ADVERTISEMENT

ವಾಚಕರ ವಾಣಿ | ತಪ್ಪು ಮಾಹಿತಿ ಬಿತ್ತರಿಸುವುದು ತರವಲ್ಲ

​ಪ್ರಜಾವಾಣಿ ವಾರ್ತೆ
Published 11 ಮೇ 2025, 23:30 IST
Last Updated 11 ಮೇ 2025, 23:30 IST
<div class="paragraphs"><p>ಭದ್ರತಾ ಪಡೆ</p></div>

ಭದ್ರತಾ ಪಡೆ

   

ಬೇಜವಾಬ್ದಾರಿ ಮೌಲ್ಯಮಾಪಕರಿಗೆ ಶಿಕ್ಷೆಯಾಗಲಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದಾಗ ಕನ್ನಡ ವಿಷಯದಲ್ಲಿ 13 ಅಂಕ ಪಡೆದಿದ್ದ ಬಳ್ಳಾರಿ ಜಿಲ್ಲೆಯ
ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿಯೊಬ್ಬಳಿಗೆ ಮರುಎಣಿಕೆಯಲ್ಲಿ 73 ಅಂಕ ಲಭಿಸಿದೆ ಎಂದು ವರದಿಯಾಗಿದೆ. ಇದರಿಂದ ಮೌಲ್ಯಮಾಪಕರ ಬೇಜವಾಬ್ದಾರಿ ವರ್ತನೆ ತಿಳಿದುಬರುತ್ತದೆ. ಶಿಕ್ಷಕರಾದವರು ಈ ರೀತಿ ಮಾಡುವುದು ಸರಿಯೇ? ಮೌಲ್ಯಮಾಪನ ಮಾಡಲು ಮನಸ್ಸಿಲ್ಲದಿದ್ದರೆ, ಅನಾರೋಗ್ಯ ಕಾಡುತ್ತಿದ್ದರೆ ಅಥವಾ ಅನಿವಾರ್ಯ ಕೆಲಸಗಳಿದ್ದರೆ ‘ಮೌಲ್ಯಮಾಪನ ಕಾರ್ಯ ಮಾಡುವುದಿಲ್ಲ’ ಎಂದು ಲಿಖಿತವಾಗಿ ಮನವಿ ಸಲ್ಲಿಸಲಿ. ಅದನ್ನು ಸರ್ಕಾರ ಪುರಸ್ಕರಿಸಲಿ. ಅಂತೆಯೇ ಸರ್ಕಾರ ಕೂಡ ಅಂತಹವರ ಮೇಲೆ ಒತ್ತಡ ಹಾಕದಿರಲಿ.

ADVERTISEMENT

ಇಂತಹ ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾದೆವು ಎಂದು ಭಾವಿಸಿ ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಂಡರೆ ಅದಕ್ಕೆ ಹೊಣೆ ಯಾರು? ಮೌಲ್ಯಮಾಪಕರ ಮೇಲೆ ಒತ್ತಡ ಹಾಕದೆ ಮೌಲ್ಯಮಾಪನಕ್ಕೆ ಹೆಚ್ಚು ಸಮಯ ನೀಡುವುದೂ ಅವಶ್ಯ. ಅಂತೆಯೇ ಬೇಜವಾಬ್ದಾರಿಯಿಂದ ವರ್ತಿಸುವ ಮೌಲ್ಯಮಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. 

