ನೇಮಕಾತಿ ವಯೋಮಿತಿ ಸಡಿಲಗೊಳಿಸಿ
ರಾಜ್ಯ ಸರ್ಕಾರವು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ವಿವಿಧ ಇಲಾಖೆಗಳ ಲ್ಲಿನ 708 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಇದರಿಂದ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದ ಲಕ್ಷಾಂತರ ಅಭ್ಯರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯಲ್ಲಿ ಕೇವಲ 3 ವರ್ಷಗಳನ್ನಷ್ಟೇ ಸಡಿಲಿಕೆ ಮಾಡಲಾಗಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಇತರ ರಾಜ್ಯಗಳಲ್ಲಿ 7ರಿಂದ 10 ವರ್ಷದವರೆಗೆ ಗರಿಷ್ಠ ವಯೋಮಿತಿ ಸಡಿಲಿಸಿರುವ ನಿದರ್ಶನವಿದೆ. ರಾಜ್ಯ ಸರ್ಕಾರವು ಗರಿಷ್ಠ ವಯೋಮಿತಿಯನ್ನು ಇನ್ನಷ್ಟು ವರ್ಷ ಸಡಿಲಿಸಿದರೆ ಅನುಕೂಲವಾಗಲಿದೆ.
– ಪ್ರಶಾಂತ್ ಕುಮಾರ್ ಎ.ಪಿ., ಮೈಸೂರು
ಎನ್. ನರಸಿಂಹಯ್ಯ ಕೊಡುಗೆ ಅನನ್ಯ
‘ಎನ್. ನರಸಿಂಹಯ್ಯ ನೆನಪಿಗೆ ಏನೂ ಬೇಡವೇ?’ ಲೇಖನ (ಲೇ: ಎನ್.ಎಸ್. ಶಂಕರ್, ಪ್ರ.ವಾ., ನ. 18) ನನ್ನ ಬಾಲ್ಯವನ್ನು ನೆನಪಿಸಿತು. ಆಗ ‘ಚಂದಮಾಮ’ ಮತ್ತು ಎನ್. ನರಸಿಂಹಯ್ಯ ಅವರ ಪತ್ತೆದಾರಿ ಕಾದಂಬರಿಗಳು ನನಗೆ ತುಂಬಾ ಪ್ರಿಯವಾಗಿದ್ದವು. ‘ಮುಂದೇನಾಗುತ್ತೆ..?’ ಎಂದು ತಿಳಿಯುವ ಕುತೂಹಲ ತಡೆಯಲಾಗದೇ ಒಂದು ಪುಸ್ತಕ ಓದಲು ಪ್ರಾರಂಭ ಮಾಡಿದರೆ, ಅದನ್ನು ಪೂರ್ತಿ ಓದಿ ಮುಗಿಸಿಯೇ ಮೇಲೇಳುತ್ತಿದ್ದುದು. ಹಾಗಾಗಿ, ಪತ್ತೆದಾರ ಪುರುಷೋತ್ತಮನ ಹೆಸರು ಇಂದಿಗೂ ನೆನಪಲ್ಲಿ ಇದೆ. ನರಸಿಂಹಯ್ಯ ಅವರ ವ್ಯಕ್ತಿತ್ವದ ಪರಿಚಯ ಇರಲಿಲ್ಲ. ಲೇಖನದಲ್ಲಿ ಆ ಬಗ್ಗೆ ತಿಳಿದು, ಅವರ ಬಗ್ಗೆ ಮನಸ್ಸು ತುಂಬಿ ಬಂದಿತು.
– ಎಲ್.ಟಿ. ಸರಸ್ವತಿ, ಸಾಗರ
ರೈತ ಸಂಘದ ಹೋರಾಟ ಕಬ್ಬಿಗೆ ಮಾತ್ರವೆ?
