ADVERTISEMENT

ವಾಚಕರ ವಾಣಿ | ರೋಪ್‌ ವೇ: ಸಾಧಕ–ಬಾಧಕ ಪರಿಶೀಲಿಸಿ

ವಾಚಕರ ವಾಣಿ
Published 25 ಮಾರ್ಚ್ 2025, 23:30 IST
Last Updated 25 ಮಾರ್ಚ್ 2025, 23:30 IST
-ರೋಪ್‌ವೇ... (ಸಾಂದರ್ಭಿಕ ಚಿತ್ರ)
-ರೋಪ್‌ವೇ... (ಸಾಂದರ್ಭಿಕ ಚಿತ್ರ)   

ರೋಪ್‌ ವೇ: ಸಾಧಕ– ಬಾಧಕ ಪರಿಶೀಲಿಸಿ

ನಂದಿಬೆಟ್ಟಕ್ಕೆ ರೋಪ್‌ ವೇ ನಿರ್ಮಿಸುವುದು ಅಪಾಯಕಾರಿ ನಡೆ ಎಂದು ಹೇಳಿರುವ ಪರಿಸರ ತಜ್ಞ
ಅ.ನ.ಯಲ್ಲಪ್ಪ ರೆಡ್ಡಿ ಅವರು, ಈ ವಿಷಯದಲ್ಲಿ ಸರ್ಕಾರದ ನಿಲುವನ್ನು ವಿರೋಧಿಸಿರುವುದು ಸರಿಯಾಗಿದೆ. ಇದಕ್ಕೆ ಪೂರಕವಾಗಿ ಅವರು ಹೇಳಿರುವ ಮಾತಿನಲ್ಲಿ ಸಾರ್ವಕಾಲಿಕ ಸತ್ಯ ಇದೆ, ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರಕೃತಿಯ ಮೇಲೆ ನಡೆಯುತ್ತಿರುವ ದಾಳಿಯನ್ನು ಅದು ಸೂಚಿಸುತ್ತದೆ. ಕೇರಳದ ವಯನಾಡಿನಲ್ಲಿ ಬಿರುಮಳೆಯಿಂದ ಭೂಕುಸಿತ ಸಂಭವಿಸಿ ಆದ ದುರಂತಗಳು ನಮ್ಮ ಕಣ್ಮುಂದೆ ಇರುವಾಗಲೇ ನಂದಿಬೆಟ್ಟಕ್ಕೆ ರೋಪ್ ವೇ ನಿರ್ಮಿಸುವ ಯೋಚನೆ ಸರ್ಕಾರಕ್ಕೆ ಹೇಗಾದರೂ ಬಂತೋ ಎಂದು ಅಚ್ಚರಿಯಾಗುತ್ತದೆ. ಹಣ ಇರುವವರು ಅಲ್ಲಿಗೆ ಬಂದು ಖುಷಿ ಪಟ್ಟು ಹೋಗಬಹುದು. ಆದರೆ ನಿಜವಾಗಿ ಸಮಸ್ಯೆ ಎದುರಿಸುವವರು ಸ್ಥಳೀಯರು.‌ ಹೀಗಾಗಿ, ಸರ್ಕಾರ ರೋಪ್‌ ವೇ ನಿರ್ಮಾಣದಿಂದ ಆಗುವ ಸಾಧಕ– ಬಾಧಕಗಳನ್ನು ಗಂಭೀರವಾಗಿ ಪರಿಶೀಲಿಸಲಿ.

