ನಂದಿನಿ ಹಾಲು
ಹಾಲಿನ ದರ: ರೈತರಿಗೆ ಸಿಗುವ ಪಾಲೆಷ್ಟು?
ಹಾಲು ಮತ್ತು ಮೊಸರಿನ ಮಾರಾಟ ದರ ಹೆಚ್ಚಳದ ವಿಷಯವು ಮಾಧ್ಯಮಗಳಲ್ಲಿ ಬಹು ಚರ್ಚಿತ ಸುದ್ದಿಯಾಗಿದೆ. ಈ ಸಂದರ್ಭದಲ್ಲಿ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಸಿಗುವ ಬೆಲೆ ಎಷ್ಟು ಎಂಬುದರ ಬಗ್ಗೆ ಸಹ ಮಾಧ್ಯಮಗಳು ಜನಸಾಮಾನ್ಯರಿಗೆ ಅರಿವು ಮೂಡಿಸಬೇಕಾಗಿದೆ. ಪ್ರಸ್ತುತ ಶೇ 4ರಷ್ಟು ಕೊಬ್ಬು, ಶೇ 8.5ರಷ್ಟು ಘನವಲ್ಲದ ಕೊಬ್ಬು ಅಂದರೆ ಪ್ರೋಟೀನ್, ಲ್ಯಾಕ್ಟೋಸ್, ಜೀವಸತ್ವಗಳು ಹಾಗೂ ಖನಿಜಗಳು ಇರುವ ಪ್ರತಿ ಲೀಟರ್ ಹಾಲಿಗೆ ₹ 31- 33 ದರ ನೀಡಲಾಗುತ್ತಿದೆ. ಇದರೊಂದಿಗೆ ಸರ್ಕಾರದಿಂದ ಪ್ರತಿ ಲೀಟರ್ ಹಾಲಿಗೆ ₹ 5 ಪ್ರೋತ್ಸಾಹಧನ ರೈತರಿಗೆ ಸಿಗುತ್ತದೆ. ಆದರೆ ಸರ್ಕಾರದಿಂದ ಈ ಪ್ರೋತ್ಸಾಹಧನ ಬಿಡುಗಡೆ ಆಗಿ ರೈತರ ಕೈ ಸೇರಲು ನಾಲ್ಕರಿಂದ ಆರು ತಿಂಗಳು ತಡವಾಗುತ್ತದೆ ಎಂಬುದು ಹಾಲು ಉತ್ಪಾದಕರ ಆಕ್ಷೇಪ.
ಕೊಬ್ಬು ಹಾಗೂ ಘನವಲ್ಲದ ಕೊಬ್ಬಿನ ಅಂಶವನ್ನು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಒಟ್ಟಾರೆಯಾಗಿ ಸಂಗ್ರಹವಾಗುವ ಹಾಲಿನಲ್ಲಿ ಪರೀಕ್ಷಿಸಿ, ಆ ಸಂಘದ ಎಲ್ಲಾ ಸದಸ್ಯರಿಗೆ ಸಮನಾಗಿ ದರ ನಿಗದಿ ಮಾಡಲಾಗುತ್ತದೆ. ಆದರೆ ಖಾಸಗಿ ಡೈರಿಗಳು ಪ್ರತಿ ರೈತನಿಂದ ಸಂಗ್ರಹಿಸಿದ ಹಾಲನ್ನು ಪರೀಕ್ಷಿಸಿ, ಗುಣಮಟ್ಟದ ಆಧಾರದ ಮೇಲೆ ಲೀಟರ್ ಹಾಲಿಗೆ ₹ 35– 42ರವರೆಗೆ ನೀಡುತ್ತವೆ. ಆದರೂ ಸಹಕಾರಿ ಹಾಲು ಒಕ್ಕೂಟದಿಂದ ರೈತರಿಗೆ ನೀಡಲಾಗುತ್ತಿರುವ ಅನೇಕ ಸವಲತ್ತುಗಳ ಕಾರಣದಿಂದ ಯಥೇಚ್ಛವಾಗಿ ಹಾಲು ಸಂಗ್ರಹವಾಗುತ್ತಿದೆ. ಈ ಅಂಕಿ ಅಂಶಗಳನ್ನು ಗಮನಿಸಿದಾಗ, ಸರ್ಕಾರದ ಪ್ರೋತ್ಸಾಹಧನ ಇಲ್ಲದೇ ಇದ್ದ ಪಕ್ಷದಲ್ಲಿ ಹಾಲು ಒಕ್ಕೂಟಗಳು ನೀಡುವ ದರದಲ್ಲಿ ಈ ಪ್ರಮಾಣದ ಹಾಲು ಸಂಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಕಾರಣದಿಂದ ಹಾಲು ಒಕ್ಕೂಟಗಳು
