ADVERTISEMENT

ವಾಚಕರ ವಾಣಿ | ಹಿರಿಯ ಜೀವಿಗಳ ಬಗ್ಗೆ ಹಿರಿದಾದ ಮನಸ್ಸಿರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 15 ಜೂನ್ 2022, 20:00 IST
Last Updated 15 ಜೂನ್ 2022, 20:00 IST

‘ವೃದ್ಧಾಶ್ರಮಕ್ಕೆ ಸೇರಿಸುವಂತೆ ಹಿರಿಯರ ಮನವಿ’ ಸುದ್ದಿ (ಪ್ರ.ವಾ., ಜೂನ್‌ 15) ಓದುತ್ತಿದ್ದಂತೆ ಕಣ್ಣೀರು ಕಪಾಳಕ್ಕೆ ಸರ್‍ರನೆ ಜಾರಿತು. ಹಿರಿಯರ ಸಮಸ್ಯೆ ಪರಿಹರಿಸಲು ಆರಂಭಿಸಿರುವ ರಾಷ್ಟ್ರೀಯ ಸಹಾಯವಾಣಿಗೆ ರಾಜ್ಯದಿಂದ ವರ್ಷ ದಲ್ಲಿ (2021ರ ಮೇನಿಂದ 2022ರ ಮೇವರೆಗೆ) 54,964 ಕರೆಗಳು ಬಂದಿರುವುದನ್ನು ತಿಳಿದಾಗ, ಬದುಕಿದ್ದಾಗಲೇ ಈ ರೀತಿ ಕಿರುಕುಳ ನೀಡುವ ಮಕ್ಕಳು ಇದ್ದರೆಷ್ಟು ಬಿಟ್ಟರೆಷ್ಟು ಎನ್ನುವ ಭಾವನೆ ಮೂಡದೇ ಇರದು. ಆಸ್ತಿ ವಿಚಾರದಲ್ಲಿ ವಂಚನೆ, ಸರಿಯಾಗಿ ನೋಡಿಕೊಳ್ಳದೇ ಇರುವುದು ಹಿರಿಯರನ್ನು ಜೀವಚ್ಛವ ಆಗಿಸುತ್ತವೆ. ದೇಶದಲ್ಲಿ ವಯೋನಿರೀಕ್ಷೆ ಹೆಚ್ಚಾಗುತ್ತಿರುವುದರಿಂದ ಹಿರಿಯ ಜೀವಿಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಅಂದರೆ ಸಮಸ್ಯೆ ಇನ್ನೂ ಉಲ್ಬಣ ಆಗುತ್ತದೆ. ಇದಕ್ಕೆ ಪರಿಹಾರ ಪಿಂಚಣಿ ನೀಡುವುದಾಗಲೀ, ದವಸಧಾನ್ಯ ನೀಡುವುದಾಗಲೀ ಅಲ್ಲ. ಬದಲಾಗಿ ಸರ್ಕಾರ ಅಥವಾ ಸ್ವಯಂಸೇವಾ ಸಂಸ್ಥೆಗಳು ಹಿರಿಯರಿಗಾಗಿ ಕಲ್ಯಾಣ ಕೇಂದ್ರ, ಆಶ್ರಮಗಳನ್ನು ನಡೆಸಬೇಕು. ನೇರವಾಗಿ ಆ ಸಂಸ್ಥೆಗಳಿಗೆ ಹಣ ವರ್ಗಾವಣೆ ಮಾಡಿ ಹಿರಿಯ ಜೀವಿಗಳನ್ನು ಚೆನ್ನಾಗಿ ನೋಡಿಕೊಳ್ಳುವ ಕೆಲಸ ಆಗಬೇಕು.

ಹಿರಿಯರ ಇಚ್ಛಾನುಸಾರ ಅವರ ಆಸ್ತಿಯನ್ನು ಯೋಗ್ಯ ರೀತಿಯಲ್ಲಿ ವಿಲೇವಾರಿ ಮಾಡಿ, ಬಂದ ಹಣವನ್ನು ಜೀವಾ ವಧಿಯವರೆಗೂ ಅವರಿಗಾಗಿ ವಿನಿಯೋಗಿಸುವ ವ್ಯವಸ್ಥೆ ಆಗಬೇಕು. ಹಿರಿಯರು ಸಹ ಭೌತಿಕ ಆಸ್ತಿಯ ಬದಲಿಗೆ ಮಕ್ಕಳನ್ನೇ ಆಸ್ತಿ ಎಂಬಂತೆ ಬೆಳೆಸುವುದು ಉತ್ತಮ.

-ಬಿ.ಆರ್.ಅಣ್ಣಾಸಾಗರ,ಸೇಡಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT