ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 17 ಆಗಸ್ಟ್ 2025, 19:44 IST
Last Updated 17 ಆಗಸ್ಟ್ 2025, 19:44 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಶಿಕ್ಷಕರಿಗೆ ‘ಬಿಎಲ್‌ಒ’ ಒತ್ತಡದ ಹೊರೆ 

ಶಿಕ್ಷಕ ಮಿತ್ರರೊಬ್ಬರು, ತಮ್ಮನ್ನು ಬೂತ್‌ ಮಟ್ಟದ ಅಧಿಕಾರಿಯಾಗಿ (ಬಿಎಲ್‌ಒ) ನಿಯೋಜಿಸಿರುವ ಆದೇಶ ಬಂದಿದ್ದಕ್ಕೆ ಆತಂಕಗೊಂಡು ಕರೆ ಮಾಡಿದ್ದರು. ಅವರ ಆತಂಕಕ್ಕೆ ಕಾರಣವೇನೆಂದರೆ, ಮೇಲಿಂದ ಮೇಲೆ ಮಾಡಲಾಗುವ ‘ಮತದಾರರ ಪಟ್ಟಿ ಪರಿಷ್ಕರಣೆ’ ಹಾಗೂ ‘ಚುನಾವಣಾ ತುರ್ತು’ ಎಂಬ ಆದೇಶಗಳು ಹೊತ್ತು ತರುವ ಕೆಲಸದೊತ್ತಡ. ಹೀಗೆ ಆತಂಕ ಮತ್ತು ಒತ್ತಡಕ್ಕೆ ಒಳಗಾದ ಮನಸ್ಸು ಮಕ್ಕಳಿಗೆ ಕಲಿಸಲು ಸಾಧ್ಯವೇ ಎನ್ನುವುದನ್ನು ಸರ್ಕಾರ ಚಿಂತಿಸಬೇಕಿದೆ.

ADVERTISEMENT

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮುಖ್ಯಮಂತ್ರಿ ಅವರು ‘ರಾಜ್ಯ ಶಿಕ್ಷಣ ನೀತಿ’ಯನ್ನು ಜಾರಿಗೆ ತರುವುದಾಗಿ ಹೇಳಿದ್ದಾರೆ. ಎಷ್ಟೇ ನೀತಿಗಳು ಜಾರಿಗೊಂಡರೂ ಶಿಕ್ಷಕರನ್ನು ಬಿಎಲ್‌ಒ ಒತ್ತಡದಿಂದ ಮುಕ್ತಗೊಳಿಸದಿದ್ದರೆ, ಉತ್ತಮ ಶಿಕ್ಷಣ ನಿರೀಕ್ಷಿಸುವುದು ಮರಳುಗಾಡಿನಲ್ಲಿ ಕೆರೆ ಹುಡುಕಿದಂತಾಗುತ್ತದೆ.