ಇತ್ತೀಚೆಗೆ ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಡಿ ಬೃಹತ್ ಹೋರಾಟ ನಡೆಯಿತು. ಸರ್ಕಾರವೂ ಹೋರಾಟಕ್ಕೆ ಮಣಿಯಿತು. ಹಾಗಿದ್ದರೆ ರೈತ ಸಂಘದ ಹೋರಾಟ ಕಬ್ಬು ಬೆಳೆಗಷ್ಟೇ ಸೀಮಿತವೇ? ಈರುಳ್ಳಿ ಬೆಲೆ ಕುಸಿತದಿಂದಾಗಿ ರಾಜ್ಯದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಖರ್ಚು ಮಾಡಿದ ಹಣವೂ ಕೈಸೇರದೆ ಸಾಲದ ಸುಳಿಗೆ ಸಿಲುಕಿದ್ದಾರೆ. ಮೆಕ್ಕೆಜೋಳ, ರಾಗಿ, ಭತ್ತ, ಈರುಳ್ಳಿ ಬೆಲೆ ಕುಸಿದಾಗಲೂ ಹೋರಾಟ ಮಾಡಿದರೆ ಸಣ್ಣ ರೈತರಿಗೆ ನ್ಯಾಯ ಸಿಗುತ್ತದಲ್ಲವೆ?
– ಸಿದ್ದು ಪೂಜಾರಿ, ಬೆಂಗಳೂರು
ವಿ.ವಿ.ಗೆ ಅಂಟಿದ ಅತಿರೇಕಗಳ ಅಪಸವ್ಯ
ಕುವೆಂಪು ವಿಶ್ವವಿದ್ಯಾಲಯದಲ್ಲಿ ಭಗವದ್ಗೀತೆ ಕುರಿತು ನಡೆದ ವಿಚಾರ ಸಂಕಿರಣವನ್ನು ಕೆಲವರು ವಿರೋಧಿಸಿದ್ದಾರೆ. ಈ ವಿಷಯದಲ್ಲಿ ಬೇಕೆಂದೇ ಕುವೆಂಪು ಮತ್ತು ಯು.ಆರ್. ಅನಂತಮೂರ್ತಿ ಅವರ ಹೆಸರನ್ನೆಲ್ಲ ಎಳೆದು ತಂದಿದ್ದಾರೆ. ಇದರಲ್ಲಿ ಎಷ್ಟು ಜನ ಭಗವದ್ಗೀತೆಯನ್ನಾಗಲಿ, ಕುವೆಂಪು- ಅನಂತಮೂರ್ತಿ ಸಾಹಿತ್ಯವನ್ನಾಗಲಿ ಓದಿದ್ದಾರೆಂದು ತಿಳಿಯದು. ವಿವಾದಕ್ಕೆ ಪ್ರತಿಕ್ರಿಯಿಸಿರುವ ಕುಲಪತಿ ಶರತ್ ಅನಂತಮೂರ್ತಿ, ‘ಯಾವುದೋ ಲೇಬಲ್ ಹಚ್ಚಿ ಎಲ್ಲವನ್ನೂ ಹಾಳು ಮಾಡುವುದು ಬೇಡ’ ಎಂದಿದ್ದಾರೆ. ಸತ್ಯ ಹೇಳಿರುವ ಅವರ ಧೀಮಂತಿಕೆ ಶ್ಲಾಘನೀಯ.
ಈಗ ಸತ್ಯ ಯಾರಿಗೂ ಬೇಡ. ಬದಲಿಗೆ, ಎಲ್ಲದರಲ್ಲೂ ಎಡ-ಬಲ,
ಬ್ರಾಹ್ಮಣ-ಶೂದ್ರ, ಮೆಜಾರಿಟಿ-ಮೈನಾರಿಟಿ ಇತ್ಯಾದಿ ಅತಿರೇಕಗಳ ಅಪಸವ್ಯವಿದೆ. ನಮ್ಮ ಸಾಹಿತ್ಯ, ವಿ.ವಿಗಳು, ಅಕಾಡೆಮಿಗಳಲ್ಲೂ ಈ ರೋಗ ಉಲ್ಬಣಿಸಿದೆ. ವಿಶ್ವವಿದ್ಯಾಲಯಗಳು ಜ್ಞಾನಸೃಷ್ಟಿ ಮತ್ತು ವೈದುಷ್ಯದ ಆಡುಂಬೊಲಗಳಾಗಿ ಇರಬೇಕಾಗಿತ್ತು. ಆದರೆ, ಈಗ ಜಾತಿ, ಧರ್ಮ, ರಾಜಕೀಯದ ತೊಟ್ಟಿಗಳಾಗಿರುವುದು ದುರಂತ.