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

****

ತಪ್ಪು ಮಾಹಿತಿ ಬಿತ್ತರಿಸುವುದು ತರವಲ್ಲ

ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ನಂತರದಲ್ಲಿ ಭಾರತ ಕೈಗೊಂಡ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕೆಲವು ಸುದ್ದಿಮಾಧ್ಯಮಗಳು ಸುಳ್ಳುಸುದ್ದಿಗಳನ್ನು ಹೆಚ್ಚು ಪ್ರಚಾರ
ಮಾಡುವುದರಲ್ಲಿ ತೊಡಗಿಕೊಂಡಿವೆ. ಜನರಿಗೆ ಹೇಳಬೇಕಾದ ವಿಷಯವನ್ನು ಹೇಳದೆ, ಉತ್ಪ್ರೇಕ್ಷೆಯಿಂದ, ಊಹಾಪೋಹಗಳ ಆಧಾರದ ಮೇಲೆ, ದೃಢಪಡದ ಮಾಹಿತಿಯನ್ನು ತಾವು ಖುದ್ದು ಕಂಡಂತೆ ಪ್ರಸಾರ ಮಾಡುತ್ತಿರುವುದು ತಪ್ಪಲ್ಲವೇ? ಇದು ಸುದ್ದಿ ಮಾಧ್ಯಮಕ್ಕೆ ಮಾತ್ರ ಸೀಮೀತವಾಗಿರದೆ ವಿವಿಧ ಸಾಮಾಜಿಕ ಜಾಲತಾಣಗಳು ಸಹ ಲೈಕ್, ಶೇರ್, ಹೆಚ್ಚು ವ್ಯೂಸ್‌ ಪಡೆದುಕೊಳ್ಳುವ ಹುಚ್ಚಿನಲ್ಲಿ ತಪ್ಪು ಮಾಹಿತಿ ಹಂಚುವುದನ್ನೇ ಕಾಯಕವನ್ನಾಗಿಸಿಕೊಂಡಿವೆ.

ವಿದೇಶಾಂಗ ಕಾರ್ಯದರ್ಶಿ ತಮ್ಮ ಮೂರು ಪ್ರತಿಕಾಗೋಷ್ಠಿಗಳಲ್ಲೂ ಹಂಚಿಕೊಳ್ಳದ ಮಾಹಿತಿಗಳನ್ನು ಮಾಧ್ಯಮಗಳು ಸ್ವತಃ ಕಂಡಂತೆ, ತಾವೇ ಕಾರ್ಯಾಚರಣೆಯಲ್ಲಿ ಭಾಗವಹಿಸಿದಂತೆ ಬಿತ್ತರಿಸಿದವು. ಪಾಕಿಸ್ತಾನಕ್ಕೆ ಹೋಗದೆಯೂ ಅಲ್ಲಿಯ ಮಾಹಿತಿಯನ್ನು ಯಥಾವತ್ತಾಗಿ ಕಂಡಂತೆ ಬಿತ್ತರಿಸಲು‌ ಹೇಗೆ ಸಾಧ್ಯ? ಜನ ಮೂರ್ಖರಲ್ಲ, ಯುದ್ಧವೆಂದರೆ ವಿಡಿಯೊ ಗೇಮ್ ಅಲ್ಲ. ಯುದ್ಧ ಮಾತ್ರವಲ್ಲ, ಇತ್ತೀಚೆಗೆ ಪ್ರತಿ ಸೂಕ್ಷ್ಮ ವಿಷಯವನ್ನೂ
ಉದ್ವೇಗಭರಿತವಾಗಿ ಬಿತ್ತರಿಸಲಾಗುತ್ತಿದೆ. ಇದೊಂದು ಅಹಿತಕರ ಬೆಳವಣಿಗೆ. ಇಂತಹ ಮಾಧ್ಯಮಗಳು ಇನ್ನಾದರೂ ಈ ‍ಪ್ರವೃತ್ತಿಯಿಂದ ಮುಕ್ತವಾಗಬೇಕಿದೆ.

