ವಾಚಕರ ವಾಣಿ
ಏರೋಸ್ಪೇಸ್: ‘ಕಲ್ಯಾಣ’ ಪರಿಗಣಿಸಲಿ
ಬೀದರ್, ಕಲಬುರಗಿ, ಯಾದಗಿರಿ ಮತ್ತು ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಯಾವುದಾದರೂ ಜಿಲ್ಲೆಯ ವ್ಯಾಪ್ತಿಯಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಿ ರಕ್ಷಣಾ ಕೈಗಾರಿಕಾ ಕಾರಿಡಾರ್ ಹಾಗೂ ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ಮುತುವರ್ಜಿ ವಹಿಸಿದರೆ ಈ ಭಾಗದ ಅಭಿವೃದ್ಧಿಯಾಗಲಿದೆ. ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೂ ನಾಂದಿ ಹಾಡಿದಂತಾಗುತ್ತದೆ.
ದೇವನಹಳ್ಳಿ ತಾಲ್ಲೂಕಿನಲ್ಲಿ 1,776 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಕೈಬಿಟ್ಟಿದೆ. ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾ.ರಾ. ಲೋಕೇಶ್, ತಮ್ಮ ರಾಜ್ಯದಲ್ಲಿ ರಕ್ಷಣಾ ಕಾರಿಡಾರ್ ಹಾಗೂ ಏರೋಸ್ಪೇಸ್ ಪಾರ್ಕ್ ಸ್ಥಾಪಿಸಲು ಆಹ್ವಾನ ನೀಡುತ್ತಿದ್ದಾರೆ. ಈ ಯೋಜನೆಗಳು ಅನ್ಯ ರಾಜ್ಯಗಳ ಪಾಲಾಗದಂತೆ ಸರ್ಕಾರ ತಡೆಯಬೇಕು. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳನ್ನೂ ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ ಪರಿಗಣಿಸಿ, ಪರಿಶೀಲಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು.
-ಶಿವರಾಜ್ ನಡಗೇರಿ, ಕಲಬುರಗಿ
ಪಂಜಾಬ್ ಸರ್ಕಾರವನ್ನು ಅನುಕರಿಸಿ
ಪಂಜಾಬ್ ರಾಜ್ಯ ಸರ್ಕಾರವು ಮಾದಕ ವಸ್ತುಗಳ ಕಳ್ಳಸಾಗಣೆ ತಡೆ ವಿರುದ್ಧ ರೂಪಿಸಿದ್ದ ಅಭಿಯಾನದಡಿ ಸುಮಾರು 22,377 ಕಳ್ಳಸಾಗಣೆದಾರರನ್ನು ಬಂಧಿಸಿದೆ (ಪ್ರ.ವಾ., ಜುಲೈ 19). ಪಂಜಾಬ್ ಸರ್ಕಾರದ ಈ ಆರೋಗ್ಯಕರ ನಿರ್ಧಾರ ಮತ್ತು ಅಭಿಯಾನವನ್ನು ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳು ಅನುಸರಿಸಿದರೆ, ಸಮಾಜದಲ್ಲಿ ಬಹುದೊಡ್ಡ ಬದಲಾವಣೆಗೆ ನಾಂದಿಯಾಗಲಿದೆ.
ಕೋವಿಡ್ ವೇಳೆ ಅಂತರರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ, ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮದ ಕೇರಿಗಳ ಮೇಲೆ ಹದ್ದಿನ ಕಣ್ಣಿಟ್ಟು ಕೋವಿಡ್ ಬಾಧಿತರನ್ನು ಹುಡುಕಿ ತಂದು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇಡಲು ಸರ್ಕಾರಗಳಿಗೆ ಸಾಧ್ಯವಾಗಿತ್ತು. ಆದರೆ, ವಿದೇಶಗಳಿಂದ ಭಾರತಕ್ಕೆ ಕಳ್ಳಸಾಗಣೆಯಾಗುವ ಮಾದಕ ವಸ್ತುಗಳನ್ನು ತಡೆಗಟ್ಟಲು ಯಾಕೆ ಸಾಧ್ಯವಾಗುತ್ತಿಲ್ಲ? ಇಂತಹ ದಂಧೆಗಳಿಂದ ರಾಜಕಾರಣಿಗಳ ಕಿಸೆ ತುಂಬುತ್ತದೆ ಎಂಬ ನಗ್ನಸತ್ಯವನ್ನು ಅಲ್ಲಗೆಳೆಯಲಾಗದು.
-ಆಮಿರ್ ಅಶ್ಅರೀ, ಬನ್ನೂರು
ನೋಟಿನಲ್ಲಿ ಅಂಬೇಡ್ಕರ್ ಚಿತ್ರ ಇರಲಿ
‘ನೋಟುಗಳಲ್ಲಿ ಬಿ.ಆರ್. ಅಂಬೇಡ್ಕರ್ ಚಿತ್ರವೂ ಇರಲಿ’ ಎಂದು ರಾಮಮನೋಹರ ಲೋಹಿಯಾ ವಿಚಾರ ವೇದಿಕೆಯು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಒತ್ತಾಯಿಸಿದೆ (ಪ್ರ.ವಾ., ಜುಲೈ 20). ಈ ಸಂಗತಿಯು ಸಮಕಾಲೀನ ಸಂದರ್ಭದಲ್ಲಿ ಸ್ವೀಕಾರಾರ್ಹವಾಗಿದೆ. ಅಂಬೇಡ್ಕರ್ ಅವರ ಮಹೋನ್ನತ ಕೊಡುಗೆಗಳು ಹಾಗೂ ಅವರ ವ್ಯಕ್ತಿತ್ವವನ್ನು ವಿವಿಧ ಆಯಾಮಗಳಲ್ಲಿ ಈ ದೇಶವಾಸಿಗಳಿಗೆ ಸಾಂದರ್ಭಿಕವಾಗಿ ಮನವರಿಕೆ ಮಾಡಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಪ್ರಸ್ತುತ ಕರೆನ್ಸಿ ನೋಟುಗಳಲ್ಲಿ ಅಂಬೇಡ್ಕರ್ ಚಿತ್ರ ಮುದ್ರಣಕ್ಕೆ ಲೋಹಿಯಾ ವಿಚಾರ ವೇದಿಕೆಯು ಉದ್ದೇಶಿತ ಮೌಲಿಕ ಯೋಜನೆ ರೂಪಿಸಿರುವುದು ಒಳ್ಳೆಯ ಬೆಳವಣಿಗೆ. ಸಂಬಂಧಪಟ್ಟವರು ಪೂರ್ವಗ್ರಹಪೀಡಿತರಾಗದೆ ಪಕ್ಷಾತೀತವಾಗಿ ಈ ಮಹತ್ತರ ಯೋಜನೆಯ ಅನುಷ್ಠಾನಕ್ಕೆ ಇಚ್ಛಾಶಕ್ತಿ ಪ್ರದರ್ಶಿಸಲಿ.
