ADVERTISEMENT

ವಾಚಕರ ವಾಣಿ: ಲಂಚಕ್ಕೆ ಬೇಡಿಕೆ; ಯಾರು ಹೊಣೆ?

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 20:15 IST
Last Updated 18 ಆಗಸ್ಟ್ 2020, 20:15 IST

ಸರ್ಕಾರಿ ನೌಕರರು ಲಂಚ ತೆಗೆದುಕೊಳ್ಳುವುದು ತಮ್ಮ ಹಕ್ಕು ಎಂದುಕೊಳ್ಳುತ್ತಿದ್ದಾರೆ ಮತ್ತು ಜನಸಾಮಾನ್ಯರು ತಮ್ಮ ಹಕ್ಕು ಚಲಾಯಿಸುವುದನ್ನು ಮರೆತಿದ್ದಾರೆ ಎಂಬುದು ಸಿಬಂತಿ ಪದ್ಮನಾಭ ಅವರ ಲೇಖನದಿಂದ (ಸಂಗತ, ಆ. 17) ಸ್ಪಷ್ಟವಾಗುತ್ತದೆ.

ಸರ್ಕಾರಿ ಕಚೇರಿಯಲ್ಲಿ ಇಂದು ಲಂಚ ಇಲ್ಲದೆ ಯಾವ ಕೆಲಸವೂ ಆಗದು ಎಂಬ ಪರಿಸ್ಥಿತಿ ನಿರ್ಮಾಣವಾದದ್ದಾದರೂ ಹೇಗೆ? ಒಂದೋ ವ್ಯವಸ್ಥೆಯನ್ನು ಒಪ್ಪಿಕೊಳ್ಳಬೇಕು, ಇಲ್ಲದಿದ್ದರೆ ಬಿಟ್ಟು ಹೋಗಬೇಕು ಎಂಬ ಸ್ಥಿತಿ ಇದೆ. ಸರ್ಕಾರಿ ಕಚೇರಿಗಳಲ್ಲಿ ಎಲ್ಲವೂ ಪರ್ಸೆಂಟೇಜ್‌ಮಯ. ಫೈಲುಗಳು ಮೇಜಿನಿಂದ ಮೇಜಿಗೆ ಹೋಗಲು ಪರ್ಸೆಂಟೇಜ್‌, ವರ್ಗಾವಣೆಗೆ ಲಕ್ಷ ಲಕ್ಷ ಲಂಚ‌...

ಇದಕ್ಕೆ ಕಾರಣ, ಪಂಚಾಯಿತಿ ಕಚೇರಿಗಳ ಮಟ್ಟದಿಂದ ಶುರುವಾಗುವ ವಶೀಲಿಬಾಜಿ. ಹೆಚ್ಚಿನ ನೌಕರರು ಸದಸ್ಯರ ಶಿಫಾರಸಿನ ಮೇರೆಗೆ ಬಂದವರು. ತಮಗೆ ಬೇಕಾದವರಿಗೆ ನೌಕರಿ ಕೊಡಿಸುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸಿರುವ ಸದಸ್ಯರು ಹಾಗೂ ಅವರ ಭಟ್ಟಂಗಿಗಳ ನಡುವೆ ಯಾವ ಮೆರಿಟ್‍ಗೂ ಜಾಗ ಇರುವುದಿಲ್ಲ.

ADVERTISEMENT

ಮಂತ್ರಿಮಹೋದಯರ ಶಿಫಾರಸುಗಳಿಂದಲೇ ತುಂಬಿ ಹೋಗಿರುವ ಅದಕ್ಷ ನೌಕರವರ್ಗ, ಕಚೇರಿಗೆ ಬರುವ ಸ್ಟೇಷನರಿಯನ್ನೂ ಬಿಡದಂತೆ ತನಗೆಷ್ಟು ಕಮಿಷನ್ ಸಿಗುತ್ತದೆ ಎಂದು ಲೆಕ್ಕ ಹಾಕುವ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಅಧಿಕಾರಿವರ್ಗದ ಅಪವಿತ್ರ ಮೈತ್ರಿ... ಇವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ?

ಇಂತಹ ಸ್ಥಿತಿಯ ನಡುವೆಯೂ ನಮ್ಮ ಜವಾಬ್ದಾರಿ ಇದ್ದೇ ಇರುತ್ತದೆ. ಗುಣ ನೋಡಿ ಮತ ಹಾಕಿ. ದೇಶದ ಭವಿಷ್ಯವನ್ನು ನಾವು ಯಾರ ಕೈಗೆ ಕೊಡುತ್ತಿದ್ದೇವೆಯೋ ಅವರ ಕೈಗಳು ಶುಭ್ರವಾಗಿರಲಿ. ದಕ್ಷರಿಗೆ, ಪ್ರಾಮಾಣಿಕರಿಗೆ ಅಧಿಕಾರಯುತ ಸ್ಥಾನವು ಅರ್ಹತೆಯ ಆಧಾರದಲ್ಲಿ ಸಿಗುವಂತಾಗಲಿ. ಇದು ನಮ್ಮ ಹಕ್ಕೊತ್ತಾಯವಾಗಬೇಕು.
-ಧನ್ಯಾ ಬಾಳಿಗಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.