-ಸುರೇಂದ್ರ ಪೈ, ಭಟ್ಕಳ

****

ಅಕ್ರಮ ಗಣಿಗಾರಿಕೆ: ನಷ್ಟ ವಸೂಲಿ ಸೂಕ್ತ

‘ನಷ್ಟ ವಸೂಲಿ ಮುಖ್ಯ, ಇಲ್ಲದಿದ್ದರೆ ಜೈಲಿಗೆ ಹೋಗಿ ಬಂದರೆ ಆಯಿತು ಎಂಬ ಮನೋಭಾವ ಬರುತ್ತದೆ’ ಎಂದು, ಅಕ್ರಮ ಗಣಿಗಾರಿಕೆಗಾಗಿ ಜೈಲು ಶಿಕ್ಷೆಗೆ ಗುರಿಯಾಗಿರುವ ಜನಾರ್ದನ ರೆಡ್ಡಿ ಅವರಿಂದ ನಷ್ಟ ವಸೂಲಿ ಮಾಡಬೇಕೆಂಬ ಆಗ್ರಹಕ್ಕೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಪ್ರತಿಕ್ರಿಯಿಸಿರುವುದು (ಪ್ರ.ವಾ., ಮೇ 11) ಅಕ್ಷರಶಃ ಕಟುಸತ್ಯ ಮತ್ತು ಆಚರಣಾರ್ಹ.

ಸಾಮಾನ್ಯ ಜನ ಕಾನೂನು ಉಲ್ಲಂಘಿಸಿದರೆ ಅವರ ವಿರುದ್ಧ ಉಗ್ರ ಕ್ರಮ ಕೈಗೊಂಡು, ಸರ್ಕಾರಕ್ಕೆ ಆದ ನಷ್ಟವನ್ನು ಅವರಿಂದ ವಸೂಲಿ ಮಾಡಲು ಸರ್ಕಾರಗಳು ಹಿಂಜರಿಯುವುದಿಲ್ಲ. ಪ್ರಭಾವಿ ವ್ಯಕ್ತಿಗಳ ವಿಷಯದಲ್ಲೂ ಹಾಗೆಯೇ ಮಾಡಬೇಕು. ಆಗ ಮುಂದಿನ ದಿನಗಳಲ್ಲಿ ಅಂತಹ ತಪ್ಪುಗಳು ಮರುಕಳಿಸುವುದನ್ನು ತಡೆಯಬಹುದು. ಅಂತಹ ಪ್ರಭಾವಿಗಳು ಯಾವುದೇ ಜಾತಿ, ಮತ, ಧರ್ಮ, ವೃತ್ತಿ, ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದರೂ ಭೇದವಿಲ್ಲದೆ ಅವರ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಾದರೂ ಸರಿಯೇ ಸರ್ಕಾರಕ್ಕಾಗಿರುವ ನಷ್ಟವನ್ನು ಸರಿದೂಗಿಸಿಕೊಳ್ಳಬೇಕು. ಇಂತಹ ಇಚ್ಛಾಶಕ್ತಿಯನ್ನು ಸರ್ಕಾರದ ಮಂದಿ ಮೈಗೂಡಿಸಿಕೊಳ್ಳಬೇಕು. ಹಾಗಾದಲ್ಲಿ ಮಾತ್ರ ವಿವಿಧ ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಲಯಗಳ ತೀರ್ಪುಗಳಿಗೆ ಮನ್ನಣೆ ಕೊಟ್ಟಂತೆ ಆಗುತ್ತದೆ.

