ADVERTISEMENT

ಆನ್‌ಲೈನ್‌: ಬೇಕಿರಲಿಲ್ಲ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 20:57 IST
Last Updated 11 ಜೂನ್ 2020, 20:57 IST

ಚಿಣ್ಣರಿಗೆ ಸರ್ಕಾರ ಆನ್‌ಲೈನ್‌ ಶಿಕ್ಷಣವನ್ನು ನಿರ್ಬಂಧಿಸಿದೆ. ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಲು, ಆನ್‌ಲೈನ್‌ ಶಿಕ್ಷಣಕ್ಕೆ ವ್ಯಕ್ತವಾದ‌ ವಿರೋಧವೂ ಕಾರಣವಿರಬಹುದು.

15 ದಿನಗಳಿಂದ ನಮ್ಮ ಮನೆಯ ಎರಡನೇ ತರಗತಿಯ ಮಗುವಿನ ಆನ್‌ಲೈನ್ ಪಾಠವನ್ನು ಗಮನಿಸುತ್ತಲೇ ಇದ್ದೆ. ಮನೆಯಲ್ಲಿ ಕಂಪ್ಯೂಟರ್, ಇಂಟರ್‌ನೆಟ್ ಇಲ್ಲದ ಮಕ್ಕಳು ಹೊಸ ವಿಧಾನದಿಂದ ವಂಚಿತರಾಗುತ್ತಾರೆ, ನಿಜ. ಆದರೆ ಈ ಸೌಲಭ್ಯ ಇರುವ ಮನೆಯ ಮಕ್ಕಳ ಮೇಲೆ ಅದು ವ್ಯತಿರಿಕ್ತ ಪರಿಣಾಮ ಬೀರಿದಂತೆ ಅನಿಸಲಿಲ್ಲ.

ಪಾಠದ ಸಮಯಕ್ಕೆ ಸರಿಯಾಗಿ ಮಗು ತಯಾರಾಗಿ ಕೂರುತ್ತಿತ್ತು. ಶಿಕ್ಷಕರು, ಇತರ ವಿದ್ಯಾರ್ಥಿಗಳೂ ಕಾಣಿಸಿಕೊಳ್ಳುತ್ತಿದ್ದರು. ಮಕ್ಕಳು ಉತ್ಸಾಹಿತರಾಗಿ, ನಗುಮುಖದಿಂದಲೇ ಇದ್ದರು. ಶಿಕ್ಷಕರು ಪ್ರತೀ ಮಗುವಿನ ಹೆಸರು ಕರೆದು ಮಾತನಾಡಿಸುತ್ತಿದ್ದರು. ಪಾಠ ತಿಳಿಯದ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸುತ್ತಿದ್ದರು.

ADVERTISEMENT

ಪೋಷಕರು ಗಮನಿಸುವುದನ್ನು ಅರಿತ ಶಿಕ್ಷಕರು ಬಹಳ ಎಚ್ಚರಿಕೆಯಿಂದಲೇಪಾಠ ಮಾಡಬೇಕಾಗಿತ್ತು. ಶಾಲೆಯಲ್ಲಿ ಪಾಠ– ಪ್ರವಚನ ಹೇಗೆ ನಡೆಯಬಹುದೆಂದು ಗಮನಿಸುವ ಅವಕಾಶ ಪೋಷಕರದ್ದಾಗಿತ್ತು. ಮಧ್ಯೆ ಮಧ್ಯೆ ಬಿಡುವು ಕೂಡಾ ಇರುತ್ತಿತ್ತು. ಎಲ್ಲ ತರಗತಿಗಳು ಒಟ್ಟಾರೆ ಎರಡು ಗಂಟೆ ಮಾತ್ರ. ಮಗು ಆರಾಮಾಗಿ ಕುಳಿತು ಸಂತೋಷದಿಂದಲೇ ಪಾಠ ಕೇಳಿ ಪ್ರಶ್ನೋತ್ತರದಲ್ಲಿ ಭಾಗವಹಿಸುತ್ತಿತ್ತು.

ಪಾಠ ಮುಗಿಯುವ ತನಕ ಪೋಷಕರೂ ಮನೆಯಲ್ಲೇ ಲಾಕ್‌ಡೌನ್‌. ಮಕ್ಕಳಿಗೆ ಇತರ ಯುಟ್ಯೂಬ್ ಕಲಿಕೆ, ಮೈಂಡ್ ಗೇಮ್‌ಗಳ ಅಗತ್ಯವೇ ಕಂಡುಬರಲಿಲ್ಲ. ಅಕ್ಕಪಕ್ಕದ ಮನೆಯ ಮಕ್ಕಳ ಜೊತೆ ಆಟವನ್ನೂ ಆಡದಂತಹ ಪರಿಸ್ಥಿತಿಯಲ್ಲಿ, ಇದರಿಂದ ಮಕ್ಕಳಿಗೆ ಸ್ವಲ್ಪ ಅನುಕೂಲವೇ ಆಗಿತ್ತು. ಶಾಲೆಯಸೌಲಭ್ಯವಿಲ್ಲದ ಈ ಸಂದರ್ಭದಲ್ಲಿ, ತಾತ್ಕಾಲಿಕ ಕ್ರಮವಾದ್ದರಿಂದ ನಿರ್ಬಂಧದ ಅಗತ್ಯ ಇರಲಿಲ್ಲ.

-ಅತ್ತಿಹಳ್ಳಿ ದೇವರಾಜ್,ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.