ವಾಚಕರ ವಾಣಿ
ಧರ್ಮದ ವಿಷಬೀಜ ಬಿತ್ತಬೇಡಿ
ರವೀಂದ್ರನಾಥ್ ಟ್ಯಾಗೋರ್ ಅವರು, ‘ಭಾರತವು ಪವಿತ್ರ ಸ್ಥಳ (ಭರತ ತೀರ್ಥ). ಮಾನವೀಯತೆಯ ಮಹಾಸಾಗರ, ಅಮಾನವೀಯ ದಾಳಿಕೋರರಿಂದ ತಾಯ್ನಾಡನ್ನು ಕಳೆದುಕೊಂಡವರಿಗೆ ಆಶ್ರಯ ನೀಡಿರುವ ತೊಟ್ಟಿಲು’ ಎಂದು ಬಣ್ಣಿಸಿದ್ದಾರೆ. ಇಂತಹ ದೇಶದಲ್ಲಿ ಇತ್ತೀಚೆಗೆ ರಾಜಕೀಯ ಪಕ್ಷಗಳು ಮತ್ತು ನಾಯಕರು, ತಮ್ಮ ದುರುದ್ದೇಶಗಳ ಈಡೇರಿಕೆಗಾಗಿ ಜನರ ನಡುವೆ ಧರ್ಮ ಮತ್ತು ಜಾತಿಯ ವಿಷಬೀಜ ಬಿತ್ತಿ, ಶಾಂತಿಯ ಭಾರತವನ್ನು ಅಶಾಂತಿಯ ಕೂಪವನ್ನಾಗಿಸುತ್ತಿದ್ದಾರೆ.
ರಾಜಕೀಯ ಪ್ರೇರಿತ ಕೋಮುವಾದವನ್ನು ಇನ್ನು ಮುಂದೆ ‘ರಾಜಕೀಯ ಪ್ರೇರಿತ ಭಯೋತ್ಪಾದನೆ’ ಎಂದು ಕರೆಯುವುದು ಸೂಕ್ತ. ಶಾಂತಿ, ಸಹಬಾಳ್ವೆಯಿಂದ ಕೂಡಿದ ಮಂಡ್ಯ ಜಿಲ್ಲೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಕೋಮುಸಂಘರ್ಷದ ತಾಣವಾಗಿ ಬದಲಾಯಿಸಿರುವುದೇ ಇದಕ್ಕೆ ನಿದರ್ಶನ.
– ಬಸವರಾಜ ಕರೆಕಲ್, ಮಾವಿನಇಟಗಿ
ಎ.ಐ ಬಳಕೆ ಮತ್ತು ಸಹಜ ಬುದ್ಧಿಮಂಕು
ಮೈಸೂರು ಸೇರಿದಂತೆ ರಾಜ್ಯದ ಹಲವು ನಗರಗಳ ವೃತ್ತಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಿ.ಸಿ.ಟಿ.ವಿ. ಕ್ಯಾಮೆರಾಗಳಿವೆ. ದೀಪದ ಕೆಳಗೆ ಕತ್ತಲು ಎಂಬಂತೆ ಈ ಕ್ಯಾಮೆರಾಗಳ ಬುಡದಲ್ಲಿಯೇ ಇರುವ ಸಿಗ್ನಲ್ ಲೈಟ್‌ಗಳು ಕೆಟ್ಟುಹೋಗಿರುತ್ತವೆ. ನಂಬರ್ ಪ್ಲೇಟ್ ಇಲ್ಲದ ವಾಹನಗಳು ಸಂಚರಿಸುತ್ತಿರುತ್ತವೆ. ಪಾದಚಾರಿ ಮಾರ್ಗಗಳು ಒತ್ತುವರಿಯಾಗಿರುತ್ತವೆ. ಈ ಎಲ್ಲಾ ಅನ್ಯಾಯ/ ಅಪರಾಧಗಳು ಕೃತಕ ಬುದ್ಧಿಮತ್ತೆಯ ಕ್ಯಾಮೆರಾಗಳ ಕಣ್ಣಿಗೆ ಕಾಣುವುದೇ ಇಲ್ಲ. ಕೇವಲ ಹೆಲ್ಮೆಟ್ ಧರಿಸದ ವಾಹನ ಸವಾರರು ಹಾಗೂ ಸೀಟ್ ಬೆಲ್ಟ್ ಧರಿಸದ ಸವಾರರ ಫೋಟೊ ಕ್ಲಿಕ್ಕಿಸಲು ಮಾತ್ರ ಎ.ಐ ಕ್ಯಾಮೆರಾಗಳನ್ನು ರೂಪಿಸಲಾಗಿದೆಯೇ? ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಮೊರೆಹೋದ ಪೊಲೀಸರ ಸಹಜ ಬುದ್ಧಿಮತ್ತೆ ಮಂಕಾಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ.
