ADVERTISEMENT

ಮೀಸಲಾತಿ: ಮಾನದಂಡದಲ್ಲಿ ಸ್ಪಷ್ಟತೆ ಬೇಕು

ಮಣಿಕಂಠ ಪಾ.ಹಿರೇಮಠ  ಬಾಗಲಕೋಟೆ
Published 8 ಜನವರಿ 2019, 20:08 IST
Last Updated 8 ಜನವರಿ 2019, 20:08 IST

ಮೇಲ್ಜಾತಿಗಳಲ್ಲೂ ಇರುವ ಬಡವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು ಎಂಬ ಬಹು ವರ್ಷಗಳ ಕೂಗಿಗೆ ಸ್ಪಂದಿಸುವ ಮೂಲಕ ಕೇಂದ್ರ ಸರ್ಕಾರವು ಸ್ವಾಗತಾರ್ಹ ಹೆಜ್ಜೆ ಇಟ್ಟಿದೆ. ಇದು ಚುನಾವಣೆಯ ಮೇಲೆ ಕಣ್ಣಿಟ್ಟು ಕೈಗೊಂಡ ನಿರ್ಧಾರ ಎಂಬ ಆರೋಪವನ್ನು ತಳ್ಳಿಹಾಕಲಾಗದು.

ಮೇಲ್ವರ್ಗದವರು ಎಂದು ಕರೆಸಿಕೊಳ್ಳುವ ಬ್ರಾಹ್ಮಣ, ವೈಶ್ಯ, ಠಾಕೂರ್‌, ಭೂಮಿಹಾರ ಮುಂತಾದ ಜಾತಿಗಳಲ್ಲೂ ಬಡವರಿದ್ದಾರೆ. ಅವರ ಬದುಕನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ತುಂಬ ಮಹತ್ವದ್ದು. ಬಿಜೆಪಿ ಅಲ್ಲದೇ ಇನ್ನೂ ಕೆಲವು ರಾಜಕೀಯ ಪಕ್ಷಗಳು ಈ ಹಿಂದೆಯೇ ಮೇಲ್ವರ್ಗದ ಬಡವರಿಗೂ ಮೀಸಲಾತಿ ನೀಡಬೇಕು ಎಂಬ ನಿಲುವನ್ನು ಪ್ರಕಟಿಸಿರುವುದರಿಂದ, ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಶೇ 60ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಸಮಸ್ಯೆಯಾಗಲಾರದು.

ಆದರೆ ‘ಬಡವರು’ ಎಂಬ ಮಾನದಂಡಕ್ಕೆ ಸರ್ಕಾರ ನೀಡಿರುವ ವ್ಯಾಖ್ಯಾನದಲ್ಲಿ ಸ್ವಲ್ಪ ಗೊಂದಲವಿದೆ. ವಾರ್ಷಿಕ ಆದಾಯ ₹ 8 ಲಕ್ಷ ಮೀರಿದ ಹಾಗೂ ಐದು ಎಕರೆಗಿಂತ ಕಡಿಮೆ ಭೂಮಿ ಇರುವವರು ಬಡವರು ಎಂಬ ಮಾನದಂಡವನ್ನು ಸಚಿವ ಸಂಪುಟ ಒಪ್ಪಿಕೊಂಡಿದೆ. ಐದು ಎಕರೆ ಭೂಮಿ ಎಂಬ ಮಾನದಂಡವನ್ನು ದೇಶದಾದ್ಯಂತ ಏಕರೂಪವಾಗಿ ಅನ್ವಯಿಸಿದರೆ ಕಷ್ಟವಾಗುತ್ತದೆ. ಬೇಸಾಯಕ್ಕೆ ನಾಲೆ ನೀರಿನ ಸೌಲಭ್ಯ ಇರುವ ಪ್ರದೇಶದಲ್ಲಿ ಹಾಗೂ ನಮ್ಮ ಮಲೆನಾಡಿನಂತಹ ಪ್ರದೇಶಗಳಲ್ಲಿ ಐದು ಎಕರೆ ಭೂಮಿ ಹೊಂದಿರುವವರು ಶ್ರೀಮಂತರಾಗಿರುತ್ತಾರೆ. ಆದರೆ ಬರಪೀಡಿತ ಪ್ರದೇಶಗಳಲ್ಲಿ ಐದು ಎಕರೆ ಉಳ್ಳವರು ಬಡವರಾಗಿದ್ದಾರೆ.

ADVERTISEMENT

ಹೀಗಾಗಿ ಮಾನದಂಡದ ವಿಚಾರದಲ್ಲಿ ಇನ್ನಷ್ಟು ಸ್ಪಷ್ಟತೆಯನ್ನು ತಂದರೆ, ಸಚಿವ ಸಂಪುಟದ ತೀರ್ಮಾನವು ನಿಜವಾಗಿಯೂ ಸಂಕಷ್ಟದಲ್ಲಿರುವ ಜನರಿಗೆ ಅನುಕೂಲಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.