-ಸುಮಾವೀಣಾ, ಹಾಸನ

ADVERTISEMENT

****

ಹಾಲಿನ ದರ: ನ್ಯಾಯ ಸಿಗಲಿ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ಸಲ್ಲಿಸಿದ ಹಾಲಿನ ದರ ಏರಿಕೆ
ಪ್ರಸ್ತಾವವನ್ನು ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ (ಪ್ರ.ವಾ., ಮಾರ್ಚ್‌ 25). ಹಾಲಿನ ದರವನ್ನು ಕಾಲಕಾಲಕ್ಕೆ ಹೆಚ್ಚಿಸುವುದು ನಿಜಕ್ಕೂ ರೈತರಿಗೆ ನೀಡುವ ಉತ್ತೇಜನವೇ ಹೌದು. ಆದರೆ, ಅದು ಬಳಕೆದಾರರ ಕೈ ಸುಡುವಂತೆ ಇರಬಾರದು. ನಂದಿನಿ ಉತ್ಪನ್ನಗಳಿಗೆ ಹೊರ ರಾಜ್ಯಗಳಲ್ಲಿ ಒಳ್ಳೆಯ ಬೇಡಿಕೆ ಇದೆ. ಬೇರೆ ಬ್ರ್ಯಾಂಡ್‌ ಉತ್ಪನ್ನಗಳು ಅಲ್ಲಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟವಾಗು ತ್ತಿವೆ. ಇದನ್ನು ಪರಿಶೀಲಿಸಿ, ಹೊರ ರಾಜ್ಯಗಳಲ್ಲಿ ಬೆಲೆಯನ್ನು ಹೆಚ್ಚಿಸಿ, ನಮ್ಮ ರಾಜ್ಯದಲ್ಲಿ ಈಗಿರುವ ಬೆಲೆಯನ್ನೇ ಮುಂದುವರಿಸಲಿ. ಇದರಿಂದ ಉತ್ಪಾದಕರು ಮತ್ತು ಸ್ಥಳೀಯ ಗ್ರಾಹಕರು ಇಬ್ಬರಿಗೂ ನ್ಯಾಯ ಒದಗಿಸಿದಂತೆ ಆಗುತ್ತದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಮಧ್ಯಮ ವರ್ಗದವರ ಮೇಲೆ ಇನ್ನಷ್ಟು ಹೊರೆ ಬೀಳುವುದು ತಪ್ಪುತ್ತದೆ.

-ಪಿ.ದಯಾನಂದ, ಬೆಂಗಳೂರು

****

ಅಕ್ರಮ ಕಟ್ಟಡ: ಎ.ಐ.ಗೇ ಪಾಠ ಕಲಿಸುವ ಜಾಣರಿದ್ದಾರೆ!

ಬೆಂಗಳೂರಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣಗಳನ್ನು ಪತ್ತೆ ಹಚ್ಚಲು ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಬಳಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರುವುದು (ಪ್ರ.ವಾ., ಮಾರ್ಚ್ 25), ‘ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು’ ಎಂಬ ಗಾದೆಯನ್ನು ನೆನಪಿಸುತ್ತದೆ. ಕಟ್ಟಡಗಳನ್ನು ಕಟ್ಟುವ ಮೊದಲು ಮತ್ತು ಕಟ್ಟಡ ಕಟ್ಟಿದ ನಂತರ ಅದರ ನಕ್ಷೆಗಳಿಗೆ ಅನುಮತಿ ತೆಗೆದುಕೊಳ್ಳಲು ಕಾನೂನೇ ಇದೆ. ಅಷ್ಟೇ ಅಲ್ಲದೆ, ಅದಕ್ಕೆ ನಿರ್ದಿಷ್ಟ ಪ್ರಮಾಣದ ಕಟ್ಟಡ ತೆರಿಗೆಯನ್ನು ನಿರ್ಧರಿಸಲು ಸಹ ನಿಯಮಗಳಿವೆ. ಇವನ್ನೆಲ್ಲ ಗಾಳಿಗೆ ತೂರಿ, ಅಧಿಕಾರಿಗಳ ಸಹಕಾರದಿಂದ, ನಿರ್ಮಾಣ ಮಾಡುವವರ ಜಾಣತನದಿಂದ ಅದೆಷ್ಟೋ ಕಟ್ಟಡಗಳನ್ನು ಅಕ್ರಮವಾಗಿ ಕಟ್ಟಲಾಗುತ್ತಿದೆ.