– ಪಿ.ಜೆ. ರಾಘವೇಂದ್ರ, ಮೈಸೂರು
ಬೇರೆ ಕ್ಷೇತ್ರದ ಸಾಧಕರು ಕಾಣಲಿಲ್ಲವೇ?
ಚಲನಚಿತ್ರ ಕಲಾವಿದರಾದ ವಿಷ್ಣುವರ್ಧನ್ ಮತ್ತು ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿರುವುದು ಸರಿಯಷ್ಟೇ. ಆದರೆ, ಈ ಪ್ರಶಸ್ತಿ ಕೇವಲ ಸಿನಿಮಾ ಕಲಾವಿದರಿಗೆ ಮಾತ್ರ ಸೀಮಿತವೇ. ಇತರ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದವರು ರಾಜ್ಯ ಸರ್ಕಾರದ ಗಮನಕ್ಕೆ ಬಂದಿಲ್ಲವೇ?
– ಎಂ.ಎಸ್. ರಘುನಾಥ್, ಬೆಂಗಳೂರು
ರಾಜಕಾರಣಿಗಳಿಗೂ ನಿವೃತ್ತಿ ಬೇಕು
ಸರ್ಕಾರಿ ನೌಕರರಿಗೆ ನಿವೃತ್ತಿಯ ವಯಸ್ಸನ್ನು ಅರವತ್ತು ವರ್ಷಕ್ಕೆ ನಿಗದಿಪಡಿಸಲಾಗಿದೆ. ರಾಜಕಾರಣಿಗಳಿಗೂ ನಿವೃತ್ತಿ ವಯಸ್ಸನ್ನು ಅರವತ್ತು ವರ್ಷಕ್ಕೆ ಮಾಡಿದರೆ ರಾಜಕಾರಣ ಮಾಡುವುದನ್ನು ಬಿಡುತ್ತಾರೆ. ಇಲ್ಲದಿದ್ದರೆ ಸಾಯುವ ತನಕ ಅವರೇ ಜನಪ್ರತಿನಿಧಿಗಳಾಗಲು ಚುನಾವಣೆಗೆ ಸ್ಪರ್ಧಿಸುತ್ತಾರೆ. ಯುವ ಸಮುದಾಯಕ್ಕೆ ಅವಕಾಶ ಇಲ್ಲದಂತಾಗುತ್ತದೆ. ಒಂದು ಬಾರಿ ಶಾಸಕರಾದವರು ಮತ್ತೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸಬಾರದು. ಅರವತ್ತು ವರ್ಷ ತುಂಬಿದವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಾನೂನು ರೂಪಿಸಬೇಕಿದೆ.
– ಶ್ರೀನಿವಾಸ ರಾಂಪುರ, ಚನ್ನಪಟ್ಟಣ
‘ಅತಿಥಿ’ಗಳ ಹಗ್ಗದ ಮೇಲಿನ ನಡಿಗೆ
ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ಪಾಲಿಗೆ ಈ ವರ್ಷವೂ ಮತ್ತದೇ ಆತಂಕ, ಬೇಸರ ತಂದಿದೆ. ಪ್ರತಿವರ್ಷವೂ ಹಗ್ಗದ ಮೇಲೆ ನಡೆಯುತ್ತಲೇ ಇದ್ದಾರೆ. ಆಯಾ ಕಾಲಕ್ಕೆ ಸಂದ ವಿದ್ಯಾರ್ಹತೆ ಪಡೆದೇ ಉಪನ್ಯಾಸಕರಾಗಿ ಕನಿಷ್ಠ ವೇತನಕ್ಕೆ ದುಡಿಯುತ್ತಾ ಬಂದಿದ್ದಾರೆ. ಅಲ್ಪ ವೇತನವನ್ನು ಹೆಚ್ಚಿಸಿಕೊಳ್ಳಲು ತಿಂಗಳಾನುಗಟ್ಟಲೆ ದುಡ್ಡು ಕಳೆದುಕೊಂಡು, ಸರ್ಕಾರದ ಗಮನ ಸೆಳೆಯಲು ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ.
