ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 21 ಆಗಸ್ಟ್ 2025, 23:39 IST
Last Updated 21 ಆಗಸ್ಟ್ 2025, 23:39 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಷೇರು ಹೂಡಿಕೆ ಹಣಕಾಸಿನ ಸಾಕ್ಷರತೆಯೆ?

ಗ್ರಾಮ ಪಂಚಾಯಿತಿ ಸದಸ್ಯರಿಗೆ ಷೇರು ಹೂಡಿಕೆಯ ತರಬೇತಿ ಕೊಡುವ
(ಪ್ರ.ವಾ., ಆಗಸ್ಟ್‌ 21) ಪಂಚಾಯತ್‌ರಾಜ್‌ ಸಚಿವಾಲಯದ ಉದ್ದೇಶ ಸರಿಯಾದು ದಲ್ಲ. ಸದಸ್ಯರನ್ನು ಆಯ್ಕೆ ಮಾಡಿರುವುದು, ಗ್ರಾಮೀಣ ಭಾಗಗಳಲ್ಲಿ ಸಾಮಾಜಿಕ ಆಸ್ತಿ ಸೃಷ್ಟಿಸಲು. ಆದರೆ, ಕೇಂದ್ರ ಸರ್ಕಾರ ಅವರನ್ನು ಬಂಡವಾಳಶಾಹಿ ವ್ಯವಸ್ಥೆಗೆ ಸಿಲುಕಿಸಲು ಹೊರಟಿದೆ. ಷೇರುಪೇಟೆ ಹೂಡಿಕೆಯು ಹಣಕಾಸಿನ ಸಾಕ್ಷರತೆ ಆಗಲು ಹೇಗೆ ಸಾಧ್ಯ? 

ADVERTISEMENT

⇒ಪ್ರಶಾಂತ್ ಕೆ.ಸಿ., ಚಾಮರಾಜನಗರ 

ಒಳಮೀಸಲು ಅರ್ಹರಿಗಷ್ಟೇ ಸಿಗಲಿ

ಎಚ್‌.ಎನ್‌. ನಾಗಮೋಹನದಾಸ್‌ ವರದಿಯನ್ನು ಪರಿಷ್ಕರಿಸಿ ಜಾರಿಗೊಳಿಸುವ ಸರ್ಕಾರದ ತೀರ್ಮಾನ ಸ್ವಾಗತಾರ್ಹ. ಈ ತೀರ್ಮಾನದಿಂದ, ಒಳಮೀಸಲಾತಿ ಅನ್ವಯ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ಕಾದಿರುವ ನಿರುದ್ಯೋಗಿಗಳು ನಿಟ್ಟುಸಿರು ಬಿಡುವಂತಾಗಿದೆ. ಪ್ರಕಟಗೊಂಡ ಒಳಮೀಸಲಾತಿಯ ಸೌಲಭ್ಯ ಅರ್ಹರಿಗೆ ಸಿಗುವಂತಾಗಲಿ.

⇒ಪಿ.ಸಿ. ಕಂಗಾಣಿಸೋಮು, ಕ್ಯಾತಮಾರನಹಳ್ಳಿ

ಅಂತಃಕರಣ ಸತ್ತು ಹೋಗಿದೆಯೇ?

ಒಳಮೀಸಲಾತಿ ಕುರಿತ ‘ಪ್ರಜಾವಾಣಿ’ ಸಂಪಾದಕೀಯ (ಆಗಸ್ಟ್‌ 21) ಅಲೆಮಾರಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಎತ್ತಿಹಿಡಿದಿದೆ. ಅನ್ನ ತಿನ್ನುವ ಕನಿಷ್ಠ ಜ್ಞಾನ ಇರುವ ಯಾರಿಗೇ ಆದರೂ, ಅಲೆಮಾರಿ ಸಮುದಾಯ ಮುಂದುವರಿದ ಸ್ಪೃಶ್ಯ ಜಾತಿಗಳೊಡನೆ ಸ್ಪರ್ಧಿಸಿ ಗೆಲ್ಲುವುದು ಸಾಧ್ಯವಿಲ್ಲವೆಂಬುದು ಅರ್ಥವಾಗುತ್ತದೆ. ಜನಪ್ರತಿನಿಧಿಗಳು ಈ ಕುರಿತು ಪ್ರತಿಕ್ರಿಯೆ ನೀಡದೆ ಇರುವುದನ್ನು ನೋಡಿದಾಗ ‘ಅಂತಃಕರಣ’ ಸತ್ತು ಹೋಗುತ್ತಿದೆಯೆ ಎಂಬ ಪ್ರಶ್ನೆ ಕಾಡುತ್ತದೆ.

⇒ಪುಟ್ಟದಾಸು, ಮಂಡ್ಯ

ಅಮ್ಮ: ವರ್ಣಿಸಲಾಗದ ಅನುಭೂತಿ

ಕಣ್ಣಿಗೆ ಕಾಣುವ ದೇವರು ಎಂದರೆ, ತಾಯಿ. 102 ವರ್ಷದ ತಾಯಿಯನ್ನು ಹೆಗಲ ಮೇಲೆ ಹೊತ್ತು 220 ಕಿ.ಮೀ. ದೂರ ನಡೆದು ತಾಯಿಗೆ ವಿಠಲನ ದರ್ಶನ ಮಾಡಿಸಿದ ಮಗನ ಪರಿಶ್ರಮದ ಕಾರ್ಯ ಮೆಚ್ಚುವಂತದ್ದು (ಪ್ರ.ವಾ., ಆಗಸ್ಟ್‌ 20). ವಿಠಲನ ದರ್ಶನ ಮಾಡುವ ತನ್ನ ತಾಯಿಯ ಕೊನೆ ಆಸೆಯನ್ನು ಮಗ ಪೂರೈಸಿದ್ದು, ಆ ಸೇವೆಯಲ್ಲೇ ಭಗವಂತನ ಸಾಕ್ಷಾತ್ಕಾರ ಅಡಗಿದೆ. ಇಂದಿನ ಕಾಲದಲ್ಲಿ ಹೆತ್ತವರನ್ನು ನಿರ್ಲಕ್ಷಿಸುವ ಮಕ್ಕಳಿಗೆ ಇದೊಂದು ಮಾದರಿ ಸನ್ನಡತೆಯಾಗಿದೆ.

