮಿತಿ ಸಡಿಲಿಕೆ’ ಘೋಷಿಸಬೇಕು. ಪ್ರಸ್ತುತ ಕೃತಕ ಬುದ್ಧಿಮತ್ತೆಯಿಂದಾಗಿ ಖಾಸಗಿ ವಲಯದಲ್ಲಿ ಉದ್ಯೋಗ ಕಡಿತದ ಭೀತಿ ಎದುರಾಗಿದೆ. ಯುವಜನತೆಗೆ ಸರ್ಕಾರಿ ಉದ್ಯೋಗವೇ ಈಗ ಭರವಸೆಯಾಗಿ ಉಳಿದಿದೆ. ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಪೂರಕವಾಗಿ ಯುವಜನರಿಗೆ ಕೌಶಲ ತರಬೇತಿ ನೀಡುವುದು ಸರ್ಕಾರದ ಜವಾಬ್ದಾರಿ.

- ಗೌರಿ ತ್ರಿವೇಣಿ, ಹೊಸಪೇಟೆ 

ಪ್ರಾದೇಶಿಕ ಸೊಗಡು: ಸಿನಿಮಾಕ್ಕೆ ಕಸುವು

ಇತ್ತೀಚೆಗೆ ಚಂದನವನದಲ್ಲಿ ಪ್ರಾದೇಶಿಕ ಸೊಗಡು ಬಿಂಬಿಸುವ ಸಿನಿಮಾಗಳ ನಿರ್ಮಾಣ ಅಪರೂಪವೆಂದೇ ಹೇಳಬಹುದು. ತಮಿಳು, ಮಲಯಾಳ ಚಿತ್ರರಂಗವು ಇದಕ್ಕೆ ಅಪವಾದ. ಇಂತಹ ಸಿನಿಮಾಗಳು ಜನರ ಮನಸ್ಸಿಗೆ ಹತ್ತಿರವಾಗುತ್ತವೆ. ಜಡೇಶ್‌ ಹಂಪಿ ನಿರ್ದೇಶನದ ‘ಲ್ಯಾಂಡ್‌ಲಾರ್ಡ್’ ಕನ್ನಡ ಸಿನಿಮಾ ಪ್ರಾದೇಶಿಕ ಸೊಗಡಿನೊಂದಿಗೆ ಸಾಹಿತ್ಯ ಮತ್ತು ಸಂವಿಧಾನದ ಹೂರಣವಿರುವ ಚಿತ್ರ. ‘ಸಂಧಾನ ಅಲ್ಲ ಸಂವಿಧಾನ’, ‘ರಾಜಪ್ರಭುತ್ವ ಅಲ್ಲ ಪ್ರಜಾಪ್ರಭುತ್ವ’ – ಚಿತ್ರದಲ್ಲಿನ ಇಂತಹ ಸಂಭಾಷಣೆಗಳು ಸಮಕಾಲೀನ ಸಮಾಜದ ಸ್ಥಿತಿಗತಿ ಬಗ್ಗೆ ಜನರನ್ನು ವಿಮರ್ಶಿಸುವಂತೆ ಮಾಡುತ್ತವೆ. ಕನ್ನಡದಲ್ಲಿ ಒಂದು ಕಾಲದಲ್ಲಿ ಪ್ರಾದೇಶಿಕ ಸೊಗಡು ತುಂಬಿರುತ್ತಿದ್ದ ಸಿನಿಮಾಗಳು ಹೆಚ್ಚು ತೆರೆಕಾಣುತ್ತಿದ್ದವು. ಸದ್ಯ ಅವುಗಳ ಸಂಖ್ಯೆ ಕಡಿಮೆಯಾಗಿದೆ. ಮಣ್ಣಿನ ವಾಸನೆ ಬೆರೆತ ಸಿನಿಮಾಗಳು ಪ್ರೇಕ್ಷಕರ ಹೃದಯವನ್ನೂ ಗೆಲ್ಲುತ್ತವೆ. ನಿರ್ದೇಶಕರು ಇದರತ್ತ ಗಮನಹರಿಸಬೇಕಿದೆ.