ತಮ್ಮ ಖರ್ಚು ವೆಚ್ಚವನ್ನು ಸರಿದೂಗಿಸಲು ಬರೀ ಮಾರಾಟ ದರ ಹೆಚ್ಚಳದ ಮುಖಾಂತರ ಮಾತ್ರವಲ್ಲದೆ ನಿರ್ವಹಣಾ ವೆಚ್ಚವನ್ನು ಕಡಿತಗೊಳಿಸುವತ್ತ ಗಮನಹರಿಸಬೇಕು. ಆಗ ಮಾತ್ರ ಹಾಲು ಮಹಾ ಮಂಡಳಿಯು ಸ್ವಯಂ ಸುಸ್ಥಿರತೆಯನ್ನು ಕಾಯ್ದುಕೊಂಡು ಹಾಲು ಉತ್ಪಾದಕರು ಹಾಗೂ ಗ್ರಾಹಕರ ಹಿತ ಕಾಪಾಡಲು ಶಕ್ತವಾಗುತ್ತದೆ.
-ಟಿ.ಜಯರಾಂ, ಕೋಲಾರ
****
ತೇರು ದುರಂತ: ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ
ಆನೇಕಲ್ ತಾಲ್ಲೂಕು ಹುಸ್ಕೂರಿನಲ್ಲಿ ಇತ್ತೀಚೆಗೆ ನಡೆದ ಮದ್ದೂರಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ತೇರು ಬಿದ್ದು ಇಬ್ಬರು ಮೃತಪಟ್ಟು, 8 ಮಂದಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜಸ್ವ ನಿರೀಕ್ಷಕ ಮತ್ತು ಗ್ರಾಮ ಆಡಳಿತಾಧಿಕಾರಿಯನ್ನು ಅಮಾನತುಗೊಳಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಮಾರ್ಚ್ 28). ನೂರು ಅಡಿ ಎತ್ತರದ ತೇರು ತಾಂತ್ರಿಕ ದೋಷದಿಂದ ಕೆಳಗೆ ಬಿದ್ದದ್ದಕ್ಕೆ ಇವರನ್ನು ಅಮಾನತು ಮಾಡಿರುವುದು ಎಷ್ಟು ಸರಿ?
ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಅನ್ನುವಂತೆ ಅಷ್ಟು ದೊಡ್ಡ ಜವಾಬ್ದಾರಿಯನ್ನು ಇವರ ಮೇಲೆ ಹೊರಿಸಿ
ಕೈತೊಳೆದುಕೊಳ್ಳುವುದು ಸರಿಯೇ? ಅಷ್ಟು ಎತ್ತರದ ತೇರನ್ನು ಎಳೆಯಲು ಸಾಧ್ಯವೇ, ರಸ್ತೆ ಸೂಕ್ತವಾಗಿದೆಯೇ ಎಂಬ ಬಗ್ಗೆ ಎಂಜಿನಿಯರುಗಳು ಪರೀಕ್ಷೆ ಮಾಡಿ ವರದಿ ಕೊಡಲಿಲ್ಲವೇ? ಈ ಬಗ್ಗೆ ತಹಶೀಲ್ದಾರರು ಮತ್ತು ಅದಕ್ಕಿಂತಲೂ ಮೇಲ್ಮಟ್ಟದ ಅಧಿಕಾರಿಗಳು ಅಧ್ಯಯನ ಮಾಡಲಿಲ್ಲವೇ? ಊರಿನ ಹಿರಿಯರು, ಪೊಲೀಸ್ ಇಲಾಖೆ ಸಲಹೆ ನೀಡಲಿಲ್ಲವೇ? ಎಲ್ಲಕ್ಕಿಂತ ಮಿಗಿಲಾಗಿ ದೇವಸ್ಥಾನದ ವೈದಿಕರು ಸರಿಯಾದ ಮುಹೂರ್ತ ಇಡಲಿಲ್ಲವೇ? ಇವರಾರೂ ಮಾಡದ ತಪ್ಪನ್ನು ಅವರು ಮಾಡಿದ್ದರೇ?