-ಜಯವೀರ ಎ.ಕೆ. ಖೇಮಲಾಪುರ, ರಾಯಬಾಗ
ಸರ್ಕಾರದ ನಿರ್ಧಾರ ಶ್ಲಾಘನೀಯ
ಮುಖ್ಯಮಂತ್ರಿ ಅವರು ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ₹50 ಕೋಟಿ ವಿಶೇಷ ಅನುದಾನ ನೀಡಲು ಮುಂದಾಗಿರುವುದು ಶ್ಲಾಘನೀಯ (ಪ್ರ.ವಾ., ಜುಲೈ 19). ಇದರಿಂದ ಹಿಂದುಳಿದಿರುವ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನೆರವಾಗಲಿದೆ. ಸರ್ಕಾರವು ತ್ವರಿತವಾಗಿ ಅನುದಾನವನ್ನು ಬಿಡುಗಡೆಗೊಳಿಸಬೇಕು. ಇದರಿಂದ ನನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೂ ಮರುಜೀವ ಸಿಗಲಿದೆ.
-ಎ.ವೈ. ಸೋನ್ಯಾಗೋಳ, ಪಾಶ್ಚಾಪೂರ
ಗ್ರಾಮಾಭಿವೃದ್ಧಿಗೆ ಇಚ್ಛಾಶಕ್ತಿ ಬೇಕು
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ರ‍್ಯಾವಣಕಿ ಗ್ರಾಮದ ಶಾಲೆಯ ವಿದ್ಯಾರ್ಥಿಗಳು ‘ಪ್ರವಾಹ’ ಸಂಕಟ ಅನುಭವಿಸುತ್ತಿರುವ ಸುದ್ದಿ ಓದಿ ಆಘಾತವಾಯಿತು (ಪ್ರ.ವಾ., ಜುಲೈ 20). ಇಂತಹ ಘಟನೆಗಳು ಕೇವಲ ರ‍್ಯಾವಣಕಿ ಗ್ರಾಮಕ್ಕಷ್ಟೇ ಸೀಮಿತವಾಗಿಲ್ಲ. ರಾಜ್ಯದಾದ್ಯಂತ ಅಲ್ಲಲ್ಲಿ ಕಂಡುಬರುತ್ತವೆ.
ಹಳ್ಳಿಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಧ್ವನಿ ಎತ್ತುವ ಶಕ್ತಿ ಇಲ್ಲದ್ದರಿಂದ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಸಾಮಾಜಿಕ ಸೇವೆ ಮಾಡುತ್ತೇವೆಂದು ಹೇಳುವ ರಾಜಕೀಯ ಧುರೀಣರು ಮತ್ತು ಸರ್ಕಾರಿ ನೌಕರರಿಗೆ ಇಂತಹ ಸಮಸ್ಯೆಗಳು ಕಾಣುವುದಿಲ್ಲ. ಏಕೆಂದರೆ ಇಂತಹ ಯಾತನೆಯನ್ನು ಅವರ ಮಕ್ಕಳಾಗಲಿ ಅಥವಾ ಅವರಾಗಲಿ ಅನುಭವಿಸಿರುವುದಿಲ್ಲ. ಸರ್ಕಾರ ಕೇವಲ ನಗರೀಕರಣದ ಬಗ್ಗೆ ಹೆಚ್ಚು ಗಮನಹರಿಸುತ್ತದೆಯೇ ಹೊರತು, ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡುವುದಿಲ್ಲ. ಗ್ರಾಮೀಣರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.
-ಸಂಜು ಹೆಂದೊರೆ, ಶಿರಾ
ಜಾಹೀರಾತು ನೀತಿ: ಪಾರದರ್ಶಕತೆ ಬೇಕು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಜಾಹೀರಾತು ನೀತಿ ಪ್ರಕಟಿಸಿರುವುದು ಸ್ವಾಗತಾರ್ಹ. ಆದರೆ, ಈ ನೀತಿ ಜಾರಿಗೊಳಿಸುವಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕಿದೆ. ಇಲ್ಲವಾದರೆ, ಅಧಿಕಾರಿಗಳು ಸ್ಥಳೀಯ ಪುಢಾರಿಗಳೊಂದಿಗೆ ಕೈಜೋಡಿಸಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಾರೆ. ಇದರಿಂದ ಪಾಲಿಕೆಯ ಆದಾಯಕ್ಕೆ ಕತ್ತರಿ ಬೀಳುವುದಂತೂ ಸ್ಪಷ್ಟ.
- ಎಂ.ಎ. ಸುರೇಶ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.