- ಪ್ರವೀಣ ಈ., ಚನ್ನಗಿರಿ

ಅರ್ಹತಾ ಪರೀಕ್ಷೆ ಬಗ್ಗೆ ಶಿಕ್ಷಕರಲ್ಲಿ ಗೊಂದಲ

ಪ್ರೌಢಶಾಲಾ ಶಿಕ್ಷಕರಿಂದ ಪದವಿಪೂರ್ವ ಉಪನ್ಯಾಸಕರ ಹುದ್ದೆಗೆ ಪದೋನ್ನತಿಗಾಗಿ ಅರ್ಹತಾ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಈ ಪರೀಕ್ಷೆಯನ್ನು ಮೊದಲ ಬಾರಿಗೆ ನಡೆಸಲಾಗುತ್ತಿದೆ; ಪರೀಕ್ಷೆಯು ವಿವರಣಾತ್ಮಕವಾಗಿ ಇರಲಿದೆ ಎಂಬುದಷ್ಟೇ ಅಭ್ಯರ್ಥಿಗಳಿಗೆ ತಿಳಿದಿದೆ. ಅದನ್ನು ಬಿಟ್ಟರೆ ಪ್ರಶ್ನೆಪತ್ರಿಕೆಯ ವಿವರಣೆ, ಸ್ವರೂಪ, ಅಂಕಗಳ ವಿನ್ಯಾಸ, ಮತ್ತು ವಿಭಾಗವಾರು ಕುರಿತು ಸ್ಪಷ್ಟ ಮಾಹಿತಿ ಪ್ರಕಟವಾಗಿಲ್ಲ. ಇದರಿಂದ ಪರೀಕ್ಷೆಗೆ ತಯಾರಾಗುತ್ತಿರುವ ಶಿಕ್ಷಕರಿಗೆ ಗೊಂದಲ ಉಂಟಾಗಿದೆ. ಪರೀಕ್ಷೆಯ ಮಾದರಿ ಕುರಿತು ಪೂರ್ವ ಮಾಹಿತಿ ನೀಡಬೇಕಿದೆ. ಮಾದರಿ ಪ್ರಶ್ನೆಪತ್ರಿಕೆ ಅಥವಾ ಮಾರ್ಗಸೂಚಿ ಪ್ರಕಟಿಸಿದರೆ ಅನುಕೂಲವಾಗಲಿದೆ. 

- ಶ್ರೀಸಾಯಿ ರಾಘವ್ ಎಸ್., ರಾಣೆಬೆನ್ನೂರು  

ಗಣಿತ ಪರೀಕ್ಷೆ ಸರಳೀಕರಣಕ್ಕೆ ಒತ್ತು ನೀಡಿ

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಗಣಿತಕ್ಕೆ ಹೆದರಿ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇದೆ. ಹಾಗಾಗಿ, ಈ ವರ್ಷದ ಗಣಿತ ಪರೀಕ್ಷೆಯನ್ನು ಕೇಂದ್ರ ಪಠ್ಯಕ್ರಮದ ರೀತಿಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೂ ಸರಳೀಕರಣಗೊಳಿಸಿದರೆ ಉತ್ತಮ ಅಂಕಗಳಿಸಲು ಸಾಧ್ಯವಾಗಲಿದೆ. ಸಿಬಿಎಸ್ಇ ಮಾದರಿಯಲ್ಲಿ ಉತ್ತಮ ಅಂಕ ಪಡೆದು ಉನ್ನತ ಶಿಕ್ಷಣಕ್ಕೆ ಹೋಗಲು ಅನುಕೂಲವಾಗುತ್ತದೆ. ರಾಜ್ಯ ಶಿಕ್ಷಣ ಇಲಾಖೆಯು ಗಂಭೀರವಾಗಿ ಪರಿಗಣಿಸಬೇಕಿದೆ.

- ಎಚ್.ಎಸ್.ಟಿ. ಸ್ವಾಮಿ, ಚಿತ್ರದುರ್ಗ

ಪ್ರಲಾಪ ಸಾಕು; ಗಂಭೀರ ಚರ್ಚೆ ಬೇಕು

ಪ್ರತಿಬಾರಿಯೂ ಸದನದಲ್ಲಿ ನಡೆಯುವ ಕಲಾಪವನ್ನು ಗಮನಿಸುವಾಗ ಸಾರ್ವಜನಿಕ ಸಮಸ್ಯೆಗಳ ಬದಲಾಗಿ ಶಾಸಕರ ‍ಪರಸ್ಪರ ನಿಂದನೆ, ತೇಜೋವಧೆಯೊಂದಿಗೆ ಮುಂದಿನ ಚುನಾವಣೆಗೆ ಮತಗಳಿಗೆ ಬೇಕಾದ ವೇದಿಕೆಯ ಸಿದ್ಧತೆಯಲ್ಲೇ ಅಧಿವೇಶನವು ಮುಕ್ತಾಯವಾಗುತ್ತದೆ. ವಿವೇಕಯುತವಾಗಿ ಮುಗಿಸಬಹುದಾದ ರಾಜ್ಯಪಾಲರ ಅಪೂರ್ಣ ಭಾಷಣದ ವಿಚಾರವನ್ನು ಇಡೀ ದಿನ ಚರ್ಚೆಯಾಗಿಸಿ ಕಲಾಪವನ್ನು ವ್ಯರ್ಥಗೊಳಿಸಲಾಯಿತು. ಇದು ವಿವೇಚನಾರಹಿತ ನಡೆ. ರಾಜ್ಯಪಾಲರ ಭಾಷಣ ಕುರಿತು ಸಂವಿಧಾನದಲ್ಲಿರುವ ಸಾಧಕ–ಬಾಧಕ ಅರಿತು ಮುಂದುವರಿಯಬೇಕಾದ ನಾಯಕರು ಅದರ ಹಿಂದೆ ಬಿದ್ದು ಮೊಂಡುವಾದ ಮಾಡುತ್ತಾ ಕಾಲಹರಣ ಮಾಡಿದ್ದು ವಿಪರ್ಯಾಸ. ಕಳೆದ ಎರಡ್ಮೂರು ವರ್ಷಗಳಿಂದ ಸರ್ಕಾರಿ ನೇಮಕಾತಿ ಇಲ್ಲದೆ ಯುವಜನರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಈ ಬಗ್ಗೆ ಸದನದಲ್ಲಿ ಒಂದು ದಿನ ಚರ್ಚೆ ನಡೆಯಲಿ.

 - ರಿಚರ್ಡ್‌ ಆಂಟನಿ, ಶ್ರೀರಂಗಪಟ್ಟಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.