ಸಂತೋಷ್, ದಾವಣಗೆರೆ

ಬಾಳೆಹಣ್ಣು ಸಿಪ‍್ಪೆ ನಿರ್ವಹಣೆ ಮಾಡಿ

ಶನಿವಾರ ಬೆಳಗ್ಗೆ 11:30ಕ್ಕೆ ಸರ್ಕಾರಿ ಶಾಲೆಯೊಂದು ಆಗತಾನೆ ಬಿಟ್ಟಿತ್ತು. ವಿಪರೀತ ಮಳೆ ಸುರಿಯುತ್ತಿತ್ತು. ಕೆಸರುಗದ್ದೆಯಾದ ರಸ್ತೆಯ ಗುಂಡಿಗಳನ್ನು ಜಾಗರೂಕತೆಯಿಂದ ದಾಟಿಕೊಂಡು ಹೋಗುತ್ತಿದ್ದಾಗ, ಶಾಲೆ ಮುಂಭಾಗದ ರಸ್ತೆಯ ತುಂಬೆಲ್ಲ ಮಕ್ಕಳು ತಿಂದು ಎಸೆದ ಬಾಳೆಹಣ್ಣಿನ ಸಿಪ್ಪೆಗಳು, ಒಂದಿಷ್ಟು ಬಾಳೆಹಣ್ಣುಗಳು ಬಿದ್ದಿದ್ದವು. ಸಿಪ್ಪೆಗಳನ್ನು ನೋಡಿ ಮನಸ್ಸಿಗೆ ಬೇಸರವೆನಿಸಿತು. ಈ ಅವ್ಯವಸ್ಥೆಗೆ ಯಾರು ಹೊಣೆ? ಬಾಳೆಹಣ್ಣನ್ನು ತಿಂದು ತಾವೇ ಮನೆಯಿಂದ ತಂದ ಒಂದು ಕೈಚೀಲದಲ್ಲಿ ಸಿಪ್ಪೆ ಹಾಕಿಕೊಂಡು ಹೋಗಲು ಮಕ್ಕಳಿಗೆ ಹೇಳಬಹುದು ಅಲ್ಲವೇ? ಅಥವಾ ಶಾಲೆಯಲ್ಲಿ ಸಾವಯವ ಗೊಬ್ಬರದ ಗುಂಡಿ ಮಾಡಿ ಅದರೊಳಗೆ ಸಿಪ್ಪೆ ಹಾಕಿದರೆ ಪ್ರಕೃತಿಗೂ ಉಪಕಾರವಾದೀತು.

ಗೀತಾ ಗುರುರಾಜ್ ಕೆ., ಬೆಳಗಾವಿ

ತಲೆದಂಡ: ಇಬ್ಬಗೆ ನೀತಿ ಸರಿಯೇ?

ರಾಜ್ಯ ಸರ್ಕಾರವು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ತನಿಖಾ ಪ್ರಕ್ರಿಯೆ ಮುಂದುವರಿದಿದ್ದು, ಇನ್ನೂ ವರದಿ
ಸಲ್ಲಿಕೆಯಾಗಿಲ್ಲ. ಈ ನಡುವೆಯೇ ಸರ್ಕಾರದ ಭಾಗವೇ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸದನದಲ್ಲಿ ಧರ್ಮಸ್ಥಳದ ಪರವಾಗಿ ಮಾತನಾಡಿದ್ದಾರೆ. ಇದು ಅವರ ಸರ್ಕಾರಕ್ಕೆ ಮುಖಭಂಗ ಮಾಡಿದಂತೆ ಆಗುವುದಿಲ್ಲವೇ? ಮತ ಕಳವು ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿದ ಕೆ.ಎನ್‌. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಹೊರಹಾಕಲಾಯಿತು. ಅದೇ ‘ನ್ಯಾಯ’ ಶಿವಕುಮಾರ್‌ ವಿಷಯದಲ್ಲೂ ಅನ್ವಯ ಆಗಬೇಕಲ್ಲವೆ?