-ತಾ.ಸಿ.ತಿಮ್ಮಯ್ಯ, ಬೆಂಗಳೂರು
****
ಪುಸ್ತಕ ಮಳಿಗೆಗೆ ಸಿಗಲಿ ಆದ್ಯತೆ
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಪ್ರಯಾಣದ ಸಮಯದಲ್ಲಿ ಓದಲು ಪುಸ್ತಕ ಕೊಳ್ಳಲೆಂದು, ಮೊದಲೇ ತಿಳಿದಿದ್ದ ಪುಸ್ತಕದ ಮಳಿಗೆಯ ಕಡೆಗೆ ಹೋದೆ. ಆಗ ಆ ಮಳಿಗೆಯು ಶಾಶ್ವತವಾಗಿ ಬಾಗಿಲು ಹಾಕಿದ್ದನ್ನು ತಿಳಿದು ಬೇಸರವಾಯಿತು. ಕೆಎಸ್‌ಆರ್‌ಟಿಸಿಯ ಪ್ರತಿ ಬಸ್ ನಿಲ್ದಾಣದಲ್ಲಿ ಮತ್ತು ಪ್ರಮುಖ ರೈಲು ನಿಲ್ದಾಣಗಳಲ್ಲಿ ಪುಸ್ತಕದ ಮಳಿಗೆ ಕಾಯಂ ಆಗಿ ಇರುತ್ತಿತ್ತು. ಆದರೆ ಕ್ರಮೇಣವಾಗಿ ಮಳಿಗೆಯ ಬಾಡಿಗೆ ಕಟ್ಟಲಾಗದೆ ಮತ್ತು ಪತ್ರಿಕೆಗಳನ್ನು ಕೊಂಡು ಓದುವವರ ಸಂಖ್ಯೆ ತೀರಾ ಕಡಿಮೆಯಾಗಿರುವುದರಿಂದ ಇವು ನಷ್ಟಕ್ಕೆ ಸಿಲುಕಿ ಮರೆಯಾಗಿರುವಂತಿದೆ.
ಕೆಎಸ್ಆರ್‌ಟಿಸಿ ಮತ್ತು ರೈಲ್ವೆಯು ಪ್ರಮುಖ ನಿಲ್ದಾಣಗಳಲ್ಲಿ ಪುಸ್ತಕದ ಅಂಗಡಿಗಾಗಿಯೇ ಒಂದು ಮಳಿಗೆಯನ್ನು ಮೀಸಲಿಟ್ಟು ಕಡಿಮೆ ಬಾಡಿಗೆಗೆ ನೀಡಬೇಕು. ಆಗ ಪತ್ರಿಕೆಗಳ ವ್ಯಾಪಾರವನ್ನೇ ಅವಲಂಬಿಸಿದವರಿಗೆ ಅನುಕೂಲ ಆಗುತ್ತದೆ ಮತ್ತು ಓದುಗರನ್ನೂ ಉಳಿಸಿ ಬೆಳೆಸಿದಂತೆ ಆಗುತ್ತದೆ.
-ಅಶೋಕ ಎನ್.ಎಚ್., ಕೋಲಾರ
****
ಸರ್ಕಾರದಿಂದ ‘ಮೂರ್ಖರ ದಿನ’ಕ್ಕೆ ಕೊಡುಗೆ!
