ADVERTISEMENT

ಮೇಕೆದಾಟು: ರಾಜ್ಯದ ಹಿತಾಸಕ್ತಿ ಮುಖ್ಯವಾಗಲಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 15:21 IST
Last Updated 18 ಜನವರಿ 2022, 15:21 IST

ಮೇಕೆದಾಟುವಿಗೆ ಅಣೆಕಟ್ಟು ಕಟ್ಟಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಆರಂಭಿಸಿತು. ಹಿಂದೆ ಕಾಂಗ್ರೆಸ್ ಪಕ್ಷದಿಂದ ಎಸ್.ಎಂ.ಕೃಷ್ಣ ಅವರು ನಡೆಸಿದ ಪಾಂಚಜನ್ಯ ಯಾತ್ರೆ ಹಾಗೂ ಸಿದ್ದರಾಮಯ್ಯ ಅವರು ನಡೆಸಿದ ಬಳ್ಳಾರಿ ಪಾದಯಾತ್ರೆಯ ರೀತಿಯಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಈ ಪಾದಯಾತ್ರೆ ನಡೆಸುತ್ತಿದ್ದಾರೆಂದು ಹೇಳಿದವರೂ ಇದ್ದಾರೆ. ರಾಜಕೀಯ ಪಕ್ಷಗಳು ನಡೆಸುವ ಹೋರಾಟಗಳಲ್ಲಿ ರಾಜಕೀಯ ಉದ್ದೇಶಗಳು ಇರುವುದು ಸಹಜವೇ. ಆದರೆ, ಮೇಕೆದಾಟು ಅಣೆಕಟ್ಟು ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ನೀರಿನ ದಾಹ ಇಂಗಿಸಲು ಮತ್ತು ವಿದ್ಯುತ್ ಉತ್ಪಾದಿಸಲು ಅಗತ್ಯವಾಗಿ ಆಗಬೇಕಾದ ಯೋಜನೆ. ಶತಮಾನಗಳ ಕಾವೇರಿ ವಿವಾದಕ್ಕೂ ಇದರಲ್ಲಿ ಪರಿಹಾರ ಅಡಗಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಈ ಯೋಜನೆ ಜಾರಿ ದಿಸೆಯಲ್ಲಿ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಯತ್ನಿಸುವುದು ಒಳಿತು. ತಮಿಳುನಾಡು ಈ ಯೋಜನೆಯನ್ನು ವಿರೋಧಿಸುತ್ತಿರುವುದರಿಂದ ನಮ್ಮ ರಾಜಕೀಯ ಪಕ್ಷಗಳು ಯೋಜನೆಯ ವಿಚಾರದಲ್ಲಿ ಭಿನ್ನ ನಿಲುವುಗಳನ್ನು ಹೊಂದಿದರೆ ಅಥವಾ ಇದನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಯತ್ನಿಸಿದರೆ ಕೇಂದ್ರ ಮತ್ತು ತಮಿಳುನಾಡಿನ ಮನವೊಲಿಸಿ ಅಣೆಕಟ್ಟು ಕಟ್ಟುವುದು ಸಾಧ್ಯವಿಲ್ಲ.

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ತಾವು ಅಧಿಕಾರದಲ್ಲಿದ್ದಾಗ ಮಾತ್ರ ಈ ಯೋಜನೆಗಾಗಿ ಯತ್ನಿಸಿದ್ದೇವೆ, ಬೇರೆ ರಾಜಕೀಯ ಪಕ್ಷ ಅಧಿಕಾರದಲ್ಲಿದ್ದಾಗ ಏನೂ ಮಾಡಿಲ್ಲ ಎಂದು ಪರಸ್ಪರ ಆರೋಪಿಸಿಕೊಳ್ಳುತ್ತಿವೆ. ಈ ಯೋಜನೆಯು ರಾಜಕೀಯಕ್ಕಿಂತ ಹೆಚ್ಚಾಗಿ ರಾಜ್ಯದ ಹಿತಾಸಕ್ತಿಯ ಪ್ರಶ್ನೆಯಾಗಿ ಕಾಣಿಸಬೇಕು. ವಾಸ್ತವವಾಗಿ ಈ ಯೋಜನೆಯ ಜಾರಿಗೆ ಈವರೆಗೂ ನಿರ್ಣಾಯಕ ಎಂಬಂತಹ ಪ್ರಯತ್ನವೇ ನಡೆದಿಲ್ಲ. ತಮಿಳುನಾಡಿನ ಪ್ರಾದೇಶಿಕ ಪಕ್ಷಗಳ ಎದುರು ನಮ್ಮ ರಾಜ್ಯದ ರಾಷ್ಟ್ರೀಯ ಪಕ್ಷಗಳು ಸ್ಥಳೀಯ ಹಿತಾಸಕ್ತಿ ರಕ್ಷಣೆಯ ವಿಷಯದಲ್ಲಿ ಸದಾ ಹಿಂದೆ ಬೀಳುತ್ತಾ ಬಂದಿವೆ. ಅಂತಹ ತಪ್ಪು ಮೇಕೆದಾಟು ವಿಷಯದಲ್ಲಿ ಆಗಬಾರದು. ಕೇಂದ್ರದ ಮೇಲೆ ಒಟ್ಟಾಗಿ ಒತ್ತಡ ತರಬೇಕು.

ಬೇ.ನ.ಶ್ರೀನಿವಾಸಮೂರ್ತಿ,ತುಮಕೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.