⇒ಎಲ್. ಚಿನ್ನಪ್ಪ, ಬೆಂಗಳೂರು

ವಿಧಾನಸಭಾ ಅಧ್ಯಕ್ಷರ ಮಾದರಿ ವ್ಯಕ್ತಿತ್ವ

ನಾನು ವೃತ್ತಿಯಲ್ಲಿ ಶಿಕ್ಷಕ. ಸಮೂಹ ಸಂಪನ್ಮೂಲ ವ್ಯಕ್ತಿಯಾದ ನಾನು ಮಕ್ಕಳ ಮೊಬೈಲ್ ಬಳಕೆಯ ಗೀಳು ಬಿಡಿಸಲು ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನ ಆರಂಭಿಸಿದೆ. ನನ್ನ ವ್ಯಾಪ್ತಿಯ ಎಂಟು ಶಾಲೆಗಳ ಮಕ್ಕಳು ಮತ್ತು ಪೋಷಕರಲ್ಲಿ ಇದರ ದುಷ್ಪರಿಣಾಮ ಕುರಿತು ಅರಿವು ಮೂಡಿಸಿದೆ. ಇದರ ವ್ಯಾಪ್ತಿ ವಿಸ್ತರಿಸುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಅರಿವು ಕಾರ್ಯಕ್ರಮಗಳ ವಿಡಿಯೊ ತುಣುಕುಗಳನ್ನು ಅಪ್‌ಲೋಡ್‌ ಮಾಡಿದ್ದರಿಂದ ವ್ಯಾಪಕ ಪ್ರಚಾರ ಸಿಕ್ಕಿತು. ಮುಖ್ಯಮಂತ್ರಿ ಅವರು, ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಸ್ತಾಪಿಸುವಷ್ಟರ ಮಟ್ಟಿಗೆ ಈ ಕಾರ್ಯಕ್ರಮ ಪ್ರಸಿದ್ಧಿಯಾಯಿತು. ವಿಷಯ ತಿಳಿದ ವಿಧಾನಸಭಾಧ್ಯಕ್ಷರು ತಮ್ಮ ಅಧಿಕೃತ ಕಚೇರಿಗೆ ನನ್ನನ್ನು ಆಹ್ವಾನಿಸಿ ಸನ್ಮಾನಿಸಿದ ರೀತಿ ಮೈನವಿರೇಳಿಸಿತು. ನನ್ನಂತ ಸಾಮಾನ್ಯ ಶಿಕ್ಷಕನನ್ನು ಗೌರವಿಸಿದ ರೀತಿಯಂತೂ ಎಂದಿಗೂ ಮರೆಯಲಾಗದು. ಅವರ ಸರಳ ವ್ಯಕ್ತಿತ್ವವು ಮೂಕವಿಸ್ಮಿತಗೊಳಿಸಿತು. 

⇒ಚಿಕ್ಕವೀರಯ್ಯ, ರಾಮನಗರ

ನಟನೆ ಬೇಡ: ಪ್ರಬುದ್ಧತೆ ಬೇಕು

‘ನನ್ನ ಮತದಾರರ ರಕ್ಷಣೆಗೆ ಬಂಡೆಯಾಗಿ ಅವರ ಹಿಂದೆ ನಿಲ್ಲುತ್ತೇನೆ’, ‘ದೇಶದ ತಾಯಂದಿರ, ಅಕ್ಕ–ತಂಗಿಯರ ವಿಡಿಯೊ ದೃಶ್ಯಗಳನ್ನು ಕೊಡಲಾರೆ’, ‘ದೇಶದ ಕ್ಷಮೆ ಕೇಳಬೇಕು, ಇಲ್ಲದಿದ್ದರೆ...’ –ಇವು ಯಾವುದೋ ಸಿನಿಮಾದ ನಾಯಕ
ನಟನ ಡೈಲಾಗ್‌ಗಳಲ್ಲ ಅಥವಾ ರಾಜಕೀಯ ನಾಯಕರ ಭಾಷಣದ ತುಣುಕುಗಳಲ್ಲ.

ದೇಶದ ಮುಖ್ಯ ಚುನಾವಣಾಧಿಕಾರಿ ಅವರು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವಾಗ ಹೇಳಿದ ಸಾಲುಗಳಿವು. ಟಿ.ಎನ್. ಶೇಷನ್ ಅವರು ಅಲಂಕರಿಸಿದ್ದಂತಹ ಸಾಂವಿಧಾನಿಕ ಪೀಠದಲ್ಲಿ ಕಾರ್ಯ ನಿರ್ವಹಿಸುತ್ತಿರುವ
ಮುಖ್ಯ ಚುನಾವಣಾಧಿಕಾರಿ ಅವರಿಂದ ಇನ್ನೂ ಹೆಚ್ಚಿನ ಪ್ರಬುದ್ಧ
ನಡವಳಿಕೆಯನ್ನು ದೇಶದ ಜನರು ಎದುರು ನೋಡುತ್ತಿದ್ದಾರೆ. ಈ ಸತ್ಯವನ್ನು ಅವರು ಗ್ರಹಿಸಲಿ. 

⇒ಶಾಂತಕುಮಾರ್, ಸರ್ಜಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.