ಯುಗಾದಿಯ ಆಚರಣೆಗೆ ಜನ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ರಾಜ್ಯ ಸರ್ಕಾರವು ಕಹಿ ಸುದ್ದಿ ನೀಡಿದೆ. ಏಪ್ರಿಲ್ ಒಂದರಿಂದ ಜಾರಿಯಾಗುವಂತೆ ಹಾಲು ಮತ್ತು ವಿದ್ಯುತ್ ದರ ಏರಿಕೆ ಮಾಡಿದೆ. ಹಾಗೆ ನೋಡಿದರೆ, ‘ಗ್ಯಾರಂಟಿ’ ಎಂಬ ಬೆಲ್ಲದ ಬಲದಿಂದ ಅಧಿಕಾರ ಹಿಡಿದ ಪಕ್ಷವು ಅಂದಿನಿಂದಲೂ ಆ ಬೆಲ್ಲದ ಜೊತೆಗೆ ಬಗೆಬಗೆಯಲ್ಲಿ ಬೇವನ್ನೂ ಸೇರಿಸುತ್ತ ಬಂದಿದೆ. ಇದೀಗ, ಹಾಲು ಮತ್ತು ವಿದ್ಯುತ್ ದರ ಏರಿಕೆ ಎಂಬ ಬೇವಿನ ಡಬಲ್ ಧಮಾಕಾ!
ದರ ಏರಿಕೆಗೆ ಸಮರ್ಥನೆಯಾಗಿ ಸರ್ಕಾರವು ‘ರೈತರಿಗೇ ಪಾವತಿ’, ‘ಕೋರ್ಟ್ ಅನುಮತಿ’ಯಂತಹ ಕಾರಣಗಳನ್ನು ನೀಡುತ್ತಿರುವುದು ಸಮರ್ಥನೀಯವಲ್ಲ. ರೈತರಿಗೆ ಹೆಚ್ಚಿನ ಹಣವನ್ನು ಮತ್ತು ವಿದ್ಯುತ್ ಸಂಸ್ಥೆಗಳ ನೌಕರರಿಗೆ ತಾನು ನೀಡಬೇಕಿರುವ ಪಿಂಚಣಿ ಮತ್ತು ಗ್ರಾಚ್ಯುಟಿ ಮೊತ್ತವನ್ನು ಸರ್ಕಾರ ತನ್ನ ಬೊಕ್ಕಸದಿಂದ ನೀಡದೆ ಜನರಿಂದಲೇ ಹೆಚ್ಚುವರಿಯಾಗಿ ವಸೂಲು ಮಾಡಬೇಕೆಂದು ರೈತರೂ ಹೇಳಿಲ್ಲ, ಕೋರ್ಟೂ ಹೇಳಿಲ್ಲ. ರೈತರು ಹಾಗೂ ವಿವಿಧ ನೌಕರ ವರ್ಗಗಳ ವಿಷಯದಲ್ಲಿ ತಾನು ನಿರ್ವಹಿಸಬೇಕಾದ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವು ಈ ರೀತಿ ಶ್ರೀಸಾಮಾನ್ಯರಿಗೆ ವರ್ಗಾಯಿಸತೊಡಗಿರುವುದು ಕಳವಳಕಾರಿ ಸಂಗತಿ. ಈ ಉಭಯ ಬೆಲೆ ಏರಿಕೆಯ ಜಾರಿಗೆ ಸರ್ಕಾರವು ಏಪ್ರಿಲ್ ಒಂದನ್ನು ಆಯ್ಕೆ ಮಾಡಿಕೊಂಡಿರುವುದು ಮಾತ್ರ ಸೂಕ್ತವಾಗಿದೆ. ಏಪ್ರಿಲ್ 1, ‘ಮೂರ್ಖರ ದಿನ’ ತಾನೆ? ವಿಶ್ವಾಸವಿಟ್ಟು ಅಧಿಕಾರ ನೀಡಿದ ರಾಜ್ಯದ ಜನರನ್ನು ಈ ಸರ್ಕಾರವು ‘ಏಪ್ರಿಲ್ ಒಂದರಿಂದ ಜಾರಿಯಾಗುವಂತೆ’ ಮತ್ತೊಮ್ಮೆ ಮೂರ್ಖರನ್ನಾಗಿಸಿದೆ!
-ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.