ಹಿ.ಶಿ. ರಾಮಚಂದ್ರೇಗೌಡ, ಮೈಸೂರು‌

ಶ್ವಾನಪ್ರಿಯರಿಗೊಂದು ಕಿವಿಮಾತು

ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ, ನಿಜ. ಆದರೆ, ಬೀದಿನಾಯಿಗಳ ಉಪಟಳ ಹೆಚ್ಚಿರುವುದರಿಂದ ಜನಸಾಮಾನ್ಯರು ರಸ್ತೆಯಲ್ಲಿ ನಿರ್ಭೀತಿಯಿಂದ ಓಡಾಡಲು ಸಾಧ್ಯವಾಗದ ಸ್ಥಿತಿಯಿದೆ. ಬೀದಿನಾಯಿಗಳ ಸಮಸ್ಯೆ ನಿರ್ವಹಣೆಯು ಸ್ಥಳೀಯ ಆಡಳಿತದ ಜವಾಬ್ದಾರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ದಿಸೆಯಲ್ಲಿ ಅವುಗಳ ನಿರ್ವಹಣೆಗೆ ಕ್ರಮವಹಿಸಬೇಕಿದೆ. ಪ್ರಾಣಿ ದಯಾ ಸಂಘಗಳು ಮತ್ತು ಶ್ವಾನಪ್ರಿಯರು ಬರೀ ಮಾತನಾಡುವುದರಲ್ಲೇ ಕಾಲಹರಣ ಮಾಡುವುದನ್ನು ಬಿಟ್ಟು, ಸ್ಥಳೀಯ ಸರ್ಕಾರಗಳ ಜೊತೆಗೆ ಕೈಜೋಡಿಸಿ ಮಾದರಿ ಕೆಲಸಕ್ಕೆ ಮುಂದಾಗ
ಬೇಕಿದೆ. ಇದರಿಂದ ಜನರಿಗೂ, ಪ್ರಾಣಿಪ್ರಿಯರಿಗೂ ಮತ್ತು ಶ್ವಾನಗಳಿಗೂ ನೆಮ್ಮದಿ. ⇒ಚಂದ್ರಶೇಖರ ಎಚ್‌.ಎಸ್‌., ಬೆಂಗಳೂರು

ಹೊಣೆಗಾರಿಕೆ ಮತದಾರರಿಗೂ ಇದೆ

ಚುನಾವಣಾ ಆಯೋಗ ಸಿದ್ಧಪಡಿಸಿರುವ ಮತದಾರರ ಪಟ್ಟಿಯು ದೋಷ
ಪೂರಿತವಾಗಿದೆ ಎಂಬುದಾಗಿ ರಾಜಕೀಯ ನೇತಾರರು ಬೀದಿಗಿಳಿದು ಹೋರಾಡುವ ಹಂತಕ್ಕೆ ತಲುಪಿದ್ದಾರೆ. ಹಾಗಾದರೆ, ಇಷ್ಟು ವರ್ಷಗಳಿಂದ ಚಲಾವಣೆ
ಆಗುತ್ತಾ ಬಂದ ಮತದಾರರ ಪಟ್ಟಿಗಳು ಶುದ್ಧಾಂಗ ಸತ್ಯ ಆಗಿದ್ದವೇ?  

ವಲಸೆ ನೌಕರರು, ಕೂಲಿ ಕಾರ್ಮಿಕರು ಸ್ವಂತ ಊರುಗಳಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳುವುದನ್ನು ಅಲ್ಲಗಳೆಯಲಾಗದು. ಚುನಾವಣಾ ಅಧಿಕಾರಿಗಳು ಸಾಕಷ್ಟು ಜಾಗ್ರತೆವಹಿಸಿ ಪಟ್ಟಿ ತಯಾರಿಸಿದರೂ ಕೆಲ ಸಿಬ್ಬಂದಿಯ ಅಜಾಗರೂಕತೆ ಮತ್ತು ಅಲಕ್ಷ್ಯದಿಂದ ಹೆಸರು ತಪ್ಪಾಗುವುದು, ತಪ್ಪಿ ಹೋಗುವುದು ನಡೆಯುತ್ತಲೇ ಇರುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆ ನಡೆಯುವಾಗ ಅದನ್ನು ಪರಿಶೀಲಿಸಿ, ಮರು ಸೇರ್ಪಡೆಗೆ ಅವಕಾಶವಿದೆ. ತಮ್ಮ ಹೆಸರು ಕೈತಪ್ಪದಂತೆ ನೋಡಿಕೊಳ್ಳುವುದು, ಎರಡೆರಡು ಕಡೆ ಸೇರ್ಪಡೆಯಾಗದಂತೆ ಜಾಗ್ರತೆ
ವಹಿಸುವುದು ಮತದಾರರ ಜವಾಬ್ದಾರಿಯೂ ಆಗಿದೆ.

⇒ಸರೋಜಿನಿ, ಹೊಸನಗರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.