ಈಗ ಯುಜಿಸಿ ನಿಯಮಾವಳಿಯ ನೆಪವೊಡ್ಡಿ ಮನೆಯಲ್ಲಿ ಕೂರಿಸಲಾಗಿದೆ. ಅತ್ತ ಕಾಲೇಜುಗಳಿಗೆ ಬರುವ ಬಡ ವಿದ್ಯಾರ್ಥಿಗಳಿಗೆ ಪಾಠವಿಲ್ಲ. ಮುಕ್ಕಾಲು ಪಾಲು ಇರುವ ಅತಿಥಿ ಉಪನ್ಯಾಸಕರು ಇಲ್ಲದೆ ಕಾಯಂ ಉಪನ್ಯಾಸಕರು ಪಾಠಗಳನ್ನು ತೂಗಿಸಿಕೊಂಡು ಹೋಗಲಾಗದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿರಿಯ ಅತಿಥಿ ಉಪನ್ಯಾಸಕರಿಗೆ ಅನ್ಯಾಯ ಆಗಲು ರಾಜ್ಯ ಸರ್ಕಾರ ಬಿಡಬಾರದು. ವೇತನ ಹೆಚ್ಚಳದ ಜೊತೆಗೆ ಅವರನ್ನೇ ಮರು ಆಯ್ಕೆ ಮಾಡಲು ಒತ್ತು ನೀಡಬೇಕು.
– ವೃಂದಾ ಹೆಗ್ಡೆ, ಬೆಂಗಳೂರು
ಮೌಖಿಕ ಸೂಚನೆಗೆ ಮನ್ನಣೆ ಇದೆ
ಕನ್ನಡ ಸಾಹಿತ್ಯ ಪರಿಷತ್ತಿನ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣವು ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಕಸಾಪ ಅಧ್ಯಕ್ಷರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ವೇಳೆ ‘ಮೇಲ್ಮನವಿಗೆ ದಂಡ ಹಾಕಿಲ್ಲವಲ್ಲ ಅಂತಾ ಖುಷಿಪಡಿ’ ಎಂದು ಹೈಕೋರ್ಟ್ ಮೌಖಿಕವಾಗಿ ಚಾಟಿ ಬೀಸಿದೆ.
‘ಇದು ಲಿಖಿತ ಆದೇಶದಲ್ಲಿ ಇಲ್ಲ’ ಎಂದು ಪರಿಷತ್‌ನ ಮಾಧ್ಯಮ ವಿಭಾಗದ ಸಂಚಾಲಕರು ಸ್ಪಷ್ಟೀಕರಣ ನೀಡಿದ್ದಾರೆ. ಈ ಸ್ಪಷ್ಟೀಕರಣವು ಬಾಲಿಶ. ಹೈಕೋರ್ಟ್ ಮೌಖಿಕವಾಗಿ ಹೇಳಿದ್ದನ್ನೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.
– ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ
ವ್ಯತ್ಯಾಸ
ರಾವಣ ಆಳಿದ ನೆಲದಲ್ಲಿ
ಆರ್ಥಿಕ ಕುಸಿತದ ವಿರುದ್ಧ,
ಸೀತೆಯ ತವರುನಾಡಿನಲ್ಲಿ
ಭ್ರಷ್ಟಾಚಾರದ ವಿರುದ್ಧ
ಜನರ ಪ್ರತಿಭಟನೆ.
ರಾಮನ ಜನ್ಮಭೂಮಿಯಲ್ಲಿ
ಧರ್ಮಗಳ ಹೆಸರಿನಲ್ಲಿ
ಘರ್ಷಣೆ!
– ಎಚ್. ಆನಂದರಾಮ ಶಾಸ್ತ್ರೀ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.