-ರಮೇಶ್, ಬೆಂಗಳೂರು

****

ಸೋನು ಪ್ರಕರಣ: ವೃತ್ತಿಪರ ಅಲ್ಲದ ನಿರ್ಧಾರ

ಗಾಯಕ ಸೋನು ನಿಗಮ್ ಹಾಡಿಗೆ ಕತ್ತರಿ (ಪ್ರ.ವಾ., ಮೇ 8) ಹಾಗೂ ‘ಕ್ಷಮೆ ಸಾಲದು, ಪರಿಣಾಮ ಎದುರಿಸಬೇಕು’ (ಪ್ರ.ವಾ., ಮೇ 9) ಎಂಬ ಸುದ್ದಿಗಳನ್ನು ಓದಿದಾಗ, ಈ ಪ್ರಕರಣದಲ್ಲಿ ಕ್ರಿಯೆ, ಪ್ರತಿಕ್ರಿಯೆ ಎರಡೂ ಅತಿ ಆಯಿತು ಎನಿಸಿತು. ಅದೊಂದು ಖಾಸಗಿ ಕಾರ್ಯಕ್ರಮ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಲ್ಲಿ ನಡೆದುದರ ಬಗೆಗೆ ನಿರ್ಣಯ ಕೈಗೊಂಡಿದ್ದು ಅನಗತ್ಯ ಹಾಗೂ ಅದರ ಕಾರ್ಯವ್ಯಾಪ್ತಿ ಮೀರಿದ್ದು. ಸೋನು ನಿಗಮ್‌ ಕನ್ನಡ ಹಾಡಿಗಾಗಿನ ಒತ್ತಾಯವನ್ನು ಪಹಲ್ಗಾಮ್‌ ಘಟನೆಗೆ ಹೋಲಿಸಿದ್ದು ತಪ್ಪು. ಅದಕ್ಕೆ ವಿವರಣೆ ಕೊಟ್ಟಿದ್ದಾರೆ. ಕನ್ನಡದ ಬಗ್ಗೆ ತಮ್ಮ ಅಭಿಮಾನವನ್ನು ಪುನರುಚ್ಚರಿಸಿದ್ದಾರೆ.‌‌ ಆ ಕಾರ್ಯಕ್ರಮದಲ್ಲಿ ಒತ್ತಾಯಿಸಿದವರು ಎಲ್ಲ ಕನ್ನಡಿಗರನ್ನೂ
ಪ್ರತಿನಿಧಿಸುತ್ತಾರೆ ಎನ್ನಲಾಗದು.‌‌

ಸೋನು ಕನ್ನಡದಲ್ಲಿ ಹಲವಾರು ಹಾಡುಗಳನ್ನು ಹಾಡಿದ್ದರೆ ಅದಕ್ಕೆ ಕನ್ನಡ ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕರು ಕಾರಣ. ಆ ಗಾಯಕರೇನೂ ಅವಕಾಶ ಕೇಳಿಕೊಂಡು ಬಂದಿರಲಿಲ್ಲ. ಶಿಕ್ಷೆ ನೀಡಲು ಹಾಡಿಗೆ ಕತ್ತರಿ ಹಾಕುತ್ತೇವೆ ಎನ್ನುವುದು ವೃತ್ತಿಪರ ನಿರ್ಧಾರ ಅಲ್ಲ.‌‌ ಒಟ್ಟಾರೆ, ಕಡ್ಡಿಯನ್ನು ಗುಡ್ಡ ಮಾಡಿ ಕೆಲವರು ಪ್ರಚಾರ
ಪಡೆಯುತ್ತಿದ್ದಾರೆ ಅಷ್ಟೆ. ಮಂಡಳಿ ತಾನು ಮಾಡಬೇಕಾದ ಕೆಲಸವನ್ನು ಮೊದಲು ಮಾಡಲಿ. ಉದಾಹರಣೆಗೆ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಸೌಲಭ್ಯಗಳನ್ನು ಉತ್ತಮಪಡಿಸಲಿ. ಬೆಂಗಳೂರಿನಲ್ಲಿ ಆಕರ್ಷಕ ಭವನ ಕಟ್ಟಿಕೊಂಡು ಕಾರ್ಯಕ್ರಮ ನಡೆಸಿದರೆ ಸಾಲದು. ಸಿನಿಮಾ ಬರೀ ಬಿಸಿನೆಸ್‌ ಅಲ್ಲ, ಒಂದು ಸಶಕ್ತ ಸಂವಹನ ಮಾಧ್ಯಮ ಕೂಡ ಎಂಬುದನ್ನು ಅದು ಮನಗಾಣಬೇಕಾಗಿದೆ.

-ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.