– ಬಿ.ಎಸ್. ಜಯಪ್ರಕಾಶ ನಾರಾಯಣ, ಅಗ್ರಹಾರ ಬೆಳಗುಲಿ
ಸಾರಿಗೆ ನೌಕರರ ಬಗ್ಗೆ ಅನಾದರ ಸಲ್ಲದು
ಕಳೆದ 38 ತಿಂಗಳಿನಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಬಾಕಿ ವೇತನ ಪಾವತಿಯಾಗಿಲ್ಲ. ನೌಕರರು ಹಗಲು–ರಾತ್ರಿ ಎನ್ನದೆ ಸೇವೆ ಸಲ್ಲಿಸುತ್ತಿದ್ದಾರೆ.
ತಂದೆ, ತಾಯಿ, ಮಕ್ಕಳನ್ನು ಮನೆಯಲ್ಲಿ ಬಿಟ್ಟು ದೂರದ ಊರುಗಳಿಗೆ ಸಂಚರಿಸುತ್ತಾರೆ. ನೌಕರರಿಗೆ ಪ್ರತಿ ತಿಂಗಳು ವೇತನ ಸಿಗದಿದ್ದರೆ ಕುಟುಂಬದ ನಿರ್ವಹಣೆ ಕಷ್ಟಕರ. ಹಲವು ವರ್ಷಗಳಿಂದ ವೇತನ ಪರಿಷ್ಕರಿಸಿಲ್ಲ. ತಮ್ಮ ವೇತನ ಹಾಗೂ ಇತರ ಭತ್ಯೆಗಳನ್ನು ಸದನದಲ್ಲಿ ಚರ್ಚೆ ಇಲ್ಲದೆ ಹೆಚ್ಚಿಸಿಕೊಳ್ಳುವ ಜನಪ್ರತಿನಿಧಿಗಳು, ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ನಿರ್ಲಕ್ಷ್ಯವಹಿಸಿರುವುದು ಅಮಾನವೀಯ.
– ಸಂತೋಷ ಪೂಜಾರಿ, ತಡಲಗಿ
ನಗರೀಕರಣ: ಖಗಸಂಕುಲಕ್ಕೆ ಆಪತ್ತು
ಪಕ್ಷಿಗಳು ಮಾನವನ ದೈನಂದಿನ ಬದುಕಿನೊಂದಿಗೆ ಬೆಸೆದುಕೊಂಡಿವೆ. ಪಾರಿಸರಿಕ ಸಮತೋಲನ ಕಾಪಾಡುವಲ್ಲಿ ಅವುಗಳ ಕೊಡುಗೆ ಹಿರಿದು. ಬೀಜ ಪ್ರಸರಣ, ಕೀಟ ನಿಯಂತ್ರಣ ಸೇರಿದಂತೆ ರೈತನ ಪಾಲಿಗೆ ಜೀವನಾಡಿಯಾಗಿವೆ. ಆದರೆ, ಅತಿಯಾದ ನಗರೀಕರಣ ಅವುಗಳ ಗೋಣು ಮುರಿದಿದೆ. ಮನೆಯ ಅಂಗಳದಲ್ಲಿ ಕಂಡುಬರುತ್ತಿದ್ದ ಹಲವು ಪಕ್ಷಿಗಳು ಆವಾಸನಾಶದಿಂದ ಅಳಿವಿನಂಚಿಗೆ ತಲುಪಿವೆ. ಮತ್ತೊಂದೆಡೆ ಅರಣ್ಯ ನಾಶ, ಕೃಷಿಯಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಖಗಸಂಕುಲ ಸಂಕಷ್ಟಕ್ಕೆ ಸಿಲುಕಿದೆ. ಪರಿಸರ ಮಾಲಿನ್ಯದಿಂದ ಅವುಗಳ
ಸಂತಾನೋತ್ಪತ್ತಿಯಲ್ಲಿ ಏರುಪೇರಾಗುತ್ತಿದೆ. ‘ಹಕ್ಕಿಗಳ ಸಂಗದಲ್ಲಿ ರೆಕ್ಕೆ ಮೂಡುವುದೆನಗೆ, ಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ’ ಎಂದು ಕುವೆಂಪು ಪರವಶರಾಗಿ ನುಡಿದಿದ್ದಾರೆ. ಹಾಗಾಗಿ ಬೆರಗಿನ, ಬೆಡಗಿನ ಪಕ್ಷಿಗಳ ಬದುಕನ್ನು ಉಳಿಸಬೇಕಿದೆ.
– ಯೋಗೇಂದ್ರ ಎಸ್.ಆರ್., ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.