ಇಂತಹ ಬೆಳವಣಿಗೆಗಳನ್ನು ಬೇರಿನಲ್ಲೇ ಸರಿಪಡಿಸುವುದನ್ನು ಬಿಟ್ಟು ಎ.ಐ. ತಂತ್ರಜ್ಞಾನದಿಂದ ಅದನ್ನು ಕಂಡುಹಿಡಿಯಲು ಆಲೋಚಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಅದರ ಬದಲು ಈ ತಂತ್ರಜ್ಞಾನವನ್ನು ಇದಕ್ಕೆ ಸಂಬಂಧಪಟ್ಟ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಅದರ ಸುತ್ತಮುತ್ತಲಿನ ಜಾಗಗಳಲ್ಲಿ, ಅಂಗಡಿ, ಹೋಟೆಲುಗಳಲ್ಲಿ ಅಳವಡಿಸಿದರೆ ಬಹುಶಃ ಹೆಚ್ಚು ಲಾಭವಾಗಬಹುದೇನೊ. ಏಕೆಂದರೆ ನಮ್ಮಲ್ಲಿ ಅನೇಕರು ಎ.ಐ. ಬುದ್ಧಿಮತ್ತೆಗಿಂತಲೂ ಅಧಿಕ ಜಾಣರಿದ್ದು, ಅದಕ್ಕೇ ಪಾಠ ಕಲಿಸುವಂತಹ ಬುದ್ಧಿಯನ್ನು ಹೊಂದಿದ್ದಾರೆ!

-ಕಡೂರು ಫಣಿಶಂಕರ್, ಬೆಂಗಳೂರು

****

ಸ್ವಾವಲಂಬಿಗಳನ್ನು ಪರಾವಲಂಬಿಯಾಗಿಸಿದ ಯೋಜನೆ!

ಮಲೆನಾಡಿನಲ್ಲಿ ಜಲ ಜೀವನ್‌ ಮಿಷನ್‌ (ಜೆಜೆಎಂ) ಯೋಜನೆ ಕುರಿತು ಅಖಿಲೇಶ್ ಚಿಪ್ಪಳಿ ಅವರು ವಿಶ್ಲೇಷಿಸಿರುವಂತೆ (ಪ್ರ.ವಾ., ಮಾರ್ಚ್‌ 24), ಯೋಜನೆಯು ಈ ಭಾಗದಲ್ಲಿ ಅನುಕೂಲ ಆಗಿದ್ದಕ್ಕಿಂತ ಜನರಿಗೆ ಬಾಧಕವಾಗಿದ್ದೇ ಹೆಚ್ಚು. ನಮ್ಮೂರು ಮಲೆನಾಡಿನ ಸೆರಗಾದ ಶಿವಮೊಗ್ಗದ ಹತ್ತಿರ ಒಂದು ಪುಟ್ಟ ಹಳ್ಳಿ. ಅಲ್ಲಿದ್ದ ಸ್ಫಟಿಕದಂತಹ ಸಿಹಿನೀರಿನ ತೆರೆದಬಾವಿ ಎಂತಹ ಬಿರು ಬೇಸಿಗೆ ಇದ್ದರೂ ಪೂರ್ತಿ ಊರಿಗೆ ನೀರು ಒದಗಿಸುತ್ತಿತ್ತು. ಆದರೆ ಈ ಯೋಜನೆ ಬಂದ ಮೇಲೆ ಜನ ಫಿಲ್ಟರ್ ನೀರು ಹಾಗೂ ನಲ್ಲಿ ನೀರಿಗೆ ಅಂಟಿಕೊಂಡರು. ಹೀಗಾಗಿ, ಬಾವಿ ಈಗ ಪೂರ್ತಿ ಕಸದ ತಿಪ್ಪೆಯಾಗಿ, ಸ್ಫಟಿಕದಂತಹ ನೀರು ಕೊಳಕಾಗಿದೆ. ಯೋಜನೆಯ ಆಶಯ ಮಹತ್ವದ್ದಾಗಿದ್ದರೂ ಮಂಜೂರಾದ ಹಣವನ್ನು ಖರ್ಚು ಮಾಡುವ ಭರದಲ್ಲಿ ಇನ್ನೊಂದು ತೊಂದರೆ ತಂದೊಡ್ಡಿದಂತೆ ಆಗಿದೆ. ಬೇಸಿಗೆಯ ಆರಂಭದಲ್ಲೇ ಅನಿಯಮಿತ ಲೋಡ್‌ಶೆಡ್ಡಿಂಗ್ ಇರುವುದರಿಂದ ವಿದ್ಯುತ್ ಇದ್ದಾಗಲಷ್ಟೇ ನೀರು ಎಂಬಂತಾಗಿದೆ. ನೀರಿನ ವಿಷಯದಲ್ಲಿ ಸ್ವಾವಲಂಬಿ
ಗಳಾಗಿದ್ದವರೆಲ್ಲಾ ಈಗ ಪರಾವಲಂಬಿಗಳು. ಸರ್ಕಾರ ಹಾಗೂ ಪಂಚಾಯಿತಿಗಳು ಮಂಜೂರಾದ ಹಣವನ್ನು ಖರ್ಚು ಮಾಡುವ ಮೊದಲು  ಆಯಾ ಭಾಗದ ಜನರ ಅಗತ್ಯ, ಅನಗತ್ಯಗಳನ್ನು ಪರಿಗಣಿಸಿ ನಿರ್ಧರಿಸುವುದು ಒಳ್ಳೆಯದು.

-ಸುವರ್ಣ ಸಿ.ಡಿ., ತರೀಕೆರೆ

****

ದುರುದ್ದೇಶದ ರೀಲ್ಸ್‌ಗೆ ಬೇಕು ಕಡಿವಾಣ

ಇತ್ತೀಚಿನ ದಿನಗಳಲ್ಲಿ ‘ರೀಲ್ಸ್‌’ ಮೂಲಕ ಸುಳ್ಳುಸುದ್ದಿಯನ್ನು ಹರಡುವ ಪ್ರಯತ್ನಗಳು ನಡೆಯುತ್ತಿವೆ. ಮೂರು ಮಕ್ಕಳನ್ನು ಹೊಂದಿರುವ 30 ವರ್ಷ ಪ್ರಾಯದ ಮಹಿಳೆಯೊಬ್ಬಳು 15 ವರ್ಷದ ತಮ್ಮನನ್ನೇ ಮದುವೆಯಾದಳು ಎಂದು ತೋರಿಸುವ ‘ರೀಲ್ಸ್‌’ ಹಾಗೂ 18 ವರ್ಷಕ್ಕಿಂತ ಕೆಳಗಿನ ಅಣ್ಣ, ತಂಗಿ ದೇವಾಲಯವೊಂದರಲ್ಲಿ ಮದುವೆಯಾದರು ಎಂಬ ಫೇಸ್‌ಬುಕ್‌ ಪೋಸ್ಟ್‌ ಹಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿವೆ. ದೇಶಗಳು ಹಾಗೂ ಧರ್ಮಗಳ ನಡುವೆ ದ್ವೇಷ ಹರಡುವ ರೀತಿಯಲ್ಲಿ ಪುಟ್ಟ ಮಕ್ಕಳ ಹೇಳಿಕೆಗಳನ್ನು ಒಳಗೊಂಡ ವಿಡಿಯೊ ತುಣುಕುಗಳೂ ಆಗಾಗ ಕಾಣಿಸಿಕೊಳ್ಳುತ್ತವೆ. ಮನರಂಜನೆಗಾಗಿ ಇಂತಹ ರೀಲ್ಸ್‌ ಮಾಡುತ್ತಿರಬಹುದು. ಆದರೆ ಮನರಂಜನೆಯ ಹೆಸರಿನಲ್ಲಿ ಒಂದು ದೇಶವನ್ನು, ಸಮುದಾಯವನ್ನು ನಿಂದಿಸುವುದು ಸರಿಯಲ್ಲ. ಇಂತಹ ಅಸಂಬದ್ಧ ಪೋಸ್ಟ್‌ಗಳಿಗೆ ಕಡಿವಾಣ ಹಾಕುವ ಮೂಲಕ ದೇಶದ ಘನತೆ ಮತ್ತು ಸೌಹಾರ್ದ ಪರಂಪರೆಯನ್ನು ಕಾಪಾಡಬೇಕಾಗಿದೆ.

-ಜಿ.ನಾಗೇಂದ್ರ ಕಾವೂರು, ಸಂಡೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.